ಠೇವಣಿ ಕಳೆದುಕೊಂಡವರು 34 ಮಂದಿ

7
ಪಕ್ಷೇತರ ಅಭ್ಯರ್ಥಿಗಳು ಪಡೆದ ಮತಗಳು ನೋಟಾಕ್ಕಿಂತಲೂ ಕಡಿಮೆ

ಠೇವಣಿ ಕಳೆದುಕೊಂಡವರು 34 ಮಂದಿ

Published:
Updated:

ಗದಗ: ಪ್ರಸಕ್ತ ಚುನಾವಣೆಗೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ 42 ಅಭ್ಯರ್ಥಿಗಳಲ್ಲಿ 34 ಮಂದಿ ಠೇವಣಿ ಕಳೆದುಕೊಂಡಿದ್ದಾರೆ.

ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯ 8 ಅಭ್ಯರ್ಥಿಗಳು ಮಾತ್ರ ಠೇವಣಿ ಉಳಿಸಿಕೊಂಡಿದ್ದಾರೆ. ರೋಣ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಹೊರತುಪಡಿಸಿ, ಉಳಿದ ಎಲ್ಲ ಕ್ಷೇತ್ರಗಳಲ್ಲಿ ಪಕ್ಷೇತರ, ಎಂಇಪಿ, ರಾಣಿ ಚನ್ನಮ್ಮ, ಶಿವಸೇನೆ, ಸಿಪಿಎಂ, ಮಹಿಳಾ ಸರ್ವೋದಯ ಕಾಂಗ್ರೆಸ್‌, ಬಿಎಸ್‌ಪಿ ಅಭ್ಯರ್ಥಿಗಳು ನೋಟಾಕ್ಕಿಂತಲೂ ಕಡಿಮೆ ಮತಗಳನ್ನು ಪಡೆದಿದ್ದಾರೆ.

ಗದಗ ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದರು. ಇಲ್ಲಿ ಚಲಾವಣೆಯಾದ ಒಟ್ಟು ಮತ 1,60,490. ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕೆ ಪಾಟೀಲ ಅವರು 77,699 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಅನಿಲ್‌ ಮೆಣಸಿನಕಾಯಿ 75,831 ಮತಗಳನ್ನು ಪಡೆದರು. ಇನ್ನುಳಿದ 8 ಅಭ್ಯರ್ಥಿಗಳು ಪಡೆದ ಒಟ್ಟು ಮತಗಳನ್ನು ಲೆಕ್ಕಹಾಕಿದರೂ 5 ಸಾವಿರ ದಾಟುವುದಿಲ್ಲ. ಇಲ್ಲಿ 2007 ‘ನೋಟಾ’ ಚಲಾವಣೆಯಾಗಿದ್ದು, ಠೇವಣಿ ಕಳೆದುಕೊಂಡ ಅಭ್ಯರ್ಥಿಗಳಲ್ಲಿ ಎಲ್ಲರೂ ಇದಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ.

ರೋಣ ಮತಕ್ಷೇತ್ರದಲ್ಲಿ ಈ ಬಾರಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದರು. ಇವರಲ್ಲಿ 11 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ರವೀಂದ್ರನಾಥ ದೊಡ್ಡಮೇಟಿ ಕೂಡ 3421 ಮತಗಳನ್ನು ಪಡೆದಿದ್ದು ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಲ್ಲಿ 2671 ನೋಟಾ ಚಲಾವಣೆ ಆಗಿದೆ. ಇಲ್ಲಿ ಜನತಾ ದಳ ಸಂಯುಕ್ತ ಮತ್ತು ರಾಣಿ ಚನ್ನಮ್ಮ ಪಕ್ಷದ ಅಭ್ಯರ್ಥಿಗಳು ಪಡೆದ ಮತಗಳ ಸಂಖ್ಯೆ ಕ್ರಮವಾಗಿ 83 ಮತ್ತು 81. ಜಿಲ್ಲೆಯಲ್ಲಿ ಅಭ್ಯರ್ಥಿಗಳಿಬ್ಬರು ಗಳಿಸಿರುವ ಕನಿಷ್ಠ ಮತಗಳು ಇವು.

ಶಿರಹಟ್ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ 11 ಅಭ್ಯರ್ಥಿಗಳಲ್ಲಿ 9 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಇಲ್ಲಿ 1209 ‘ನೋಟಾ’ ಚಲಾವಣೆ ಆಗಿದ್ದು, ಠೇವಣಿ ಕಳೆದುಕೊಂಡ ಎಲ್ಲ ಅಭ್ಯರ್ಥಿಗಳು ನೋಟಾಕ್ಕಿಂತಲೂ ಕಡಿಮೆ ಮತಗಳನ್ನು ಪಡೆದಿದ್ದಾರೆ.

ನರಗುಂದ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಗಿರೀಶ ಪಾಟೀಲ 2456 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ಸ್ಪರ್ಧೆಯಲ್ಲಿದ್ದ 8 ಅಭ್ಯರ್ಥಿಗಳಲ್ಲಿ 6 ಮಂದಿ ಠೇವಣಿ ಕಳೆದುಕೊಂಡಿದ್ದಾರೆ.

ಪರಿಣಾಮ ಬೀರದ ನೋಟಾ ಕರೆ

ಮಹದಾಯಿ ಸಮಸ್ಯೆ ಇತ್ಯರ್ಥ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ, ಈ ಬಾರಿ ಚುನಾವಣೆಯಲ್ಲಿ ನೋಟಾ ಚಲಾಯಿಸುವಂತೆ ರೈತರಿಗೆ ಮಹದಾಯಿ ಹೋರಾಟಗಾರರು ಕರೆ ಕೊಟ್ಟಿದ್ದರು. ಆದರೆ, ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ನೋಟಾ ಚಲಾವಣೆಯಾಗಿರುವುದು ನರಗುಂದ ಮತಕ್ಷೇತ್ರದಲ್ಲೇ. ಇಲ್ಲಿ ಕೇವಲ 1173 ನೋಟಾ ಚಲಾವಣೆ ಆಗಿದೆ. ಜಿಲ್ಲೆಯ ನಾಲ್ಕೂ ಕ್ಷೇತ್ರಗಳು ಸೇರಿ ಒಟ್ಟು 7060 ನೋಟಾ ಚಲಾವಣೆ ಆಗಿವೆ.

39,353 ಮತಗಳ ಅಂತರ

ಎಚ್ಕೆ ಈ ಬಾರಿ ಒಟ್ಟು 77,699 ಮತಗಳನ್ನು ಪಡೆದಿದ್ದಾರೆ. 2013ರಲ್ಲಿ ಅವರು 70475 ಮತಗಳನ್ನು ಪಡೆದಿದ್ದರು. ಅದಕ್ಕೆ ಹೋಲಿಸಿದರೆ ಈ ಬಾರಿ ಕೇವಲ 7224 ಮತಗಳನ್ನು ಮಾತ್ರ ಅವರು ಹೆಚ್ಚಾಗಿ ಪಡೆದಿದ್ದಾರೆ. 2013ರಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 36478 ಮತಗಳನ್ನು ಪಡೆದಿದ್ದ ಅನಿಲ್‌ ಮೆಣಸಿನಕಾಯಿ, ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದು, 75,831 ಮತಗಳನ್ನು ಪಡೆದಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಅವರು ಗಳಿಸಿದ ಮತಗಳ ಸಂಖ್ಯೆ 39,353 ಹಚ್ಚಿದೆ ಎನ್ನುವುದು ಗಮನೀಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry