ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6,177 ಮತದಾರರಿಂದ ‘ನೋಟಾ’

ಅಂಚೆ ಮತದಾನ ಮಾಡುವಲ್ಲಿ 774 ನೌಕರರು ವಿಫಲ
Last Updated 17 ಮೇ 2018, 8:23 IST
ಅಕ್ಷರ ಗಾತ್ರ

ಬೀದರ್‌: ಚುನಾವಣಾ ಕಣದಲ್ಲಿ ಇರುವ ಅಭ್ಯರ್ಥಿಗಳು ಸಮರ್ಥರಲ್ಲ ಎನ್ನುವುದು ಮತದಾರನಿಗೆ ಮನವರಿಕೆಯಾದರೆ ಅವರನ್ನು ತಿರಸ್ಕರಿಸಬಹುದಾದ ಹಕ್ಕು ಬಳಸಿಕೊಂಡು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 6,177 ಮತದಾರರು ನೋಟಾ ಚಲಾಯಿಸಿದ್ದಾರೆ.

ಜಿಲ್ಲೆಯ ಪ್ರತಿಯೊಂದು ಮತಕ್ಷೇತ್ರದಲ್ಲಿ ಮತದಾರರು ನೋಟಾ ಚಲಾಯಿಸಿದ್ದಾರೆ. ಬಸವಕಲ್ಯಾಣದಲ್ಲಿ ಅತಿ ಹೆಚ್ಚು 1,381 ಮಂದಿ ನೋಟಾ ಚಲಾಯಿಸಿದರೆ, ಬೀದರ್‌ನಲ್ಲಿ ಅತಿ ಕಡಿಮೆ 690 ಮತದಾರರು ನೋಟಾಗೆ ಮತ ಹಾಕಿದ್ದಾರೆ. ಹುಮನಾಬಾದ್‌ನಲ್ಲಿ 1,173, ಭಾಲ್ಕಿಯಲ್ಲಿ 1,042, ಬೀದರ್‌ ದಕ್ಷಿಣದಲ್ಲಿ 957 ಹಾಗೂ ಔರಾದ್‌ನಲ್ಲಿ 934 ಜನ ನೋಟಾ ಚಲಾಯಿಸಿದ್ದಾರೆ.

ಬಸವಕಲ್ಯಾಣ ಕ್ಷೇತ್ರದಲ್ಲಿ ಒಂಬತ್ತು ಅಭ್ಯರ್ಥಿಗಳು ನೋಟಾಗೆ ಬಂದಿರುವಷ್ಟು ಮತಗಳನ್ನೂ ಪಡೆದಿಲ್ಲ. ಔರಾದ್‌ನಲ್ಲಿ ಎಂಟು ಅಭ್ಯರ್ಥಿಗಳಲ್ಲಿ ಐದು ಮಂದಿ ಅಭ್ಯರ್ಥಿಗಳು ನೋಟಾಗೆ ಚಲಾವಣೆಯಾದ ಮತಗಳಿಗಿಂತ ಕಡಿಮೆ ಮತ ಪಡೆದಿದ್ದಾರೆ.

ಬೀದರ್‌ ದಕ್ಷಿಣದಲ್ಲಿ 13 ಅಭ್ಯರ್ಥಿಗಳು ಹಾಗೂ ಭಾಲ್ಕಿಯಲ್ಲಿ 11 ಅಭ್ಯರ್ಥಿಗಳ ಪೈಕಿ ತಲಾ 8 ಅಭ್ಯರ್ಥಿಗಳು ನೋಟಾದಷ್ಟೂ ಮತ ಪಡೆಯುವಲ್ಲಿ ವಿಫಲರಾಗಿದ್ದಾರೆ. ಬೀದರ್‌ನಲ್ಲಿ ಐವರು ಅಭ್ಯರ್ಥಿಗಳಿಗೆ ನೋಟಾ ಗಿಂತ ಕಡಿಮೆ ಮತಗಳು ಬಂದಿದ್ದು, ಠೇವಣಿ ಕಳೆದುಕೊಂಡಿದ್ದಾರೆ.

‘ಮತದಾರರೇ ಭ್ರಷ್ಟರಾದ ಮೇಲೆ ಪ್ರಾಮಾಣಿಕ ಅಭ್ಯರ್ಥಿಗಳ ಆಯ್ಕೆ ಹೇಗೆ ಸಾಧ್ಯ. ಚುನಾವಣಾ ಆಯೋಗವು ನೋಟಾ ಬಳಸಲು ಅವಕಾಶ ಕೊಟ್ಟಿರುವುದು ಒಳ್ಳೆಯದು. ಅಸಮರ್ಥ ವ್ಯಕ್ತಿಯ ಪರವಾಗಿ ಇಲ್ಲ ಎನ್ನುವ ಸ್ಪಷ್ಟ ಸಂದೇಶ ರವಾನಿಸಲು ಇದು ಒಳ್ಳೆಯ ಅವಕಾಶ’ ಎನ್ನುತ್ತಾರೆ ಭಾಲ್ಕಿ ತಾಲ್ಲೂಕಿನ ಖಟಕಚಿಂಚೊಳಿಯ ಬಸವರಾಜ್.

ಗೆಲ್ಲುವ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ಅವರಿಂದ ಒಂದಿಷ್ಟು ಹಣ ಪಡೆಯಲು ಚುನಾವಣೆಯ ಸಂದರ್ಭದಲ್ಲಿ ಕೆಲವರು ಇದ್ದಕ್ಕಿದ್ದಂತೆಯೇ ನಾಯಕರಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವು ಬಾರಿ ಒಂದೇ ಹೆಸರಿನವರು ನಾಮಪತ್ರ ಸಲ್ಲಿಸಿ ಮತದಾರರಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಾರೆ. ಸಾಮಾನ್ಯವಾಗಿ ಪ್ರತಿಸ್ಪರ್ಧಿ ಪಕ್ಷದವರು ಇಂತಹ ಚುನಾವಣಾ ತಂತ್ರ ಅನುಸರಿಸುತ್ತಾರೆ. ಈ ಎಲ್ಲ ಅಂಶಗಳಿಗೂ ನೋಟಾ ಮೂಲಕ ಉತ್ತರಿಸಬಹುದು ಎಂದು ರಾಜಕೀಯ ಪಕ್ಷವೊಂದರ ಯುವ ಮುಖಂಡ ಹೇಳುತ್ತಾರೆ.

‘ವಿವಿಪ್ಯಾಟ್‌ ಬಂದ ಮೇಲೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಅಧಿಕವಾಗಿದೆ. ಮತದಾರ ತನ್ನ ಸಂವಿಧಾನ ಬದ್ಧವಾದ ಹಕ್ಕು ಚಲಾಯಿಸಿದ ನಂತರ ವಿವಿಪ್ಯಾಟ್‌ನಲ್ಲಿ ತಮ್ಮ ಮತವನ್ನು ಖಾತರಿಪಡಿಸಿಕೊಳ್ಳಬಹುದು. ಮತದಾರರಿಂದ ವಿವಿಪ್ಯಾಟ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ’ ಎಂದು ಮಾಸ್ಟರ್‌ ಟ್ರೇನರ್‌ ಗೌತಮ ಅರಳಿ ಹೇಳುತ್ತಾರೆ.

‘ಮೊದಲು ಹಲವು ಕಾರಣಗಳಿಂದ ಮತಗಳು ತಿರಸ್ಕೃತಗೊಳ್ಳುತ್ತಿದ್ದವು. ಆದರೆ, ನೋಟಾದಲ್ಲಿ ಅಭ್ಯರ್ಥಿಯನ್ನೇ ತಿರಸ್ಕರಿಸುವ ಅಧಿಕಾರ ಕೊಡಲಾಗಿದೆ’ ಎನ್ನುತ್ತಾರೆ ಅವರು.

774 ಅಂಚೆ ಮತ ತಿರಸ್ಕೃತ

ಚುನಾವಣಾ ಸಿಬ್ಬಂದಿ ಹಾಗೂ ಸರ್ಕಾರಿ ಕೆಲಸದ ಮೇಲೆ ನಿಯೋಜನೆಗೊಂಡ ನೌಕರರು ಚಲಾಯಿಸಿದ 774 ಮತಗಳು ತಿರಸ್ಕೃತಗೊಂಡಿವೆ. ಜಿಲ್ಲಾ ಕೇಂದ್ರದಲ್ಲಿ ಅತಿ ಹೆಚ್ಚು 311 ಮತಗಳು ತಿರಸ್ಕೃತವಾಗಿವೆ. ಬಸವಕಲ್ಯಾಣ 150, ಭಾಲ್ಕಿ 114, ಬೀದರ್‌ ದಕ್ಷಿಣ 102, ಔರಾದ್‌ 70 ಹಾಗೂ ಹುಮನಾಬಾದ್‌ನಲ್ಲಿ 27 ಅಂಚೆ ಮತ ತಿರಸ್ಕೃತವಾಗಿವೆ.

**
ನೋಟಾ ಮೂಲಕ ಮತದಾನದ ಹಕ್ಕು ಬಹುಮತದಲ್ಲಿ ಚಲಾವಣೆಯಾದರೂ ಮತ್ತೆ ಚುನಾವಣೆ ನಡೆಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ
ಅನಿರುದ್ಧ ಶ್ರವಣ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT