ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲವು ತೋರದ ಅಲ್ಪಸಂಖ್ಯಾತರು

ಹು–ಧಾ ಪೂರ್ವ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಗೋಕಾಕ
Last Updated 17 ಮೇ 2018, 5:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಾನು ಸಂಘ ಪರಿವಾರದ ಕಾರ್ಯಕರ್ತ ಎಂಬ ಕಾರಣಕ್ಕೆ ಕ್ಷೇತ್ರದ ಅಲ್ಪಸಂಖ್ಯಾತ ಮತದಾರರು ಬಿಜೆಪಿಯತ್ತ ಒಲವು ತೋರಲಿಲ್ಲ. ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರ ವೋಟುಗಳು ಬೇರೆ, ಬೇರೆ ಪಕ್ಷಗಳಿಗೆ ಹಂಚಿಹೋಗಲಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಪೂರ್ಣಪ್ರಮಾಣದಲ್ಲಿ ಚಲಾವಣೆಯಾಗಿವೆ. ಇದೇ ನನ್ನ ಸೋಲಿಗೆ ಮುಖ್ಯ ಕಾರಣವಾಯಿತು’ ಎಂದು ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಚಂದ್ರಶೇಖರ ಗೋಕಾಕ
ವಿಶ್ಲೇಷಿಸಿದರು.

ಸೋಲಿಗೆ ಕಾರಣ ಕುರಿತು ‘ಪ್ರಜಾವಾಣಿ’ ಜೊತೆ ಬುಧವಾರ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ‘ಟಿಕೆಟ್‌ ಸಿಗದೇ ಅಸಮಾಧಾನಗೊಂಡ ಪಕ್ಷದ ಮುಖಂಡರು ಆರಂಭದಲ್ಲೇ ನೀಡಿದ ಒಡಕಿನ ಹೇಳಿಕೆಗಳು ಮತ್ತು ಅವರ ನಡವಳಿಕೆಗಳು ಮತದಾರರಿಗೆ ಬೇರೆಯೇ ಸಂದೇಶ ಹೋಯಿತು. ಇದು ಸಹ ಪಕ್ಷದ ಸೋಲಿಗೆ ಕಾರಣವಾಯಿತು’ ಎಂದರು.

‘ಟಿಕೆಟ್‌ ವಂಚಿತರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಬಳಿಕ ವಾಪಸ್‌ ಪಡೆದ ಮೇಲೆ ಪ್ರಚಾರದಿಂದ ದೂರ ಉಳಿದರು. ಅಲ್ಲದೇ, ಅಸಮಾಧಾನಿತರು ಚುನಾವಣೆ ಸಂದರ್ಭದಲ್ಲಿ ಸುಮ್ಮನೇ ಕೂರಲಿಲ್ಲ’ ಎಂದರು.

‘ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಇದ್ದರೂ ಸಹ ಕಳೆದ ಐದು ವರ್ಷಗಳಿಂದ ಪಕ್ಷ ಸಂಘಟನೆ ಸಂಪೂರ್ಣ ನಿಂತು ಹೋಗಿತ್ತು. ಆದರೆ, ಚುನಾವಣೆ ಸಂದರ್ಭದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಮಾತ್ರ ಹೆಚ್ಚಾಗಿತ್ತು’ ಎಂದು ಹೇಳಿದರು.

‘ಪಕ್ಷವು ಕೊನೇ ಕ್ಷಣದಲ್ಲಿ ಟಿಕೆಟ್‌ ನೀಡಿದ ಕಾರಣ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಮತ್ತು ಎಲ್ಲ ಮತದಾರರನ್ನು ತಲುಪಲು ಸಮಯ ಸಿಗಲಿಲ್ಲ. ಜೊತೆಗೆ ನಾನು ರಾಜಕೀಯಕ್ಕೆ ಹೊಸಬನಾಗಿರುವುದು ಕಾರಣವಿರಬಹುದು’ ಎಂದು ಹೇಳಿದರು.

‘ಕಳೆದ ಚುನಾವಣೆಯಲ್ಲಿ ಬಿಜೆಪಿ, ಕೆಜೆಪಿ ಅಭ್ಯರ್ಥಿಗಳು ಗಳಿಸಿದ್ದ ಮತಗಳು ಈ ಚುನಾವಣೆಯಲ್ಲೂ ಪಕ್ಷಕ್ಕೆ ಬಂದಿವೆ. ಆದರೆ, ಕರ್ಕಿ ಬಸವೇಶ್ವರ ನಗರ, ಮಂಟೂರು ರೋಡ್‌, ಕುಲಕರ್ಣಿ ಓಣಿ ಪ್ರದೇಶದಲ್ಲಿರುವ ಪಕ್ಷದ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿಲ್ಲ. ಚುನಾವಣೆ ಸಂದರ್ಭದಲ್ಲಿ ನಡೆದ ಈ ಎಲ್ಲ ಬೆಳವಣಿಗೆಗಳು ಪಕ್ಷದ ವರಿಷ್ಠರ ಗಮನಕ್ಕೆ ಹೋಗಿದೆ. ಅದನ್ನು ಅವರು ವಿಮರ್ಶೆ ಮಾಡುತ್ತಿದ್ದಾರೆ. ಸೂಕ್ತ ಕ್ರಮಕೈಗೊಳ್ಳಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT