ಬಡತನ ಮೀರಿ ಸಾಧನೆ

7
ಪಿಯುಸಿ: ಉತ್ತಮ ಅಂಕ ಗಳಿಸಿದ ನಿರ್ಮಲಾ

ಬಡತನ ಮೀರಿ ಸಾಧನೆ

Published:
Updated:
ಬಡತನ ಮೀರಿ ಸಾಧನೆ

ಅಥಣಿ: ಇಲ್ಲಿನ ಗ್ರಾಮೀಣ ವಿದ್ಯಾರ್ಥಿನಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 91ರಷ್ಟು ಅಂಕ ಗಳಿಸಿ ಗಮನಸೆಳೆದಿದ್ದಾರೆ. ಸಾಧನೆಗೆ ಬಡತನ ಅಡ್ಡಿಯಾಗದು ಎಂದು ನಿರೂಪಿಸಿದ್ದಾರೆ.

ರಡ್ಡೇರಹಟ್ಟಿ ಗ್ರಾಮದ ಎನ್.ಬಿ. ಸಾವಂತ ಸ್ವತಂತ್ರ ಪಿಯು ಕಾಲೇಜಿನ ನಿರ್ಮಲಾ ಚನ್ನನ್ನವರ ಈ ಸಾಧಕಿ. ವಾಣಿಜ್ಯ ವಿಭಾಗದಲ್ಲಿ ಉತ್ತಮ ಅಂಕ ಗಳಿಸಿ, ಕಾಲೇಜಿನವರು ಹಾಗೂ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ನಿರ್ಮಲಾ ತಂದೆ ಶಂಕರ ಚನ್ನನ್ನವರ ಕೂಲಿ ಕಾರ್ಮಿಕರಾಗಿದ್ದಾರೆ. ಈಚೆಗೆ ಅನಾರೋಗ್ಯದಿಂದ ಕೆಲಸ ಮಾಡಲಾಗುತ್ತಿಲ್ಲ. ತಾಯಿ ಕೂಡ ಕೂಲಿಗೆ ಹೋಗುತ್ತಾರೆ. ರಜಾ ದಿನಗಳಲ್ಲಿ ಕೂಲಿ ಮಾಡಿಕೊಂಡು ಓದಿದ ನಿರ್ಮಲಾ ಒಳ್ಳೆಯ ಶ್ರೇಣಿ ಗಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿಯಲ್ಲಿ ಶೇ 90.56 ಅಂಕ ಗಳಿಸಿದ್ದ ಪ್ರತಿಭಾನ್ವಿತೆ. ಆಕೆಯ ಬಡತನ ಕಂಡು, ಎನ್.ಬಿ. ಸಾವಂತ ಸ್ವತಂತ್ರ ಪದವಿಪೂರ್ವ ಕಾಲೇಜಿನ ಅಧ್ಯಕ್ಷ  ರಾಜು ಚನ್ನಾಪುರ, ಪ್ರಾಚಾರ್ಯ ಯುವರಾಜ ಹಳೆಮನಿ ಕಾಲೇಜಿಗೆ ಉಚಿತವಾಗಿ ಪ್ರವೇಶ ನೀಡಿದ್ದರು.

‘ಕಾಲೇಜಿನಲ್ಲಿ ಉಪನ್ಯಾಸಕರು ಹೇಳಿದ್ದನ್ನು ಪುನರ್ಮನನ ಮಾಡಿಕೊಳ್ಳುತ್ತಿದ್ದೆ. ಮನೆಯಲ್ಲಿ 2 ತಾಸು ಓದಿಕೊಳ್ಳುತ್ತಿದ್ದೆ. ಉಳಿದ ಸಮಯ ಕೆಲಸ ಮಾಡುತ್ತಿದ್ದೆ. ಲೆಕ್ಕಶಾಸ್ತ್ರದಲ್ಲಿ 100ಕ್ಕೆ 99, ವ್ಯವಹಾರ ಅಧ್ಯಯನದಲ್ಲಿ 98, ಕನ್ನಡದಲ್ಲಿ 97, ಅರ್ಥಶಾಸ್ತ್ರದಲ್ಲಿ 95, ರಾಜ್ಯಶಾಸ್ತ್ರದಲ್ಲಿ 91 ಮತ್ತು ಇಂಗ್ಲಿಷ್‌ನಲ್ಲಿ 66 ಒಟ್ಟು 546 ಅಂಕ ಪಡೆದಿದ್ದೇನೆ’ ಎಂದು ನಿರ್ಮಲಾ ತಿಳಿಸಿದರು.

‘ನಿರ್ಮಲಾ ಒಳ್ಳೆಯ ಹುಡುಗಿ. ಚೆನ್ನಾಗಿ ಓದುತ್ತಾಳೆ. ಬಡತನವಿದ್ದುದರಿಂದ ಶುಲ್ಕ ಪಡೆದಿರಲಿಲ್ಲ. ಆಕೆಯ ಸಾಧನೆ ನಮ್ಮ ಕಾಲೇಜು, ಊರಿಗೆ ಹೆಮ್ಮೆ ತರುವ ವಿಷಯವಾಗಿದೆ. ಮುಂದೆಯೂ ನೆರವಾಗುತ್ತೇವೆ’ ಎಂದು ಕಾಲೇಜಿನ ಅಧ್ಯಕ್ಷ ರಾಜು ಚನ್ನಾಪುರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry