7

ಚಟುವಟಿಕೆ ಬಿರುಸು:ರಂಗೇರಿದ ರಾಜಭವನ

Published:
Updated:
ಚಟುವಟಿಕೆ ಬಿರುಸು:ರಂಗೇರಿದ ರಾಜಭವನ

ಬೆಂಗಳೂರು: ರಾಜಭವನವು ಬುಧವಾರ ದಿನವಿಡೀ ಬಿರುಸಿನ ರಾಜಕೀಯ ಚಟುವಟಿಕೆಯ ಕೇಂದ್ರವಾಗಿ ಮಾರ್ಪಟ್ಟಿತು. ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಕೂಟ ಹಾಗೂ ಬಿಜೆಪಿ ಮುಖಂಡರು ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ, ಸರ್ಕಾರ ರಚಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ ಕುಮಾರ್‌, ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ನೇತೃತ್ವದ ನಿಯೋಗವು ಬೆಳಿಗ್ಗೆ 11.10ಕ್ಕೆ ರಾಜಭವನಕ್ಕೆ ಭೇಟಿ ನೀಡಿತು. ‘ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಹಾಗಾಗಿ ಬಹುಮತ ಸಾಬೀತುಪಡಿಸಲು ನಮಗೆ ಅವಕಾಶ ನೀಡಬೇಕು’ ಎಂದು ರಾಜ್ಯಪಾಲರಲ್ಲಿ ಮನವಿ ಮಾಡಿತು. 105 ಸದಸ್ಯರ ಸಹಿಗಳನ್ನು ಹೊಂದಿರುವ ಪತ್ರವನ್ನು ಹಾಗೂ ಶಾಸಕಾಂಗ ಪಕ್ಷದ ನಾಯಕರಾಗಿ ಯಡಿಯೂರಪ್ಪ ಅವರು ಆಯ್ಕೆಯಾದ ಪತ್ರವನ್ನು ಸಲ್ಲಿಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ‘ನಮಗೆ ಬಹುಮತ ಇದೆ ಎಂಬುದನ್ನು ರಾಜ್ಯಪಾಲರಿಗೆ ಮನವರಿಕೆ‌ ಮಾಡಿಕೊಟ್ಟಿದ್ದೇವೆ. ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೋರಿದ್ದೇವೆ. ನಾವು ಸರ್ಕಾರ ರಚಿಸುವುದು ನಿಶ್ಚಿತ’ ಎಂದರು.

ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳ ಪ್ರಮುಖರನ್ನು ಒಳಗೊಂಡ ನಿಯೋಗವು ಸಂಜೆ 5 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಿತು. ಜೆಡಿಎಸ್‌ನ 10 ಮಂದಿ ಪ್ರಮುಖರು ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಹಾಗೂ ಕಾಂಗ್ರೆಸ್‌ನ 10 ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಅವರ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ, ‘ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷಗಳ ನಿರ್ಣಯವನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ನಮ್ಮ ಪಕ್ಷವು ಬಿಎಸ್‌ಪಿ ಜೊತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿತ್ತು. ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ನಮಗೆ ಒಟ್ಟು 117 ಶಾಸಕರ ಬೆಂಬಲವಿದೆ. ಅಷ್ಟೂ ಮಂದಿಯ ಸಹಿ ಇರುವ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದೇವೆ’ ಎಂದರು.

‘ಈ ಹಿಂದೆ, ಅನೇಕ ರಾಜ್ಯಗಳಲ್ಲಿ ಅತಂತ್ರ ಫಲಿತಾಂಶ ಬಂದಿದ್ದಾಗ ಹೆಚ್ಚು ಸ್ಥಾನ ಗೆದ್ದ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡದಿರುವ ಅನೇಕ ಉದಾಹರಣೆಗಳಿವೆ. ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ರಾಜ್ಯಪಾಲರು ಯಾವ ರೀತಿ ನಡೆದುಕೊಳ್ಳಬೇಕು ಎಂಬ ಕುರಿತ ಸುಪ್ರೀಂ ಕೋರ್ಟ್‌ ತೀರ್ಪನ್ನು ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಗುಲಾಂ ನಬಿ ಆಜಾದ್‌ ಹಾಗೂ ಸಿದ್ದರಾಮಯ್ಯ ರಾಜ್ಯಪಾಲರ ಗಮನಕ್ಕೆ ತಂದಿದ್ದಾರೆ’ ಎಂದರು.

‘ಎರಡೂ ಪಕ್ಷಗಳ ಮನವಿಯನ್ನು ಸ್ವೀಕರಿಸಿರುವ ರಾಜ್ಯಪಾಲರು, ಕಾನೂನು ತಜ್ಞರ ಸಲಹೆ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅವರು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ಕಾಂಗ್ರೆಸ್‌ ಮುಖಂಡರಾದ ಡಿ.ಕೆ.ಶಿವಕುಮಾರ್‌, ಎಸ್‌.ಆರ್‌.ಪಾಟೀಲ, ದಿನೇಶ್‌ ಗುಂಡೂರಾವ್‌, ಆರ್‌.ವಿ.ದೇಶಪಾಂಡೆ, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಆರ್‌.ರೋಷನ್‌ ಬೇಗ್‌, ಕೃಷ್ಣ ಬೈರೇಗೌಡ, ಎಂ.ವೀರಪ್ಪ ಮೊಯಿಲಿ ಹಾಗೂ ಜೆಡಿಎಸ್‌ ಮುಖಂಡರಾದ ಎಚ್‌.ಡಿ.ರೇವಣ್ಣ, ಸಾ.ರಾ.ಮಹೇಶ್‌, ಶಿವಲಿಂಗೇಗೌಡ, ಎಚ್‌.ವಿಶ್ವನಾಥ್‌, ಬಂಡೆಪ್ಪ ಕಾಶೆಂಪೂರ, ಬಿಎಸ್‌ಪಿ ಶಾಸಕ ಎನ್‌.ಮಹೇಶ್‌ ನಿಯೋಗದಲ್ಲಿದ್ದರು.

ಜನಜಾತ್ರೆ, ಸಂಚಾರ ದಟ್ಟಣೆ

ರಾಜಭವನದ ಪ್ರವೇಶ ದ್ವಾರದ ಬಳಿ ದಿನವಿಡೀ ಜನಜಾತ್ರೆ ಇತ್ತು. ರಾಜ್ಯಪಾಲರನ್ನು ಭೇಟಿಯಾಗಲು ಬಂದ ರಾಜಕೀಯ ಮುಖಂಡರ ಬೆಂಬಲಿಗರ ಗಣ ಒಂದೆಡೆಯಾದರೆ, ಈ ವಿದ್ಯಮಾನವನ್ನು ಬಿತ್ತರಿಸಲು ಸೇರಿದ್ದ ಪತ್ರಕರ್ತರ ದಂಡು ಇನ್ನೊಂದೆಡೆ. ಇಲ್ಲಿ ಪರಿಸ್ಥಿತಿ ಹದ್ದುಮೀರದಂತೆ ತಡೆಯಲು ಭಾರಿ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ರಾಜಕೀಯ ಮುಖಂಡರು ರಾಜಭವನ ಪ್ರವೇಶಿಸಿದಾಗ ಉಂಟಾದ ನೂಕುನುಗ್ಗಲು ತಡೆಯಲು ಪೊಲೀಸರು ಹರಸಾಹಸಪಟ್ಟರು. ಕುಮಾರಸ್ವಾಮಿ ಸಂಜೆ ರಾಜ್ಯಪಾಲರನ್ನು ಭೇಟಿಯಾಗಲು ಬಂದಾಗ ಇಲ್ಲಿ ಜೆಡಿಎಸ್‌ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಬಿಜೆಪಿಗೆ ಧಿಕ್ಕಾರ ಕೂಗಿ ಗದ್ದಲವೆಬ್ಬಿಸಿದರು.

ಸಂಚಾರ ದಟ್ಟಣೆ: ಪ್ರತಿಭಟನೆ ವೇಳೆ ರಾಜಭವನ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ವಾಹನ ಸವಾರರು ರಾಜಕೀಯ ಪಕ್ಷಗಳಿಗೆ ಹಿಡಿಶಾಪ ಹಾಕಿದರು. ಈ ರಸ್ತೆಯಲ್ಲಿ ಸಾಗಿಬಂದ ಬೈಕ್‌ ಸವಾರರೊಬ್ಬರು, ‘ಪ್ರಜಾಪ್ರಭುತ್ವ ಎಂದರೆ ಇಂತಹ ವ್ಯವಸ್ಥೆಯೇ? ಜನರಿಗೆ ತೊಂದರೆ ಕೊಡುವುದನ್ನು ಪ್ರಜಾಪ್ರಭುತ್ವ ಎನ್ನುತ್ತಾರೆಯೇ? ಅಧಿಕಾರ ಹಿಡಿಯಲು ಇಷ್ಟೆಲ್ಲ ಕಸರತ್ತುಗಳು ಬೇಕೇ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಪೊಲೀಸರು ಕಾರ್ಯಕರ್ತರನ್ನು ದೂರಕ್ಕೆ ಕಳುಹಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry