ತಂಪೆರೆದ ಮಳೆ: ಇಳೆಯಲ್ಲಿ ಬೆಳೆಯ ಸದ್ದು

7
ವಾಡಿಕೆಗಿಂತ ಶೇ 39.8 ರಷ್ಟು ಹೆಚ್ಚು ಮಳೆ

ತಂಪೆರೆದ ಮಳೆ: ಇಳೆಯಲ್ಲಿ ಬೆಳೆಯ ಸದ್ದು

Published:
Updated:
ತಂಪೆರೆದ ಮಳೆ: ಇಳೆಯಲ್ಲಿ ಬೆಳೆಯ ಸದ್ದು

ಬೆಂಗಳೂರು: ‌ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ಪೂರ್ವ ಮುಂಗಾರು ಮಳೆ ತಂಪೆರೆದಿದೆ. ವಾಡಿಕೆಗಿಂತ ಶೇ 39.8ರಷ್ಟು ಮಳೆ ಹೆಚ್ಚಾಗಿದ್ದು ಕೃಷಿ ಕಾರ್ಯ ಆರಂಭಕ್ಕೆ ಅನುಕೂಲವಾಗಿದೆ.

ಚಾಮರಾಜನಗರ, ಮೈಸೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಬಿತ್ತನೆ ಚುರುಕುಗೊಂಡಿದ್ದು ರಾಗಿ, ಮುಸುಕಿನ ಜೋಳ, ಅಲಸಂದೆ, ಹೆಸರು, ಉದ್ದು, ಎಳ್ಳು, ತಂಬಾಕು ಬಿತ್ತನೆ ಮಾಡಲಾಗಿದೆ. ಈಗಾಗಲೇ ರಾಜ್ಯದಲ್ಲಿ 56 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಆಗಿದೆ ಎಂದು ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ ಮಾಹಿತಿ ನೀಡಿದರು.

‘ರಾಜ್ಯದಾದ್ಯಂತ 2004 ಕ್ವಿಂಟಲ್‌ನಷ್ಟು ಬಿತ್ತನೆ ಬೀಜಗಳ ವಿತರಣೆ ಮಾಡಿದ್ದೇವೆ. ಅವುಗಳಲ್ಲಿ ಮೆಕ್ಕೆಜೋಳ 119.80 ಕ್ವಿಂಟಲ್‌, ಉದ್ದು 225.19 ಕ್ವಿಂಟಲ್‌, ಹೆಸರು 796.40 ಕ್ವಿಂಟಲ್‌, ನೆಲಗಡಲೆ 526.60 ಕ್ವಿಂಟಲ್‌ನಷ್ಟು ವಿತರಿಸಲಾಗಿದೆ’ ಎಂದರು.

ಬಿತ್ತನೆ ಬೀಜ ವಿತರಣೆ ಅಷ್ಟೇ ಅಲ್ಲ, ಮುಂದಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಬಿತ್ತನೆ ಬೀಜಗಳ ಸಂಗ್ರಹವನ್ನು ಕೂಡ ಕೃಷಿ ಇಲಾಖೆ ಮಾಡಿಕೊಂಡಿದೆ. 5,867 ಕ್ವಿಂಟಲ್‌ನಷ್ಟು ವಿವಿಧ ಬಿತ್ತನೆ ಬೀಜಗಳ ದಾಸ್ತಾನು ಇದೆ. ನೆಲಗಡಲೆ 2229 ಕ್ವಿಂಟಲ್‌, ಮೆಕ್ಕೆಜೋಳ 1,470 ಕ್ವಿಂಟಲ್‌, ಹೆಸರು 740 ಕ್ವಿಂಟಲ್‌, ಅಲಸಂದೆ 644.80 ಕ್ವಿಂಟಲ್‌ನಷ್ಟು ದಾಸ್ತಾನು ಇದ್ದು ಬೇಡಿಕೆಗೆ ತಕ್ಕಂತೆ ವಿತರಣೆ ಮಾಡಲಾಗುತ್ತಿದೆ.

ಕಳೆದ ಸಾಲಿನಲ್ಲಿ ರಾಜ್ಯದಾದ್ಯಂತ 35.50 ಲಕ್ಷ ಟನ್‌ಗಳಷ್ಟು ರಸಗೊಬ್ಬರದ ಬೇಡಿಕೆ ಇತ್ತು. ಕೇಂದ್ರ ಸರ್ಕಾರ 51.24 ಲಕ್ಷ  ಟನ್‌ಗಳಷ್ಟು ರಸಗೊಬ್ಬರವನ್ನು ಪೂರೈಸಿತ್ತು. 32.69 ಲಕ್ಷ ಟನ್‌ಗಳಷ್ಟು ಸರಬರಾಜು ಮಾಡಲಾಗಿತ್ತು.

ಪ್ರಸಕ್ತ ಸಾಲಿನಲ್ಲಿ 21.87 ಲಕ್ಷ ಟನ್‌ನಷ್ಟು ರಸಗೊಬ್ಬರದ ಮುಂಗಾರು ಬೇಡಿಕೆ ಇದೆ. ಏಪ್ರಿಲ್‌– ಮೇನಲ್ಲಿ ಬೇಡಿಕೆ ಇದ್ದ 6.51 ಲಕ್ಷ ಟನ್‌ಗಳಲ್ಲಿ 3.67 ಲಕ್ಷ ಟನ್‌ಗಳಷ್ಟು ರಸಗೊಬ್ಬರ ವಿತರಿಸಲಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಸರಬರಾಜು ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಉತ್ಪಾದನಾ ಗುರಿ: ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಕ್ರಮವಾಗಿ 74.69, 31.80 ಹಾಗೂ 5.41 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳುವ ಯೋಜನೆ ಇಲಾಖೆಯದ್ದು. 135 ಲಕ್ಷ ಟನ್‌ ಆಹಾರ ಧಾನ್ಯ, 14 ಲಕ್ಷ ಟನ್‌ ಎಣ್ಣೆಕಾಳುಗಳ ಉತ್ಪಾದನೆ ಗುರಿಯನ್ನು ಇಲಾಖೆ ಹೊಂದಿದೆ.

*

ಕೆಲವೆಡೆ ಬಿತ್ತನೆ ವಾಡಿಕೆಗಿಂತ ಮಳೆ ಹೆಚ್ಚಿದೆ. ಆದರೆ, ಎಲ್ಲಾ ಕಡೆಗಳಲ್ಲಿ ಬಿತ್ತನೆ ಪ್ರಾರಂಭವಾಗಿಲ್ಲ. ಪೂರ್ವ ಮುಂಗಾರು ಜಿಲ್ಲೆಗಳಾದ ಚಾಮರಾಜನಗರ, ಮೈಸೂರು ಹಾಗೂ ಹಾಸನದ ಕೆಲ ಭಾಗಗಳಲ್ಲಿ ಬಿತ್ತನೆ ಪ್ರಾರಂಭವಾಗಿದೆ. ಸದ್ಯದ ಬಜೆಟ್‌ನಲ್ಲಿ ಹೇಳಲಾದ ಎಲ್ಲಾ ಯೋಜನೆಗಳಿಗೆ ಅಗತ್ಯವಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಸಂಬಂಧಿಸಿದ ಸಂಪೂರ್ಣ ವ್ಯವಸ್ಥೆ ಮಾಡಲಾಗಿದ್ದು ದಾಸ್ತಾನು ಹಾಗೂ ವಿತರಣೆ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಬಿ.ವೈ.ಶ್ರೀನಿವಾಸ ತಿಳಿಸಿದರು.

*

ಅಂಕಿ ಅಂಶ

2018–19ರಲ್ಲಿ ಉತ್ಪಾದನಾ ಗುರಿ

ಏಕದಳ ಧಾನ್ಯ– 115 ಲಕ್ಷ ಟನ್‌

ದ್ವಿದಳ ಧಾನ್ಯ– 20 ಲಕ್ಷ ಟನ್‌

ಎಣ್ಣೆಕಾಳು– 14 ಲಕ್ಷ ಟನ್‌

ಕಬ್ಬು– 350 ಲಕ್ಷ ಟನ್‌

ಒಟ್ಟು ಆಹಾರ ಧಾನ್ಯ– 135 ಲಕ್ಷ ಟನ್‌

****

2018–19ರಲ್ಲಿ ಬಿತ್ತನೆ ಗುರಿ– 111.91 ಲಕ್ಷ ಹೆಕ್ಟೇರ್‌

ಒಟ್ಟು ಬಿತ್ತನೆ ಬೀಜ ದಾಸ್ತಾನು– 5867.97 ಕ್ವಿಂಟಲ್‌

ಒಟ್ಟು ಬಿತ್ತನೆ ಬೀಜ ವಿತರಣೆ– 2004.60 ಕ್ವಿಂಟಲ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry