ಶಾಸಕರ ಬಲ ಪ್ರದರ್ಶನಕ್ಕೆ ವೇದಿಕೆಯಾದ ಪ್ರತಿಭಟನೆ

7
ಗಾಂಧಿ ಪ್ರತಿಮೆ ಎದುರು ಒಗ್ಗಟ್ಟಿನ ಮಂತ್ರ ಜಪಿಸಿದ ಜೆಡಿಎಸ್‌– ಕಾಂಗ್ರೆಸ್‌ ನಾಯಕರು

ಶಾಸಕರ ಬಲ ಪ್ರದರ್ಶನಕ್ಕೆ ವೇದಿಕೆಯಾದ ಪ್ರತಿಭಟನೆ

Published:
Updated:
ಶಾಸಕರ ಬಲ ಪ್ರದರ್ಶನಕ್ಕೆ ವೇದಿಕೆಯಾದ ಪ್ರತಿಭಟನೆ

ಬೆಂಗಳೂರು: ಪ್ರಮಾಣವಚನ ಸ್ವೀಕರಿಸಿದ ಬಳಿಕ ಬಿ.ಎಸ್‌.ಯಡಿಯೂರಪ್ಪ ಅವರು ಒಂದೆಡೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಂಪುಟ ಸಭೆ ನಡೆಸುತ್ತಿದ್ದರೆ, ಶಕ್ತಿ ಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಗಾಂಧೀಜಿ ಪ್ರತಿಮೆಯ ಬಳಿ ಬಿಜೆಪಿ ಹಾಗೂ ರಾಜ್ಯಪಾಲ ವಜುಭಾಯಿ ವಾಲಾ ವಿರುದ್ಧ ಘೋಷಣೆಗಳು ಮೊಳಗುತ್ತಿದ್ದವು.

ರಾಜ್ಯಪಾಲರು ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟಕ್ಕೆ ಇರುವ ಬಹುಮತವನ್ನು ಕಡೆಗಣಿಸಿ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕಲ್ಪಿಸಿದ್ದನ್ನು ಖಂಡಿಸಿ ಈ ಎರಡೂ ಪಕ್ಷಗಳ ಮುಖಂಡರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಗಾಂಧೀಜಿ ಪ್ರತಿಮೆ ಎದುರು ಸಾಂಕೇತಿಕ ಧರಣಿ ನಡೆಸಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಶಾಸಕರ ಬಲ ಪ್ರದರ್ಶನಕ್ಕೆ ಈ ಪ್ರತಿಭಟನೆಯನ್ನೇ ವೇದಿಕೆಯನ್ನಾಗಿ ಬಳಸಿಕೊಂಡರು. ಜೆಡಿಎಸ್‌ನ ಎಲ್ಲ ಶಾಸಕರು ಹಾಗೂ ಕಾಂಗ್ರೆಸ್‌ನ ಆನಂದ ಸಿಂಗ್‌ ಹಾಗೂ ಪ್ರತಾಪ ಗೌಡ ಪಾಟೀಲ ಅವರನ್ನು ಬಿಟ್ಟು ಉಳಿದೆಲ್ಲ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಬಿಎಸ್‌ಪಿ ಶಾಸಕ ಎನ್‌.ಮಹೇಶ್‌, ಕೆಪಿಜೆಪಿ ಶಾಸಕ ಶಂಕರ್‌ ಹಾಗೂ ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಅವರೂ ಜತೆಗಿದ್ದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಮುಖಂಡರಾದ ಗುಲಾಂ ನಬಿ ಆಜಾದ್‌, ಅಶೋಕ್‌ ಗೆಹ್ಲೋಟ್‌,  ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ಪಕ್ಷದ ರಾಜ್ಯದ ಉಸ್ತುವಾರಿ ವೇಣುಗೋಪಾಲ್‌ ಅವರೂ ಈ ಧರಣಿಯಲ್ಲಿ ಪಾಲ್ಗೊಂಡು ಶಾಸಕರಿಗೆ ಸ್ಥೈರ್ಯ ತುಂಬಿದರು.

ಬೆಳಿಗ್ಗೆ 10 ಗಂಟೆ ಸುಮಾರಿಗೆ ಧರಣಿ ಆರಂಭವಾಯಿತು. ಆರಂಭದಲ್ಲಿ ಕಾಂಗ್ರೆಸ್‌ನ ಕೆಲವು ಮುಖಂಡರು, ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರು ಮಾತ್ರ ಸ್ಥಳದಲ್ಲಿದ್ದರು. ಸ್ವಲ್ಪ ಹೊತ್ತಿನಲ್ಲೇ ದೇವೇಗೌಡ ಅವರೂ ಸ್ಥಳಕ್ಕೆ ಬಂದರು. ಅವರನ್ನು ಸಿದ್ದರಾಮಯ್ಯ, ಖರ್ಗೆ ಹಾಗೂ ಗುಲಾಂ ನಬಿ ಆಜಾದ್‌ ಬರಮಾಡಿಕೊಂಡರು. ಈ ನಾಲ್ವರು ಸೇರಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಕೆಲಹೊತ್ತು ಸಮಾಲೋಚನೆ ನಡೆಸಿದರು.

ರೆಸಾರ್ಟ್‌ನಿಂದ ಬಸ್‌ನಲ್ಲಿ ಬಂದ ಕಾಂಗ್ರೆಸ್‌ ಶಾಸಕರು ಪ್ರತಿಭಟನೆಯನ್ನು ಸೇರಿಕೊಂಡರು. ಇದಾಗಿ ಕೆಲವೇ ನಿಮಿಷಗಳಲ್ಲಿ  ಜೆಡಿಎಸ್‌ ಶಾಸಕರೂ ಸ್ಥಳಕ್ಕಾಗಮಿಸಿದರು. ಸ್ವಲ್ಪ ಹೊತ್ತಿನಲ್ಲೇ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರೂ ಬಂದರು.

ಬಿಸಿಲಿನ ಝಳಕ್ಕೆ ಬಸವಳಿದರು: ಹೊತ್ತು  ಏರಿದಂತೆ ಬಿಸಿಲಿನ ಪ್ರಖರತೆಯೂ ಹೆಚ್ಚುತ್ತಿತ್ತು. ಇದರಿಂದಾಗಿ ಧರಣಿ ನಿರತರು ಸಾಕಷ್ಟು ಬೆವರು ಹರಿಸಬೇಕಾಯಿತು. ನಾಯಕರಿಗೆ ನೀಡುವ ಸಲುವಾಗಿ ಕುಡಿಯುವ ನೀರು ಹಾಗೂ ತಿನಿಸಿನ ಪೊಟ್ಟಣವನ್ನು ಕಾರ್ಯಕರ್ತರು ಸ್ಥಳಕ್ಕೆ ತಂದರು. ಇದನ್ನು ಕಂಡು ಸಿಟ್ಟಾದ ಗುಲಾಂ ನಬಿ ಆಜಾದ್‌, ‘ಐಷಾರಾಮಿ ವಸ್ತುಗಳನ್ನು ಇಲ್ಲಿಗೆ ತರಬೇಡಿ’ ಎಂದು ಗದರಿ ಹಿಂದಕ್ಕೆ ಕಳುಹಿಸಿದರು. ಬಳಿಕ ಕಾರ್ಯಕರ್ತರು ಬಾಟಲಿಯಲ್ಲಿ ಕುಡಿಯುವ ನೀರನ್ನು ಮಾತ್ರ ಪೂರೈಸಿದರು.

ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲು ಕಾಂಗ್ರೆಸ್‌ ನಾಯಕರು ಕೈ ಚಿಹ್ನೆ ಇರುವ ಟೋಪಿಯನ್ನು ಧರಿಸಿದರು. ಆದರೆ, ಜೆಡಿಎಸ್‌ ಶಾಸಕರು ಈ ಟೋಪಿ ಧರಿಸಲಿಲ್ಲ. ಬಳಿಕ ಅವರಿಗಾಗಿ ಮತ್ತಷ್ಟು ಗಾಂಧಿ ಟೋಪಿಯನ್ನು ತರಿಸಲಾಯಿತು.

ಶಾಸಕರನ್ನು ಕರೆತರುವ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಡಿ.ಕೆ.ಶಿವಕುಮಾರ್‌ ಅವರು ಕುಮಾರಸ್ವಾಮಿ ಅವರಿಗೆ ಗಾಂಧಿ ಟೋಪಿ ತೊಡಿಸಿದರು. ಈ ದೃಶ್ಯ ಕಂಡು ಎರಡು ಪಕ್ಷಗಳ ಶಾಸಕರ ಮೊಗದಲ್ಲಿ ನಗು ಮೂಡಿತು. ಅಕ್ಕಪಕ್ಕದಲ್ಲೇ ಕುಳಿತಿದ್ದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಮಾತುಕತೆಯಲ್ಲಿ ತಲ್ಲೀನರಾಗಿದ್ದರು. ಪ್ರತಿಭಟನೆ ವೇಳೆ ಪ್ರದರ್ಶಿಸಲು ಕೆಲವು ಭಿತ್ತಿಪತ್ರಗಳನ್ನು ಸಿದ್ಧಪಡಿಸಲಾಗಿತ್ತು. ಅದನ್ನು ಸ್ಥಳಕ್ಕೆ ತಂದಾಗ, ಸಿದ್ದರಾಮಯ್ಯ, ‘ಭಿತ್ತಿಪತ್ರಗಳನ್ನೆಲ್ಲ ಪ್ರದರ್ಶಿಸುವುದು ಬೇಡ’ ಎಂದು ಸೂಚಿಸಿದರು.

ಪ್ರತಿಭಟನೆ ವೇಳೆ ಕೆಲವು ಶಾಸಕರು ಶೌಚಾಲಯಕ್ಕೆ ಹೋಗುವ ಸಲುವಾಗಿ ಎದ್ದು ನಿಂತಾಗ ಪಕ್ಕದಲ್ಲಿದ್ದ ಇತರರು, ’ಏ ಕೂಡ್ರಪ್ಪ.. ಸ್ವಲ್ಪ ಹೊತ್ತು. ಒಬ್ಬೊಬ್ಬರೇ ಎಲ್ಲಿಗೂ ಹೋಗುವುದು ಬೇಡ’ ಎಂದು ಎಳೆದು ಕೂರಿಸುತ್ತಿದ್ದುದು ಕಂಡು ಬಂತು.

ಬಸ್‌ನಲ್ಲೇ ತೆರಳಿ: ‘ಪ್ರತಿಭಟನೆಗೆ ಬಂದ ಶಾಸಕರು ಯಾರೂ ಖಾಸಗಿ ವಾಹನದಲ್ಲಿ ತೆರಳುವುದು ಬೇಡ. ಎಲ್ಲರೂ ನಾವು ವ್ಯವಸ್ಥೆ ಮಾಡಿರುವ ಬಸ್‌ನಲ್ಲೇ ಹೋಗಿ ಕುಳಿತು ಕೊಳ್ಳಬೇಕು. ಮುಂದೆ ಏನು ಮಾಡಬೇಕು ಎಂದು ಸೂಚನೆ ನೀಡುತ್ತೇವೆ’ ಎಂದು ಡಿ.ಕೆ. ಶಿವಕುಮಾರ್‌ ಮೈಕ್‌ನಲ್ಲಿ ಕೂಗಿ ಹೇಳಿದರು.

*

ಅಸಾಂವಿಧಾನಿಕ ನಡೆ: ಸಿದ್ದರಾಮಯ್ಯ

‘ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ದೊಡ್ಡ ಪಕ್ಷವಾಗಿ ಹೊರಹೊಮ್ಮಿದವರಿಗೆ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಬೇಕಾಗಿಲ್ಲ. ಚುನಾವಣೋತ್ತರ ಮೈತ್ರಿ ಮಾಡಿಕೊಂಡ ಪಕ್ಷಗಳು ಬಹುಮತ ಸಾಬೀತುಪಡಿಸುವಷ್ಟು ಸಂಖ್ಯಾಬಲ ಹೊಂದಿದ್ದರೆ ಅವರಿಗೆ ಮೊದಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಆದರೂ ರಾಜ್ಯಪಾಲರು ಸರ್ಕಾರ ರಚಿಸಲು ಯಡಿಯೂರಪ್ಪ ಅವರನ್ನು ಆಹ್ವಾನಿಸಿದ್ದು ಅಸಾಂವಿಧಾನಿಕ ನಡೆ’ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ಬಹುಮತ ಸಾಬೀತುಪಡಿಸಲು ರಾಜ್ಯಪಾಲರು 15 ದಿನಗಳ ಕಾಲಾವಕಾಶ ನೀಡಿದ ನಿದರ್ಶನ ದೇಶದ ಚರಿತ್ರೆಯಲ್ಲೇ ಇಲ್ಲ. ಬಿಜೆಪಿ ಬಹುಮತ ಸಾಬೀತುಪಡಿಸಲು ಸಾಧ್ಯವೇ ಇಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಶಾಸಕರೆಲ್ಲ ಒಟ್ಟಿಗಿದ್ದೇವೆ. ಆದರೂ ಯಡಿಯೂರಪ್ಪ ವಿಶ್ವಾಸಮತ ಗೆಲ್ಲುವ ಬಗ್ಗೆ ಭಂಡತನದಿಂದ ಮಾತನಾಡುತ್ತಿದ್ದಾರೆ’ ಎಂದರು.

‘ಆನಂದ್‌ ಸಿಂಗ್‌ ಮತ್ತು ಮಸ್ಕಿ ಶಾಸಕ ಪ್ರತಾಪ ಗೌಡ ಪಾಟೀಲ ವೈಯಕ್ತಿಕ ಕೆಲಸದ ಸಲುವಾಗಿ ಹೋಗಿದ್ದಾರೆ. ಅವರಿಬ್ಬರೂ ನಮ್ಮ  ಜೊತೆ ಬರುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

*

‘ಸಾಲಮನ್ನಾ ಮಾಡಲು ಬಹುಮತವೆಲ್ಲಿದೆ’

‘ಸಾಲಮನ್ನಾ ಮಾಡುವ ನಿರ್ಣಯ ಕೈಗೊಳ್ಳಲು ಯಡಿಯೂರಪ್ಪ ಅವರಿಗೆ ಬಹುಮತವೆಲ್ಲಿದೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

‘ಅವರು ರೈತರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಉಪಮುಖ್ಯಮಂತ್ರಿಯಾಗಿದ್ದ ಅವರು ಸಾಲಮನ್ನಾವನ್ನು ವಿರೋಧಿಸಿದ್ದರು. ಆ ಬಳಿಕ ಮೂರು ವರ್ಷ ಅಧಿಕಾರದಲ್ಲಿದ್ದಾಗಲೂ ರೈತರಿಗಾಗಿ ಯಾವ ಘನಂದಾರಿ ಕೆಲಸವನ್ನೂ ಮಾಡಿಲ್ಲ’ ಎಂದು ಟೀಕಿಸಿದರು.

ರಾಜ್ಯಪಾಲರು ಬಿಜೆಪಿ ಏಜೆಂಟ್‌ ತರಹ ವರ್ತಿಸಿದ್ದಾರೆ. ರಾಜ್ಯದಲ್ಲಿ ಇಷ್ಟು ಕೆಟ್ಟ ರಾಜ್ಯಪಾಲರನ್ನು ಯಾವತ್ತೂ ಕಂಡಿಲ್ಲ ಎಂದರು.

*

ಸ್ವಚ್ಛಭಾರತ ನಿರ್ಮಾಣದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಶಾಸಕರ ಕುದುರೆ ವ್ಯಾಪಾರಕ್ಕೆ ಕೇಂದ್ರ ಸಚಿವರನ್ನು ಕಳುಹಿಸಿದ್ದಾರೆ. ದೇಶದ ರಾಜಕಾರಣಕ್ಕೆ ಅವರು ಯಾವ ಸಂದೇಶ ನೀಡುತ್ತಿದ್ದಾರೆ

–ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry