ಶುಕ್ರವಾರ, ಮಾರ್ಚ್ 5, 2021
23 °C
ಜೂನ್‌ 27ಕ್ಕೆ ಮರು ವಿಚಾರಣೆ ಆರಂಭ

ಪಬ್‌ ದಾಳಿ ಪ್ರಕರಣ: ಮೇಲ್ಮನವಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಬ್‌ ದಾಳಿ ಪ್ರಕರಣ: ಮೇಲ್ಮನವಿ ಸಲ್ಲಿಕೆ

ಮಂಗಳೂರು: ನಗರದಲ್ಲಿ 2009ರಲ್ಲಿ ನಡೆದಿದ್ದ ಪಬ್‌ ಮೇಲಿನ ದಾಳಿ ಪ್ರಕರಣದ 26 ಆರೋಪಿಗಳನ್ನು ಖುಲಾಸೆಗೊಳಿಸಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಭಿಯೋಜನಾ ಇಲಾಖೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಮೇ 5ರಂದು ಮೇಲ್ಮನವಿ ಸಲ್ಲಿಸಿದೆ.

ಪ್ರಕರಣದ 26 ಆರೋಪಿಗಳನ್ನು ಖುಲಾಸೆಗೊಳಿಸಿ ಮಂಗಳೂರಿನ ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ಮಾರ್ಚ್‌ 12ರಂದು ಆದೇಶ ಹೊರಡಿಸಿತ್ತು. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಪ್ರಸ್ತಾವಕ್ಕೆ ಜಿಲ್ಲಾಧಿಕಾರಿ ಎಸ್‌.ಸಸಿಕಾಂತ್ ಸೆಂಥಿಲ್‌ ಏಪ್ರಿಲ್‌ 28ರಂದು ಒಪ್ಪಿಗೆ ನೀಡಿದ್ದರು. ಎರಡನೇ ಜೆಎಂಎಫ್‌ಸಿ ನ್ಯಾಯಾಲಯದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮೇ 5ರಂದು ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಮೇಲ್ಮನವಿ ಸಲ್ಲಿಸಿದ್ದಾರೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಎಸ್‌.ಬೀಳಗಿ ಈ ಪ್ರಕರಣವನ್ನು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಿದ್ದಾರೆ. ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿರುವ ನ್ಯಾಯಾಲಯ 26 ಆರೋಪಿಗಳಿಗೂ ನೋಟಿಸ್ ಜಾರಿ ಮಾಡಿದೆ. ಜೂನ್‌ 27ಕ್ಕೆ ಮುಂದಿನ ವಿಚಾರಣೆ ನಿಗದಿ ಮಾಡಲಾಗಿದೆ.

ಸಾಕ್ಷ್ಯಾಧಾರಗಳ ಕೊರತೆ: 2009ರ ಜನವರಿಯಲ್ಲಿ ಮಂಗಳೂರಿನ ಬಲ್ಮಠ ರಸ್ತೆಯಲ್ಲಿರುವ ಅಮ್ನೇಸಿಯಾ ಬಾರ್‌ ಮತ್ತು ರೆಸ್ಟೋರೆಂಟ್‌ನಲ್ಲಿದ್ದ ಪಬ್‌ ಮೇಲೆ ದಾಳಿ ಮಾಡಿದ್ದ ಗುಂಪೊಂದು, ಅಲ್ಲಿದ್ದ ಯುವಕ, ಯುವತಿಯರ ಮೇಲೆ ಹಲ್ಲೆ ನಡೆಸಿತ್ತು. ಪಬ್‌ನ ಸಿಬ್ಬಂದಿಗೂ ಬೆದರಿಸಿ, ವಿವಿಧ ವಸ್ತುಗಳಿಗೆ ಹಾನಿ ಮಾಡಿತ್ತು. ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ ಸೇರಿದಂತೆ 30 ಮಂದಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು. ಒಬ್ಬ ಆರೋಪಿ ವಿಚಾರಣೆ ನಡುವೆಯೇ ಮೃತಪಟ್ಟಿದ್ದ. ಮೂವರು ಇನ್ನೂ ತಲೆಮರೆಸಿಕೊಂಡಿದ್ದಾರೆ. 26 ಮಂದಿ ವಿರುದ್ಧ ಮಾತ್ರ ವಿಚಾರಣೆ ನಡೆದಿತ್ತು.

ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿ ಮಾರ್ಚ್‌ 12ರಂದು ಎರಡನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಆರ್‌.ಮಂಜುನಾಥ ಆದೇಶ ಹೊರಡಿಸಿದ್ದರು.

ತೀರ್ಪು ಹೊರ ಬಿದ್ದ ನಂತರ ಸಾರ್ವಜನಿಕ ವಲಯದಲ್ಲಿ ತನಿಖಾಧಿಕಾರಿಗಳ ವಿರುದ್ಧ ತೀವ್ರ ಟೀಕೆ, ಆಕ್ರೋಶ ವ್ಯಕ್ತವಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.