ಸೋಮವಾರ, ಮಾರ್ಚ್ 8, 2021
32 °C
ಕಮಲ ಹಿಡಿದ ಜಿಲ್ಲೆಯ ಮತದಾರರು l ಭದ್ರಾವತಿಯಲ್ಲಿ ಮಾತ್ರ ಉಳಿದ ಕಾಂಗ್ರೆಸ್‌ ಮಾನ

ಬಿಜೆಪಿಗೆ ಲಾಭ ತಂದ ಮುಖ್ಯಮಂತ್ರಿ ಘೋಷಣೆ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಬಿಜೆಪಿಗೆ ಲಾಭ ತಂದ ಮುಖ್ಯಮಂತ್ರಿ ಘೋಷಣೆ

ಶಿವಮೊಗ್ಗ: ಬಿಜೆಪಿ ವರಿಷ್ಠರು ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಪಕ್ಷ ಅತಿ ಹೆಚ್ಚು ಮತ ಗಳಿಸುವ ಸೂಚನೆ ದೊರಕಿತ್ತು. ಆ ನಿರೀಕ್ಷೆ ನಿಜವಾಗಿದೆ.

ಜಿಲ್ಲೆಯವರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ ಎಂಬ ಜನರ ಒಲವು ಜಿಲ್ಲೆಯ 6 ಕ್ಷೇತ್ರಗಳಲ್ಲಿ ಬಿಜೆಪಿಗೆ ಇಂತಹ ಅವಕಾಶ ಒದಗಿಸಿದೆ. ಚಲಾವಣೆಯಾದ 11,13,309 ಮತಗಳಲ್ಲಿ ಬಿಜೆಪಿ 4,87,403 ಮತಗಳನ್ನು ಪಡೆದಿದೆ. ಅಂದರೆ, ಆ ಪಕ್ಷ ಜಿಲ್ಲೆಯಲ್ಲಿ ಪಡೆದ ಸರಾಸರಿ ಶೇಕಡವಾರು ಮತ ಶೇ 43.77

ರಾಜ್ಯದ ವಿಧಾನಸಭೆಗೆ 2008ರಲ್ಲಿ ನಡೆದ ಚುನಾವಣೆಯಲ್ಲೂ ಬಿಜೆಪಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು. ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದ ಜೆಡಿಎಸ್ ವಿರುದ್ಧ ಜನರು ಆಕ್ರೋಶಗೊಂಡಿದ್ದರು. ಅದರ ಫಲವಾಗಿ ಜಿಲ್ಲೆಯಲ್ಲಿ 5 ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ತೀರ್ಥಹಳ್ಳಿ, ಭದ್ರಾವತಿ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದವು. ಈ ಬಾರಿ ಇತಿಹಾಸ ಮರುಕಳಿಸಿದೆ. ಭದ್ರಾವತಿ ಹೊರತುಪಡಿಸಿ ಉಳಿದ 6 ಕ್ಷೇತ್ರಗಳಲ್ಲಿ ಬಿಜೆಪಿ ಆಧಿಪತ್ಯ ಸ್ಥಾಪಿಸಿದೆ. ತೀರ್ಥಹಳ್ಳಿ ಕ್ಷೇತ್ರ ಹೆಚ್ಚುವರಿಯಾಗಿ ದೊರೆತಿದೆ.

ಸಚಿವ ಸ್ಥಾನ ಅಲಂಕರಿಸದ ಯಡಿಯೂರಪ್ಪ: ನಾಲ್ಕು ದಶಕ ರಾಜಕೀಯ ಜೀವನದಲ್ಲಿರುವ ಯಡಿಯೂರಪ್ಪ ಅವರು ಯಾರ ಸಂಪುಟದಲ್ಲೂ ಸಚಿವರಾಗಿ ಕಾರ್ಯನಿರ್ವಹಿಸಿಲ್ಲ. 2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿ, 2008ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿದ್ದರು.

ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಮೂಲಕ 1983ರಲ್ಲಿ ರಾಜಕೀಯ ಜೀವನ ಆರಂಭಿಸಿದ್ದ ಯಡಿಯೂರಪ್ಪ ಅವರು 1994ರವರೆಗೆ ನಾಲ್ಕು ಬಾರಿ ಶಾಸಕರಾಗಿದ್ದರು. 1983, 1985ರಲ್ಲಿ ಜನತಾ ಪಕ್ಷದ ಸರ್ಕಾರ, 1989ರಲ್ಲಿ ಕಾಂಗ್ರೆಸ್ ಸರ್ಕಾರ, 1994ರಲ್ಲಿ ಜನತಾ ದಳ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸಿದ್ದವು. ಬಿಜೆಪಿ ಎಂದೂ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗಿರಲಿಲ್ಲ. ಮಂತ್ರಿಯಾಗುವ ಯೋಗವೂ ದೊರಕಿರಲಿಲ್ಲ.

ಬಂಗಾರಪ್ಪರ ಪ್ರಭಾವದಿಂದಾಗಿ 1999ರಲ್ಲಿ ಕಾಂಗ್ರೆಸ್‌ನ ಮಹಾಲಿಂಗಪ್ಪ ಎದುರು ಸೋಲು ಕಂಡಿದ್ದರು. 2004ರಲ್ಲಿ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದ ಬಂಗಾರಪ್ಪ ಬಿಜೆಪಿ ಸೇರಿದ್ದರು. ಇದು ಜಿಲ್ಲೆಯಲ್ಲಿ ಬಿಜೆಪಿ ಬೇರು ವಿಸ್ತರಿಸಲು ದಾರಿ ಮಾಡಿಕೊಟ್ಟಿತ್ತು. ಆ ವರ್ಷ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 6ರಲ್ಲಿ ಗೆಲುವು ಸಾಧಿಸಿತ್ತು.

ನಂತರ ಬಂಗಾರಪ್ಪ ಬಿಟ್ಟುಹೋದರೂ, ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡದೇ ವಂಚಿಸಲಾಯಿತು ಎಂಬ ಅನುಕಂಪ 2008ರಲ್ಲಿ ಕೆಲಸ ಮಾಡಿತ್ತು. ಜಿಲ್ಲೆಯ 5 ಸ್ಥಾನಗಳೂ ಸೇರಿ ರಾಜ್ಯದಲ್ಲಿ ಬಿಜೆಪಿ 110 ಸ್ಥಾನ ಪಡೆದು ಅಧಿಕಾರಕ್ಕೆ ಬಂದಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯೂ ಆದರು. ಆನಂತರ ಮುಖ್ಯಮಂತ್ರಿ ಹುದ್ದೆಯಿಂದ ಇಳಿದ ಬಳಿಕ ಕೆಜೆಪಿ ಕಟ್ಟಿ ಬಿಜೆಪಿಗೆ ಸವಾಲಾದರು. ಬಿಜೆಪಿಗೆ ಮರಳಿ ಲೋಕಸಭೆ ಪ್ರವೇಶಿಸಿದ್ದು ಈಗ ಇತಿಹಾಸ. ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವರ ಕನಸಿಗೆ ಜಿಲ್ಲೆಯ ಜನರು ಸಹಕಾರವನ್ನೂ ನೀಡಿದ್ದಾರೆ.

ಜಿಲ್ಲೆಯಲ್ಲಿ ಬಿಜೆಪಿಗೆ ಜನರು ಆಶೀರ್ವಾದ ಮಾಡಿದರೂ, ರಾಜ್ಯದಲ್ಲಿ ಪಕ್ಷಕ್ಕೆ ಸರ್ಕಾರ ರಚಿಸುವಷ್ಟು ಬಹುಮತ ದೊರಕಿಲ್ಲ. ಹಾಗಾಗಿ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಜಿಲ್ಲೆಯ ಜನರ ನಿರೀಕ್ಷೆ ಈಡೇರಿಲ್ಲ.

ಕಡೆಗಣಿಸಿದವರೇ ಮಾನ ಉಳಿಸಿದರು: ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ 2013ರಲ್ಲಿ ನಡೆದ ಚುನಾವಣೆಯಲ್ಲಿ ಶಾಸಕರಾಗಿದ್ದ ಬಿ.ಕೆ. ಸಂಗಮೇಶ್ವರ ಅವರಿಗೆ ಟಿಕೆಟ್ ತಪ್ಪಿಸಲಾಗಿತ್ತು. ಸಿ.ಎಂ. ಇಬ್ರಾಹಿಂ, ಸಂಗಮೇಶ್ವರ ನಡುವೆ ಮತಗಳು ಹಂಚಿಹೋಗಿ ಜೆಡಿಎಸ್‌ ಗೆಲುವು ಕಂಡಿತ್ತು. ಈ ಬಾರಿ ಗೆಲುವು ಸಾಧಿಸುವ ಮೂಲಕ ಸಂಗಮೇಶ್ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮಾನ ಉಳಿಸಿದ್ದಾರೆ. ಶಿವಮೊಗ್ಗ ಬಿಜೆಪಿಯ ಶಕ್ತಿ ಕೇಂದ್ರ ಎಂಬ ಖ್ಯಾತಿಗೆ ಒಳಗಾಗಿದೆ. ಆದರೆ, ಎಲ್ಲ ಕ್ಷೇತ್ರ

ಗಳಲ್ಲೂ ಖಾತೆ ತೆರೆದಿರುವ ಬಿಜೆಪಿಗೆ ಭದ್ರಾವತಿಯಲ್ಲಿ ಮಾತ್ರ ಸಾಧ್ಯವಾಗಿಲ್ಲ. ಈ ಬಾರಿಯೂ ನಿರೀಕ್ಷೆ ಹುಸಿಯಾಗಿದೆ.

ಜೆಡಿಎಸ್‌ಗೆ 3 ಕಡೆ ಠೇವಣಿ ನಷ್ಟ

ಕಳೆದ ಬಾರಿ ಮೂರು ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಜೆಡಿಎಸ್ ಈ ಬಾರಿ ಮೂರು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದೆ. ಬಿಜೆಪಿ ಒಂದು ಕ್ಷೇತ್ರದಲ್ಲಿ ಠೇವಣಿ ನಷ್ಟ ಅನುಭವಿಸಿದೆ. ಕಾಂಗ್ರೆಸ್ ಎಲ್ಲ ಕ್ಷೇತ್ರಗಳಲ್ಲೂ ಠೇವಣಿ ಉಳಿಸಿಕೊಂಡಿದೆ.

ಶಿವಮೊಗ್ಗ ನಗರ ಅಭ್ಯರ್ಥಿ ಎಚ್‌.ಎನ್‌. ನಿರಂಜನ್ 5,796, ಶಿಕಾರಿಪುರ ಅಭ್ಯರ್ಥಿ ಎಚ್.ಟಿ. ಬಳಿಗಾರ್ 13,191, ಸಾಗರದ ಎಂ.ಬಿ. ಗಿರೀಶ್ ಗೌಡ 2100 ಮತ ಪಡೆಯುವ ಮೂಲಕ ಕಳಪೆ ಸಾಧನೆ ತೋರಿ ಠೇವಣಿ ಕಳೆದುಕೊಂಡಿದ್ದಾರೆ. ಭದ್ರಾವತಿ ಬಿಜೆಪಿ ಅಭ್ಯರ್ಥಿ ಪ್ರವೀಣ್ ಪಟೇಲ್ 8974 ಮತ ಪಡೆದಿದ್ದಾರೆ. ಕಣದಲ್ಲಿದ್ದ ಎಲ್ಲ ಪಕ್ಷೇತರೂ, ಇತರೆ ಪಕ್ಷಗಳ ಅಭ್ಯರ್ಥಿಗಳು ಸೇರಿ ಒಟ್ಟು 57 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿ ಉಳಿದ  53 ಅಭ್ಯರ್ಥಿಗಳು ಪಡದಿರುವುದು  ಕೇವಲ 19,733 ಮತ ಮಾತ್ರ.

ಹೆಕಾಪ್ಟರ್ ಮೂಲಕ ಬಂದು ನಾಮಪತ್ರ ಸಲ್ಲಿಸಿದ್ದ ವಿನಯ್ ರಾಜಾವತ್ 459 ಮತ, ಎಂ.ಆರ್. ಅನಿಲ್ 202 ಮತ ಗಳಿಸಿದ್ದಾರೆ.

ಇದುವರೆಗೂ ಎಷ್ಟು ಬಾರಿ ಆಯ್ಕೆ

ಬಿ.ಎಸ್. ಯಡಿಯೂರಪ್ಪ  8

ಕೆ.ಎಸ್. ಈಶ್ವರಪ್ಪ       5

ಆರಗ ಜ್ಞಾನೇಂದ್ರ        4

ಕುಮಾರ್ ಬಂಗಾರಪ್ಪ    4

ಬಿ.ಕೆ. ಸಂಗಮೇಶ್ವರ     3

ಹರತಾಳು ಹಾಲಪ್ಪ      3  

ಕೆ.ಬಿ. ಅಶೋಕನಾಯ್ಕ   1

**

ಗೆಲುವಿನ ಅಂತರ ನೋಡಿದರೆ ಇದು ಪ್ರಜಾ ಪ್ರಭುತ್ವವೋ? ಮತಯಂತ್ರದ ತಂತ್ರವೋ? ಎಂಬ ಅನುಮಾನ ಬರುತ್ತಿದೆ. ಈ ಸಂದೇಹ ನಿವಾರಿಸಲು ಕಾಗದದ ಮತಪತ್ರ ಬಳಸಬೇಕು

– ಕೋಣಂದೂರು ಲಿಂಗಪ್ಪ, ಮಾಜಿ ಶಾಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.