ಗುರುವಾರ , ಮಾರ್ಚ್ 4, 2021
22 °C

ಬಹುಮತ ಸಾಬೀತು ಕಾಲಾವಕಾಶ ಕಡಿತ ಮಾಡುವ ಸಾಧ್ಯತೆ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಹುಮತ ಸಾಬೀತು ಕಾಲಾವಕಾಶ ಕಡಿತ ಮಾಡುವ ಸಾಧ್ಯತೆ

ನವದೆಹಲಿ: ‘ರಾಜ್ಯಪಾಲರ ವಿವೇಚನಾ ಅಧಿಕಾರಕ್ಕೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡಲಾಗದು’ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್‌, ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು.

‘ಪ್ರಮಾಣ ವಚನ ಸಮಾರಂಭಕ್ಕೆ ಅವಕಾಶ ನೀಡಕೂಡದು’ ಎಂದು ಕೋರಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಬೆಳಗಿನ ಜಾವ 1.45ಕ್ಕೆ, ತ್ವರಿತ ವಿಚಾರಣೆಗಾಗಿ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎಸ್‌.ಎ. ಬೋಬ್ಡೆ ಹಾಗೂ ಅಶೋಕ್‌ ಭೂಷಣ್‌ ಅವರಿದ್ದ ತ್ರಿಸದಸ್ಯ ಪೀಠ, ಸರ್ಕಾರ ರಚನೆಯ ಪ್ರಸ್ತಾವನೆಯೊಂದಿಗೆ ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ಸಲ್ಲಿಸಿರುವ ಶಾಸಕರ ಬೆಂಬಲದ ಪತ್ರದ ಪ್ರತಿಯನ್ನು ಹಾಜರುಪಡಿಸುವಂತೆ ಸೂಚಿಸಿದೆ.

ಯಾವುದೇ ಆದೇಶ ನೀಡಲು ರಾಜ್ಯಪಾಲರಿಗೆ ಸಂವಿಧಾನ ಬದ್ಧ ವಿವೇಚನಾ ಅಧಿಕಾರ ಇದೆ. ರಾಷ್ಟ್ರಪತಿ ಮತ್ತು ರಾಜ್ಯಪಾಲರು ನೀಡುವ ಆದೇಶವನ್ನು ಪ್ರಶ್ನಿಸಬಹುದಾಗಿದೆ. ಆದರೆ, ಅವರ ಆದೇಶಕ್ಕೆ ತಡೆ ನೀಡಲಾಗದು ಎಂದು ತಿಳಿಸಿದ ನ್ಯಾಯಪೀಠ, ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ರಾಜ್ಯಪಾಲರಿಗೆ ಸಲ್ಲಿಸಿರುವ ಪತ್ರದಲ್ಲಿ ಯಾವ ಅಂಶ ಅಡಗಿದೆ ಎಂಬುದರ ಆಧಾರದಲ್ಲಿ ಶುಕ್ರವಾರ ಬೆಳಿಗ್ಗೆ 10.30ಕ್ಕೆ ವಿಚಾರಣೆ ಆರಂಭವಾಗಲಿದ್ದು, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಯಡಿಯೂರಪ್ಪ ಅವರ ನಡೆಯ ಕುರಿತು ಚರ್ಚೆ ನಡೆಯಲಿದೆ.

ವಿಧಾನಸಭೆಯಲ್ಲಿ ಬಹುಮತ ಸಾಬೀತಿಗಾಗಿ ಯಡಿಯೂರಪ್ಪ ಅವರಿಗೆ 15 ದಿನಗಳ ಕಾಲಾವಕಾಶ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರ ತೀರ್ಮಾನವನ್ನು ಮಾರ್ಪಡಿಸಿ, ಕಾಲಾವಕಾಶ ಕಡಿತಗೊಳಿಸುವ ಸಾಧ್ಯತೆಯೂ ಇದೆ.

ತ್ವರಿತ ವಿಚಾರಣೆ: ಬುಧವಾರ ರಾತ್ರಿ ಸುಪ್ರೀಂಕೋರ್ಟ್‌ ರಿಜಿಸ್ಟ್ರಾರ್‌ ಅವರನ್ನು ಭೇಟಿಯಾಗಿ ಅರ್ಜಿ ಸಲ್ಲಿಸಿದ ಕಾಂಗ್ರೆಸ್‌, ಜೆಡಿಎಸ್‌ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ, ಈ ಅರ್ಜಿಯ ತ್ವರಿತ ವಿಚಾರಣೆ ನಡೆಯಬೇಕು ಎಂದು ಕೋರಿದರು.

ನಂತರ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರನ್ನು ಖುದ್ದಾಗಿ ಭೇಟಿ ಮಾಡಿದ ಸಿಂಘ್ವಿ, ತಾವು ಸಲ್ಲಿಸಿರುವ ಅರ್ಜಿಯ ತ್ವರಿತ ವಿಚಾರಣೆ ಅಗತ್ಯವಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಈ ಕುರಿತು ಎರಡು ಗಂಟೆ ಚರ್ಚಿಸಿದ ಮುಖ್ಯ ನ್ಯಾಯಮೂರ್ತಿ ಮಿಶ್ರಾ ಅವರು, ಬೆಳಗಿನ ಜಾವ 1.45ಕ್ಕೆ ವಿಚಾರಣೆ ನಡೆಸುವಂತೆ ತ್ರಿಸದಸ್ಯ ಪೀಠಕ್ಕೆ ಸೂಚಿಸಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟಕ್ಕೆ ಒಟ್ಟು 117 ಶಾಸಕರ ಬೆಂಬಲವಿದ್ದರೂ, ಕೇವಲ 104 ಶಾಸಕರನ್ನು ಹೊಂದಿರುವ ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿದ್ದಾರೆ. ಜತೆಗೆ, ಬಹುಮತ ಸಾಬೀತುಪಡಿಸಲು ಸುದೀರ್ಘ 15 ದಿನಗಳ ಕಾಲಾವಕಾಶ ನೀಡಿದ್ದಾರೆ. ರಾಜ್ಯಪಾಲರ ಆದೇಶ ರದ್ದುಪಡಿಸಿ, ಸರ್ಕಾರ ರಚಿಸಲು ಜೆಡಿಎಸ್‌–ಕಾಂಗ್ರೆಸ್‌ಗೆ ಆಹ್ವಾನ ನೀಡಬೇಕು ಎಂದು ಸಿಂಘ್ವಿ ಅವರು ಸುಪ್ರೀಂ ಕೋರ್ಟ್‌ನ ಕೊಠಡಿ ಸಂಖ್ಯೆ 6ರಲ್ಲಿ ಆರಂಭವಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಯಡಿಯೂರಪ್ಪ ಅವರು ಚುನಾವಣೆಯ ಫಲಿತಾಂಶ ಪ್ರಕಟವಾದ ಮೇ 15ರ ಸಂಜೆಯೇ ಸರ್ಕಾರ ರಚನೆಯ ಪ್ರಸ್ತಾವನೆಯೊಂದಿಗೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ, ‘104 ಜನ ಬಿಜೆಪಿ ಸದಸ್ಯರು ಮತ್ತು ಇತರರು ನಮ್ಮೊಂದಿಗಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ. ಇತರರು ಎಂದರೆ ಯಾರು ಎಂಬ ವಿವರಗಳಿಲ್ಲ. ಆಯ್ಕೆಯಾಗಿರುವ ಮಿಕ್ಕ 117 ಸದಸ್ಯರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪರ ಇದ್ದಾರೆ. ಹಾಗಿದ್ದರೂ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡುವ ಮೂಲಕ ಕುದುರೆ ವ್ಯಾಪಾರಕ್ಕೆ ಅವಕಾಶ ನೀಡಿದಂತಾಗಿದೆ ಎಂದು ಅವರು ದೂರಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭ ಶಾಸನಬದ್ಧವಲ್ಲ. ಅದನ್ನು ಮುಂದೂಡುವುದರಿಂದ ಯಾವುದೇ ರಾಜಕೀಯ ಪಕ್ಷಕ್ಕೆ ಭರಿಸಲಾರದ ನಷ್ಟವೇನೂ ಆಗದು ಎಂದ ಅವರು, ಯಾವುದೇ ಪಕ್ಷಕ್ಕೆ ಸಂಪೂರ್ಣ ಬಹುಮತ ಇಲ್ಲವೆಂದಾದಲ್ಲಿ, ಕಡಿಮೆ ಸ್ಥಾನ ಗಳಿಸಿಯೂ ಚುನಾವಣೋತ್ತರ ಮೈತ್ರಿ ಮಾಡಿಕೊಂಡ ಪಕ್ಷಗಳನ್ನು ಸರ್ಕಾರ ರಚನೆಗೆ ಆಹ್ವಾನಿಸಬಹುದು ಎಂದು ಸರ್ಕಾರಿಯಾ ಆಯೋಗ ನೀಡಿರುವ ಶಿಫಾರಸಿನಂತೆ ಕೆಲವು ಪಕ್ಷಗಳನ್ನು ಆಹ್ವಾನಿಸಿದ ಅನೇಕ ಉದಾಹರಣೆಗಳಿವೆ ಎಂದು ಅವರು ವಿವರಿಸಿದರು.

ಅಲ್ಲದೆ, ಇತ್ತೀಚೆಗೆ ಗೋವಾ ಮತ್ತು ಮಣಿಪುರಗಳಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷಗಳನ್ನು ಸರ್ಕಾರ ರಚನೆಗೆ ಆಹ್ವಾನಿಸದೆ, ಕಡಿಮೆ ಸ್ಥಾನ ಗಳಿಸಿದವರನ್ನೇ ಆಹ್ವಾನಿಸಲಾಗಿದೆ. ಕರ್ನಾಟಕದಲ್ಲಿ ಮಾತ್ರ ಬಹುಮತಕ್ಕೆ ಅವಕಾಶ ಇಲ್ಲದಿದ್ದರೂ ಹೆಚ್ಚು ಸ್ಥಾನ ಗಳಿಸಿದ ಪಕ್ಷಕ್ಕೆ ಮಣೆ ಹಾಕಲಾಗಿದೆ ಎಂದು ಅವರು ದೂರಿದರು.

ಈ ಸಂದರ್ಭ ಮಧ್ಯ ಪ್ರವೇಶಿಸಿದ ಕೇಂದ್ರ ಸರ್ಕಾರದ ಅಡ್ವೋಕೇಟ್‌ ಜನರಲ್‌ ಕೆ.ಕೆ. ವೇಣುಗೋಪಾಲ್‌, ಸಂವಿಧಾನದ ಪ್ರಕಾರ ಮುಖ್ಯಮಂತ್ರಿಯನ್ನು ನೇಮಕ ಮಾಡುವಲ್ಲಿ ರಾಜ್ಯಪಾಲರಿಗೆ ಯಾವುದೇ ನಿರ್ಬಂಧವಿಲ್ಲ. ಈಗ ರಾಜ್ಯಪಾಲರು ಯಾವ ಲೆಕ್ಕಾಚಾರದೊಂದಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ ಎಂಬುದು ತಿಳಿಯದು. ಮುಖ್ಯಮಂತ್ರಿಯು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸದಿದ್ದರೆ ಅವರ ಸರ್ಕಾರ ಬಿದ್ದು ಹೋಗುತ್ತದಷ್ಟೇ ಎಂದು ವಿವರಿಸಿದರು.

ನ್ಯಾಯಸಮ್ಮತವಾಗಿಯೇ ಇರುವ ರಾಜ್ಯಪಾಲರ ಆದೇಶವನ್ನು ರದ್ದುಪಡಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇಲ್ಲ. ಒಂದೊಮ್ಮೆ ಅವರ ಆದೇಶಕ್ಕೆ ತಡೆ ನೀಡಿದಲ್ಲಿ ಸಂವಿಧಾನದ ಕಲಂ 361ರ ಉಲ್ಲಂಘನೆಯಾಗಲಿದೆ. ಸರ್ಕಾರ ರಚಿಸಲು ಅಗತ್ಯವಿರುವ ಶಾಸಕರ ಬೆಂಬಲ ಇದೆ ಎಂಬ ಪತ್ರದೊಂದಿಗೆ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಯಡಿಯೂರಪ್ಪ ಪರ ವಕೀಲ ಮುಕುಲ್‌ ರೋಹಟಗಿ ಈ ಸಂದರ್ಭ ತಿಳಿಸಿದರು.

‘ಸಮರ್ಪಕ ಸಂಖ್ಯೆಯ ಶಾಸಕರ ಬಲ ಇದ್ದಲ್ಲಿ ಸರ್ಕಾರ ರಚಿಸಬಹುದು ಎಂಬುದು ಸ್ಪಷ್ಟ. ಆದರೆ, ಬಿಜೆಪಿ ಸಲ್ಲಿಸಿರುವ ಅಂಕಿ– ಅಂಶಗಳ ಪ್ರಕಾರ ಶಾಸಕರ ಸಂಖ್ಯೆ ಕಡಿಮೆ ಇದೆಯಲ್ಲ' ಎಂದು ಪ್ರಶ್ನಿಸಿದ ಪೀಠ, ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ನೀಡಿರುವ ಪತ್ರದ ಪ್ರತಿ ನೀಡುವಂತೆ ಸೂಚಿಸಿತು.

‘ತ್ವರಿತ ವಿಚಾರಣೆ ನಡೆಸಿದ್ದರಿಂದ, ಯಡಿಯೂರಪ್ಪ ಅವರು ಸಲ್ಲಿಸಿರುವ ಪತ್ರದ ಪ್ರತಿಯನ್ನು ತಂದಿಲ್ಲ ಎಂದು ರೋಹಟಗಿ ಹೇಳಿದ್ದರಿಂದ ಶುಕ್ರವಾರ ನಡೆಯುವ ವಿಚಾರಣೆ ವೇಳೆ ಪತ್ರದ ಪ್ರತಿಯನ್ನು ಸಲ್ಲಿಸುವಂತೆ ಸೂಚಿಸಿದ ನ್ಯಾಯಮೂರ್ತಿ ಸಿಕ್ರಿ, ಬೆಳಿಗ್ಗೆ 5.15ರವರೆಗೆ ಸತತ ಮೂರು ಗಂಟೆಗಳ ಕಾಲ ವಾದ– ಪ್ರತಿವಾದ ಆಲಿಸಿದ ನಂತರ ಬೆಳಿಗ್ಗೆ 5.30ಕ್ಕೆ ಆದೇಶ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.