ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಸೊಗಡಿನ ‘ಕಮಲಿ’

Last Updated 17 ಮೇ 2018, 19:30 IST
ಅಕ್ಷರ ಗಾತ್ರ

ಗ್ರಾಮೀಣ ಬದುಕು, ಹಳ್ಳಿ ಸೊಗಡನ್ನು ಬಿಂಬಿಸುತ್ತಲೇ ಹಳ್ಳಿಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಇಂದಿಗೂ ಇರುವ ಅಡೆತಡೆಗಳನ್ನು ಕಟ್ಟಿಕೊಡುವ ಧಾರಾವಾಹಿ ‘ಕಮಲಿ’.

ಓದುವ ಹೆಬ್ಬಯಕೆ ಹೊತ್ತ ಹೆಣ್ಣುಮಗಳೊಬ್ಬಳು ಶಿಕ್ಷಣ ಪಡೆಯುವ ಸಲುವಾಗಿ ಹಳ್ಳಿಯಿಂದ ನಗರಕ್ಕೆ ಬರುವ ಪ್ರಯತ್ನವನ್ನು ಈ ಧಾರಾವಾಹಿ ಬಿಂಬಿಸುತ್ತದೆ. ಎಸ್‌ಎಸ್‌ಎಲ್‌ಸಿ ಉತ್ತೀರ್ಣಳಾದ ಕಮಲಿಗೆ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಹೋಗುವ ಬಯಕೆ. ಆದರೆ, ಮಗಳ ಮೇಲೆ ಅಪಾರ ಪ್ರೀತಿ, ನಗರ ಬದುಕಿನ ಕುರಿತು ತಿರಸ್ಕಾರ ಇರುವ ಕಮಲಿಯ ತಾಯಿ, ಮಗಳು ಬೆಂಗಳೂರಿಗೆ ಹೋಗುವುದಕ್ಕೆ ಸಮ್ಮತಿ ಸೂಚಿಸುವುದಿಲ್ಲ.

ಅಡೆತಡೆಗಳ ನಡುವೆಯೂ ಕಮಲಿ ಹೇಗೆ ಶಿಕ್ಷಣ ಮುಂದುವರೆಸುತ್ತಾಳೆ ಎಂಬ ಕಥಾಹಂದರ ಧಾರಾವಾಹಿಯದು. ಮೇ 28ರಿಂದ ‘ಜೀ ಕನ್ನಡ’ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ.

ಅರವಿಂದ್‌ ಕೌಶಿಕ್‌ ಈ ಧಾರಾವಾಹಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‘ನನ್‌ ಏರಿಯಾದಲ್ಲಿ ಒಂದು ದಿನ’, ‘ಹುಲಿರಾಯ’ ಚಲನಚಿತ್ರಗಳನ್ನು ನಿರ್ದೇಶಿಸಿದ ಅನುಭವ ಕೌಶಿಕ್‌ ಅವರಿಗಿದೆ.

ರೇಡಿಯೊ ಜಾಕಿ ಆಗಬೇಕೆಂಬ ಕನಸು ಹೊತ್ತು ಕಲಾಬದುಕಿಗೆ ಬಂದ ನಿರಂಜನ್‌ ಬಿ.ಎಸ್‌. ‘ಕಮಲಿ’ ಧಾರಾವಾಹಿಯಲ್ಲಿ ‘ರಿಷಿ’ ಎಂಬ ಶ್ರೀಮಂತ ಯುವಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಬೆಂಗಳೂರಿನವರಾದ ನಿರಂಜನ್‌, ರೇಡಿಯೊ ಜಾಕಿ ತರಬೇತಿಯನ್ನೂ ಪಡೆದಿದ್ದಾರೆ. ‘ಶ್ರೀರಾಮಚಂದ್ರ’ ಎನ್ನುವ ಕಿರುಚಿತ್ರದೊಂದಿಗೆ ಕಲಾ ಬದುಕು ಆರಂಭಿಸಿದ ನಿರಂಜನ್‌ ‘ವಾಸ್ಕೋಡಗಾಮ’, ‘ಮಾಸ್ಟರ್‌ ಪೀಸ್‌’ ಚಿತ್ರಗಳಲ್ಲಿ ಬಣ್ಣಹಚ್ಚಿದ್ದರು.

ಅದಾದ ನಂತರ ಕಿರುತೆರೆಯ ಎಲ್ಲ ಅವಕಾಶಗಳನ್ನು ನಿರಾಕರಿಸಿದ್ದ ನಿರಂಜನ್‌ ಬೆಳ್ಳಿತೆರೆಯ ಅವಕಾಶಕ್ಕೆ ಕಾತರಿಸಿದ್ದರು. ಹಿರಿತೆರೆಯಲ್ಲಿ ಉತ್ತಮ ಅವಕಾಶಗಳು ದೊರೆಯದ ಕಾರಣ ಕಿರುತೆರೆಯತ್ತ ಮುಖಮಾಡಿದರು. ‘ಗಾಂಧಾರಿ’ ಧಾರಾವಾಹಿಯಲ್ಲಿ ನಾಯಕ ನಟನ ತಮ್ಮನಾಗಿ ವೀಕ್ಷಕರ ಮನಗೆದ್ದಿದ್ದರು.

ಈಗ ‘ಕಮಲಿ’ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಯತ್ತ ಮುಖಮಾಡಿರುವ ನಿರಂಜನ್‌, ಇದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ರಿಷಿ’ ಪ್ರಬುದ್ಧ ಹುಡುಗ. ತನ್ನ ಶ್ರೀಮಂತಿಕೆಯನ್ನು ಎಂದೂ ತೋರಿಸಿಕೊಳ್ಳದ ಯುವಕ. ಆಪ್ತವಲಯದ ಹುಡುಗಿಯೊಬ್ಬಳು ರಿಷಿಯನ್ನು ಪ್ರೀತಿಸಿ ಮದುವೆಯಾಗಬಯಸುತ್ತಾಳೆ.

ಆದರೆ ಮನೆಯಲ್ಲಿ ಅವರ ಮನೆತನದ ಶ್ರೀಮಂತಿಕೆಗೆ ಸರಿಸಮವಾಗಬಲ್ಲ ಕುಟುಂಬದ ಹುಡುಗಿಯನ್ನೇ ಮದುವೆಯಾಗುವಂತೆ ಒತ್ತಾಯಿಸುತ್ತಾರೆ. ರಿಷಿಯ ಅಣ್ಣನೊಬ್ಬ ಹಳ್ಳಿ ಹುಡುಗಿಯೊಬ್ಬಳನ್ನು ಮದುವೆಯಾಗಿರುತ್ತಾನೆ. ಈ ಉದಾಹರಣೆಯನ್ನು ಕೊಟ್ಟು ರಿಷಿ ತಾಯಿ, ಬಡ ಮತ್ತು ಹಳ್ಳಿಯ ಹುಡುಗಿಯನ್ನು ಮದುವೆಯಾಗದಂತೆ ತಿಳಿಹೇಳುತ್ತಿರುತ್ತಾಳೆ.

ಅಚಾನಕ್ಕಾಗಿ ಹಳ್ಳಿಗೆ ಹೋಗುವ ರಿಷಿ, ಕಮಲಿಯನ್ನು ಭೇಟಿಯಾಗುತ್ತಾನೆ. ಆಕೆಯ ಪ್ರತಿಭೆಯಿಂದ ಪ್ರಭಾವಿತನಾದ ರಿಷಿಗೆ, ಕಮಲಿ ಮೇಲೆ ಗೌರವ ಹೆಚ್ಚುತ್ತದೆ. ಉನ್ನತ ವ್ಯಾಸಂಗಕ್ಕಾಗಿ ಕಮಲಿಯನ್ನು ಬೆಂಗಳೂರಿಗೆ ಕಳುಹಿಸುವಂತೆ ಕಮಲಿ ತಾಯಿಯ ಮನವೊಲಿಸುವಲ್ಲಿ ರಿಷಿ ಯಶಸ್ವಿಯಾಗುತ್ತಾನೆ.

‘ಸರಳ ಸ್ವಭಾವದ, ಜವಾಬ್ದಾರಿಯುತ ಯುವಕನ ಪಾತ್ರದಲ್ಲಿ ರಿಷಿ ವೀಕ್ಷಕರ ಮನ ಗೆಲ್ಲುತ್ತಾನೆ. ಎಲ್ಲವನ್ನೂ ಮಂದಹಾಸದಿಂದಲೇ ಗೆಲ್ಲುವ ರಿಷಿ ಎಲ್ಲರಿಗೂ ಇಷ್ಟವಾಗುತ್ತಾನೆ’ ಎನ್ನುವುದು ನಿರಂಜನ್ ಅವರ ನಿರೀಕ್ಷೆ.

ಪುನರ್ ವಿವಾಹದ ‘ಸ್ವಾತಿ’ ಪಾತ್ರದ ಮುಖೇನ ಕನ್ನಡಿಗರಿಗೆ ಪರಿಚಿತರಾದ ನಟಿ ಅಮೂಲ್ಯ, ‘ಕಮಲಿ’ ಧಾರವಾಹಿಯ ನಾಯಕಿ. ನಟಿ ಅಮೂಲ್ಯ ‘ಕಮಲಿ’ಯಲ್ಲಿ ಅಪ್ಪಟ ಹಳ್ಳಿ ಹುಡುಗಿ.

‘ಓದುವ ಅಪಾರ ಬಯಕೆ ಇರುವ ಚೂಟಿ ಹುಡುಗಿ ಕಮಲಿ. ಆಕೆಯ ಪಾತ್ರಕ್ಕೆ ನ್ಯಾಯ ನೀಡುವಂತೆ ನಟಿಸಿದ್ದೇನೆ. ಜನರಿಗೆ ನನ್ನ ಪಾತ್ರ ಆಪ್ತವಾಗುತ್ತದೆ’ ಎನ್ನುವ ವಿಶ್ವಾಸ ಅಮೂಲ್ಯ ಅವರದ್ದು.

ಮೈಸೂರಿನವರಾದ ಅಮೂಲ್ಯ ನಿಜ ಜೀವನದಲ್ಲೂ ಶಿಕ್ಷಣದ ಸಲುವಾಗಿಯೇ ಬೆಂಗಳೂರಿಗೆ ಬಂದವರು. ನಟನಾ ಕ್ಷೇತ್ರಕ್ಕೆ ಬರುವ ಯಾವ ನಿರೀಕ್ಷೆಗಳೂ ಇಲ್ಲದೆ ಕಿರುತೆರೆಗೆ ಪದಾರ್ಪಣೆ ಮಾಡಿದ್ದ ಅಮೂಲ್ಯ, ಈಗ ನಿಜಜೀವನಕ್ಕೆ ಹತ್ತಿರವಾದ ಪಾತ್ರ ದೊರೆತ ಸಂತಸದಲ್ಲಿದ್ದಾರೆ.

ಧಾರಾವಾಹಿಯಲ್ಲಿ ಗ್ರಾಮೀಣ ಮತ್ತು ನಗರದ ಬದುಕುಗಳು ತೆರೆದುಕೊಳ್ಳುತ್ತವೆ. ಕಬಡ್ಡಿ ಸೇರಿದಂತೆ ಇತರ ಗ್ರಾಮೀಣ ಕ್ರೀಡೆಗಳು ಮೇಳೈಸಲಿವೆ. ‘ಮಾರಾಪುರ’ ಎಂಬ ಕಾಲ್ಪನಿಕ ಹಳ್ಳಿಯಿಂದ ಕಥೆ ಆರಂಭವಾಗುತ್ತದೆ. ಸದ್ಯ ಕೊಡೈಕೆನಾಲ್‌ ಹಾಗೂ ಬೆಂಗಳೂರಿನಲ್ಲಿ  ಚಿತ್ರೀಕರಣ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT