ಎಗ್ಗಿಲ್ಲದೇ ನಡೆದಿದೆ ಅಕ್ರಮ ಮದ್ಯ ಮಾರಾಟ

7
ಅಪಘಾತ ನಡೆದ ಸ್ಥಳದಲ್ಲಿ ವಾಹನದಿಂದ ಬಹಿರಂಗಗೊಂಡ ಅಕ್ರಮ

ಎಗ್ಗಿಲ್ಲದೇ ನಡೆದಿದೆ ಅಕ್ರಮ ಮದ್ಯ ಮಾರಾಟ

Published:
Updated:
ಎಗ್ಗಿಲ್ಲದೇ ನಡೆದಿದೆ ಅಕ್ರಮ ಮದ್ಯ ಮಾರಾಟ

ಮುದ್ದೇಬಿಹಾಳ: ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಬೈಕ್ ಅಪಘಾತಕ್ಕೀಡಾಗಿ ಅದರಲ್ಲಿ ಸಾಗಿಸುತ್ತಿದ್ದ 48 (ಓಲ್ಡ್ ಟಾವೆರ್ನ್ ವಿಸ್ಕಿ) ಪಾಕೀಟುಗಳು ರಸ್ತೆಯಲ್ಲಿಯೇ ಬಿದ್ದು ಜನತೆಯ ಕುತೂಹಲಕ್ಕೆ ಕಾರಣವಾದ ಘಟನೆ ನಡೆಯಿತು.

ಅಪಘಾತ ಸಂಭವಿಸಿದ ಸ್ಥಳಕ್ಕೆ ತಾಲ್ಲೂಕಿನ ಅಬಕಾರಿ (ಮಹಿಳಾ) ನಿರೀಕ್ಷಕಿ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ಇದನ್ನು ತಡೆಗಟ್ಟುವಂತೆ ಕೋರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಾನಂದ ಮಂಕಣಿ ಅಬಕಾರಿ ನಿರೀಕ್ಷಕರಿಗೆ ಪತ್ರ ನೀಡಿ ಅವರಿಂದ ಸ್ವೀಕೃತಿ ಪಡೆದಿದ್ದಾರೆ.

ಅಧ್ಯಕ್ಷರು ನೀಡಿರುವ ಪತ್ರದಲ್ಲಿ ‘ಅಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ಕೋರಿ ಈ ಮೊದಲು ಶಾಸಕರ ಜನಸಂಪರ್ಕ ಸಭೆಯಲ್ಲಿ ಸಹ ಆಗ್ರಹಿಸಲಾಗಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಜರುಗಿಸಿಲ್ಲ. ಅಕ್ರಮ ಮದ್ಯ ಮಾರಾಟದಿಂದ ಗ್ರಾಮದ ಶಾಂತತೆ ಹಾಳಾಗಿದೆ. ಬಡ ಕುಟುಂಬಗಳ ಆರ್ಥಿಕ ಸ್ಥಿತಿ ಹದಗೆಟ್ಟಿದೆ’ ಎಂದು ಬರೆದಿರುವುದಲ್ಲದೇ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಸಂಗಪ್ಪ ಚಲವಾದಿ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಕೋರಿದ್ದಾರೆ.

ತಂಗಡಗಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇದನ್ನು ತಡೆಗಟ್ಟುವಂತೆ ಸ್ಥಳೀಯ ಸ್ವಾಮೀಜಿಗಳ ನೇತೃತ್ವದಲ್ಲಿ ಅಲ್ಲಿಯ ಯುವ ಸಂಘಟನೆಗಳು, ಮಹಿಳೆಯರು ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ. ವ್ಯತಿರಿಕ್ತವಾಗಿ ಹೋರಾಟ ಮಾಡಿದವರಿಗೆ ಮುಖಕ್ಕೆ ರಾಚುವಂತೆ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಲೇ ಇದೆ. ಬಡವರು ಶ್ರಮ ವಹಿಸಿ ದಿನ ನಿತ್ಯ ದುಡಿದ ಹಣವನ್ನು ಸಂಜೆ ಹೊತ್ತಿಗೆ ಅಕ್ರಮ ಮದ್ಯ ಕುಡಿಯಲು ಬಳಸುತ್ತಿದ್ದಾರೆ. ಇದಲ್ಲದೇ ಕುಡಿತದ ನಿಶೆಯಲ್ಲಿ ಹೆಂಡತಿ, ಮಕ್ಕಳು, ತಂದೆ ತಾಯಿಗಳಿಗೆ ಸಹ ಹೊಡೆಯುವ, ನಿತ್ಯ ಜಗಳ ತೆಗೆಯುವುದು ನಡೆಯುತ್ತದೆ.

ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿ ಪೊಲೀಸರು ಬುಧವಾರ ಸಂಜೆ ಗ್ರಾಮದ ಸಂಗಪ್ಪ ಚಲವಾದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ.

ಅಪಘಾತ ನಡೆದ ಸ್ಥಳದಲ್ಲಿ ಮನವಿ

ಗ್ರಾಮದಲ್ಲಿ ಅಪಘಾತ ನಡೆದ ಸ್ಥಳಕ್ಕೆ ಅಬಕಾರಿ ನಿರೀಕ್ಷಕರು ಭೇಟಿ ನೀಡಿ ಮನವಿ ಸ್ವೀಕರಿಸಿದ್ದಾರೆ. ಅವರು ಏನು ಕ್ರಮ ತೆಗೆದುಕೊಳ್ಳುತ್ತಾರೆ ನೋಡಬೇಕು. ಅಕ್ರಮ ಮದ್ಯ ಸೇವಿಸಿ ಯುವಕರು ಹಾಳಾಗುತ್ತಿದ್ದಾರೆ. ಇದನ್ನು ತಡೆಯಲು ಮಾಡಿದ ಹೋರಾಟಗಳು ಬಹಳ, ತಾಲ್ಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ದಂದೆ ಎಗ್ಗಿಲ್ಲದೇ ನಡೆದಿದ್ದು, ಇದನ್ನು ಕಠಿಣವಾಗಿ ತಡೆಗಟ್ಟಬೇಕು ಎನ್ನುತ್ತಾರೆ ತಂಗಡಗಿಯ ಸ್ನೇಹಸಿರಿ ಯುವ ಸೇವಾ ಸಂಘದ ಅಧ್ಯಕ್ಷ ಬಸವರಾಜ ನಿಡಗುಂದಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry