ಗುರುವಾರ , ಮಾರ್ಚ್ 4, 2021
18 °C
ಕಣದಲ್ಲಿದ್ದವರು 76 ಮಂದಿ, ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳು ಸೋಲು ಅನುಭವಿಸಿದರೂ ಠೇವಣಿ ಕಳೆದುಕೊಂಡಿಲ್ಲ

60 ಉಮೇದುವಾರರ ಠೇವಣಿ ನಷ್ಟ

ಜಿ.ಬಿ.ನಾಗರಾಜ್ Updated:

ಅಕ್ಷರ ಗಾತ್ರ : | |

60 ಉಮೇದುವಾರರ ಠೇವಣಿ ನಷ್ಟ

ಚಿತ್ರದುರ್ಗ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕಣಕ್ಕೆ ಧುಮುಕಿದ್ದ 76 ಅಭ್ಯರ್ಥಿಗಳ ಪೈಕಿ 60 ಉಮೇದುವಾರರು ಠೇವಣಿ ಕಳೆದುಕೊಂಡಿದ್ದಾರೆ.

ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳು ಸೋಲು ಅನುಭವಿಸಿದರೂ ಠೇವಣಿ ಕಳೆದುಕೊಂಡಿಲ್ಲ. ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಪ್ರಬಲ ಪೈಪೋಟಿ ತೋರಿದ್ದರೂ ಉಳಿದ ಮೂರರಲ್ಲಿ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಮೊಳಕಾಲ್ಮುರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಎಸ್‌.ತಿಪ್ಪೇಸ್ವಾಮಿ ಹೊರತುಪಡಿಸಿ ಬೇರಾವ ಪಕ್ಷೇತರರೂ ಠೇವಣಿ ಉಳಿಸಿಕೊಳ್ಳುವಷ್ಟು ಮತ ಪಡೆದಿಲ್ಲ.

ಕ್ಷೇತ್ರದಲ್ಲಿ ಚಲಾವಣೆಗೊಂಡ ಸ್ವೀಕೃತ ಮತಗಳ ಆರನೇ ಒಂದು ಭಾಗದಷ್ಟು ಮತಗಳನ್ನು ಪಡೆಯದ ಅಭ್ಯರ್ಥಿಯ ಠೇವಣಿಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಸಾಮಾನ್ಯ ಅಭ್ಯರ್ಥಿಗಳಿಗೆ

₹ 10 ಸಾವಿರ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ ₹ 5 ಸಾವಿರ ಠೇವಣಿಯನ್ನು ಆಯೋಗ ನಿಗದಿ ಮಾಡಿತ್ತು. ಸಮಾಜವಾದಿ, ಕೆಪಿಜೆಪಿ, ಜೆಡಿಯು, ಆಲ್‌ ಇಂಡಿಯಾ ಮಹಿಳಾ ಎಂಪವರ್‌ಮೆಂಟ್‌ ಪಾರ್ಟಿ ಸೇರಿ ಹಲವು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಠೇವಣಿಯನ್ನು ಮರಳಿ ಪಡೆಯುವಷ್ಟು ಮತಗಳನ್ನೂ ಗಳಿಸಿಲ್ಲ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ನಾಲ್ವರು ಅಭ್ಯರ್ಥಿಗಳ ಪೈಕಿ ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿ ಕೆ.ಪಿ.ಭೂತಯ್ಯ ಮಾತ್ರ ಠೇವಣಿ ಕಳೆದುಕೊಂಡಿದ್ದಾರೆ. ಟಿ.ರಘುಮೂರ್ತಿ (ಕಾಂಗ್ರೆಸ್‌–ಗೆಲುವು) ಅವರಿಗೆ ಪ್ರಬಲ ಪೈಪೋಟಿ ನೀಡಿದ ರವೀಶಕುಮಾರ್‌ (ಜೆಡಿಎಸ್‌) ಹಾಗೂ ಕೆ.ಟಿ.ಕುಮಾರಸ್ವಾಮಿ (ಬಿಜೆಪಿ) ಅವರು ಆಯೋಗ ನಿಗದಿಪಡಿಸಿದ ಮಾನದಂಡಕ್ಕಿಂತಲೂ ಹೆಚ್ಚು ಮತಗಳನ್ನು ಪಡೆದಿದ್ದಾರೆ.

ಚಿತ್ರದುರ್ಗ ಕ್ಷೇತ್ರದಲ್ಲಿ ಜಿ.ಎಚ್.ತಿಪ್ಪಾರೆಡ್ಡಿ (ಬಿಜೆಪಿ–ಗೆಲುವು), ಕೆ.ಸಿ.ವೀರೇಂದ್ರ (ಜೆಡಿಎಸ್‌) ಹಾಗೂ ಎಚ್‌.ಎ.ಷಣ್ಮುಖಪ್ಪ (ಕಾಂಗ್ರೆಸ್‌) ಹೊರತುಪಡಿಸಿ 14 ಉಮೇದುವಾರರು ಠೇವಣಿ ಕಳೆದುಕೊಂಡಿದ್ದಾರೆ. ಹೊಸದುರ್ಗ ಕ್ಷೇತ್ರದಲ್ಲಿ ಗೂಳಿಹಟ್ಟಿ ಡಿ. ಶೇಖರ್‌ (ಬಿಜೆಪಿ–ಗೆಲುವು) ಹಾಗೂ ಬಿ.ಜಿ.ಗೋವಿಂದಪ್ಪ ಬಿಟ್ಟು 9 ಮಂದಿಯ ಠೇವಣಿ ನಷ್ಟವಾಗಿದೆ. ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದ ಚಿತ್ರನಟ ಶಶಿಕುಮಾರ್‌ ಕೂಡ ಠೇವಣಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಹೊಳಲ್ಕೆರೆಯಲ್ಲಿ ಕಣದಲ್ಲಿದ್ದ 20 ಉಮೇದುವಾರರ ಪೈಕಿ 18 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಎಂ. ಚಂದ್ರಪ್ಪ (ಬಿಜೆಪಿ– ಗೆಲುವು) ಹಾಗೂ ಎಚ್‌. ಆಂಜನೇಯ (ಕಾಂಗ್ರೆಸ್‌) ಹೊರತುಪಡಿಸಿ ಉಳಿದವರ ಠೇವಣಿಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಂಡಿದೆ.

ಹಿರಿಯೂರು ಕ್ಷೇತ್ರದಲ್ಲಿ ಕೆ.ಪೂರ್ಣಿಮಾ (ಬಿಜೆಪಿ–ಗೆಲುವು), ಡಿ. ಸುಧಾಕರ್‌ (ಕಾಂಗ್ರೆಸ್‌) ಹಾಗೂ ಡಿ. ಯಶೋಧರ (ಜೆಡಿಎಸ್‌) ಹೊರತುಪಡಿಸಿ ಉಳಿದ 10 ಅಭ್ಯರ್ಥಿಗಳ ಠೇವಣಿ ನಷ್ಟವಾಗಿದೆ. ಉಳಿದ ಪಕ್ಷದ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಒಂದು ಸಾವಿರ ಮತಗಳ ಗಡಿಯನ್ನು ದಾಟಲು ಸಾಧ್ಯವಾಗಿಲ್ಲ.

ರಾಜ್ಯದ ಗಮನ ಸೆಳೆದಿದ್ದ ಮೊಳಕಾಲ್ಮುರು ಕ್ಷೇತ್ರದಲ್ಲಿ ಬಿ.ಶ್ರೀರಾಮುಲು (ಬಿಜೆಪಿ–ಗೆಲುವು), ಡಾ.ಯೋಗೇಶ್‌ ಬಾಬು (ಕಾಂಗ್ರೆಸ್‌) ಹಾಗೂ ಎಸ್‌.ತಿಪ್ಪೇಸ್ವಾಮಿ (ಪಕ್ಷೇತರ) ಬಿಟ್ಟು ಉಳಿದ 8 ಅಭ್ಯರ್ಥಿಗಳಿಗೆ ಠೇವಣಿ ಮರಳಿ ಕೈಸೇರಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.