ಜಿಲ್ಲೆಯಲ್ಲಿ 663 ಮತಗಳು ತಿರಸ್ಕೃತ!

7

ಜಿಲ್ಲೆಯಲ್ಲಿ 663 ಮತಗಳು ತಿರಸ್ಕೃತ!

Published:
Updated:

ಚಾಮರಾಜನಗರ: ತಿರಸ್ಕೃತಗೊಂಡ ಮತಗಳು, ಅಸಿಂಧುವಾದ ಮತಗಳು... ಶಬ್ದಗಳು ವಿದ್ಯುನ್ಮಾನ ಮತಯಂತ್ರಗಳು ಬಂದ ಬಳಿಕವೂ ಅಸ್ತಿತ್ವದಲ್ಲಿವೆ. ವಿದ್ಯುನ್ಮಾನ ಮತಯಂತ್ರಗಳಲ್ಲಿ ಏಕ ಕಾಲಕ್ಕೆ ಇಬ್ಬರಿಗೆ ಮತ ಹಾಕುವ ಅವಕಾಶ ಇಲ್ಲದೇ ಇರುವುದರಿಂದ ಎಲ್ಲ ಮತಗಳೂ ಸಿಂಧುವಾಗುತ್ತವೆ. ತಿರಸ್ಕೃತಗೊಂಡ ಮತಗಳು ಎಂಬ ಶಬ್ದ ಇತಿಹಾಸ ಸೇರಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಇದಿನ್ನೂ ಜೀವಂತ ಇದೆ. ಈ ಬಾರಿ ಚುನಾವಣೆಯಲ್ಲಿ ತಿರಸ್ಕೃತಗೊಂಡ ಮತಗಳ ಸಂಖ್ಯೆ 663!

ಹೌದು, ಮಂಗಳವಾರ ನಡೆದ ಮತ ಎಣಿಕೆಯಲ್ಲಿ 663 ಮತಗಳು ತಿರಸ್ಕೃತಗೊಂಡಿವೆ. ಇವುಗಳೆಲ್ಲ ಸಾಮಾನ್ಯ ಮತದಾರ ವಿದ್ಯುನ್ಮಾನ ಮತಯಂತ್ರದಲ್ಲಿ ಹಾಕಿದ ಮತಗಳಲ್ಲ. ಬದಲಿಗೆ, ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದವರು ಹಾಕಿದ ಮತಗಳು!

ಚುನಾವಣಾ ಕರ್ತವ್ಯದಲ್ಲಿ ನಿರತ ರಾಗಿ ಸಾಮಾನ್ಯ ಮತದಾರರು ಹೇಗೆ ಮತದಾನ ಮಾಡಬೇಕು ಎಂದು ಮಾರ್ಗದರ್ಶನ ನೀಡಿದ ಸಿಬ್ಬಂದಿ ಹಾಕಿದ ಮತಗಳೇ ತಿರಸ್ಕೃತವಾಗಿ ಅಚ್ಚರಿ ಮೂಡಿಸಿವೆ.

ಜಿಲ್ಲೆಯಲ್ಲಿ 5,861 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿದ್ದರು. ಇವರಲ್ಲಿ ಎಷ್ಟು ಮಂದಿ ಮತ ಚಲಾಯಿಸಿದ್ದಾರೆ ಎಂಬ ಅಂಕಿ ಅಂಶ ಲಭ್ಯವಾಗಿಲ್ಲ. ಆದರೆ, 663 ಮತಗಳು ತಿರಸ್ಕೃತಗೊಂಡಿವೆ ಎಂಬ ಮಾಹಿತಿಯಷ್ಟೇ ಸಿಕ್ಕಿದೆ.‌

ಹನೂರು ವಿಧಾನಸಭಾ ಕ್ಷೇತ್ರದಲ್ಲಿ 157 ಮತಗಳು, ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದಲ್ಲಿ 116 ಮತಗಳು, ಚಾಮರಾಜನಗರ ವಿಧಾನಸಭಾ ಕ್ಷೇತ್ರ ದಲ್ಲಿ 62 ಮತಗಳು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 328 ಮತಗಳು ತಿರಸ್ಕೃತಗೊಂಡಿವೆ.

ತಿರಸ್ಕೃತಗೊಳ್ಳಲು ಕಾರಣವೇನು?

ಅಂಚೆ ಮತಗಳು ತಿರಸ್ಕೃತಗೊಳ್ಳಲು ಬಹುಮುಖ್ಯ ಕಾರಣ ಮತ ಪತ್ರದಲ್ಲಿ ಒಬ್ಬ ಅಭ್ಯರ್ಥಿಗಿಂತ ಹೆಚ್ಚು ಅಭ್ಯರ್ಥಿಗಳಿಗೆ ಮತ ಹಾಕಿರುವುದು. ಕ್ರಮಬದ್ಧವಾಗಿ ಮತ ಹಾಕದೇ ಇರುವುದು ಕಾರಣ ಎನಿಸಿವೆ. ಈ ಬಾರಿ ಅಧಿಕ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತರನ್ನು ಚುನಾವಣಾ ಕರ್ತವ್ಯಕ್ಕೆ ತೆಗೆದುಕೊಂಡಿದ್ದರಿಂದ ಇವರು ಇದೇ ಮೊದಲ ಬಾರಿಗೆ ಅಂಚೆ ಮತದಾನ ಮಾಡಿದ್ದರಿಂದ ಗೊಂದಲಕ್ಕೆ ಒಳಗಾಗಿ ತಪ್ಪು ಮಾಡಿರುವ ಸಾಧ್ಯತೆ ಹೆಚ್ಚು ಎಂದು ಭಾವಿಸಲಾಗಿದೆ.‌

4 ಟೆಂಡರ್ಡ್ ಮತಗಳು !

ಜಿಲ್ಲೆಯಲ್ಲಿ 4 ಟೆಂಡರ್ಡ್ ಮತಗಳು ದಾಖಲಾಗಿವೆ. ಮತದಾನ ಕೇಂದ್ರದಲ್ಲಿ ಉಂಟಾಗುವ ಗೊಂದಲದಿಂದಲೋ ಅಥವಾ ಉದ್ದೇಶಪೂರ್ವಕವಾಗಿಯೂ ಇಂತಹ ಮತಗಳು ದಾಖಲಾಗುತ್ತವೆ. ಹನೂರಿನಲ್ಲಿ 3 ಹಾಗೂ ಕೊಳ್ಳೇಗಾಲ ಕ್ಷೇತ್ರದಲ್ಲಿ 1 ಇಂತಹ ಮತಗಳು ಬಿದ್ದಿವೆ.

ಏನಿದು ಟೆಂಡರ್ಡ್ ಮತ?

ಮತದಾರರ ಭಾವಚಿತ್ರ ಹಳೆಯದಾಗಿದ್ದು, ಒಂದೇ ಹೆಸರಿನ ಹಲವರು ಒಂದೇ ಮತಗಟ್ಟೆಯಲ್ಲಿದ್ದಾಗ ಇಂಥ ಸಾಧ್ಯತೆ ಅಧಿಕ. ಭಾವಚಿತ್ರದ ಮೂಲಕ ಮತದಾರನನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ ಅಥವಾ ಅವರೇ ತಪ್ಪು ಗ್ರಹಿಕೆಯಿಂದ ಮತದಾನಕ್ಕೆ ಅವಕಾಶ ಮಾಡಿಕೊಡುತ್ತಾರೆ. ನಂತರ, ನಿಜವಾದ ಮತದಾರ ಬಂದಾಗ ಆತನಿಗೆ ಅವಕಾಶ ನಿರಾಕರಿಸಬಾರದು ಎಂಬ ಕಾರಣಕ್ಕೆ ಅವಕಾಶ ನೀಡಲಾಗುತ್ತದೆ. ಇಂತಹದು ಟೆಂಡರ್ಡ್ ಮತ ಎನಿಸುತ್ತದೆ. ಕೆಲವೊಮ್ಮೆ ನಿರ್ದಿಷ್ಟ ಅಭ್ಯರ್ಥಿಯ ಹೆಸರಿನಲ್ಲಿ ಬೇಕೆಂದೇ ಕಿಡಿಗೇಡಿ ಗಳು ಮತದಾನ ಮಾಡುತ್ತಾರೆ. ಇವೆಲ್ಲವನ್ನೂ ಟೆಂಡರ್ಡ್ ಪಟ್ಟಿಯಲ್ಲಿ ಸೇರಿಸಿ ತಿರಸ್ಕರಿಸಲಾಗುತ್ತದೆ.

ಯಾವ ಮತಗಟ್ಟೆಯಲ್ಲೂ ಶೇ 100 ಮತದಾನ ಆಗದೇ ಇರುವುದರಿಂದ ಮತಗಟ್ಟೆ ಅಧಿಕಾರಿಗಳೇ ಕೊನೆಗೆ ಮತ ಹಾಕದ ಅಭ್ಯರ್ಥಿಯ ಹೆಸರನ್ನು ಗುರುತು ಹಾಕಿ ಇಂತಹ ಟೆಂಡರ್ಡ್ ಮತವನ್ನು ಸಿಂಧುವಾಗುವ ಮತಗಳ ಪಟ್ಟಿಯಲ್ಲಿ ಲೆಕ್ಕ ತೋರಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಸದ್ಯ, ಜಿಲ್ಲೆಯಲ್ಲಿ 4 ಟೆಂಡರ್ಡ್ ಮತ ಮಾತ್ರ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry