ಸಹಜ ಬದುಕಿಗೆ ಕಂಟಕವಾದ ಬಿಸಿಲ ಬೇಗೆ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಳೆಯಾಗಿದ್ದರೂ, ಬಿಸಿಲಿನ ತಾಪ ಮಾತ್ರ ಕಡಿಮೆಯಾಗಿಲ್ಲ. ಬಿಸಿಲಿನ ತಾಪದಿಂದ ಬೇಸತ್ತ ಯುವಕರು ಕೆರೆಗಳ ಕಡೆ ಮುಖ ಮಾಡುತ್ತಿದ್ದಾರೆ.
ಬಯಲಿನ ಮೇಲೆ ಮೇಯಲು ಹೋಗುವ ಜಾನುವಾರು, ಮಧ್ಯಾಹ್ನದ ಹೊತ್ತಿಗೆ ಮೇಯುವುದನ್ನು ಬಿಟ್ಟು ನೆರಳಿಗೆ ಸರಿಯುತ್ತವೆ. ಕುರಿ, ಮೇಕೆ, ಎಮ್ಮೆ ಹಾಗೂ ಹಸುಗಳು ನೀರು ಕುಡಿಯಲು ಹಾತೊರೆಯುತ್ತವೆ. ಎಮ್ಮೆಗಳು ನೀರಿಗಿಳಿದರೆ ಹೊರಗೆ ತರಲು ಶತಪ್ರಯತ್ನ ಮಾಡಬೇಕಾಗುತ್ತದೆ. ತಮಗೆ ಇಷ್ಟ ಬಂದಷ್ಟು ಹೊತ್ತು ನೀರಿನಲ್ಲಿಯೇ ಇರುತ್ತವೆ.
ಕೃಷಿ ಕಾರ್ಮಿಕರು ಬಿಸಿಲನ್ನು ಬೆನ್ನ ಮೇಲೆ ಹೊತ್ತು ಕೆಲಸ ಮಾಡುತ್ತಾರೆ. ಮಧ್ಯಾಹ್ನ ಸ್ವಲ್ಪ ಹೊತ್ತು ಮರದ ನೆರಳಲ್ಲಿ ಕುಳಿತು ಮತ್ತೆ ಕೆಲಸ ಪ್ರಾರಂಭಿಸುತ್ತಾರೆ. ದನಗಾಹಿಗಳು ನೆತ್ತಿ ಸುಡುತ್ತಿದ್ದರೂ, ದನಗಳನ್ನು ಹಿಂಬಾಲಿಸಿ ನಡೆಯಬೇಕಾದ ಅನಿವಾರ್ಯ ಪರಿಸ್ಥಿತಿಗೆ ಒಳಗಾಗಿದ್ದಾರೆ.
ವಿಧಾನ ಸಭಾ ಚುನಾವಣೆ ಮುಗಿದ ಮೇಲೆ ವಿದ್ಯುತ್ ಕಣ್ಣಾಮುಚ್ಚಾಲೆ ಹೆಚ್ಚಿದೆ. ಹಾಗಾಗಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಫ್ಯಾನ್ ಹಾಗೂ ಫ್ರಿಜ್ ಸಮರ್ಪಕವಾಗಿ ನಡೆಯುವುದಿಲ್ಲ. ಇದರಿಂದ ತಣ್ಣನೆಯ ಗಾಳಿಯಾಗಲಿ, ನೀರಾಗಲಿ ಸಿಗುತ್ತಿಲ್ಲ.
ಬಿಸಿಲಿನ ತಾಪ ಮಾವಿನ ಫಸಲಿಗೆ ಶಾಪವಾಗಿ ಪರಿಣಮಿಸಿದೆ. ಅಧಿಕ ತಾಪಮಾನದ ಪರಿಣಾಮವಾಗಿ ಬಹಳಷ್ಟು ಮಾವಿನ ಮಿಡಿ ಉದುರಿ ನೆಲಕಚ್ಚಿದೆ. ಇದರಿಂದ ಮಾವು ಬೆಳೆಗಾರರಿಗೆ ನಷ್ಟ ಉಂಟಾಗಿದೆ. ಅಧಿಕ ತಾಪದ ಪರಿಣಾಮವಾಗಿ ಜನ ಹಾಗೂ ಜಾನುವಾರು ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುತ್ತಿದೆ.
ತಾಲ್ಲೂಕಿನಲ್ಲಿ ಮಳೆ ಸುರಿಯುತ್ತಿದ್ದರೂ, ಮಳೆ ಆಶ್ರಯದ ಕೃಷಿ ಚಟುವಟಿಕೆ ಆರಂಭಗೊಂಡಿಲ್ಲ. ಕಾರಣ ಇಲ್ಲಿ ಮಾವಿನ ಮರಗಳ ನಡುವೆಯೇ ಕೃಷಿ ನಡೆಯುತ್ತದೆ. ಮಾವಿನ ಕಾಯಿ ಕಿತ್ತಬಳಿಕವಷ್ಟೆ ಉಳುಮೆ ಮಾಡಲಾಗುತ್ತದೆ. ಗೊಬ್ಬರ ಸಾಗಣಿಕೆಯೂ ಮಾವಿನ ಸುಗ್ಗಿ ಮುಗಿದ ಮೇಲೆ ನಡೆಯುತ್ತದೆ. ಕಾರಣ ಮಾವಿನ ತೋಟದಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡಿದಲ್ಲಿ ಕಾಯಿ ಹಾನಿಗೊಳ್ಳುತ್ತದೆ. ಹೀಗೆ ವಾತಾವರಣ ವೈಪರೀತ್ಯದಿಂದ ಉಂಟಾಗಿರುವ ಸಮಸ್ಯೆ ಕೃಷಿಕರ ಪಾಲಿಗೆ ಪೀಡೆಯಾಗಿ ಪರಿಣಮಿಸಿದೆ. ಬಿಸಿಲ ಬೇಗೆ ನಾಗರಿಕರ ಸಹಜ ಬದುಕಿಗೆ ಕಂಟಕವಾಗಿ ಪರಿಣಮಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.