ಸಿಎಲ್‌ಪಿ ಸಭೆಯಲ್ಲಿ ಸಿದ್ದರಾಮಯ್ಯ ಕಣ್ಣೀರು!

7
ಚುನಾವಣಾ ಫಲಿತಾಂಶದ ಆತ್ಮಾವಲೋಕನ; ಶಾಸಕರ ಅಸಮಾಧಾನ

ಸಿಎಲ್‌ಪಿ ಸಭೆಯಲ್ಲಿ ಸಿದ್ದರಾಮಯ್ಯ ಕಣ್ಣೀರು!

Published:
Updated:
ಸಿಎಲ್‌ಪಿ ಸಭೆಯಲ್ಲಿ ಸಿದ್ದರಾಮಯ್ಯ ಕಣ್ಣೀರು!

ಬೆಂಗಳೂರು: ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ಬುಧವಾರ ನಡೆದ ಶಾಸಕಾಂಗ ಪಕ್ಷದ ಮೊದಲ ಸಭೆಯಲ್ಲಿ ಚುನಾವಣಾ ಫಲಿತಾಂಶದ ಆತ್ಮಾವಲೋಕನ ಸಂದರ್ಭದಲ್ಲಿ, ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಭಾವುಕರಾದರು.

‘ಉತ್ತಮ ಆಡಳಿತ ನೀಡಿದ್ದೆವು. ಆದರೂ ಮತ್ತೆ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ’ ಎಂದು ಕಣ್ಣೀರು ಹಾಕಿದರು. ಪಕ್ಷದ ಸೋಲಿನ ಹೊಣೆಯನ್ನು ತಾವೇ ಹೊರುವುದಾಗಿ ಅವರು ಹೇಳಿದರು. ಸಿದ್ದರಾಮಯ್ಯ ಅವರಿಗೆ ಆಪ್ತರಾದ ಕೆಲವು ಶಾಸಕರೂ ಗದ್ಗದಿತರಾದರು.

‘ಸಮರ್ಪಕವಾಗಿ ಟಿಕೆಟ್‌ ಹಂಚಿಕೆ ಆಗದಿರುವುದೇ ಪಕ್ಷ ಸೋಲು ಅನುಭವಿಸಲು ಕಾರಣ. ಕೆಲವು ಕಡೆ ಗೆಲ್ಲುವ ಅಭ್ಯರ್ಥಿಗಳಿದ್ದರೂ ಟಿಕೆಟ್ ನೀಡಲಿಲ್ಲ. ಪ್ರಭಾವಿ ನಾಯಕರ ಹಿಂಬಾಲಕರಿಗೆ ಟಿಕೆಟ್ ನೀಡಲಾಗಿದೆ’ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಧ್ಯಾಹ್ನದವರೆಗೆ ಸಭೆ ನಡೆದರೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಆಗಲಿಲ್ಲ. ಸಂಜೆ ಮತ್ತೆ ಸಭೆ ಸೇರಿ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡುವ ಕುರಿತು ಚರ್ಚೆ ನಡೆಯಿತು. ಮಧ್ಯಾಹ್ನ ಸಭೆ ನಡೆಯುತ್ತಿದ್ದ ಮಧ್ಯೆಯೇ, ಜೆಡಿಎಸ್‌ ಶಾಸಕಾಂಗ ಸಭೆ ನಡೆಯುತ್ತಿದ್ದ ಶಾಂಗ್ರಿಲಾ ಹೋಟೆಲ್‌ಗೆ ಪರಮೇಶ್ವರ ಮತ್ತು ದಿನೇಶ್‌ ಗುಂಡೂರಾವ್‌ ತೆರಳಿದರು.‌

ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ, ‘ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿಯಿಂದ ಸರ್ಕಾರ ರಚನೆಗೆ ಅಗತ್ಯವಾದ ಸಂಖ್ಯಾ ಬಲವಿದೆ. ಇದರ ಆಧಾರದಲ್ಲಿ ರಾಜ್ಯಪಾಲರು ಅವಕಾಶ ಕೊಡಬೇಕು. ಒಂದು ವೇಳೆ ಬಿಜೆಪಿಗೆ ಅವಕಾಶ ನೀಡಿದರೆ ಸಂವಿಧಾನ‌ ವಿರೋಧಿ ನಡೆ ಆಗುತ್ತದೆ. ಇದರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಮಾತನಾಡಿ, ‘ಸಮ್ಮಿಶ್ರ ಸರ್ಕಾರ ರಚಿಸುವ ಸಂಬಂಧ ರಾಜ್ಯಪಾಲರಿಗೆ ಪರಮೇಶ್ವರ ಮತ್ತು ಕುಮಾರಸ್ವಾಮಿ ಈಗಾಗಲೇ ಮನವಿ ಕೊಟ್ಟಿದ್ದಾರೆ. ನಾವು ರಾಜ್ಯಪಾಲರಿಂದ ಆಹ್ವಾನ ನಿರೀಕ್ಷಿಸುತ್ತಿದ್ದೇವೆ’ ಎಂದರು.

ವಿಳಂಬವಾದ ಸಭೆ: ಬೆಳಿಗ್ಗೆ ಎಂಟು ಗಂಟೆಗೆ ನಿಗದಿಯಾಗಿದ್ದ ಶಾಸಕಾಂಗ ಪಕ್ಷದ ಸಭೆ, ಶಾಸಕರು ವಿಳಂಬವಾಗಿ ಬಂದಿದ್ದರಿಂದ ಸುಮಾರು ಎರಡು ಗಂಟೆ ತಡವಾಗಿ ಆರಂಭವಾಯಿತು.

‌ಸಭೆಗೂ ಮೊದಲು ಮಾತನಾಡಿದ ಶಾಮನೂರು ಶಿವಶಂಕರಪ್ಪ, ‘ವೀರಶೈವ ಲಿಂಗಾಯತ ಶಾಸಕರು ಯಾರೂ ಕಾಂಗ್ರೆಸ್ ಬಿಡುವುದಿಲ್ಲ. ಅವರು ಬಿಡುತ್ತಾರೆ ಎನ್ನುವುದು ಊಹಾಪೋಹ’ ಎಂದರು.

ದಿನೇಶ್‌ ಗುಂಡೂರಾವ್‌ ಮಾತನಾಡಿ, ‘ಸರ್ಕಾರ ರಚನೆಗೆ ಬೇರೆಯವರಿಗೆ ಅವಕಾಶ ನೀಡುವ ಮಾತೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿಯವರು ಎಂತಹ ಮಟ್ಟಕ್ಕೆ ಇಳಿದಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ. ಜನ ಅವರಿಗೆ ಆಶೀರ್ವಾದ ಮಾಡಿಲ್ಲ. ‌ಸರ್ಕಾರ ರಚನೆ ಮಾಡಬೇಕಾದರೆ ಅವರು ವಾಮಮಾರ್ಗ ಹಿಡಿಯಬೇಕು. ಇದು ಹೇಸಿಗೆ ಕೆಲಸ’ ಎಂದು ಟೀಕಿಸಿದರು.

ಕೆಪಿಸಿಸಿ ಕಚೇರಿ ಬಳಿ ಮಾತನಾಡಿದ ಯು.ಟಿ. ಖಾದರ್, ‘ರೆಸಾರ್ಟ್ ರಾಜಕೀಯ ಕಾಂಗ್ರೆಸ್‌ನಲ್ಲಿ ಇಲ್ಲ. ಎಲ್ಲರೂ ನಮ್ಮ ಜತೆಗಿದ್ದಾರೆ. ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಪಕ್ಷದ ಉಸ್ತುವಾರಿಗಳು ಸೂಕ್ತ ಸಮಯದಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ. ನಮ್ಮ ಸರ್ಕಾರ ರಚನೆ ಆಗುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ನಾವು ಸಹಿ ಮಾಡಿಕೊಟ್ಟಿದ್ದೇವೆ. ರಾಜ್ಯಪಾಲರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ. ರಾಜ್ಯಪಾಲರು ನಮಗೆ ಅವಕಾಶ ನೀಡದಿದ್ದರೆ ಮುಂದೇನು ಮಾಡಬೇಕೆಂದು ತೀರ್ಮಾನಿಸುತ್ತೇವೆ’ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry