ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆಗೆ ಗ್ರಾಸವಾದ ನಕಲಿ ಪತ್ರ

‘ಪತ್ರ ಸೃಷ್ಟಿಸಿದವನ ಪತ್ತೆಗೆ ಕ್ರಮ’
Last Updated 16 ಮೇ 2018, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನಿಸಿರುವ ಕಾರಣ ರಾಜ್ಯದಾದ್ಯಂತ ಗುರುವಾರ ಗಲಭೆ ಸೃಷ್ಟಿಯಾಗುವ ಸಾಧ್ಯತೆಗಳಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಿಕೊಳ್ಳಿ’ ಎಂದು ರಾಜ್ಯದ ಪೊಲೀಸರಿಗೆ ಡಿಜಿಪಿ ಸೂಚಿಸಿರುವಂಥ ಪತ್ರವೊಂದು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿ ಬಿರುಸಿನ ಚರ್ಚೆಯನ್ನು ಹುಟ್ಟುಹಾಕಿತು.

ಅಧಿಕಾರದ ಚುಕ್ಕಾಣಿಗಾಗಿ ರಾಜಕೀಯ ಜಿದ್ದಾಜಿದ್ದಿ ನಡೆಯುತ್ತಿದ್ದ ಹೊತ್ತಿನಲ್ಲೇ ಹೊರಬಿದ್ದ ಇಂಥದ್ದೊಂದು ಪತ್ರ, ಬಿಜೆಪಿ ಸರ್ಕಾರ ರಚಿಸುವುದು ಖಚಿತ ಎಂಬ ಅಭಿಪ್ರಾಯ ಮೂಡುವಂತೆ ಮಾಡಿತ್ತು. ಕೊನೆಗೆ ಡಿಜಿಪಿ ನೀಲಮಣಿ ರಾಜು, ‘ಅದು ನಕಲಿ ಪತ್ರ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಗುರುವಾರ ಭದ್ರತಾ ಕ್ರಮ ಕೈಗೊಳ್ಳುವ ಕುರಿತು ನನ್ನ ಕಚೇರಿಯಿಂದ ಯಾವುದೇ ಪತ್ರ ಹೋಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ಹೀಗಿತ್ತು ಪತ್ರ: ‘ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿರುವ ಬಿಜೆಪಿ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿದ್ದಾರೆ. ಇದನ್ನು ಖಂಡಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.’

‘ರಾಜಭವನ, ವಿಧಾನಸೌಧ ಅಥವಾ ಪ್ರವಾಣವಚನ ಸ್ವೀಕರಿಸುವ ಸ್ಥಳಕ್ಕೆ ಕಾರ್ಯಕರ್ತರು ಮುತ್ತಿಗೆ ಹಾಕಬಹುದು. ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲೂ ಕಾರ್ಯಕರ್ತರು ದಾಂದಲೆ ಮಾಡಬಹುದು. ಬಿಜೆಪಿ ಪಕ್ಷದಿಂದ ಆಯ್ಕೆಯಾಗಿರುವ ಶಾಸಕರ ಮನೆಗಳ ಮೇಲೆ ಕಲ್ಲುಗಳನ್ನೂ ತೂರಬಹುದು.’‌

‘ಹೀಗಾಗಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ. ಕಾನೂನು ಸುವ್ಯವಸ್ಥೆಗೆ ಭಂಗವಾಗದಂತೆ ನೋಡಿಕೊಳ್ಳಿ’ ಎಂದು ಪತ್ರದಲ್ಲಿತ್ತು.

‘ಕಿಡಿಗೇಡಿಗಳು ತಮ್ಮ ಕಾರ್ಯಸಾಧನೆಗಾಗಿ ಪೊಲೀಸ್ ಇಲಾಖೆಯ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಡಿಜಿಪಿ ನೀಲಮಣಿ ರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT