ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಐಎಸ್ಎಲ್, ಎಂಪಿಎಂ ಕಾರ್ಖಾನೆಗಳ ಅಸ್ತಿತ್ವದ ಪ್ರಶ್ನೆ

ಮೂರನೇ ಬಾರಿ ಆಯ್ಕೆಯಾದ ಸಂಗಮೇಶ್ವರ ಮುಂದೆ ಸಮಸ್ಯೆಗಳ ಸವಾಲು
Last Updated 17 ಮೇ 2018, 6:14 IST
ಅಕ್ಷರ ಗಾತ್ರ

ಭದ್ರಾವತಿ: ಬಿ.ಕೆ. ಸಂಗಮೇಶ್ವರ ಅವರಿಗೆ ಮೂರನೇ ಬಾರಿ ಗೆಲುವು ದಕ್ಕಿದ್ದು, ಕಾರ್ಖಾನೆ ನಗರಿಯ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವುದು ಮತದಾರರ ನಿರೀಕ್ಷೆಯಾಗಿದೆ.

ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳ ಸಮಸ್ಯೆಗಳು, ಅಲ್ಲಿನ ಕಾರ್ಮಿಕರ ಆಸ್ತಿತ್ವದ ಪ್ರಶ್ನೆ ಕುರಿತಾಗಿ ಬಹಳಷ್ಟು ಚರ್ಚೆಗಳು ನಡೆದಿದ್ದವು. ಈ  ಚುನಾವಣೆಯಲ್ಲಿ ಅದರ ಪ್ರಭಾವವೂ ಕೆಲಸ ಮಾಡಿದೆ.

ಎಂಪಿಎಂ: 2015 ಡಿಸೆಂಬರ್ ತಿಂಗಳಿನಿಂದ ಉತ್ಪಾದನೆ ಸ್ಥಗಿತ ಮಾಡಿರುವ ಇಲ್ಲಿನ ಎಂಪಿಎಂ ಕಾರ್ಖಾನೆಯಲ್ಲಿ 100 ಜನರನ್ನು ಹೊರತುಪಡಿಸಿ ಉಳಿದೆಲ್ಲಾ ನೌಕರರಿಗೆ ಸ್ವಯಂ ನಿವೃತ್ತಿಯನ್ನು ಅಂದಿನ ಸರ್ಕಾರ ನೀಡಿದೆ.

ಈ ನಿವೃತ್ತಿ ಯೋಜನೆ ಪಡೆದರೆ ಮಾತ್ರ ಕಾರ್ಖಾನೆಯನ್ನು ಸಹಭಾಗಿತ್ವ ಇಲ್ಲವೇ ಖಾಸಗಿ ಒಡೆತನದಲ್ಲಿ ನಡೆಸುತ್ತೇವೆ ಎಂಬ ಭರವಸೆ  ಸಿಕ್ಕಿದ್ದು ಸಹ ನಿವೃತ್ತಿ ಅಂಚಿನಲ್ಲಿದ್ದ ಕಾರ್ಮಿಕರ ಪಾಲಿಗೆ ಒಂದಿಷ್ಟು ನೆಮ್ಮದಿ ತಂದಿತ್ತು.

ಹೀಗಾಗಿ ದಿಕ್ಕು ಕಾಣದ ಕಾರ್ಮಿಕರು ಸ್ವಯಂ ನಿವೃತ್ತಿ ಯೋಜನೆಯ ಲಾಭದಿಂದ ಬದುಕು ಕಟ್ಟಿಕೊಳ್ಳಲು ಮುಂದಾದ ಪರಿಣಾಮ ಅವರಿಗೆ ಸಲ್ಲಬೇಕಾದ ಮೊದಲ ಕಂತಿನ ಹಣ ಮಂಜೂರಾಗಿ, ಉಳಿದ ಎರಡನೇ ಕಂತಿನ ಮೊತ್ತ ಈಗ ಬಿಡುಗಡೆಯಾಗಬೇಕಿದೆ.

ಈ ನಡುವೆ ಸ್ವಯಂ ನಿವೃತ್ತಿ ಪಡೆದ ನೌಕರರು 2ನೇ ಕಂತಿನ ಹಣ ಪಡೆಯುವ ಪೂರ್ವದಲ್ಲಿ ತಮ್ಮ ವಸತಿಗೃಹ ಖಾಲಿ ಮಾಡಬೇಕು ಎಂಬ ಆದೇಶವನ್ನು ಆಡಳಿತ ಮಂಡಳಿ ನೀಡಿರುವುದು  ಸಂಕಷ್ಟ ತಂದೊಡ್ಡಿದೆ.

ವಿಐಎಸ್ಎಲ್: ಉಕ್ಕು ಪ್ರಾಧಿಕಾರ ಸ್ವಾಮ್ಯದ ವಿಐಎಸ್ಎಲ್ ಕಾರ್ಖಾನೆಯಲ್ಲಿ ಈಗ ಕಾಯಂ ನೌಕರರ ಸಂಖ್ಯೆ ಬಹಳಷ್ಟು ಕುಸಿದಿದ್ದು, ಗುತ್ತಿಗೆ ಕಾರ್ಮಿಕರ ಶಕ್ತಿಯ ಮೇಲೆ ಕಾರ್ಖಾನೆ ನಿಂತಿದೆ. 1,200ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರ ಬದುಕು ಈಗ ಅತಂತ್ರ ಪರಿಸ್ಥಿತಿಯ ಹಾದಿ ಹಿಡಿದಿದೆ.

ಉತ್ಪಾದನೆ ಪ್ರಮಾಣ ಕುಸಿತದಿಂದ ಕೆಲಸ ಹಾಗೂ ನೌಕರರ ಸಂಖ್ಯೆ ಕಡಿತದಂಥ ಕ್ರಮ ಹೆಚ್ಚಿದ್ದು ಇದನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವ ಜವಾಬ್ದಾರಿ ಸದ್ಯಕ್ಕಿದೆ.

ಇದರೊಟ್ಟಿಗೆ ರಾಜ್ಯ ಸರ್ಕಾರ ಮಂಜೂರು ಮಾಡಿರುವ ಗಣಿ ಪಾತ್ರ ಕುರಿತಾಗಿ ಕೇಂದ್ರ ಸರ್ಕಾರ ತುರ್ತು ಕ್ರಮ ತೆಗೆದುಕೊಂಡು ಅದನ್ನು ಉಕ್ಕು ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಿಸುವ ಕೆಲಸ ತುರ್ತಾಗಿ ನಡೆದಲ್ಲಿ ಕಾರ್ಖಾನೆ ಉಳಿಯಲ್ಲಿದ್ದು ಈ ನಿಟ್ಟಿನ ಪ್ರಯತ್ನ ಆಗಬೇಕಿದೆ.

ಪ್ರವಾಸೋದ್ಯಮ: ಇಲ್ಲಿನ ಪುರಾಣ ಪ್ರಸಿದ್ಧ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ, ಭದ್ರಾ ಜಲಾಶಯ, ಅದಕ್ಕೆ ಹೊಂದಿಕೊಂಡಂತೆ ಸಾಗುವ ಭದ್ರಾ ಅಭಯಾರಣ್ಯ ಹೀಗೆ ಹಲವು ಪ್ರವಾಸಿ ತಾಣಗಳ ಅಭಿವೃದ್ಧಿ ಇಲ್ಲಿನ ಅರ್ಥಿಕಾಭಿವೃದ್ಧಿಗೆ ಪೂರಕವಾಗಲಿದೆ.

ಕುವೆಂಪು ವಿವಿ ಅಭಿವೃದ್ಧಿ, ಪುನಶ್ಚೇತನ ಮಾಡುವ ಮೂಲಕ ಹೊರ ರಾಜ್ಯ, ವಿದೇಶಿ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಉನ್ನತ ಪದವಿಗೆ ಸೇರುವ ಸಂಬಂಧ ಅಗತ್ಯ ಇರುವ ಕ್ರಮಗಳನ್ನು ಅನುಸರಿಸುವುದು ಸಹ ಅಭಿವೃದ್ಧಿಗೆ ನೆರವಾಗಲಿದೆ.

ಕ್ಷೇತ್ರಕ್ಕೆ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳ ಅಗತ್ಯ ಇದೆ ಎಂಬ ಬೇಡಿಕೆ ಹಲವು ದಶಕದಿಂದ ನನೆಗುದಿಯಲ್ಲಿದೆ. ಈ ಹಿಂದೆ ಉನ್ನತ ಶಿಕ್ಷಣ ಸಚಿವರಾಗಿದ್ದ ಡಿ.ಎಚ್. ಶಂಕರಮೂರ್ತಿ ಇದಕ್ಕಾಗಿ ಒಂದಿಷ್ಟು ಪ್ರಯತ್ನ ಮಾಡಿದ ಕಡತಗಳು ಈಗಲೂ ಇಲಾಖೆಯಲ್ಲಿ ಬಾಕಿ ಉಳಿದಿವೆ.

ಕೃಷಿ, ತೋಟಗಾರಿಕೆ: ಇಲ್ಲಿನ ಹಳ್ಳಿಕೆರೆ ಕೃಷಿ ಇಲಾಖೆ ತರಬೇತಿ ಕೇಂದ್ರದ ಜಾಗವನ್ನು ಸಮರ್ಪಕವಾಗಿ ಬಳಸಿಕೊಂಡು ಅದನ್ನು ಉನ್ನತ ದರ್ಜೆಗೆ ಏರಿಸುವ ಕೆಲಸ ಆಗಬೇಕು. ಅದರೊಟ್ಟಿಗೆ ತೋಟಗಾರಿಕೆ ತರಬೇತಿ ಕೇಂದ್ರವೂ ಆರಂಭವಾಗಬೇಕಿದೆ.

ಸುಗಮ ಸಾರಿಗೆ ವ್ಯವಸ್ಥೆಗೆ ವಾಹನಗಳು ಇದ್ದರೂ ಅವನ್ನು ವ್ಯವಸ್ಥಿತವಾಗಿ ನಾಲ್ಕು ದಿಕ್ಕಿನಲ್ಲಿ ಸಂಚರಿಸುವಂತೆ ವಿಸ್ತರಿಸುವ ಜವಾಬ್ದಾರಿ, ಬಿಆರ್‌ಪಿ, ಹೊಸಮನೆ ಪೊಲೀಸ್ ಠಾಣೆಗಳ ಅಭಿವೃದ್ಧಿ, ಕೂಡ್ಲಿಗೆರೆ ಪ್ರದೇಶದಲ್ಲಿ ಪೊಲೀಸ್ ಠಾಣೆ ಆಗಬೇಕೆಂಬ ಬೇಡಿಕೆ ಬಾಕಿ ಇವೆ.

ಇಲ್ಲಿರುವ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕೌಶಲಾಭಿವೃದ್ಧಿ ಘಟಕವನ್ನು ಸ್ಥಾಪಿಸಿ ಇಲ್ಲಿನ ಯುವಕರ ಕೈಗೆ ಸ್ವಯಂ ಉದ್ಯೋಗ ಕೊಡಿಸುವ ಪ್ರಯತ್ನ ನಡೆಯಬೇಕು. ಜತೆಗೆ ಹುತ್ತಾ ಕಾಲೊನಿ ಭಾಗದಲ್ಲಿನ ಸಣ್ಣ ಕೈಗಾರಿಕಾ ಘಟಕದ ಜಾಗದಲ್ಲಿ ಹೊಸ ಉತ್ಪನ್ನಗಳ ಉತ್ಪಾದನೆ ಆರಂಭವಾಗುವ ಅಗತ್ಯವಿದೆ ಎಂಬುದು ಯುವ ಸಮುದಾಯದ ಬೇಡಿಕೆಯಾಗಿದೆ.

ಇಲ್ಲಿನ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಸಾಕಷ್ಟು ಜಾಗವಿದ್ದು ಅಲ್ಲಿ ಕೌಶಲಾಭಿವೃದ್ಧಿ ಶಿಕ್ಷಣದ ಸ್ಥಾಪನೆ ಮಾಡಬೇಕು ಎಂಬುದು ಸಣ್ಣ ಉದ್ದಿಮೆದಾರ ಎಂ. ಮಧು ಅವರ ಅಭಿಪ್ರಾಯ.

ಒಟ್ಟಿನಲ್ಲಿ ಹಲವು ದಶಕದ ಬೇಡಿಕೆಗಳು ಕ್ಷೇತ್ರದಲ್ಲಿ ಹಾಗೆಯೇ ಬಾಕಿ ಉಳಿದಿದ್ದರು ಸಹ, ಜನ ಪ್ರತಿನಿಧಿಗಳು ಸರ್ಕಾರದ ಯೋಜನೆ ಜಾರಿಗೆ ಒತ್ತು ನೀಡಿದ್ದು ಬಿಟ್ಟರೆ ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆಯದೆ ಇದ್ದದ್ದು ಮಾತ್ರ ಕ್ಷೇತ್ರದ ಆರ್ಥಿಕ ಶಕ್ತಿಯ ಹಿನ್ನೆಡೆಗೆ ಕಾರಣವಾಗಿದೆ.

– ಕೆ.ಎನ್. ಶ್ರೀಹರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT