ಸೋತರೂ ಕ್ಷೇತ್ರದ ಅಭಿವೃದ್ಧಿಗೆ ದುಡಿಯುವೆ

7
ಮೂಡಿಗೆರೆ: ಸುದ್ದಿಗೋಷ್ಠಿಯಲ್ಲಿ ಮೋಟಮ್ಮ ಇಂಗಿತ

ಸೋತರೂ ಕ್ಷೇತ್ರದ ಅಭಿವೃದ್ಧಿಗೆ ದುಡಿಯುವೆ

Published:
Updated:

ಮೂಡಿಗೆರೆ: ‘ಕ್ಷೇತ್ರದಲ್ಲಿದ್ದುಕೊಂಡು ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿ, ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇನೆ’ ಎಂದು ವಿಧಾನಸಭಾ ಚುನಾವಣೆಯ ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ ಮೋಟಮ್ಮ ತಿಳಿಸಿದರು.

ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಇದು ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ನಡೆದ ಚುನಾವಣೆಯಾಗಿದೆ. ಈ ರೀತಿಯ ಚುನಾವಣೆಗಳು ಸಮಾಜಕ್ಕೆ ಅಪಾಯಕಾರಿ. ಕಾಂಗ್ರೆಸ್ ಪಕ್ಷ ಹಿಂದೆಂದಿಗಿಂತಲೂ ಈ ಬಾರಿ ಬಹಳ ಶಿಸ್ತುಬದ್ಧವಾಗಿ ಚುನಾವಣೆಯನ್ನು ಎದುರಿಸಿತ್ತು. ಆದರೆ ವಿರೋಧ ಪಕ್ಷಗಳು ಅನುಸರಿಸಿದ ಅಪವಿತ್ರ ಚಟುವಟಿಕೆಗಳು ಹಾಗೂ ಚುನಾವಣೆಯ ಹಿಂದಿನ ದಿನ ಜೆಡಿಎಸ್‌ ಕಣದಿಂದ ಹಿಂದಕ್ಕೆ ಸರಿದದ್ದು ಕಾಂಗ್ರೆಸ್‌ ಸೋಲಿಗೆ ಕಾರಣವಾಯಿತು’ ಎಂದು ವಿಶ್ಲೇಷಿಸಿದರು.

‘ಶಾಸಕರಾಗಿದ್ದ ಒಬ್ಬರು ಮತ್ತೊಂದು ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು, ತ್ರಿಕೋನ ಸ್ಪರ್ಧೆಯಿದ್ದ ಚುನಾವಣೆಯಲ್ಲಿ ಕೇವಲ 22 ಸಾವಿರ ಮತಗಳನ್ನು ತೆಗೆದುಕೊಳ್ಳುತ್ತಾರೆ ಎಂದಾದರೆ ಅದು ಕಣದಿಂದ ಹಿಂದಕ್ಕೆ ಸರಿದಂತಲ್ಲವೇ’ ಎಂದು ಅವರು ಪ್ರಶ್ನಿಸಿದರು. ಅಲ್ಲದೇ ತಾವು ಭೇಟಿ ನೀಡಿದ ಯಾವುದೇ ಮತಗಟ್ಟೆಯಲ್ಲೂ ಜೆಡಿಎಸ್‌ನ ಒಬ್ಬನೇ ಒಬ್ಬ ಏಜೆಂಟ್‌ ಕೂಡ ಇರಲಿಲ್ಲ ಎಂದು ದೂಷಿಸಿದರು. ತೀವ್ರ ಪೈಪೋಟಿಯ ನಡುವೆಯೂ 46 ಸಾವಿರ ಮತ ಹಾಕಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

‘ಚುನಾವಣೆಯಲ್ಲಿ ಸೋತ ಮೋಟಮ್ಮ ಪಲಾಯನ ಮಾಡುತ್ತಾರೆ ಎಂಬುದು ಸುಳ್ಳು. ಕ್ಷೇತ್ರದಲ್ಲಿದ್ದು, ಕ್ಷೇತ್ರದ ಜ್ವಲಂತ ಸಮಸ್ಯೆಗಳಾದ ನಿವೇಶನ ಸಮಸ್ಯೆ, ಒತ್ತುವರಿದಾರರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಕಳಸ ತಾಲ್ಲೂಕು ರಚನೆ ಮುಂತಾದ ಸಮಸ್ಯೆಗಳ ಪರಿಹಾರ ಕ್ರಮಕ್ಕಾಗಿ ಹೋರಾಟ ರೂಪಿಸುವುದಲ್ಲದೇ, ಕ್ಷೇತ್ರದ ಜನರೊಂದಿಗೆ ಇದ್ದು, ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ’ ಎಂದರು.

ಆಲ್ದೂರು ಬ್ಲಾಕ್‌ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ‘ಮತಯಂತ್ರಗಳಲ್ಲಿ ದೋಷವಿರುವ ಬಗ್ಗೆ ಅನುಮಾನವಿದ್ದು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು. ಕೆಲವು ಮತಯಂತ್ರಗಳು ಪ್ರಾರಂಭವಾಗದೇ ಅಡ್ಡಿಯುಂಟಾಗಿತ್ತು. ಅಲ್ಲದೇ ಹೊಸದಾಗಿ ಜಾರಿಗೆ ತಂದಿರುವ ಮತದಾನದ ವೇಳೆ ತೋರಿಸುವ ಪಕ್ಷದ ಚಿಹ್ನೆಗಳನ್ನು ಎಣಿಸುವ

ಕಾರ್ಯ ಆಗಬೇಕು’ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಪದಾಧಿಕಾರಿಗಳಾದ ಕೆ.ಆರ್‌.ಪ್ರಭಾಕರ್‌, ಸವಿತಾ ರಮೇಶ್‌, ಎಂ.ಎಸ್‌.ಅನಂತ್, ಬಿ.ಎಸ್‌.ಜಯರಾಂ, ಅಕ್ರಂಹಾಜಿ, ರಾಜೇಂದ್ರ, ಮಹೇಶ್‌, ರಮೇಶ್‌, ಸುಬ್ಬೇಗೌಡ, ಯಲ್ಲಪ್ಪಗೌಡ, ನದೀಂ, ಕುಮಾರ್‌ ಇದ್ದರು.

**

ರಾಜ್ಯದ ಶೇಕಡಾವಾರು ಮತದಾನದಲ್ಲಿ ಕಾಂಗ್ರೆಸ್‌ ಪಕ್ಷವು ಹೆಚ್ಚು ಮತಗಳನ್ನು ಪಡೆಯುವ ಮೂಲಕ ಜನರ ವಿಶ್ವಾಸ ಗಳಿಸಿದೆ 

ಯು.ಎಚ್‌.ಹೇಮಶೇಖರ್‌, ಬ್ಲಾಕ್‌ ಅಧ್ಯಕ್ಷ

**

ಈ ಬಾರಿ ನಿರೀಕ್ಷೆಗೂ ಮೀರಿ ಕಾಂಗ್ರೆಸ್‌ ಕಾರ್ಯಕರ್ತರು ಜವಾಬ್ದಾರಿ ನಿರ್ವಹಿಸಿದ್ದಾರೆ. ಕ್ಷೇತ್ರದ ಮತದಾರರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ

– ಮೋಟಮ್ಮ, ವಿಧಾನ ಪರಿಷತ್‌ ಸದಸ್ಯೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry