ಮಂಗಳವಾರ, ಮಾರ್ಚ್ 9, 2021
23 °C
ಸಮುದ್ರ, ನದಿತೀರ ಸ್ವಚ್ಛತೆಗೆ 19 ತಂಡ ರಚಿಸಿದ ಕೇಂದ್ರ ಸರ್ಕಾರ

ಜಲಮೂಲಗಳ ಸ್ವಚ್ಛತೆಗೆ ವಿಶೇಷ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಲಮೂಲಗಳ ಸ್ವಚ್ಛತೆಗೆ ವಿಶೇಷ ಅಭಿಯಾನ

ನವದೆಹಲಿ: ಜೂನ್ 5ರ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಕರ್ನಾಟಕದ ಪಣಂಬೂರು, ಮಲ್ಪೆ, ಗೋಕರ್ಣ ಹಾಗೂ ಕಾರವಾರ ಸೇರಿದಂತೆ ದೇಶದ 24 ಸಮುದ್ರ ತೀರಗಳಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಕೇಂದ್ರ ಪರಿಸರ ಸಚಿವಾಲಯ ಸಿದ್ಧತೆ ನಡೆಸಿದೆ.

ಜೊತೆಗೆ ಕಾವೇರಿ ಹಾಗೂ ಪೆನ್ನಾರ್ ಸೇರಿದಂತೆ 19 ರಾಜ್ಯಗಳ 24 ನದಿತೀರಗಳಲ್ಲಿಯೂ ಸ್ವಚ್ಛತಾ ಅಭಿಯಾನ ನಡೆಸಲಿದೆ.

ಈ ಕಾರ್ಯದಲ್ಲಿ ಸ್ಥಳೀಯರು ಹಾಗೂ ಶಾಲಾ ವಿದ್ಯಾರ್ಥಿಗಳು ತೀರಗಳನ್ನು ತ್ಯಾಜ್ಯ ಮುಕ್ತಗೊಳಿಸಲು ಶ್ರಮಿಸಲಿದ್ದಾರೆ.

ಪ್ರತಿ ಜಲಮೂಲಗಳ ಸ್ವಚ್ಛತೆಗೆ ₹10 ಲಕ್ಷ ಮೀಸಲಿರಿಸಲಾಗಿದೆ. ಇದಕ್ಕಾಗಿ 19 ತಂಡಗಳನ್ನು ರಚಿಸಲಾಗಿದೆ. ಸಚಿವಾಲಯದ ಹಿರಿಯ ಅಧಿಕಾರಿಗಳು, ಶಾಲಾ ಪರಿಸರ ಕ್ಲಬ್‌ ಉಸ್ತುವಾರಿಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು, ಜಿಲ್ಲಾಡಳಿತ, ಸ್ಥಳೀಯ ಮೀನುಗಾರಿಕಾ ವಿಜ್ಞಾನ ಕಾಲೇಜು ಮತ್ತು ಇತರೆ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಸದಸ್ಯರು ಈ ತಂಡಗಳಲ್ಲಿ ಇರಲಿದ್ದಾರೆ.

ಜೊತೆಗೆ ಎನ್‌ಜಿಒ, ಎನ್‌ಸಿಸಿ, ಬಿಎಸ್‌ಎಫ್, ಸಿಐಎಸ್‌ಎಫ್, ಐಟಿಬಿಪಿ, ಕರಾವಳಿ ಕಾವಲುಪಡೆ ಹಾಗೂ ನಾಗರಿಕರೂ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ.

ಸ್ವಚ್ಛತಾ ಕಾರ್ಯಕ್ಕೆ ಕಸಬರಿಕೆ, ಬಕೆಟ್‌, ಕೈಗವಸು, ಕಸದ ಡಬ್ಬಿಗಳನ್ನು ಪೂರೈಸಲಾಗುತ್ತದೆ. ತ್ಯಾಜ್ಯವನ್ನು ಬೇರೆಡೆ ಸಾಗಿಸಲು ಸಾರಿಗೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ತ್ಯಾಜ್ಯವನ್ನು ಸೂಕ್ತರೀತಿಯಲ್ಲಿ ವಿಲೇವಾರಿ ಮಾಡಲು ಯೋಜನೆ ರೂಪಿಸಲಾಗಿದೆ.

ಮೇ 15ರಿಂದ ಸ್ವಚ್ಛತಾ ಕಾರ್ಯ ಆರಂಭಗೊಂಡಿದ್ದು, ಜೂನ್‌ 5ರವರೆಗೂ ಮುಂದುವರೆಯಲಿದೆ. ಈ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ರಸಪ್ರಶ್ನೆ ಕಾರ್ಯಕ್ರಮ, ಸಂವಾದ, ಜಾಗೃತಿ ಅಭಿಯಾನಗಳು ನಡೆಯಲಿವೆ.

ವಿಶ್ವಸಂಸ್ಥೆಯ ವಿಶ್ವ ಪರಿಸರ ದಿನಾಚರಣೆಗೆ ಈ ವರ್ಷ ಭಾರತ ನೇತೃತ್ವ ವಹಿಸಿಕೊಂಡಿದೆ.

ಪ್ಲಾಸ್ಟಿಕ್ ಮುಕ್ತ ಶಾಲೆ: ಶಾಲಾ ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಿಸುವಂತೆ ದೇಶದ ಎಲ್ಲ ಶಾಲೆ, ಕಾಲೇಜುಗಳ ಪ್ರಾಂಶುಪಾಲರಿಗೆ ಪರಿಸರ ಸಚಿವ ಹರ್ಷವರ್ಧನ್‌ ಪತ್ರ ಬರೆದಿದ್ದಾರೆ. ಪ್ಲಾಸ್ಟಿಕ್‌ನಿಂದ ತಯಾರಿಸಿದ ಬಾಟಲ್, ಚೀಲ, ಲೋಟ, ತಟ್ಟೆ, ಶಾಲಾ ಆವರಣ‌ದಲ್ಲಿ ನಿರ್ಬಂಧಿಸುವಂತೆ ಕೋರಿದ್ದಾರೆ.

ಸ್ಥಳೀಯ ಜಲಮೂಲಗಳು, ಜೌಗು ಪ್ರದೇಶ, ಕೆರೆಗಳು, ಸಮುದ್ರ ತೀರ ಅಥವಾ ಜೈವಿಕಸೂಕ್ಷ್ಮ ಪ್ರದೇಶಗಳನ್ನು ದತ್ತು ಪಡೆದು, ಅವುಗಳನ್ನೂ ಪ್ಲಾಸ್ಟಿಕ್ ಮುಕ್ತ ಎಂದು ಘೋಷಿಸುವಂತೆ ಅವರು ಮನವಿ ಮಾಡಿದ್ದಾರೆ. ಪ್ಲಾಸ್ಟಿಕ್ ಮಾಲಿನ್ಯ ಮುಕ್ತ ಎಂದು ಘೋಷಿಸಿಕೊಂಡ ಶಾಲೆ, ಕಾಲೇಜುಗಳಿಗೆ ‘ಹಸಿರುಶಾಲೆ/ಕಾಲೇಜು’ ಎಂಬ ಪ್ರಮಾಣಪತ್ರವನ್ನು ಸಚಿವರು ನೀಡಲಿದ್ದಾರೆ.

*

ಎಲ್ಲೆಲ್ಲಿ ಸ್ವಚ್ಛತೆ?

ಗೋವಾ: ಕಲಂಗೋಟ್, ಮಿರಾಮರ್ ಮತ್ತು ಕೊಲಾವಾ

ಕೇರಳ: ಕಣ್ಣೂರು, ಕೋಯಿಕ್ಕೋಡ್‌

ತಮಿಳುನಾಡು: ಕನ್ಯಾಕುಮಾರಿ, ಎನ್ನೋರ್, ಪಾಲವಕ್ಕಂ

ಪಶ್ಚಿಮ ಬಂಗಾಳ: ಬಕ್ಖಾಲಿ, ತಾಜ್‌ಪುರ್

ದೆಹಲಿ: ಯಮುನಾ ನದಿತೀರ

*

ಬೆಂಗಳೂರಿನಲ್ಲಿ ಜಾಗೃತಿ ಓಟ

ಪ್ಲಾಸ್ಟಿಕ್ ಮಾಲಿನ್ಯ ಮುಕ್ತ ಜಾಗೃತಿ ಮೂಡಿಸಲು ಬೆಂಗಳೂರು, ದೆಹಲಿ, ಅಹಮದಾಬಾದ್, ಗ್ಯಾಂಗ್‌ಟಾಕ್, ಭೋಪಾಲ್ ಮತ್ತು ಭುವನೇಶ್ವರದಲ್ಲಿ ಜೂನ್ 3ರಂದು ಮಿನಿ ಮ್ಯಾರಥಾನ್ ಆಯೋಜಿಸಲಾಗಿದೆ.

ದೆಹಲಿಯ ವಿಜ್ಞಾನ ಭವನ ಹಾಗೂ ರಾಜಪಥದಲ್ಲಿ ವಸ್ತು ಪ್ರದರ್ಶನ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.