ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರಕ್ಕಾಗಿ ಬಣ್ಣ ಹಚ್ಚಿದ ಎಚ್‌ಎಸ್‌ವಿ

‘ಅಮೃತ ವಾಹಿನಿ’ ಚಿತ್ರದಲ್ಲಿ ವಿಶಿಷ್ಟ ಪಾತ್ರ; ಮೊದಲ ಬಾರಿಗೆ ನಟನೆಯ ಅನುಭವ
Last Updated 17 ಮೇ 2018, 7:22 IST
ಅಕ್ಷರ ಗಾತ್ರ

ರಾಮನಗರ: ಎಚ್.ಎಸ್. ವೆಂಕಟೇಶ ಮೂರ್ತಿ ಲೇಖಕರಾಗಿ ಚಿರಪರಿಚಿತರು. ಈಗ ನಟನಾಗಿಯೂ ತಮ್ಮ ಕೌಶಲ ಒರೆಗೆ ಹಚ್ಚಿದ್ದಾರೆ. ಅವರು ಅಭಿನಯಿಸುತ್ತಿರುವ ‘ಅಮೃತ ವಾಹಿನಿ’ ಚಿತ್ರದ ಚಿತ್ರೀಕರಣವು ನಗರದಲ್ಲಿ ಸದ್ದಿಲ್ಲದೆ ನಡೆದಿದೆ.

ಅವಿಭಕ್ತ ಕುಟುಂಬದ ಪ್ರಾಮುಖ್ಯತೆಯನ್ನು ಸಾರಿ ಹೇಳುವ ಸಾಮಾಜಿಕ ಕಳಕಳಿಯ ಈ ಚಿತ್ರವನ್ನು ರಾಮನಗರದವರೇ ಆದ ಕೆ. ನರೇಂದ್ರ ಬಾಬು ನಿರ್ದೇಶಿಸುತ್ತಿದ್ದಾರೆ. ಇಂದು ಸಮಾಜದಲ್ಲಿ ಸಂಯುಕ್ತ ಕುಟುಂಬಗಳು ಕಡಿಮೆ. ವಿಭಕ್ತ ಕುಟುಂಬಗಳಲ್ಲಿನ ಹಿರಿಯರು, ಮಕ್ಕಳು ಯಾವ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ಈ ಚಿತ್ರವು ಕಟ್ಟಿಕೊಡುವ ಪ್ರಯತ್ನ ಮಾಡಲಿದೆ.

‘ಸಾಹಿತಿಯಾಗಿ ಗುರುತಿಸಿ ಕೊಂಡಿದ್ದರೂ ಸಿನಿಮಾ ಬರವಣಿಗೆಯಲ್ಲಿಯೂ ತೊಡಗಿಸಿಕೊಳ್ಳುತ್ತಾ ಬಂದಿದ್ದೇನೆ. ‘ಚಿನ್ನಾರಿ ಮುತ್ತ’ ಸಿನಿಮಾದಿಂದ ಚಿತ್ರರಂಗದೊಂದಿಗೆ ನನ್ನ ನಂಟು ಇದೆ. ಆದರೆ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದು ಇದೇ ಮೊದಲು’ ಎಂದು ವೆಂಕಟೇಶ ಮೂರ್ತಿ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.

‘ಬರವಣಿಗೆಯಲ್ಲಿ ವಿವಿಧ ಪಾತ್ರಗಳನ್ನು ಸೃಜಿಸುವಾಗ ಅವುಗಳ ಪರಕಾಯ ಪ್ರವೇಶ ಮಾಡುತ್ತಿದ್ದೆ. ಈಗ ಈ ಪಾತ್ರದ ಪರಕಾಯ ಪ್ರವೇಶ ಮಾಡಿದ್ದೇನೆ. ಹೊಸ ಅನುಭವ ಖುಷಿ ಕೊಟ್ಟಿದೆ’ ಎಂದರು.

‘ಕಳೆದ ವರ್ಷ ಹಸಿರು ರಿಬ್ಬನ್‌ ಚಿತ್ರದ ಚಿತ್ರೀಕರಣ ಸಂದರ್ಭ ನಿರ್ಮಾಪಕ ಸಂಪತ್‌ ಪರಿಚಯವಾದರು. ಬಳಿಕ ಈ ಚಿತ್ರದ ಕಥೆ ಹೇಳಿ ಅಭಿಯನಕ್ಕೆ ಒಪ್ಪಿಸಿದರು. ಕಥೆ ಬಹಳ ಇಷ್ಟವಾಗಿದ್ದು, ಪ್ರಸ್ತುತವೂ ಆದ್ದರಿಂದ ಒಪ್ಪಿಕೊಂಡೆ’ ಎಂದು ಅವರು ಹೇಳಿದರು. ‘ಬರವಣಿಗೆ ಬೇರೆ. ಅಭಿಯನ ಬೇರೆ. ಇದೊಂದರ ಪ್ರಾಕ್ಟಿಕಲ್ ತರಗತಿಯ ಹಾಗೆ’ ಎಂದು ತಮ್ಮ ಅಭಿನಯದ ಅನುಭವವನ್ನು ಹಂಚಿಕೊಂಡರು.

‘ಇವತ್ತು ನಗರದ ಕುಟುಂಬಗಳಲ್ಲಿ ಪರಸ್ಪರ ಕಾಳಜಿ ವಹಿಸುವವರ ಕೊರತೆ ಇದೆ. ಮಕ್ಕಳೆಲ್ಲ ವಿದೇಶಗಳಲ್ಲಿ ಇರುತ್ತಾರೆ, ಹೆತ್ತವರಿಗೆ ಹಣ ಕಳುಹಿಸುತ್ತಾರೆ. ಆದರೆ ಪಾಲನೆ ಮಾಡುವುದಿಲ್ಲ. ಅದರಲ್ಲೂ ಗಂಡ–ಹೆಂಡತಿಯಲ್ಲಿ ಒಬ್ಬರೂ ಸತ್ತರೂ ಇನ್ನೊಬ್ಬರು ಬದುಕುವುದು ಕಷ್ಟ. ಇಂತಹ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವ ಜೊತೆಗೆ ಮತ್ತೆ ಅವಿಭಕ್ತ ಕುಟುಂಬಗಳತ್ತ ಸಮಾಜ ಮರಳಲಿ ಎನ್ನುವ ಸದಾಶಯದೊಂದಿಗೆ ಚಿತ್ರ ಮುಗಿಯುತ್ತದೆ’ ಎಂದು ವಿವರಿಸಿದರು.

ಅವರ ಜೊತೆಗೆ ಹಿರಿಯ ಕಲಾವಿದರಾದ ಆರ್.ಟಿ. ರಮಾ, ವತ್ಸಲಾ ಮೋಹನ್, ವಾಸು ಸೇರಿದಂತೆ 20ಕ್ಕೂ ಹೆಚ್ಚು ಕಲಾವಿದರು ಈ ಅಭಿನಯಿಸಿದ್ದಾರೆ. ರಾಘವೇಂದ್ರ ಪಾಟೀಲರ ಕಥೆ ಆಧರಿತ ಸಿನಿಮಾ ಇದಾಗಿದ್ದು, ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವೆಂಕಟೇಶ ಮೂರ್ತಿ ಅವರೇ ಬರೆದಿದ್ದಾರೆ. ಉಪಾಸನಾ ಮೋಹನ್‌ ಸಂಗೀತ ಸಂಯೋಜಿಸಿದ್ದಾರೆ.

ಶಿವಾನಂದ್ ಸಂಭಾಷಣೆ ಬರೆದಿದ್ದಾರೆ. ಗಿರಿಧರ್ ದಿವಾನ್ ಕ್ಯಾಮೆರಾ ಹಿಡಿದಿದ್ದು, ಸಂಪತ್‌ ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ‘ಪಲ್ಲಕ್ಕಿ ಸಹಿತ ಹಲವು ಕನ್ನಡದ ಹಲವು ಕಮರ್ಷಿಯಲ್ ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಈಗ ಕಲಾತ್ಮಕವೂ ಆದ ಚಿತ್ರದ ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ದೊಡ್ಡ ಸಿನಿಮಾದಂತೆಯೇ ಎಲ್ಲವನ್ನೂ ಚಿತ್ರೀಕರಣ ಮಾಡಿದ್ದೇವೆ. ಇಲ್ಲಿ ಹೊಡೆದಾಟ, ಕುಣಿತದಂತಹ ಕಮರ್ಷಿಯಲ್ ಅಂಶಗಳು ಇಲ್ಲ. ಚಿತ್ರದ ಕಥೆಯೇ ನಮ್ಮ ಹೀರೊ’ ಎಂದು ಚಿತ್ರದ ನಿರ್ದೇಶಕ ನರೇಂದ್ರ ಬಾಬು ಹೇಳಿದರು.

‘ನಿಜಕ್ಕೂ ಇದೊಂದು ಒಳ್ಳೆಯ ಚಿತ್ರವಾಗಲಿದೆ. ಕಲಾತ್ಮಕವಾದರೂ ಯಾವುದೇ ರಾಜಿ ಮಾಡಿಕೊಳ್ಳದೇ ಚಿತ್ರೀಕರಣ ಮಾಡಿದ್ದೇವೆ’ ಎಂದು ಚಿತ್ರದ ಕ್ಯಾಮೆರಾಮನ್ ಗಿರಿಧರ್ ದಿವಾನ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಜುಲೈನಲ್ಲಿ ಬಿಡುಗಡೆ

15 ದಿನಗಳಿಂದ ಬೆಂಗಳೂರು ಹಾಗೂ ರಾಮನಗರದಲ್ಲಿ ಚಿತ್ರೀಕರಣ ನಡೆದಿದ್ದು, ಇನ್ನೇನು ಮುಗಿಯಲಿದೆ ಎಂದು ನಿರ್ದೇಶಕ ನರೇಂದ್ರ ಬಾಬು ತಿಳಿಸಿದರು. ‘ಪ್ರೊಡಕ್ಷನ್ ನಂತರದ ಕೆಲಸಗಳಿಗೆ ತಿಂಗಳು ಬೇಕಾಗುತ್ತದೆ. ಅಂದುಕೊಂಡಂತೆ ಆದರೆ ಜುಲೈನಲ್ಲಿ ಬಿಡುಗಡೆಗೆ ಯೋಜಿಸಿದ್ದೇವೆ’ ಎನ್ನುವುದು ಅವರ ಮಾತು.

**
ಎಚ್‌.ಎಸ್. ವೆಂಕಟೇಶ ಮೂರ್ತಿ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದ್ದರೂ ಅವರ ಅಭಿನಯ ಸೊಗಸಾಗಿದೆ. ಹಿರಿಯರೊಂದಿಗೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ
– ನರೇಂದ್ರ ಬಾಬು ,ನಿರ್ದೇಶಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT