11 ಬ್ಯಾಂಕ್‌ಗಳಿಗೆ ನೆರವು : ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಭರವಸೆ

7

11 ಬ್ಯಾಂಕ್‌ಗಳಿಗೆ ನೆರವು : ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಭರವಸೆ

Published:
Updated:
11 ಬ್ಯಾಂಕ್‌ಗಳಿಗೆ ನೆರವು : ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಭರವಸೆ

ನವದೆಹಲಿ : ಬಿಗಡಾಯಿಸುತ್ತಿರುವ ಹಣಕಾಸು ಪರಿಸ್ಥಿತಿಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಗುರುತಿಸಿರುವ ಸರ್ಕಾರಿ ಸ್ವಾಮ್ಯದ 11 ಬ್ಯಾಂಕ್‌ಗಳಿಗೆ ಅಗತ್ಯವಾದ ನೆರವು ನೀಡುವುದಾಗಿ ಕೇಂದ್ರ ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಭರವಸೆ ನೀಡಿದ್ದಾರೆ.

‘ಆರ್ಥಿಕ ಬಿಕ್ಕಟ್ಟಿನಿಂದ ಆದಷ್ಟು ಬೇಗ ಹೊರ ಬರಲು ಈ ಬ್ಯಾಂಕ್‌ಗಳಿಗೆ ಎಲ್ಲ ಬಗೆಯ ನೆರವನ್ನು ತ್ವರಿತವಾಗಿ ನೀಡಲಾಗುವುದು’ ಎಂದು ಗೋಯಲ್‌ ಅವರು ಗುರುವಾರ ಇಲ್ಲಿ ಹೇಳಿದರು.  ಬ್ಯಾಂಕ್‌ಗಳ ಮುಖ್ಯಸ್ಥರ ಜತೆಗೆ ಸಭೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು. ಅರುಣ್‌ ಜೇಟ್ಲಿ ಅವರು ಚೇತರಿಸಿಕೊಳ್ಳುವವರೆಗೆ ಗೋಯಲ್‌ ಅವರಿಗೆ ತಾತ್ಕಾಲಿಕವಾಗಿ ಹಣಕಾಸು ಸಚಿವಾಲಯದ ಹೊಣೆ ಹೊರಿಸಲಾಗಿದೆ.

‘ಬ್ಯಾಂಕ್‌ಗಳು ಎದುರಿಸುತ್ತಿರುವ ಹಣಕಾಸು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಿಯಾಯೋಜನೆ ರೂಪಿಸಲಾಗುವುದು. ವಂಚನೆ ಹಗರಣ ಮತ್ತು ವಸೂಲಾಗದ ಸಾಲದ ಸಮಸ್ಯೆಗಳ ಸುಳಿಗೆ ಸಿಲುಕಿರುವ ಬ್ಯಾಂಕ್‌ಗಳನ್ನು ಆದಷ್ಟು ಬೇಗ ಸರಿದಾರಿಗೆ ತರಲು ಶ್ರಮಿಸಲಾಗುವುದು.

‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದ  ನಿರೀಕ್ಷಿಸುವ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆ ಕಾಯ್ದುಕೊಂಡು ಬ್ಯಾಂಕಿಂಗ್‌ ಕ್ಷೇತ್ರವು ವ್ಯವಸ್ಥಿತವಾಗಿ ಬೆಳವಣಿಗೆ ಕಾಣಬೇಕಾಗಿದೆ. ಅದಕ್ಕೆ ಅಗತ್ಯವಾದ ನೆರವನ್ನು ಸರ್ಕಾರ ಆದ್ಯತೆ ಮೇರೆಗೆ ಒದಗಿಸಲಿದೆ’ ಎಂದು ಅವರು ಹೇಳಿದರು.

ಆರ್‌ಬಿಐ ಗುರುತಿಸಿರುವ  11 ಬ್ಯಾಂಕ್‌ಗಳು ತಮ್ಮ ಹಣಕಾಸು ಪರಿಸ್ಥಿತಿಯನ್ನು ಚೇತರಿಕೆಯ ಹಾದಿಗೆ ತರಲು ಅನೇಕ ಕ್ರಮಗಳನ್ನು ಜಾರಿಗೆ ತಂದಿವೆ. ಲಾಭಾಂಶ ವಿತರಣೆಗೆ ನಿಬಂಧನೆ ವಿಧಿಸಿವೆ. ಬ್ಯಾಂಕ್‌ನ ನಿರ್ದೇಶಕರ ಭತ್ಯೆಗಳಿಗೂ ಕಡಿವಾಣ ಹಾಕಿವೆ. ಶಾಖೆಗಳ ವಿಸ್ತರಣೆ ಸ್ಥಗಿತಗೊಳಿಸಿವೆ. ವಸೂಲಾಗದ ಸಾಲಗಳಿಗಾಗಿ ತಮ್ಮ ಲಾಭದಲ್ಲಿನ ಬಹುಪಾಲನ್ನು ತೆಗೆದುಇರಿಸುತ್ತಿವೆ.

ಆರ್‌ಬಿಐ ಗುರುತಿಸಿರುವ ಹಣಕಾಸು ಪರಿಸ್ಥಿತಿ ದುಸ್ಥಿತಿಯಲ್ಲಿ ಇರುವ ಬ್ಯಾಂಕ್‌ಗಳಲ್ಲಿ  ದೇನಾ ಬ್ಯಾಂಕ್‌, ಅಲಹಾಬಾದ್‌ ಬ್ಯಾಂಕ್‌, ಯುನೈಟೆಡ್  ಬ್ಯಾಂಕ್‌ ಆಫ್‌ ಇಂಡಿಯಾ, ಕಾರ್ಪೊರೇಷನ್‌ ಬ್ಯಾಂಕ್‌, ಐಡಿಬಿಐ ಬ್ಯಾಂಕ್‌,  ಯುಕೊ ಬ್ಯಾಂಕ್‌, ಬ್ಯಾಂಕ್‌ ಆಫ್ ಇಂಡಿಯಾ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಮತ್ತು ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಸೇರಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry