ಶುಕ್ರವಾರ, ಫೆಬ್ರವರಿ 26, 2021
30 °C
ಕಿರುತೆರೆ ನಿರ್ದೇಶನಕ್ಕೆ ಮರಳಿದ ಟಿ.ಎನ್‌. ಸೀತಾರಾಮ್‌

ಬರಲಿದ್ದಾಳೆ ‘ಮಗಳು ಜಾನಕಿ’

ಕೆ.ಎಂ. ಸಂತೋಷ್‌ ಕುಮಾರ್ Updated:

ಅಕ್ಷರ ಗಾತ್ರ : | |

ಬರಲಿದ್ದಾಳೆ ‘ಮಗಳು ಜಾನಕಿ’

ಕಿರುತೆರೆಯ ವೀಕ್ಷಕರನ್ನು ಕದಲದಂತೆ ಟಿ.ವಿ. ಮುಂದೆ ಕಟ್ಟಿಹಾಕಬಲ್ಲ, ವೀಕ್ಷಕರನ್ನು ಚಿಂತನೆಗೂ ಹಚ್ಚುವಂತೆ ಮಾಡಬಲ್ಲ ‘ಮಾಂತ್ರಿಕ’ ಅಥವಾ ‘ಮೋಡಿಗಾರ’ ಎನ್ನಬಹುದಾದ ನಿರ್ದೇಶಕ ಟಿ.ಎನ್‌. ಸೀತಾರಾಮ್‌ ಒಂದು ಸಣ್ಣ ಬಿಡುವಿನ ನಂತರ ಕಿರುತೆರೆಗೆ ವಾಪಸಾಗುತ್ತಿದ್ದಾರೆ! ಅದು ‘ಮಗಳು ಜಾನಕಿ’ಧಾರಾವಾಹಿ ಮುಖೇನ!

ಅವರ ನಿರ್ದೇಶನದ ಬತ್ತಳಿಕೆಯಿಂದ ಮೂಡಿಬಂದ ‘ಮಾಯಾಮೃಗ’, ‘ಮನ್ವಂತರ’, ‘ಮುಕ್ತ’, ‘ಮುಕ್ತ ಮುಕ್ತ’, ‘ಮಹಾಪರ್ವ’ ಧಾರಾವಾಹಿಗಳು ಕಿರುತೆರೆ ವೀಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿರುವುದನ್ನು ಬಿಡಿಸಿ ಹೇಳಬೇಕಿಲ್ಲ.

‘ಮಗಳು ಜಾನಕಿ’ ಧಾರಾವಾಹಿ ‘ಕಲರ್ಸ್ ಸೂಪರ್’ ವಾಹಿನಿಯಲ್ಲಿ ಜೂನ್‌ನಿಂದ ಪ್ರಸಾರವಾಗಲಿದೆ. ಪ್ರಮುಖ ಪಾತ್ರದಲ್ಲಿ ಸೀತಾರಾಮ್ ಕಾಣಿಸಿಕೊಳ್ಳಲಿದ್ದಾರೆ. ಅದೂ ಅವರ ನೆಚ್ಚಿನ ವೃತ್ತಿ ಮತ್ತು ಪ್ರೇಕ್ಷಕರು ಅವರನ್ನು ಯಾವತ್ತಿಗೂ ಗುರುತಿಸುವ ಕಪ್ಪು ಕೋಟಿನ ವಕೀಲನ ಪಾತ್ರದಲ್ಲಿ ಎನ್ನುವುದು ವಿಶೇಷ.

ಕಿರುತೆರೆಯಿಂದ ಸ್ವಲ್ಪಕಾಲ ದೂರ ಇದ್ದು, ಚಿತ್ರರಂಗದಲ್ಲಿ ಮತ್ತೊಂದು ಕೈ ನೋಡಲೆಂದು ‘ಕಾಫಿ ತೋಟ’ ಎನ್ನುವ ಥ್ರಿಲ್ಲರ್‌ ಕ್ರೈಂ‌ ಸಿನಿಮಾ ಮಾಡಿ, ಅದರಲ್ಲಿ ನಿರೀಕ್ಷಿತ ಯಶಸ್ಸು ಸಿಗದೇ ಹೋದರೂ ಆ ಸಿನಿಮಾ ಮೂಲಕ ಒಂದು ವರ್ಗದ‌‌ ಪ್ರೇಕ್ಷಕರನ್ನು ತಲುಪಿದ ತೃಪ್ತಿ ಅವರಲ್ಲಿದೆ.

‘ಮಗಳು ಜಾನಕಿ’ ಕಥೆಯ ಗುಟ್ಟು ಬಿಟ್ಟುಕೊಡದ ಅವರು, ‘ಇದು ಯಾರದೇ ಮಗಳಾಗಿರಬಹುದಾದ‌ ಜಾನಕಿಯ ಕಥೆ’ ಎನ್ನುತ್ತಲೇ ಇದಕ್ಕಾಗಿ ಮಾಡಿಕೊಂಡಿರುವ ಟೀಮ್ ವರ್ಕ್‌ ಹಾಗೂ ಈ ಧಾರಾವಾಹಿ ಕಿರುತೆರೆಯ ವೀಕ್ಷಕರನ್ನು‌ ಹೇಗೆ ಆವರಿಸಿಕೊಳ್ಳಬಹುದೆಂಬ ಕೆಲವು ಸುಳಿವುಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಅವರೊಂದಿಗೆ ‘ಚಂದನವನ’ನಡೆಸಿದ ಸಂದರ್ಶನ ಇಲ್ಲಿದೆ.

ಕಿರುತೆರೆ ವೀಕ್ಷಕರು ನಿಮ್ಮನ್ನು ಬಹಳ ಸಮಯದಿಂದ ಮಿಸ್‌ ಮಾಡಿಕೊಂಡಿದ್ದರು. ಪುನಃ‌ ವಾಪಸಾಗುತ್ತಿದ್ದೀರಿ, ಈ ಬಗ್ಗೆ ನಿಮ್ಮ ಅನಿಸಿಕೆ?

‌ನಾನು ಚಾನೆಲ್‌ ಬಿಟ್ಟು ಐದು ವರ್ಷ ಆಗಿತ್ತು. ನಾವು ನೋಡುವ ದೃಷ್ಟಿಕೋನ, ಅನುಭವವನ್ನು ಸ್ವೀಕರಿಸುವ ರೀತಿ... ಇವೆಲ್ಲವೂ ಐದು ವರ್ಷಗಳಿಗೊಮ್ಮೆ ಬದಲಾಗುತ್ತಿರುತ್ತದೆ. ಇಂದಿನ ಕುಟುಂಬದ ಆಕಾಂಕ್ಷೆಗಳು ಬದಲಾಗಿವೆ, ಹಿಂದೆ ಅವು ಬೇರೆ ರೀತಿ ಇದ್ದವು.

ಅವು ಕಾಲ ಕಾಲಕ್ಕೆ ಬದಲಾಗುತ್ತಿರುತ್ತವೆ. ಅವು ಐದು ವರ್ಷಗಳಿಗೊಮ್ಮೆ ನಿರ್ದಿಷ್ಟ ತಿರುವು ಪಡೆದುಕೊಳ್ಳುತ್ತವೆ. ಅಷ್ಟೇ ಅಲ್ಲ, ಬದುಕಿನ ರೀತಿಗಳು, ಕಷ್ಟಗಳು ಕೂಡ ಹಾಗೆಯೇ ಬದಲಾಗುತ್ತಿರುತ್ತವೆ. ಇವೆಲ್ಲವನ್ನೂ ವೀಕ್ಷಕರ ಮುಂದಿಡಲು ಚಾನೆಲ್‌ನ ಸೃಜನಶೀಲ ವ್ಯಕ್ತಿಗಳ ತಂಡದ ಎಫರ್ಟ್‌ ಜತೆಗೆ ಪುನಃ ಬರುತ್ತಿದ್ದೇನೆ. ಇದು ಒಂದು ರೀತಿ ಜಾಯಿಂಟ್ ವೆಂಚರ್‌.

ಸಿನಿಮಾ ರಂಗದಲ್ಲಿ ನಿರೀಕ್ಷಿತ ಯಶಸ್ಸು ಸಿಗದೇ, ಕಿರುತೆರೆಯಲ್ಲಿ ತಮಗಿದ್ದ‌ ಭದ್ರ ಸ್ಥಾನಕ್ಕಾಗಿ ಧಾರಾವಾಹಿಗೆ ವಾಪಸಾಗುತ್ತಿದ್ದೀರಾ?

ಕಿರುತೆರೆಯಲ್ಲಿ ನನ್ನ ಸ್ಥಾನ ಭದ್ರವಾಗಿತ್ತೆಂದು ನಾನು ಹೇಳಲಾರೆ, ಆದರೂ ಭದ್ರವಾಗಿತ್ತೆನ್ನಬಹುದೇನೊ! ವೀಕ್ಷಕರು ನನಗಾಗಿ ಒಂದು ಕುರ್ಚಿ ಇಟ್ಟಿದ್ದರು. ನಾನು ಅದರಲ್ಲಿ ಬಂದು ಕುಳಿತುಕೊಂಡೆ. ನಾನು ಮಹಾಪರ್ವ ಮುಗಿಸಿ ನಾಲ್ಕು ವರ್ಷ ಆಯಿತು. ವೀಕ್ಷಕರು ಮಾತ್ರ ಇವತ್ತಿಗೂ ‘ನಿಮ್ಮ ಹೊಸ ಧಾರಾವಾಹಿ ಯಾವಾಗ ಬರುತ್ತದೆ’ ಎಂದು ಕೇಳುತ್ತಲೇ ಇದ್ದಾರೆ.

‘ಮಗಳು ಜಾನಕಿ’ ಬಗ್ಗೆ ಸ್ವಲ್ಪ ಹೇಳುತ್ತೀರಾ?

ನಾನು ಕಥೆ ಹೇಳಿದರೆ ನೀವು (ಪ್ರೇಕ್ಷಕರು) ಸಿರಿಯಲ್‌ ಯಾಕೆ ನೋಡಬೇಕು? ಅದನ್ನು ಟಿ.ವಿಯಲ್ಲೇ ನೋಡಿ.

ಈ ಹೊಸ ಧಾರಾವಾಹಿಯ ಕಥೆ ಹೊಳೆದಿದ್ದು ಯಾವಾಗ?

ಇದೇನು ಬಹಳ ದಿನಗಳ ಹಿಂದೆ ಹೊಳೆದದ್ದಲ್ಲ. ಐದಾರು ತಿಂಗಳ ಹಿಂದೆಯಷ್ಟೆ ಕಲರ್ಸ್‌ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್‌ ಗುಂಡ್ಕಲ್‌ ಮತ್ತು ಚಾನೆಲ್‌ನವರ ಜತೆ ಇಂತಹದೊಂದು ಕಥೆ ಮಾಡೋಣ ಎಂದು ಹೇಳಿದ್ದೆ.

ಅವರು ಒಪ್ಪಿಕೊಂಡರು. ಅವರಿಂದಲೂ ಈ ಕಥೆಗೆ ಸಾಕಷ್ಟು ಇನ್‌ಪುಟ್ಸ್‌ ಸಿಕ್ಕಿವೆ. ಇದೊಂದು ಹೊಸ ರೀತಿಯ ಪ್ರಯತ್ನ. ಕಥೆ, ಚಿತ್ರಕಥೆ ಮಾಡುವುದರಲ್ಲಿ ನನ್ನ ಆಲೋಚನೆಗೆ ತಕ್ಕಂತೆ ಪರಮೇಶ್ವರ್ ಗುಂಡ್ಕಲ್ ಮತ್ತು ಅವರ ತಂಡ ನನ್ನ ಜತೆ ತೊಡಗಿಸಿಕೊಂಡಿದೆ.

ನಿಮ್ಮ ಪಾತ್ರದ ಬಗ್ಗೆ ಏನು ಹೇಳುತ್ತೀರಿ?

ನನ್ನನ್ನು ಇದರಲ್ಲಿ ವಕೀಲನಾಗಿ ನೋಡಬಹುದು. ವಕೀಲನಾಗಿ ಇವತ್ತಿನ ಸಾಧ್ಯತೆಗಳನ್ನು ಮತ್ತು ಸಮಾಜ ಹೇಗಿದೆ ಎನ್ನುವುದನ್ನು ತಿಳಿಸಿಕೊಡಬಹುದು. ಒಂದು ಕಥೆಗೆ ನಿರ್ದಿಷ್ಟವಾದ ಚೌಕಟ್ಟು ಇರುತ್ತದೆ. ಆದರೆ, ಪಾತ್ರದ ಮುಖೇನ ಕಥೆಯ ಚೌಕಟ್ಟಿನಲ್ಲಿ ಇದ್ದುಕೊಂಡೇ ವಿಷಯವನ್ನು ಆಚೆಗೆ ತೆಗೆದುಕೊಂಡು ಹೋಗಬಹುದು. ಈ ಪಾತ್ರದ ಮೂಲಕ ಹೆಚ್ಚು ರೋಮಾಂಚಕ ಸಂಗತಿಗಳನ್ನು ಹೇಳಲು ಸಾಧ್ಯವಾಗಲಿದೆ.

ಯಾವ ರೀತಿಯ ವಕೀಲರ ಪಾತ್ರ? ಕ್ರಿಮಿನಲ್‌ ಅಥವಾ ಸಿವಿಲ್‌ ವ್ಯಾಜ್ಯಗಳ ಬಗ್ಗೆ‌ ವಾದಿಸುವ ವಕೀಲರೋ?

ಈ ಹಿಂದಿನ ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ವಕೀಲನಿಗಿಂತ ಸ್ವಲ್ಪ ವಯಸ್ಸಾದ, ಇನ್ನೂ ಹೆಚ್ಚು ಮಾಗಿದ ವಕೀಲನನ್ನು ನೀವು ಇದರಲ್ಲಿ ನೋಡಬಹುದು (ನಗು). ಸಾಮಾಜಿಕ ಸಮಸ್ಯೆಗಳ ಬಗ್ಗೆ ಕಾನೂನು ಹೋರಾಟ ನಡೆಸುವಂತಹ ವಕೀಲನ ಪಾತ್ರ ಅದು.

ಸಮಕಾಲೀನ ಸಮಸ್ಯೆಗಳಿಗೆ, ಪರಿಸ್ಥಿತಿಗೆ ಧಾರಾವಾಹಿ ಮುಖಾಮುಖಿ ಆಗಲಿದೆಯೇ?

ಆ ಸಾಧ್ಯತೆಗಳೂ ಇವೆ. ಸಮಕಾಲೀನ ಸಮಸ್ಯೆಗಳು ಎನ್ನಲಾರೆ, ಅವುಗಳನ್ನು ಸಮಕಾಲೀನ ಚಿಂತನೆಗಳು ಎನ್ನುತ್ತೇನೆ. ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು ನಮ್ಮ ಕೈಯಲ್ಲೂ ಆಗಲ್ಲ, ಬೇರೆ ಯಾರ ಕೈಯಲ್ಲೂ ಆಗಲ್ಲ. ನಾವು ಚಿಂತನೆಗಳನ್ನು ಹೇಳಬಹುದು ಅಷ್ಟೆ.

ಸಿನಿಮಾ, ಕಿರುತೆರೆ ಎರಡರಲ್ಲೂ ಕೈಯಾಡಿಸಿದ್ದೀರಿ. ಇದರಲ್ಲಿ ಯಾವ ಮಾಧ್ಯಮ ನಿಮಗೆ ಪರಿಣಾಮಕಾರಿ ಅನಿಸಿದೆ?

ವೀಕ್ಷಕರನ್ನು ಹೆಚ್ಚು ತಲುಪುವುದರಲ್ಲಿ ಸಹಜವಾಗಿಯೇ ಧಾರಾವಾಹಿ ಹೆಚ್ಚು ಪರಿಣಾಮಕಾರಿ ಮಾಧ್ಯಮ. ಇದು ನಿಸ್ಸಂಶಯ ಕೂಡ. ಇದನ್ನು ‘ಡೋರ್‌ ಡೆಲಿವರಿ’ ಎನ್ನಬಹುದೇನೊ.

ಧಾರಾವಾಹಿ ತಂಡದ ಬಗ್ಗೆ?

ಇದರಲ್ಲಿ ನನ್ನ ಹಳೆಯ ಟೀಮ್‌ ಇಲ್ಲ. ಹೆಚ್ಚೆಂದರೆ ಒಬ್ಬರೋ, ಇಬ್ಬರೋ ಇರಬಹುದು. ನನ್ನದು ಸೀಮಿತ ಪಾತ್ರಗಳನ್ನು ಇಟ್ಟುಕೊಂಡು ಮಾಡುವ ಧಾರಾವಾಹಿ ಅಲ್ಲ. ನೂರು ಎಪಿಸೋಡ್‌ ಆದ ಮೇಲೆ ಕಥೆ, ಪಾತ್ರ ಬೆಳೆಯುತ್ತಾ ಹೋಗುತ್ತದೆ.

ಪಯಣ ಸಾಗುತ್ತಾ ಹೋದಂತೆ ಹಳಬರನ್ನು ಬಿಟ್ಟು, ಹೊಸಬರನ್ನು ಸೇರಿಸಿಕೊಳ್ಳುತ್ತೇನೆ. ಇದೊಂದು ರೀತಿಯಲ್ಲಿ ರೈಲು ಪ್ರಯಾಣ ಮಾಡಿದಂತೆ. ನಮ್ಮದು ಟೀಮ್‌ ವರ್ಕ್‌. ಗುರುಪ್ರಸಾದ್‌ ಮುದ್ರಾಡಿ, ಚಂದನ್‌ ಶಂಕರ್‌, ನನ್ನ ಮಗಳು ಟಿ.ಎಸ್‌.ಅಶ್ವಿನಿ, ಪ್ರದೀಪ ಸೇರಿದಂತೆ ಹಲವು ಮಂದಿ ನನ್ನೊಂದಿಗೆ ಈ ತಂಡದಲ್ಲಿದ್ದಾರೆ.

ವೀಕ್ಷಕರ ನಾಡಿಮಿಡಿತ ನಿಮಗೆ ದಕ್ಕಿದೆಯೇ?

ಇದು ಬಹಳ ಟ್ರಿಕಿ ಕ್ವೆಶ್ಚನ್‌. ಯಾವ ಕಾಲಕ್ಕೂ, ಯಾರಿಗೂ ವೀಕ್ಷಕರ ನಾಡಿಮಿಡಿತ, ಅಭಿರುಚಿ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಅದನ್ನು ಊಹಿಸಬಹುದಷ್ಟೇ. ನಾನು ಮೊದಲೇ ಹೇಳಿದಂತೆ ಐದು ವರ್ಷಗಳಿಗೊಮ್ಮೆ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ಜನರ ಮಿಡಿತವೂ ಅಷ್ಟೇ. ಆದರೆ, ಧಾರಾವಾಹಿ ಮೂಲಕ ನಾವು ಏನನ್ನು ಹೇಳುತ್ತೇವೆ ಎನ್ನುವುದು ಮಾತ್ರ ಮುಖ್ಯವಾಗುತ್ತದೆ.

ಸಿನಿಮಾ, ಕಿರುತೆರೆ, ರಂಗಭೂಮಿ... ಯಾವುದರಲ್ಲಿ ನಿಮಗೆ ತೃಪ್ತಿ ಸಿಕ್ಕಿದೆ?

ತೃಪ್ತಿ ಸಿಗುವುದಿಲ್ಲ. ಆದರೆ, ಆರ್ಥಿಕವಾದ ನೆಮ್ಮದಿ ಕೊಟ್ಟಿದ್ದು ಹಿಂದಿನಿಂದಲೂ ಧಾರಾವಾಹಿಗಳೇ. ಇನ್ನು ನಾನು ಬರೆದ ನಾಟಕಗಳು, ಬ್ಲಾಗ್‌ ಬರಹಗಳು ನನಗೆ ಹೆಚ್ಚು ಪ್ರಿಯ. ಜನರಿಗೆ ತಲುಪದೇ ಇದ್ದ ವಿಚಾರಗಳನ್ನು ಹೆಚ್ಚು ಜನರಿಗೆ ಧಾರಾವಾಹಿಗಳ ಮೂಲಕ ತಲುಪಿಸಿದ್ದು ಹೆಚ್ಚು ಸಾರ್ಥಕ್ಯ ತಂದುಕೊಟ್ಟಿದೆ. ಆ ಸಾರ್ಥಕ್ಯವನ್ನೇ ತೃಪ್ತಿ ಎನ್ನಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.