ಭಾನುವಾರ, ಮಾರ್ಚ್ 7, 2021
22 °C

ರಾಜ್ಯ ರಾಜಕೀಯದಲ್ಲಿ ‘ರೆಸಾರ್ಟ್‌ ‍ಪಾಲಿಟಿಕ್ಸ್‌’ ರಂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ರಾಜಕೀಯದಲ್ಲಿ ‘ರೆಸಾರ್ಟ್‌ ‍ಪಾಲಿಟಿಕ್ಸ್‌’ ರಂಗು

ಬೆಂಗಳೂರು: ರಾಜ್ಯದಲ್ಲಿ ‘ರೆಸಾರ್ಟ್‌ ‍ಪಾಲಿಟಿಕ್ಸ್‌’ ಹೊಸತೇನೂ ಅಲ್ಲ. ಬೇರೆ ಪಕ್ಷ ಒಡ್ಡುವ ಆಮಿಷದಿಂದ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ರಾಜಕೀಯ ಪಕ್ಷಗಳು‌ ಈ ತಂತ್ರಗಾರಿಕೆಯ ಮೊರೆ ಹೋದ ನಿದರ್ಶನಗಳು ಸಾಕಷ್ಟಿವೆ.

ಸದ್ಯ ರಾಜ್ಯದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಸನ್ನಿವೇಶವು ಹತ್ತು ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದ ‘ಆಪರೇಷನ್‌ ಕಮಲ’ದ ನಂತರದ ದಿನಗಳಲ್ಲಿ ಕಂಡು ಬಂದ ರೆಸಾರ್ಟ್‌ ರಾಜಕಾರಣವನ್ನು ನೆನಪಿಸುವಂತಿದೆ. ಅತಂತ್ರ ವಿಧಾನಸಭೆ ಕಾರಣದಿಂದ ಈ ರಾಜಕಾರಣ ಮತ್ತಷ್ಟು ರಂಗು ಪಡೆದುಕೊಂಡಿದೆ.

ಚುನಾವಣೆ ನಡೆದ 222 ಕ್ಷೇತ್ರಗಳಲ್ಲಿ 104 ಕ್ಷೇತ್ರಗಳಲ್ಲಿ ಗೆದ್ದಿರುವ‌ ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಇನ್ನೂ ಎಂಟು ಶಾಸಕರ ಬೆಂಬಲ ಬೇಕು. ಜೆಡಿಎಸ್‌ – ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗೆ ಅಡ್ಡಗಾಲು ಹಾಕಿ, ಬಹುಮತ ಸಾಬೀತುಪಡಿಸುವ ವಿಶ್ವಾಸದಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವ ಬಿ.ಎಸ್‌. ಯಡಿಯೂರಪ್ಪ, ಆ ಎರಡೂ ಪಕ್ಷಗಳಲ್ಲಿ ಕಂಪನ ಉಂಟು ಮಾಡಿದ್ದಾರೆ. ಆ ಕಂಪನಕ್ಕೆ ಬೆದರಿರುವ ಎರಡೂ ಪಕ್ಷಗಳು ತಮ್ಮ ಶಾಸಕರನ್ನು ‘ರೆಸಾರ್ಟ್‌’ಗಳಲ್ಲಿ ಭದ್ರವಾಗಿಡಲು ಮುಂದಾಗಿವೆ.

2004ರಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರದಿಂದ ಹೊರಬಂದ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿ ಜೊತೆಗೆ ಸರ್ಕಾರ ರಚಿಸಲು ಮುಂದಾದ ಸಂದರ್ಭದಲ್ಲಿ ರೆಸಾರ್ಟ್‌ ರಾಜಕಾರಣ ರಂಗು ಪಡೆದುಕೊಂಡಿತ್ತು. 2008ರಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಬಿಜೆಪಿಯಲ್ಲಿ ನಾಯಕತ್ವದ ಒಡಕು ಉಂಟಾದಾಗ, ಬೇರೆ ಬೇರೆ ಬಣಗಳ ಮುಖಂಡರು ತಮ್ಮ ಹಿಂಬಾಲಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಿದ್ದರು.

2009ರ ಅಕ್ಟೋಬರ್‌ನಲ್ಲಿ ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಲು ಅಂದು ಪ್ರವಾಸೋದ್ಯಮ ಸಚಿವರಾಗಿದ್ದ ಜನಾರ್ದನ ರೆಡ್ಡಿ 40 ಶಾಸಕರನ್ನು ಹೈದರಾಬಾದ್‌, ಗೋವಾಕ್ಕೆ ಕರೆದೊಯ್ದಿದ್ದರು.‌ ರೇಣಕಾಚಾರ್ಯ, ಬೇಳೂರು ಗೋಪಾಲಕೃಷ್ಣ (ಇತ್ತೀಚೆಗೆ ಕಾಂಗ್ರೆಸ್‌ಗೆ ಜಿಗಿದಿದ್ದಾರೆ) ಆಗ ರೆಡ್ಡಿ ಜೊತೆಗಿದ್ದರು. ಸ್ಟಾರ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಈ ಗುಂಪು, ಸಚಿವೆ ಶೋಭಾ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಯಶಸ್ವಿಯಾಗಿತ್ತು.

2010ರ ಅಕ್ಟೋಬರ್‌ನಲ್ಲಿ 11 ಬಿಜೆಪಿ ಶಾಸಕರು, 5 ಪಕ್ಷೇತರ ಶಾಸಕರು ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದಿದ್ದರು. ಆಗ 16 ಶಾಸಕರನ್ನು ಚೆನ್ನೈಗೆ ಕರೆದೊಯ್ದ ಕುಮಾರಸ್ವಾಮಿ, ಸರ್ಕಾರ ಉರುಳಿಸುವ ಯತ್ನ ಮಾಡಿದ್ದರು. ಬಿಜೆಪಿ ಶಾಸಕರನ್ನು ಹಿಡಿತಲ್ಲಿಟ್ಟುಕೊಳ್ಳಲು ಯಡಿಯೂರಪ್ಪ, ಅವರನ್ನೆಲ್ಲ ಯಲಹಂಕ ಬಳಿ ಇರುವ ‘ಗೋಲ್ಡನ್‌ ಫಾಮ್‌’ ರೆಸಾರ್ಟ್‌ಗೆ ಕರೆದೊಯ್ದಿದ್ದರು. 2012ರಲ್ಲಿ ಬಿಜೆಪಿ ಒಳ ಜಗಳ ತೀವ್ರಗೊಂಡಾಗ, 60 ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ದ ಯಡಿಯೂರಪ್ಪ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.

2017ರಲ್ಲಿ ಗುಜರಾತ್‌ನಿಂದ ರಾಜ್ಯಸಭೆಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ಶಾಸಕರ ಖರೀದಿ ಭೀತಿಯಿಂದ ಕಾಂಗ್ರೆಸ್‌ ತನ್ನ 47 ಶಾಸಕರನ್ನು ಕರ್ನಾಟಕಕ್ಕೆ ಕಳುಹಿಸಿತ್ತು. ಅಹಮ್ಮದ್ ಪಟೇಲ್ ಅವರನ್ನು ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಿಸುವ ಕಾರಣಕ್ಕೆ ಕಾಂಗ್ರೆಸ್ ಈ ಕಾರ್ಯತಂತ್ರ ರೂಪಿಸಿತ್ತು. ಗುಜರಾತ್‌ ಶಾಸಕರನ್ನು ರೆಸಾರ್ಟ್‌ನಲ್ಲಿ ಇಟ್ಟುಕೊಂಡು ಆತಿಥ್ಯ ನೀಡುವ ಹೊಣೆಯನ್ನು ಡಿ.ಕೆ. ಶಿವಕುಮಾರ್‌ ವಹಿಸಿದ್ದರು. ತಮಿಳುನಾಡಿನಲ್ಲಿ ರಾಜಕೀಯ ಅತಂತ್ರ ಸ್ಥಿತಿ ಉಂಟಾದ ಸಂದರ್ಭದಲ್ಲಿ ಮಡಿಕೇರಿಯ ರೆಸಾರ್ಟ್‌ನಲ್ಲಿ ತಮಿಳುನಾಡಿನ ಶಾಸಕರನ್ನು ಇರಿಸಲಾಗಿತ್ತು.

ಬುಧವಾರ ಮಧ್ಯಾಹ್ನ ಒಟ್ಟಾಗಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್, ಬಿಜೆಪಿ ಆಮಿಷಗಳಿಂದ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ರೆಸಾರ್ಟ್‌ ಮತ್ತು ಹೋಟೆಲ್‌ ಮೊರೆ ಹೋಗಿವೆ. ಕಾಂಗ್ರೆಸ್ ಶಾಸಕರು ಬಿಡದಿ ಬಳಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದರೆ, ಜೆಡಿಎಸ್‌ ತನ್ನ ಶಾಸಕರಿಗೆ ಬೆಂಗಳೂರಿನ ವಸಂತನಗರದಲ್ಲಿರುವ ಶಾಂಗ್ರಿಲಾ ಹೋಟೆಲ್‌ನಲ್ಲಿ ವ್ಯವಸ್ಥೆ ಮಾಡಿದೆ. ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್‌ ಹೆಣಗಾಡುತ್ತಿದ್ದರೆ, ಬಿಜೆಪಿ ಬಹುಮತಕ್ಕಾಗಿ ಗಾಳ ಹಾಕಿಕೊಂಡು ಕೂತಿದೆ. ಗುರುವಾರ ತಡ ರಾತ್ರಿ ಎರಡೂ ಪಕ್ಷಗಳು ಶಾಸಕರನ್ನು ಕೊಚ್ಚಿಗೆ ಕರೆದೊಯ್ಯಲು ತೀರ್ಮಾನಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.