ಶನಿವಾರ, ಫೆಬ್ರವರಿ 27, 2021
20 °C
ದುಬಾರೆಯ ಸಾಕಾನೆ ಶಿಬಿರಕ್ಕೆ ರವಾನೆ

ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ

ಮಡಿಕೇರಿ: ಸಿದ್ದಾಪುರ ಸಮೀಪದ ಚೆಟ್ಟಳ್ಳಿ ಹಾಗೂ ಮೋದೂರು ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಸೆರೆ ಕಾರ್ಯಾಚರಣೆಯು ಯಶಸ್ವಿಯಾಗಿದೆ. ಪುಂಡಾನೆ ಸೆರೆಗೆ ಎರಡು ದಿನಗಳ ಕಾಲ ಸಾಕಾನೆಗಳೊಂದಿಗೆ ಕಾಡು ಅಲೆದಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಕೊನೆಗೂ ಕಾಡಾನೆ ಸಿಕ್ಕಿದೆ. ಅದನ್ನು ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರಕ್ಕೆ ರವಾನೆ ಮಾಡಲಾಗಿದೆ.

ಭಾನುವಾರ ಹಾಗೂ ಸೋಮವಾರ ಕಾರ್ಯಾಚರಣೆ ಸಿಬ್ಬಂದಿಯ ಕಣ್ಣಿಗೆ ಕಾಡಾನೆ ಬಿದ್ದಿರಲಿಲ್ಲ. ಮಂಗಳವಾರ ಮಧ್ಯಾಹ್ನದ ವೇಳೆಗೆ ಪುಂಡಾನೆಯ ಸ್ಥಳ ಪತ್ತೆಹಚ್ಚಲಾಯಿತು. ಹುಣಸೂರು ವಿಭಾಗದ ವೈದ್ಯಾಧಿಕಾರಿ ಡಾ.ಮುಜೀಬ್‌ ಮಾರ್ಗದರ್ಶನದಂತೆ ಶಾರ್ಪ್‌ಶೂಟರ್ ವೆಂಕಟೇಶ್‌ ಸಾಕಾನೆಯ ಮೇಲಿಂದ ಅರವಳಿಕೆ ಗುಂಡು ಹಾರಿಸಿದರು. ಪುಂಡಾನೆಯು ಒಂದು ಕಿಲೋ ಮೀಟರ್‌ ಹೋಗಿ ನಿಶ್ಶಕ್ತಗೊಂಡಿತು.

ದುಬಾರೆಯ ಸಾಕಾನೆಗಳಾದ ಧನಂಜಯ, ವಿಕ್ರಂ, ಹರ್ಷ, ಮತ್ತಿಗೋಡಿನ ಕೃಷ್ಣ ಹಾಗೂ ಅಭಿಮನ್ಯು ಸುತ್ತುವರಿದು ನಿಂತವು. ಮಾವುತರು, ಕಾವಾಡಿಗಳು, ಅರಣ್ಯ ಸಿಬ್ಬಂದಿ ಪುಂಡಾನೆಯ ಕೈಕಾಲುಗಳಿಗೆ ಹಗ್ಗ ಕಟ್ಟಿ, ಸಾಕಾನೆಗಳ ಸಹಾಯದಿಂದ ಲಾರಿಗೆ ಹತ್ತಿಸಲಾಯಿತು.

ಸ್ವಲ್ಪ ಸಮಯದ ಬಳಿಕ ಲಾರಿಯಲ್ಲಿ ಪುಂಡಾಟಿಕೆ ತೋರಿಸಿತು. ರಾತ್ರಿ 9 ಗಂಟೆಯ ವೇಳೆಗೆ ದುಬಾರೆ ಶಿಬಿರಕ್ಕೆ ಕಾಡಾನೆ ಕರೆ ತರಲಾಯಿತು. ಸುಂಟಿಕೊಪ್ಪ ಸಮೀಪ ಮೋದೂರಿನಲ್ಲಿ ಕಾಫಿ ತೋಟದ ಮೇಸ್ತ್ರಿಯ ಮೇಲೆ ಆನೆ ದಾಳಿ ನಡೆಸಿತ್ತು. ಅವರು ಅಪಾಯದಿಂದ ಪಾರಾಗಿದ್ದರು. ಬಳಿಕ ಕಾಡಾನೆ ಸೆರೆಗೆ ಆಗ್ರಹಗಳು ಕೇಳಿಬಂದಿದ್ದವು.

ಕಾರ್ಯಾಚರಣೆ ವೇಳೆ ಎಎಫ್‌ಒ ಮಂಜುನಾಥ್, ವನ್ಯಜೀವಿ ಸಂರಕ್ಷಣಾ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ಜಯ, ಸೋಮವಾರಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್‌. ಚಿಣ್ಣಪ್ಪ, ವಲಯ ಅರಣ್ಯಾಧಿಕಾರಿ ಅರುಣ್, ಉಪ ವಲಯ ಅರಣ್ಯಾಧಿಕಾರಿಗಳಾದ ದೇವಿಪ್ರಸಾದ್ ಬಾನಂಡ, ಮಂಜುನಾಥ್ ಗೂಳಿ, ಅನಿಲ್ ಡಿಸೋಜ, ವಿಲಾಸ್, ಆರ್‌ಆರ್‌ಟಿ ತಂಡ, ಅರಣ್ಯ ಸಿಬ್ಬಂದಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.