ಗುರುವಾರ , ಫೆಬ್ರವರಿ 25, 2021
30 °C
ಮರಾಠ, ಲಿಂಗಾಯತೇತರ ಪ್ರಥಮ ಶಾಸಕ ಬಿ. ನಾರಾಯಣರಾವ್

ಹೊರಹೊಮ್ಮಿದ ಅಹಿಂದ ಶಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊರಹೊಮ್ಮಿದ ಅಹಿಂದ ಶಕ್ತಿ

ಬಸವಕಲ್ಯಾಣ: ಲಿಂಗಾಯತ ಮತ್ತು ಮರಾಠರ ಪ್ರಾಬಲ್ಯವಿರುವ ಮತ್ತು ಇದೇ ಸಮುದಾಯದವರು ನಿರಂತರವಾಗಿ ಶಾಸಕರಾಗುತ್ತಿದ್ದ ಬಸವಕಲ್ಯಾಣ ಕ್ಷೇತ್ರದಲ್ಲಿ ಮೊದಲ ಬಾರಿ ಹಿಂದುಳಿದ ವರ್ಗಗಳ ಮುಖಂಡ ಬಿ.ನಾರಾಯಣರಾವ್ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಬಿ.ನಾರಾಯಣರಾವ್ ಒಮ್ಮೆ ಜನತಾ ಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. ಕಾಂಗ್ರೆಸ್ ದಿಂದ ಎರಡನೇ ಸಲ ಸ್ಪರ್ಧಿಸಿದ್ದು ಮೂರನೇ ಪ್ರಯತ್ನದಲ್ಲಿ ವಿಧಾನಸಭೆಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಎಂದಿಲ್ಲದಂತೆ ಜಾತಿ ಆಧಾರದಲ್ಲಿ ಮತಗಳು ವಿಭಜನೆಯಾದವು. ಕ್ಷೇತ್ರದಲ್ಲಿರುವ ಕುರುಬ, ಕಬ್ಬಲಿಗ, ದಲಿತ, ಮುಸ್ಲಿಂ ಸಮುದಾಯದವರು ಮೊದಲಿನಿಂದಲೂ ಕಾಂಗ್ರೆಸ್ ಬೆನ್ನಿಗಿದ್ದರು. ಲಿಂಗಾಯತರು ಬಿಜೆಪಿಯ ಮಲ್ಲಿಕಾರ್ಜುನ ಖೂಬಾ ಪರ ಮತ ಚಲಾಯಿಸಿದರೆ, ಮರಾಠರು ಜೆಡಿಎಸ್ ಅಭ್ಯರ್ಥಿ ಪಿ.ಜಿ.ಆರ್.ಸಿಂಧ್ಯ ಅವರನ್ನು ಬೆಂಬಲಿಸಿದರು.

ಮಾಜಿ ಶಾಸಕರಾದ ಬಸವರಾಜ ಪಾಟೀಲ ಅಟ್ಟೂರ್, ಎಂ.ಜಿ.ಮುಳೆ ಮತ್ತಿತರೆ ಮುಖಂಡರು ಕೂಡ ಜೆಡಿಎಸ್ ಸೇರ್ಪಡೆ ಆಗಿದ್ದರಿಂದ ಅವರ ಬಲ ಮತ್ತಷ್ಟು ಹೆಚ್ಚಿದಂತೆ ಕಂಡಿತು. ಇಂಥದರಲ್ಲೂ ಅಹಿಂದ್ ಮತದಾರರು ವಿಚಲಿತರಾಗದೆ ಒಂದೇ ಕಡೆ ಉಳಿದರು. ಈ ಶಕ್ತಿಯ ಆಧಾರದಲ್ಲಿ ಬಿ.ನಾರಾಯಣರಾವ್ ಸುಲಭ ಜಯ ಸಾಧಿಸಿದರು. ಎರಡು ಸಲ ಶಾಸಕರಾಗಿದ್ದ ಮಲ್ಲಿಕಾರ್ಜುನ ಖೂಬಾ ಕೊನೆ ಗಳಿಗೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.

ಬಿಜೆಪಿಯಿಂದ ಮರಾಠಾ ಅಭ್ಯರ್ಥಿಗೆ ಟಿಕೆಟ್ ದೊರಕಬಹುದು ಎಂಬ ಭರವಸೆ ಇತ್ತು. ಆದರೆ ಖೂಬಾಗೆ ಸ್ಪರ್ಧಿಸಲು ಅವಕಾಶ ನೀಡಿದ್ದರಿಂದ ಮರಾಠಾ ಮತಗಳು ಬಿಜೆಪಿಯಿಂದ ವಿಮುಖವಾದವು. ಇದೇ ಸಮುದಾಯದ ಪಿ.ಜಿ.ಆರ್.ಸಿಂಧ್ಯ ಜೆಡಿಎಎಸ್‌ನಿಂದ ಕಣಕ್ಕೆ ಇಳಿದರು. ಹೀಗಾಗಿ ಈ ಮತಗಳು ಸಹಜವಾಗಿಯೇ ಅವರ ಪಾಲಾದವು.

ಸಿಂಧ್ಯ ಈ ಕ್ಷೇತ್ರಕ್ಕೆ ಹೊಸಬರಾಗಿದ್ದರೂ ಕನಕಪುರದಿಂದ ಆರು ಸಲ ಶಾಸಕರಾಗಿ ಆಯ್ಕೆಗೊಂಡು ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಆದರೂ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿಯೇ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರಿಂದ ಅವರಿಗೆ ದೊರೆತ ಅಲ್ಪ ಸಮಯದಲ್ಲಿ ಮರಾಠಾ ಬಿಟ್ಟರೆ ಅನ್ಯ ಮತದಾರರ ಒಲವು ಗಳಿಸಿಕೊಳ್ಳುವಲ್ಲಿ ಅವರು ವಿಫಲರಾದರು.

ಈ ಇಬ್ಬರೂ ಅಹಿಂದ ಮತಗಳನ್ನು ಒಡೆಯುವುದಕ್ಕೆ ಹರಸಾಹಸ ಮಾಡಿದ್ದರೂ ಕೆಲ ಪ್ರಮಾಣದ ಮತಗಳು ಮಾತ್ರ ದೊರೆತವು. ಈ ಪರಿಸ್ಥಿತಿ ಬಿ.ನಾರಾಯಣರಾವ್ ಅವರಿಗೆ ವರವಾಗಿ ಪರಿಣಮಿಸಿತು.

`ನನ್ನ ಗೆಲುವು ಬಸವಣ್ಣನವರ ಸಾಮಾಜಿಕ ನ್ಯಾಯಕ್ಕೆ ಸಂದ ಜಯವಾಗಿದೆ. ಕಾಂಗ್ರೆಸ್ ನಲ್ಲಿ ಮತಗಟ್ಟೆ ಏಜೆಂಟ್ ಆಗಿ ಕೆಲಸ ಮಾಡಿದ ನಾನು ಇಂದು ಶಾಸಕನಾಗಿ ಆಯ್ಕೆಗೊಂಡಿದ್ದೇನೆ. ನನ್ನ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ' ಎಂದು ಹೇಳುತ್ತಾರೆ ನಾರಾಯಣರಾವ್.

**

35 ವರ್ಷಗಳಿಂದ ರಾಜಕೀಯದಲ್ಲಿದ್ದು ಸಾಕಷ್ಟು ನೋವು ಸಹಿಸಿದ್ದೇನೆ. ಗೆಲುವಿನಿಂದ ಖುಷಿಯಾಗಿದ್ದು ಕ್ಷೇತ್ರದ ಮತದಾರರು ಕೂಡ ಖುಷಿಯಿಂದ ಬದುಕುವ ನಿಟ್ಟಿನಲ್ಲಿ ಕೆಲಸ ಮಾಡುವೆ

– ಬಿ.ನಾರಾಯಣರಾವ್ ಶಾಸಕ

ಮಾಣಿಕ ಆರ್.ಭುರೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.