ಪರಮೇಶ್ವರ್ ಗೆಲ್ಲಿಸಿದ ಅನುಕಂಪ, ದಲಿತರ ಒಗ್ಗಟ್ಟು

7

ಪರಮೇಶ್ವರ್ ಗೆಲ್ಲಿಸಿದ ಅನುಕಂಪ, ದಲಿತರ ಒಗ್ಗಟ್ಟು

Published:
Updated:
ಪರಮೇಶ್ವರ್ ಗೆಲ್ಲಿಸಿದ ಅನುಕಂಪ, ದಲಿತರ ಒಗ್ಗಟ್ಟು

ಕೊರಟಗೆರೆ: ಕೊರಟಗೆರೆ ಕ್ಷೇತ್ರದ ಜನರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರನ್ನು ಕಳೆದ ಬಾರಿ 18 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ಜೆಡಿಎಸ್‌ನ ಪಿ.ಆರ್. ಸುಧಾಕರ್ ಲಾಲ್ ಅವರನ್ನು ಗೆಲ್ಲಿಸಿದ್ದರು.

ವೈಟ್ ಕಾಲರ್ ರಾಜಕಾರಣಿ, ಸಾಮಾನ್ಯ ಜನರಿಗೆ ಸಿಗುವುದಿಲ್ಲ ಹಾಗೂ ಕ್ಷೇತ್ರದಲ್ಲಿ ಗೆದ್ದಾಗ ಸರಿಯಾಗಿ ಕೆಲಸ ಮಾಡಲಿಲ್ಲ ಎಂಬ ಕಾರಣಕ್ಕೆ ಪರಮೇಶ್ವರ ಸೋಲುಂಡಿದ್ದರು. ಈ ಬಾರಿ ಪರಮೇಶ್ವರ ಸ್ಪರ್ಧೆಯ ಕಾರಣಕ್ಕೆ ಕ್ಷೇತ್ರ ಗಮನ ಸೆಳೆದಿತ್ತು.

ಈ ಸಲ ಜನರ ನಿರೀಕ್ಷೆಯಂತೆ ಅವರು ಜಯ ಗಳಿಸಿದ್ದಾರೆ. ಕಳೆದ ಬಾರಿಯ ಸೋಲಿನ ಅನುಕಂಪ ಕೆಲಸ ಮಾಡಿದೆ. ಮುಖ್ಯಮಂತ್ರಿ ಅಭ್ಯರ್ಥಿಯೊಬ್ಬರನ್ನು ಸೋಲಿಸಿ ತಪ್ಪು ಮಾಡಿದೆವು. ಗೆದ್ದಿದ್ದರೆ ಕ್ಷೇತ್ರ ಅಭಿವೃದ್ಧಿಯಾಗುತ್ತಿತ್ತು ಎಂಬ ಪಶ್ಚಾತಾಪ ಕ್ಷೇತ್ರದ ಜನರಲ್ಲಿತ್ತು. ಅದು ಈ ಬಾರಿ ಪರಮೇಶ್ವರ ಗೆಲುವಿಗೆ ಪ್ರಮುಖವಾಗಿ ಕಾರಣವಾಗಿದೆ.

ಚುನಾವಣೆಗೂ ಮುನ್ನವೇ ಕ್ಷೇತ್ರದಾದ್ಯಂತ ಓಡಾಡಿ ಜನರ ಸಮಸ್ಯೆಗಳನ್ನು ಆಲಿಸಿದ್ದು ಜನರಲ್ಲಿ ವಿಶ್ವಾಸ ಮೂಡಿಸಿತು. ಇದರ ಜೊತೆಗೆ ಪರಮೇಶ್ವರ್ ಕಳೆದ ಬಾರಿ ಗೆದ್ದಾಗ ಮಾಡದೇ ಇದ್ದ ಕೆಲಸಗಳನ್ನು ಸೋತು ತಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾಡಿದರು.

ಇದರೊಂದಿಗೆ ಈ ಬಾರಿ ಜಾತಿ ಲೆಕ್ಕಾಚಾರವೂ ಕೆಲಸ ಮಾಡಿದೆ. ಸದಾಶಿವ ಆಯೋಗದ ವಿರೋಧಿ ಎಂಬ ಹಣೆ ಪಟ್ಟಿಕೊಂಡು ದಲಿತ ಎಡಗೈ ಸಮುದಾಯದ ಮತಗಳು ದೊರೆಯುವುದಿಲ್ಲ ಎನ್ನುವ ಲೆಕ್ಕಾಚಾರ ಆರಂಭದಲ್ಲಿ ಇತ್ತು. ಕ್ಷೇತ್ರದಲ್ಲಿ ಎಡಗೈ ಬಣದ ಜನಸಂಖ್ಯೆ ಹೆಚ್ಚಿದೆ. ಆದರೆ ಇದು ಪರಿಣಾಮ ಬೀರಲಿಲ್ಲ.

ಬಹುಸಂಖ್ಯೆಯಲ್ಲಿರುವ ಎಡಗೈ ಜನಾಂಗ ಪರಮೇಶ್ವರ ಗೆಲುವಿಗೆ ಶ್ರಮಿಸಿತು. ದಲಿತ ಮತದಾರರನ್ನು ಹೊರತುಪಡಿಸಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗ ಜನಾಂಗ ದ ಮತಗಳು ಕೂಡ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರ ಕಾರಣದಿಂದ ಕಾಂಗ್ರೆಸ್‌ಗೆ ಉತ್ತಮ ವಾಗಿಯೇ ಬಿದ್ದವು.

ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಅಲೆ ಕ್ಷೇತ್ರದಲ್ಲಿದ್ದರೂ ಒಕ್ಕಲಿಗರು ಪರಮೇಶ್ವರ ಅವರ ಗೆಲುವಿಗೆ ಬೆಂಬಲವಾಗಿ ನಿಂತರು.

ಇದೆಲ್ಲದರ ನಡುವೆ ಹಾಲಿ ಶಾಸಕ ಪಿ.ಆರ್.ಸುಧಾಕರ ಲಾಲ್ ಕಳೆದ ಐದು ವರ್ಷಗಳಲ್ಲಿ ಗಣನೀಯವಾಗ ಕೆಲಸಗಳನ್ನು ಮಾಡಲಿಲ್ಲ ಎಂಬ ಅಪವಾದವೂ ಅವರ ಸೋಲಿಗೆ ಕಾರಣ. ಇದರೊಂದಿಗೆ ಮಾಜಿ ಸಚಿವ ಸಿ. ಚನ್ನಿಗಪ್ಪ ಮತ್ತವರ ಬೆಂಬಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರು ವುದು ಲಾಲ್ ಸೋಲಿಗೆ ದೊಡ್ಡ ಹೊಡೆತವಾಯಿತು.

ಆ ಕಾರಣದಿಂದಾಗಿಯೇ ಚನ್ನಿಗಪ್ಪ ಬೆಂಬಲಿಗರು ಬಹುತೇಕ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದರು. ಕೆಲವರು ಜೆಡಿಎಸ್ ನಲ್ಲಿ ಇದ್ದು ಪರಮೇಶ್ವರ ಅವರನ್ನು ಬೆಂಬಲಿಸಿದರು.

ತಾಲ್ಲೂಕಿನಲ್ಲಿ ಬಿಜೆಪಿಗೆ ತಳಮಟ್ಟದಲ್ಲಿ ನೆಲೆ ಇಲ್ಲ. ಪ್ರತೀ ಬಾರಿ ಚುನಾವಣೆಯಲ್ಲೂ ಬಿಜೆಪಿ ಅಲ್ಪ ಮತ ಪಡೆಯುತ್ತಿದೆ. ಆ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ವೈ.ಎಚ್.ಹುಚ್ಚಯ್ಯ ಕಡಿಮೆ ಮತಗಳನ್ನು ಗಳಿಸಿದ್ದಾರೆ. ಸ್ಥಳೀಯ ಚುನಾವಣೆಯಿಂದ ಹಿಡಿದು ವಿಧಾನಸಭಾ ಚುನಾವಣೆಗೂ ಬಿಜೆಪಿಗೆ ಕ್ಷೇತ್ರದಲ್ಲಿ ಒಲವು ಕಡಿಮೆ ಇದೆ. ಈ ಬಾರಿ ಜಾತಿ ಕೆಲಸ ಮಾಡಬಹುದೆಂಬ ಕಾರಣಕ್ಕೆ ಎಡಗೈ ಸಮುದಾಯದ ವೈ.ಎಚ್.ಹುಚ್ಚಯ್ಯ ಕಳೆದ ಎರಡು ವರ್ಷದ ಹಿಂದೆಯೇ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು. ಹೀಗೆ ಹಲವು ಸಮೀಕರಣಗಳು ಪರಮೇಶ್ವರ ಅವರನ್ನು ಗೆಲ್ಲಿಸಲು ಪ್ರಮುಖವಾದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry