ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಟಿಡಿ ವಿರುದ್ಧ ಆರೋಪ: ಪ್ರಧಾನ ಅರ್ಚಕನ ತಲೆದಂಡ?

ಕಡ್ಡಾಯ ನಿವೃತ್ತಿ ನಿರ್ಣಯ ಕೈಗೊಂಡ ದೇವಾಲಯದ ಆಡಳಿತ ಮಂಡಳಿ
Last Updated 17 ಮೇ 2018, 19:30 IST
ಅಕ್ಷರ ಗಾತ್ರ

ಹೈದರಾಬಾದ್: ಜಗತ್ತಿನ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾದ ತಿರುಪತಿ ತಿರುಮಲ ದೇವಸ್ಥಾನದ (ಟಿಟಿಡಿ) ಆಡಳಿತ ಮಂಡಳಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ್ದ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಎ.ವಿ. ರಮಣ ದೀಕ್ಷಿತುಲು ಅವರು ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ.

ಚೆನ್ನೈನಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ್ದ ರಮಣ ದೀಕ್ಷಿತುಲು, ಟಿಟಿಡಿ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ದೇಗುಲದ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಟಿಟಿಡಿ ನೂತನ ಮುಖ್ಯಸ್ಥ ಪುತ್ತಾ ಸುಧಾಕರ್ ಯಾದವ್ ನೇತೃತ್ವದಲ್ಲಿ ನಡೆದ ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿ, ಇತರೆ ನಿರ್ಣಯಗಳ ಜತೆಗೆ 65 ವರ್ಷ ಮೀರಿದ ಅರ್ಚಕರನ್ನು ತಕ್ಷಣವೇ ಸೇವೆಯಿಂದ ನಿವೃತ್ತಿಗೊಳಿಸುವ ನಿರ್ಣಯಕ್ಕೂ ಅನುಮೋದನೆ ನೀಡಲಾಗಿದೆ. ಇದರಿಂದಾಗಿ ದೀಕ್ಷಿತುಲು ಜತೆಗೆ ನರಸಿಂಹ ದೀಕ್ಷಿತುಲು, ಶ್ರೀನಿವಾಸ ಮೂರ್ತಿ ದೀಕ್ಷಿತುಲು ಸಹ ನಿವೃತ್ತರಾಗಿದ್ದಾರೆ.

ಆರ್‌ಟಿಐ ವ್ಯಾಪ್ತಿಗೆ ಆಗ್ರಹ: ‘ದೇಗುಲಕ್ಕೆ ಬರುತ್ತಿರುವ ದೇಣಿಗೆ ಹಾಗೂ ಮಂಡಳಿ ಮಾಡುತ್ತಿರುವ ವೆಚ್ಚದ ಕುರಿತು ಲೆಕ್ಕಪತ್ರ ಪರಿಶೋಧನೆ ನಡೆಯಬೇಕು. ಟಿಟಿಡಿಯನ್ನು ಆರ್‌ಟಿಐ ವ್ಯಾಪ್ತಿ ಅಡಿ ತರಬೇಕು. ದೇಣಿಗೆ, ಆಭರಣಗಳ ಮಾಹಿತಿ ಪಾರದರ್ಶಕವಾಗಿರಿಸಲು ಆಗ್ರಹಿಸುತ್ತೇನೆ’ ಎಂದು ರಮಣ ದೀಕ್ಷಿತುಲು ಹೇಳಿದ್ದರು.

‘ಗಣ್ಯ ವ್ಯಕ್ತಿಗಳಿಗೆ ವಿಶೇಷ ದರ್ಶನ ವ್ಯವಸ್ಥೆ ಕಲ್ಪಿಸುವ ಹಾಗೂ ಅಂದ ಹೆಚ್ಚಿಸುತ್ತೇವೆ ಎನ್ನುವ ನೆಪದಲ್ಲಿ ಟಿಟಿಡಿ ಅಧಿಕಾರಿಗಳು ಪುರಾತನ ದೇಗುಲಕ್ಕೆ ಹಾನಿ ಮಾಡುತ್ತಿದ್ದಾರೆ. ದೇಗುಲಕ್ಕೆ ಆಗಿರುವ ಹಾನಿಯನ್ನು ಭಾರತೀಯ ಪುರಾತತ್ವ ಇಲಾಖೆ ಅಂದಾಜಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ನೂತನ ಅರ್ಚಕರ ನೇಮಕ: ಸಂಪ್ರದಾಯದಂತೆ, ಅರ್ಚಕರ ಮನೆತನದ ಪೈಡಿಪಲ್ಲಿ ಕೃಷ್ಣ ಶೇಷಾದ್ರಿ ದೀಕ್ಷಿತುಲು, ಗೊಲ್ಲಪಲ್ಲಿ ವೇಣುಗೋಪಾಲ ದೀಕ್ಷಿತುಲು, ಪೆದ್ದಿಂಟಿ ಶ್ರೀನಿವಾಸ ದೀಕ್ಷಿತುಲು ಅವರನ್ನು ಅರ್ಚಕರನ್ನಾಗಿ ನೇಮಿಸಲಾಗಿದೆ.
*
‘ವಿವರಣೆ ನೀಡಲು ನೋಟಿಸ್’
ದೀಕ್ಷಿತುಲು ಅವರ ಆರೋಪಕ್ಕೆ ಟಿಟಿಡಿ ಕಾರ್ಯನಿರ್ವಹಣಾ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಪ್ರತಿಕ್ರಿಯಿಸಿದ್ದಾರೆ, ‘ಮಂಡಳಿಯ ನಿರ್ಣಯದ ಅನುಸಾರ, ಟಿಟಿಡಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಸಂಬಂಧ ವಿವರಣೆ ನೀಡುವಂತೆ ರಮಣ ದೀಕ್ಷಿತುಲು ಅವರಿಗೆ ನೋಟಿಸ್ ನೀಡಲಾಗುವುದು’ ಎಂದು ಹೇಳಿದ್ದಾರೆ. 65 ವರ್ಷ ಮೀರಿದ ಅರ್ಚಕರನ್ನು ನಿವೃತ್ತಿಗೊಳಿಸುವ ನಿರ್ಣಯಕ್ಕೂ ಡಾ. ದೀಕ್ಷಿತುಲು ಅವರು ಮಾಡಿದ ಆರೋಪಕ್ಕೂ ಸಂಬಂಧವಿಲ್ಲ ಎಂದು ಮಂಡಳಿ ಸದಸ್ಯರು ಹೇಳಿದ್ದಾರೆ.

*
‘ನಿರ್ಣಯ ಅಮಾನ್ಯ’
ಹಿರಿಯ ಅರ್ಚಕರನ್ನು ನಿವೃತ್ತಿಗೊಳಿಸುವ ಆಡಳಿತ ಮಂಡಳಿ ನಿರ್ಣಯವನ್ನು ಟಿಟಿಡಿ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಐವೈಆರ್‌ ಕೃಷ್ಣ ರಾವ್ ಟೀಕಿಸಿದ್ದಾರೆ.

‘ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರುವ ತನಕವೂ ಅರ್ಚಕರು ತಮ್ಮ ಸೇವೆ ಮುಂದುವರಿಸಬಹುದು. ಕಳೆದ ನಾಲ್ಕು ವರ್ಷಗಳಿಂದಲೂ ಟಿಟಿಡಿ ಧಾರ್ಮಿಕ ಮಂಡಳಿಗೆ ಸದಸ್ಯರನ್ನು ನೇಮಿಸಿಲ್ಲ. ಮಂಡಳಿಯು ಕೈಗೊಂಡ ನಿರ್ಣಯಕ್ಕೆ ಮೌಲ್ಯ ಇಲ್ಲ’ ಎಂದು ಅವರು ಹೇಳಿದ್ದಾರೆ.
*
ಆಗಮ ಶಾಸ್ತ್ರಗಳಿಗೆ ಟಿಟಿಡಿ ಅಸಡ್ಡೆ ತೋರುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಗುರಿ ಮಾಡಲಾಗಿದೆ. ನಿರ್ಣಯ ರದ್ದುಮಾಡುವಂತೆ ನ್ಯಾಯಾಲಯದ ಮೊರೆ ಹೋಗುತ್ತೇನೆ.
ಡಾ. ಎ.ವಿ. ರಮಣ ದೀಕ್ಷಿತುಲು, ಕಡ್ಡಾಯ ನಿವೃತ್ತಿಗೊಂಡ ಟಿಟಿಡಿ ಪ್ರಧಾನ ಅರ್ಚಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT