ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠೇವಣಿ ಕಳೆದುಕೊಂಡ ಘಟಾನುಘಟಿಗಳು

ತೇರದಾಳದಲ್ಲಿ ‘ನೋಟಾ’ಗೆ ಹೆಚ್ಚು ಮತ; ಜೆಡಿಎಸ್, ಪಕ್ಷೇತರರ ಠೇವಣಿ ನಷ್ಟ
Last Updated 17 ಮೇ 2018, 8:05 IST
ಅಕ್ಷರ ಗಾತ್ರ

ಬಾಗಲಕೋಟೆ: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯ ಹೊರತಾಗಿ ಉಳಿದ ಎಲ್ಲ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳೂ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್–ಬಿಎಸ್‌ಪಿ ಮೈತ್ರಿಕೂಟದಿಂದ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡವರಲ್ಲಿ ಸೇರಿದ್ದಾರೆ.
ಸಾಮಾನ್ಯವಾಗಿ ಪ್ರತೀ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳಲ್ಲಿ ಒಂದನೇ ಆರಂಶಕ್ಕಿಂತ ಹೆಚ್ಚು ಮತಗಳನ್ನು ಪಡೆಯುವ ಅಭ್ಯರ್ಥಿಗಳು ಮಾತ್ರ ಠೇವಣಿ ಉಳಿಸಿಕೊಳ್ಳುತ್ತಾರೆ.

ಜೆಡಿಎಸ್‌ನಿಂದ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಹನುಮಂತ ಮಾವಿನಮರದ ಅವರು ಗುಳೇದಗುಡ್ಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪಕ್ಷವನ್ನು ಸಂಘಟಿಸಿ ರಾಷ್ಟ್ರೀಯ ಪಕ್ಷಗಳಿಗೆ ಭಯ ಮೂಡಿಸಿದ್ದರು.

ತೇರದಾಳದಲ್ಲಿ ಪ್ರೊ. ಬಸವರಾಜ ಕೊಣ್ಣೂರ ಅವರು ಶಿಕ್ಷಣ ಸಂಸ್ಥೆ ತೆರೆದು, ವಿವಿಧ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ಬೀಳಗಿಯಲ್ಲಿ ಸಂಗಪ್ಪ ಕಂದಗಲ್, ಮುಧೋಳದ ಶಂಕರನಾಯಕ, ಬಾಗಲಕೋಟೆಯಲ್ಲಿ ಮೋಹನ ಜಿಗಳೂರ, ಜಮಖಂಡಿಯ ಸದಾಶಿವ ಕಲಾಲ್ ಠೇವಣಿ ಕಳೆದುಕೊಂಡಿದ್ದಾರೆ. ಮಾವಿನಮರದ ಮಾತ್ರ 24 ಸಾವಿರ ಮತ ಪಡೆದಿದ್ದಾರೆ. ಮಾವಿನಮರದ, ಕೊಣ್ಣೂರ ಹಾಗೂ ಶಂಕರ ನಾಯಕ ಹೊರತುಪಡಿಸಿ ಉಳಿದವರಲ್ಲಿ ಯಾರೂ ಮೂರಂಕಿ ದಾಟಿಲ್ಲ.

ಪ್ರಜಾಪರಿವರ್ತನಾ ಪಕ್ಷದಿಂದ ಜಮಖಂಡಿಯಲ್ಲಿ ಸ್ಪರ್ಧಿಸಿದ್ದ ಪರಶುರಾಮ ಮಹಾರಾಜನವರ, ಬಾಗಲಕೋಟೆಯಲ್ಲಿ ಮಲ್ಲಿನಾಥ ಹಿರೇಮಠ, ತೇರದಾಳದಲ್ಲಿ ಪ್ರಭಾಕರ ಚಲವಾದಿ, ಹುನಗುಂದದಲ್ಲಿ ಎಲ್.ಎಲ್.ಹಾವರಗಿ ಠೇವಣಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿ ಚುನಾವಣೆಗೆ ಮುನ್ನ ಭರ್ಜರಿ ಸದ್ದು ಮಾಡಿದ್ದ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ (ಎಂಇಪಿ) ಹೀನಾಯ ಪ್ರದರ್ಶನ ತೋರಿದೆ. ಎಲ್ಲ ಕಡೆಯೂ ಠೇವಣಿ ಕಳೆದುಕೊಂಡರೆ, ಕೂಡಲಸಂಗಮದಲ್ಲಿ ಉದ್ಘಾಟನೆ ಭಾಗ್ಯ ಕಂಡು ಭಾರಿ ಪ್ರಚಾರ ಪಡೆದಿದ್ದ ಜನಸಾಮಾನ್ಯರ ಪಕ್ಷ (ಜೆಎಸ್‌ಪಿ) ಹಾಗೂ ವರ್ತೂರು ಪ್ರಕಾಶ ಅವರ ‘ನಮ್ಮ ಕಾಂಗ್ರೆಸ್‌’ ಪಕ್ಷದ ಅಭ್ಯರ್ಥಿಗಳ ಸ್ಥಿತಿಯೂ ಅದಕ್ಕಿಂತ ಭಿನ್ನವಾಗಿಲ್ಲ. ಹಿಂದುತ್ವದ ಮತ ವಿಭಜನೆಗೆ ಕಾರಣವಾಗಿ ಬಿಜೆಪಿ ನಾಗಲೋಟಕ್ಕೆ ಅಡ್ಡಿಯಾಗಲಿದೆ ಎನ್ನಲಾಗುತ್ತಿದ್ದ ಶಿವಸೇನಾ, ಕೂಡ ಎಲ್ಲಿಯೂ ಮೂರಂಕಿ ದಾಟಿಲ್ಲ. ಬಾಗಲಕೋಟೆಯಲ್ಲಿ ಅಭ್ಯರ್ಥಿ ಹಾಕಿದ್ದ ಭಾರತೀಯ ರಿಪಬ್ಲಿಕ್ ಪಕ್ಷದ ಸ್ಥಿತಿಯೂ ಅದೇ ಆಗಿದೆ.

ಜಿ.ಪಂ ಉಪಾಧ್ಯಕ್ಷರ ಠೇವಣಿ ನಷ್ಟ!: ಜಮಖಂಡಿ ಕ್ಷೇತ್ರದಲ್ಲಿ ಜನಸಾಮಾನ್ಯರ ಪಕ್ಷದಿಂದ ಸ್ಪರ್ಧಿಸಿದ್ದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಕೇವಲ 1524 ಮತ ಪಡೆದಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾಗಿದ್ದ ಉದ್ಯಮಿ ಸಂಗಮೇಶ ನಿರಾಣಿ ಹಾಗೂ ಶ್ರೀಶೈಲ ದಳವಾಯಿ ಕೂಡ ಠೇವಣಿ ಕಳೆದುಕೊಂಡಿದ್ದಾರೆ. ಮುಧೋಳದಲ್ಲಿ ರೈತ ಸಂಘದಿಂದ ಸ್ಪರ್ಧಿಸಿದ್ದ ಬಸವಂತ ಕಾಂಬಳೆ 2088 ಮತ ಪಡೆದಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಹೊರತಾಗಿ ಅತಿ ಹೆಚ್ಚು ಮತ ಪಡೆದ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಸಿ.ಎಂ ಗೆಲುವಿನ ಅಂತರಕ್ಕಿಂತ ನೋಟಾ ಹೆಚ್ಚು!

ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ 1,696 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಅಚ್ಚರಿಯ ವಿಚಾರವೆಂದರೆ ಅಲ್ಲಿ ನೋಟಾ ಮತಗಳೇ (ಯಾರೂ ಬೇಡ) 2,007 ಮತಗಳು ಬಿದ್ದಿವೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೊರತಾಗಿ ಇತರೆ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಪಡೆದ ಮತಕ್ಕಿಂತ ನೋಟಾ ಮತಗಳು ಹೆಚ್ಚು ಬಿದ್ದಿವೆ. ಜಿಲ್ಲೆಯ ಉಳಿದ ಕ್ಷೇತ್ರಗಳಿಗಿಂತ ಬಾದಾಮಿಯಲ್ಲೇ ಮತದಾರರು ‘ನೋಟಾ’ ಗುಂಡಿ ಹೆಚ್ಚು ಬಳಕೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ತೇರದಾಳ ಕ್ಷೇತ್ರದಲ್ಲಿ ಅತಿ ಹೆಚ್ಚು ನೋಟಾ ಮತ (2012) ಬಿದ್ದಿವೆ. ಉಳಿದಂತೆ ಬಾಗಲಕೋಟೆ ಕ್ಷೇತ್ರದಲ್ಲಿ 1902, ಹುನಗುಂದ 1698, ಮುಧೋಳ 1608, ಬೀಳಗಿ 848 ಹಾಗೂ ಜಮಖಂಡಿಯಲ್ಲಿ 379 ನೋಟಾ ಮತಗಳು ಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT