ನಾಯಕತ್ವ ಬದಲಿಸಿದ ನೀರಿನ ರಾಜಕೀಯ

7
ಮಾನ್ವಿ : ಕಾಂಗ್ರೆಸ್‌ ಭದ್ರಕೋಟೆಯಲ್ಲಿ ನೆಲೆವೂರಿದ ಜೆಡಿಎಸ್‌

ನಾಯಕತ್ವ ಬದಲಿಸಿದ ನೀರಿನ ರಾಜಕೀಯ

Published:
Updated:

ಮಾನ್ವಿ: ಸತತ ನಾಲ್ಕು ಬಾರಿ ಕಾಂಗ್ರೆಸ್‌ ಪಕ್ಷ ಬೆಂಬಲಿಸಿದ್ದ ಕ್ಷೇತ್ರದ ಮತದಾರರು ಈ ಚುನಾವಣೆಯಲ್ಲಿ ನಾಯಕತ್ವ ಬದಲಾವಣೆ ಬಯಸಿರುವುದು ಫಲಿತಾಂಶ ಸಾಬೀತು ಪಡಿಸಿದೆ. ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್‌ ಪಕ್ಷದ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಅವರ ರಾಜಕೀಯ ಪ್ರಭಾವ ಕೆಲಸ ಮಾಡುತ್ತಿತ್ತು. 90ರ ದಶಕದಿಂದಲೂ ಚುನಾವಣೆಯಲ್ಲಿ ಬೋಸ ರಾಜು ಬೆಂಬಲಿಸಿದವರು ಶಾಸಕ ಞರಾಗಿ ಆಯ್ಕೆಯಾಗುವುದು ಖಚಿತ ಎನ್ನುವ ಮಾತು ಇತ್ತು. ಆದರೆ ಈ ಸಲದ ಚುನಾವಣೆಯ ಪ್ರಚಾರದಲ್ಲಿ ನೀರಿನ ರಾಜಕೀಯ ಮಹತ್ವದ ತಿರುವಿಗೆ ಕಾರಣವಾಯಿತು.

ತುಂಗಭದ್ರಾ ಎಡದಂಡೆ ನಾಲೆ ಯಿಂದ ತಾಲ್ಲೂಕಿನ ರೈತರ ಜಮೀನುಗಳಿಗ ಅಸಮರ್ಪಕ ನೀರು ಪೂರೈಕೆ ಮತ್ತು ಮಾನ್ವಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆ ಜಾರಿಯಲ್ಲಿನ ವೈಫಲ್ಯವನ್ನು ಜೆಡಿಎಸ್‌ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ತಮ್ಮ ಪ್ರಚಾರದ ಭಾಷಣದಲ್ಲಿ ಪ್ರಮುಖ ವಾಗಿ ಬಳಸಿಕೊಂಡರು. ತುಂಗಭದ್ರಾ ಕಾಡಾ ಅಧ್ಯಕ್ಷರಾಗಿ ಜಿ.ಹಂಪಯ್ಯ ನಾಯಕ ತಾಲ್ಲೂಕಿನ ರೈತರಿಗೆ ತುಂಗ ಭದ್ರಾ ಎಡದಂಡೆ ನಾಲೆಯಿಂದ ನೀರು ಹರಿಸಲಿಲ್ಲ ಎಂದು ದೂರಿದರು.

ತುಂಗಭದ್ರಾ ಎಡದಂಡೆ ನಾಲೆ ಯಿಂದ ಭತ್ತದ ಎರಡು ಬೆಳಗೆ ನೀರು ಕೊಡುವುದಾಗಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಪ್ರಚಾರದ ಬಹಿರಂಗ ಸಭೆಯಲ್ಲಿ ವಾಗ್ದಾನ ಮಾಡಿದರು. ಕಾಲುವೆ ನೀರಿನ ಸಮಸ್ಯೆಯಿಂದ ಕಂಗೆಟ್ಟಿದ್ದ ರೈತರಿಗೆ ಜೆಡಿಎಸ್‌ ಪಕ್ಷದ ಬಗ್ಗೆ ಭರವಸೆ ಮೂಡಲು ಕಾರಣವಾಯಿತು.ಕವಿತಾಳ ಹಾಗೂ ಕಲ್ಲೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೆರೆ ನಿರ್ಮಾಣ ವಿಳಂಬದ ಕುರಿತು ಪ್ರಸ್ತಾಪಿಸಿ ಅಲ್ಲಿನ ಮತದಾರರ ಗಮನ ಸೆಳೆದರು. ತಾವು ಎರಡು ಬಾರಿ ಅಲ್ಪ ಮತಗಳಿಂದ ಸೋಲು ಕಂಡಿದ್ದು ಇದು ನನ್ನ ಕೊನೆಯ ಚುನಾವಣೆ. ಹಾಲು ಕೊಡಿ, ಇಲ್ಲವೇ ವಿಷ ಕೊಡಿ ಎಂದು ಹೇಳಿ ಮತದಾರರ ಅನುಕಂಪ ಗಳಿಸುವ ಪ್ರಯತ್ನ ಮಾಡಿ ಯಶಸ್ವಿಯಾದರು.

ಪಕ್ಷೇತರ ಅಭ್ಯರ್ಥಿಯಾಗಿದ್ದ ಡಾ.ತನುಶ್ರೀ ಅವರು ತಮ್ಮ ಮಾವ ಎಂ.ಈರಣ್ಣ ಅವರು ಕೈಗೊಂಡ ಸಾಮಾಜಿಕ ಕಾರ್ಯಗಳನ್ನು ಚುನಾವಣೆಯಲ್ಲಿ ನೆಚ್ಚಿಕೊಂಡಿದ್ದರು.

37,641ಮತಗಳನ್ನು ಗಳಿಸುವ ಮೂಲಕ ಅಭ್ಯರ್ಥಿ ಡಾ.ತನುಶ್ರೀ ಕಾಂಗ್ರೆಸ್‌ ಪಕ್ಷಕ್ಕೆ ಅಡ್ಡಗಾಲಾದರು. ಕಾಂಗ್ರೆಸ್‌ ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್‌ ಆಗಿದ್ದ ಕುರುಬರು ಹಾಗೂ ಅಲ್ಪ ಸಂಖ್ಯಾತರ ಮತ ಗಳನ್ನು ಪಡೆಯು ವಲ್ಲಿ ಯಶಸ್ವಿ ಯಾಗಿ ದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿ ಶರಣಪ್ಪ ನಾಯಕ ಗುಡದಿನ್ನಿ ಅವರಿಗೆ ಟಿಕೆಟ್‌ ಘೋಷಣೆಯಲ್ಲಿನ ವಿಳಂಬ ಚುನಾವಣೆ ಪ್ರಚಾರದ ಮೇಲೆ ಪರಿಣಾಮ ಬೀರಿತು. ಪ್ರಚಾರ ಕಾರ್ಯಕ್ಕೆ ಕಡಿಮೆ ದಿನಗಳು ದೊರೆತವು. ಶರಣಪ್ಪ ನಾಯಕ ಸಾಮಾನ್ಯ ರೈತನ ಮಗ ಎಂದು ಪ್ರಚಾರ ಮಾಡಲಾಯಿತು. ತುಂಗಭದ್ರಾ ಎಡದಂಡೆ ನಾಲೆಯ ನೀರಿನ ವಿಷಯವನ್ನು ಬಿಜೆಪಿ ನಾಯಕರು ಕೂಡ ಪ್ರಸ್ತಾಪಿಸಿ ರೈತ ಸಮುದಾಯದ ಮತಗಳಿಸಲು ಪ್ರಯತ್ನಿಸಿದರು. ಬಿಜೆಪಿಯ ಹಲವು ನಾಯಕರ ಬೆಂಬಲದಿಂದ ಪ್ರಚಾರ ಮಾಡಿದ ಶರಣಪ್ಪ ನಾಯಕ 30,131ಮತಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದರು.

ಎಸ್‌.ಬೋಸರಾಜು ಅವರ ನಾಯಕತ್ವ ನೆಚ್ಚಿಕೊಂಡಿದ್ದ ಶಾಸಕ ಹಂಪಯ್ಯ ನಾಯಕ ಅವರಿಗೆ ಆಡಳಿತ ವಿರೋಧಿ ಅಲೆ ಹಾಗೂ ಡಾ.ತನುಶ್ರೀ ಸ್ಪರ್ಧೆ ಚುನಾವಣೆ ಸಂದರ್ಭದಲ್ಲಿ ಸವಾಲಾಗಿ ಕಂಡು ಬಂದವು. ಅವರು ಪ್ರಚಾರಕ್ಕೆ ಹೋದ ಹಲವು ಕಡೆ ಜನರು ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದರು. ಅವರ ಅಭಿವೃದ್ಧಿ ಕೆಲಸಗಳ ಕುರಿತು ಜನರು ಪ್ರಶ್ನಿಸಿದರು. ಕಾಂಗ್ರೆಸ್‌ ಪಕ್ಷದ ಹಲವು ಸ್ಥಳೀಯ ಮುಖಂಡರು ಎಂ.ಈರಣ್ಣ ಬಳಗಕ್ಕೆ ಸೇರ್ಪಡೆಯಾದದ್ದು ಕೂಡ ಹಂಪಯ್ಯ ನಾಯಕ ಅವರ ಹಿನ್ನಡೆಗೆ ಕಾರಣವಾಯಿತು. 28,122 ಮತಗಳನ್ನು ಗಳಿಸಿದ ಹಂಪಯ್ಯ ನಾಯಕ ನಾಲ್ಕನೇ ಸ್ಥಾನ ಪಡೆದರು.

ಕೇವಲ ಹಣ ಬಲ ಮತ್ತು ಜಾತಿಯ ಬಲಗಳೆ ಚುನಾವಣೆ ಗೆಲುವಿನ ಅಸ್ತ್ರ ಎನ್ನುವುದನ್ನು ಈ ಚುನಾವಣೆ ಸುಳ್ಳಾಗಿಸಿದೆ. ಜನಬಲ ಮತ್ತು ಕ್ಷೇತ್ರದ ಸಾರ್ವಜನಿಕ ಸಮಸ್ಯೆಗಳು ಈ ಚುನಾವಣೆಯಲ್ಲಿ ಮಹತ್ವದ ಸ್ಥಾನ ಪಡೆಯುವ ಮೂಲಕ ರಾಜಕೀಯ ಬದಲಾವಣೆಗೆ ಕಾರಣವಾಗಿವೆ. ರಾಜಕೀಯ ಜೀವನದಲ್ಲಿ ಪ್ರಾಮಾಣಿಕತೆ, ಜನಪರ ಕಾಳಜಿ ಮುಖ್ಯ ಎಂಬುದನ್ನು ರಾಜಾ ವೆಂಕಟಪ್ಪ ನಾಯಕ ಈ ಚುನಾವಣೆಯಲ್ಲಿ ತಮ್ಮ ಗೆಲುವಿನ ಮೂಲಕ ಸಾಬೀತು ಮಾಡಿದಂತಾಗಿದೆ.

ಬಸವರಾಜ ಭೋಗಾವತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry