4
ಮಹದಾಯಿ ಕಣದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು; ಪರಿಣಾಮ ಬೀರದ ನೋಟಾ

ಚನ್ನಪ್ಪಗೌಡರಿಗೆ ಮತ್ತೆ ಆಡಳಿತ

Published:
Updated:

ಗದಗ: ರೈತ ಬಂಡಾಯದ ಮೂಲಕ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾದ ನರಗುಂದ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ, ಜಿಲ್ಲೆಯ ಮುತ್ಸದ್ದಿ ರಾಜಕಾರಣಿ ಎಂದೇ ಹೆಸರಾದ ಬಿ.ಆರ್.ಯಾವಗಲ್, ಬಿಜೆಪಿಯ ಸಿ.ಸಿ ಪಾಟೀಲ ವಿರುದ್ಧ 7979 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

2013ರಲ್ಲಿ ಯಾವಗಲ್‌ 59,620 ಮತಗಳನ್ನು ಪಡೆದಿದ್ದರು. ಈ ಬಾರಿ ಅವರು ಪಡೆದ ಮತಗಳ ಸಂಖ್ಯೆ 65,066ಕ್ಕೆ ಏರಿದೆ. ಆದರೆ, ಗೆಲುವು ಲಭಿಸಿಲ್ಲ. ಬಿಜೆಪಿಯ ಸಿ.ಸಿ. ಪಾಟೀಲ ಅವರು 73,045 ಮತಗಳನ್ನು ಪಡೆದು ಮತ್ತೆ ಆಡಳಿತ ಖಾತರಿಪಡಿಸಿಕೊಂಡರು. ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಆಪ್ತ ಸಹಾಯಕನ ಗುಂಡಿನಿಂದ ಗಾಯಗೊಂಡು ಆಸ್ಪತ್ರೆಯಿಂದಲೇ ಸ್ಪರ್ಧಿಸಿದ್ದ ಪಾಟೀಲರಿಗೆ ‘ಅನುಕಂಪದ ಅಲೆ’ಸಹಾಯ ಮಾಡಿರಲಿಲ್ಲ. ಈ ಬಾರಿ ಗ್ರಾಮೀಣ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ, ಮತ ವಿಭಜನೆಯಾಗದಂತೆ ನೋಡಿಕೊಂಡಿದ್ದು ಅವರಿಗೆ ಸಹಾಯಕವಾಗಿದೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನೇ ಎತ್ತಿ ತೋರಿಸಿ ಅವರು ಮತಯಾಚನೆ ಮಾಡಿದ್ದರು.

ಗದುಗಿನ ಲಕ್ಕುಂಡಿ, ಅಡವಿ ಸೋಮಾಪೂರ, ರೋಣ ತಾಲ್ಲೂಕಿನ ಹುಲ್ಲೂರು, ಮೆಣಸಗಿಯವರೆಗೆ ನರಗುಂದ ಮತಕ್ಷೇತ್ರ ವಿಸ್ತಾರ ಹೊಂದಿದೆ. ಇಲ್ಲಿ ಬಿಜೆಪಿ ಕಾರ್ಯಕರ್ತರು ವ್ಯವಸ್ಥಿತವಾಗಿ ಪ್ರಚಾರ ನಡೆಸಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಮತ್ತು ಸಚಿವೆ ಸ್ಮೃತಿ ಇರಾನಿ ನರಗುಂದಕ್ಕೆ ಬಂದು ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿದ್ದರು.

ಪ್ರಧಾನಿ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಜಿಲ್ಲೆಗೆ ಬಂದಾಗ ಮಹದಾಯಿ ಸಮಸ್ಯೆಯನ್ನು 6 ತಿಂಗಳಲ್ಲಿ ಇತ್ಯರ್ಥಪಡಿಸುವುದಾಗಿ ಹೇಳಿದ್ದರು. ಇದು ಕೂಡ ಕ್ಷೇತ್ರದಲ್ಲಿ ಹೊಸ ರಾಜಕೀಯ ಸಮೀಕರಣ ಹುಟ್ಟುಹಾಕಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವಗಲ್‌ ಪರವಾಗಿ ನರಗುಂದದಲ್ಲಿ ಪ್ರಚಾರ ನಡೆಸಿ, ಮತ ಯಾಚನೆ ಮಾಡಿದ್ದರು.

ಯಾವಗಲ್‌ಅವರನ್ನು ಮಂತ್ರಿ ಮಾಡಿ ಎಂದು ಕಾರ್ಯಕರ್ತರು ಆಗ್ರಹಿಸಿದಾಗ, ಅವರು ಮುಖ್ಯಮಂತ್ರಿ ಸ್ಥಾನಕ್ಕೇ ಅರ್ಹರಿದ್ದಾರೆ ಎಂದಿದ್ದರು. ಯಾವಗಲ್‌ ಅವರು ಕ್ಷೇತ್ರದಲ್ಲಿ ಮಲಪ್ರಭಾ ಬಲದಂಡೆ ಕಾಲುವೆ ನವೀಕರಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದರು. ಆದರೆ, ಅವು ಮತಗಳಾಗಿ ಪರಿವರ್ತನೆ ಆಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಪ್ರಚಾರದ ಕೊರತೆಯೂ ಅವರಿಗೆ ಹಿನ್ನಡೆ ಆಗಿದೆ.

ಚುನಾವಣೆ ಮುಹೂರ್ತ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲಿ ಜಾತಿ ಲೆಕ್ಕಚಾರ ಮುನ್ನೆಲೆಗೆ ಬಂದಿತ್ತು. ಇಲ್ಲಿ ನಿರ್ಣಾಯಕರಾಗಿರುವ ಕುರುಬ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮತಗಳನ್ನು ಪಡೆಯುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆದಿತ್ತು. ಲಿಂಗಾಯತ–ವೀರಶೈವ ಹೋರಾಟದಲ್ಲಿ ತಟಸ್ಥರಾಗಿದ್ದ, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಸಿ.ಸಿ ಪಾಟೀಲ ಅವರಿಗೆ, ಬೂದಿಮುಚ್ಚಿದ ಕೆಂಡದಂತಿದ್ದ ಈ ವಿಷಯ ಚುನಾವಣೆಯಲ್ಲಿ ಪೂರಕವಾಯಿತು. ಕ್ಷೇತ್ರದಲ್ಲಿ ಹೆಚ್ಚಿರುವ ಲಿಂಗಾಯತ ಮತಗಳ ವಿಭಜನೆ ತಡೆಯಲು ಅವರು ತಂತ್ರ ರೂಪಿಸಿದ್ದರು.

ಮಹದಾಯಿ ಹೋರಾಟಗಾರರು ಈ ಕ್ಷೇತ್ರದಲ್ಲಿ ‘ನೋಟಾ’ ಚಲಾವಣೆಗೆ ಕರೆ ಕೊಟ್ಟಿದ್ದರು. ಆದರೆ ಈ ಕ್ಷೇತ್ರದಲ್ಲಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಿಗಿಂತ ಕಡಿಮೆ ಅಂದರೆ ಕೇವಲ 1173 ನೋಟಾ ಮಾತ್ರ ಚಲಾವಣೆ ಆಗಿದೆ.

**

ಜಿಲ್ಲೆಯ 3 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಕ್ಕೆ ಸಂತೋಷ ಇದೆ. ಗದಗ ಕ್ಷೇತ್ರದಲ್ಲಿ ಅನಿಲ್‌ ಮೆಣಸಿನಕಾಯಿ ಸೋತಿರುವುದಕ್ಕೆ ಅಷ್ಟೇ ನೋವು ಇದೆ

ಸಿ.ಸಿ ಪಾಟೀಲ, ಬಿಜೆಪಿ ಅಭ್ಯರ್ಥಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry