ಶನಿವಾರ, ಮಾರ್ಚ್ 6, 2021
32 °C

ಮೋದಿಯಿಂದ ಅಧಿಕಾರ ದುರುಪಯೋಗ: ತಲಾ ₹100 ಕೋಟಿ, ಸಚಿವ ಸ್ಥಾನದ ಆಮಿಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿಯಿಂದ ಅಧಿಕಾರ ದುರುಪಯೋಗ: ತಲಾ ₹100 ಕೋಟಿ, ಸಚಿವ ಸ್ಥಾನದ ಆಮಿಷ

ಬೆಂಗಳೂರು: ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು, ‘ನಮ್ಮ ಪಕ್ಷ ಒಡೆಯಲು ಬಿಜೆಪಿ ಕೈ ಹಾಕಿದರೆ ಅವರ ಪಕ್ಷದ 10 ರಿಂದ 15 ಶಾಸಕರನ್ನು ಸೆಳೆಯುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಆದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಬಿಜೆಪಿ ನಮ್ಮ ಪಕ್ಷದ ಶಾಸಕರನ್ನು ಸೆಳೆಯಲು ತಲಾ ₹ 100 ಕೋಟಿ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡಿದೆ’ ಎಂದು ಅರೋಪಿಸಿದರು.

ದೇಶಕ್ಕೇ ಉಪದೇಶ ಮಾಡುವ ಮೋದಿಯವರ ಪಕ್ಷಕ್ಕೆ ರಾಜ್ಯದಲ್ಲಿ ಸ್ಪಷ್ಟ ಬಹುಮತವೇ ಸಿಕ್ಕಿಲ್ಲ. ಆದರೂ ಕಾಂಗ್ರೆಸ್‌– ಜೆಡಿಎಸ್‌ ಅಧಿಕಾರಕ್ಕೆ ಬರುವುದನ್ನು ತಡೆಯುತ್ತೇನೆ ಎಂದಿದ್ದಾರೆ. ಪ್ರಧಾನಿ ಸ್ಥಾನದಲ್ಲಿ ಕುಳಿತು ಅಧಿಕಾರ ದುರುಪಯೋಗ ಮಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಅಧಿಕಾರ ಕಬಳಿಕೆಗಾಗಿ ತರಾತುರಿಯಲ್ಲಿದೆ. 104 ಸ್ಥಾನಗಳನ್ನು ಗೆದ್ದಿದ್ದರೂ, ಸರ್ಕಾರ ರಚನೆಗೆ ಅವರಿಗೆ ಕೆಲವು ಸ್ಥಾನಗಳ ಕೊರತೆ ಇದೆ. ಕಾಂಗ್ರೆಸ್‌– ಜೆಡಿಎಸ್‌ 116 ಸ್ಥಾನಗಳನ್ನು ಹೊಂದಿವೆ. ಬಿಜೆಪಿ 104 ಸ್ಥಾನಗಳನ್ನು ಗೆದ್ದಿರುವುದು ಸ್ವ–ಸಾಮರ್ಥ್ಯದಿಂದ ಅಲ್ಲ. ರಾಜ್ಯದಲ್ಲಿ ಮೋದಿ ವರ್ಚಸ್ಸೂ ಕೆಲಸ ಮಾಡಿಲ್ಲ. ಜಾತ್ಯತೀತ ಮತಗಳು ವಿಭಜನೆ ಆಗಿದ್ದರಿಂದ ಅಷ್ಟು ಸ್ಥಾನಗಳನ್ನು ಗೆದ್ದಿದ್ದಾರೆ. ಇಲ್ಲವಾದಲ್ಲಿ 80 ಸ್ಥಾನಗಳನ್ನೂ ದಾಟುತ್ತಿರಲಿಲ್ಲ ಎಂದರು.

ಬಿಜೆಪಿ ಬಳಿ ಕಪ್ಪು ಹಣ: ‘ದೇಶದಲ್ಲಿ ಭ್ರಷ್ಟಾಚಾರ ತೊಡೆದು ಹಾಕುತ್ತೇನೆ ಎಂದು ಮೋದಿ ಹೇಳುತ್ತಾರೆ. ಇನ್ನೊಂದು ಕಡೆ ಅವರ ಪಕ್ಷದವರು ನಮ್ಮ ಶಾಸಕರಿಗೆ ನೂರಾರು ಕೋಟಿ ಹಣ ನೀಡುವ ಆಮಿಷ ಒಡ್ಡುತ್ತಾರೆ. ಕಪ್ಪು ಹಣ ಬಿಜೆಪಿ ಖಜಾನೆಯಲ್ಲಿದೆ. ಆದಾಯ ತೆರಿಗೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದವರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಆದಾಯ ತೆರಿಗೆ ಇಲಾಖೆಯನ್ನು ದಾಳವಾಗಿ ಬಳಸುತ್ತಿದ್ದಾರೆ. ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರ ಹುದ್ದೆಯಲ್ಲಿರುವವರು ಅಧಿಕಾರ ದುರುಪಯೋಗ ಮಾಡಬಾರದು. ಅಮಿತ್‌ ಶಾ ಪಕ್ಷದ ಅಧ್ಯಕ್ಷರಾಗಿ ರಾಜಕೀಯ ಮಾಡುತ್ತಾರೆ, ಮಾಡಲಿ. ಆದರೆ, ಜವಾಬ್ದಾರಿ ಹುದ್ದೆಗಳಲ್ಲಿ ಇರುವವರು ಆ ಹುದ್ದೆಗಳ ಘನತೆ ಗೌರವ ಉಳಿಸಿಕೊಳ್ಳಬೇಕು ಎಂದರು.

ಬಿಜೆಪಿಯಿಂದಲೂ ಆಫರ್‌: ‘ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಲು ನಮಗೆ ಆಫರ್‌ ಬಂದಿರುವುದು ನಿಜ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರಸ್ತಾವ ಯಾವ ಸ್ವರೂಪದ್ದು ಎಂಬುದನ್ನು ಅವರು ಬಹಿರಂಗ ಪಡಿಸಲಿಲ್ಲ.

‘ಶಾಸಕರನ್ನು ರಕ್ಷಿಸಲು ರೆಸಾರ್ಟ್‌ಗೆ ಕರೆದೊಯ್ಯುವ ಬಗ್ಗೆ ಚಿಂತನೆ ನಡೆಸಿಲ್ಲ. ಒಂದು ವೇಳೆ ಬಿಜೆಪಿ ಶಾಸಕರ ಖರೀದಿಗೆ ಮುಂದಾದರೆ, ನಮ್ಮ ಶಾಸಕರ ರಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ನನ್ನ ಪಕ್ಷದ ಶಾಸಕರನ್ನು ಒಡೆಯಲು ಬಂದರೆ ಸುಮ್ಮನೆ ಕುಳಿತುಕೊಳ್ಳಲು

ಸನ್ಯಾಸಿಯಲ್ಲ’ ಎಂದೂ ಕುಮಾರಸ್ವಾಮಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.