₹39 ಲಕ್ಷ ಕಿತ್ತ ಫೇಸ್‌ಬುಕ್ ಫ್ರೆಂಡ್!

7

₹39 ಲಕ್ಷ ಕಿತ್ತ ಫೇಸ್‌ಬುಕ್ ಫ್ರೆಂಡ್!

Published:
Updated:

ಬೆಂಗಳೂರು: ನಗರದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಸೈಬರ್ ವಂಚಕರು, ಔಷಧ ತಯಾರಿಸುವ ಬೀಜಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ ₹ 39 ಲಕ್ಷವನ್ನು ತಮ್ಮ ಖಾತೆಗೆ ಹಾಕಿಸಿಕೊಂಡು ವಂಚಿಸಿದ್ದಾರೆ.

ಹಣ ಕಳೆದುಕೊಂಡ ಯಶವಂತಪುರ 7ನೇ ಅಡ್ಡರಸ್ತೆ ನಿವಾಸಿ ವಿ.ಕೆ.ಶಿವರಾಂ, ಬುಧವಾರ ಸೈಬರ್ ಕ್ರೈಂ ಠಾಣೆಗೆ ದೂರು ಕೊಟ್ಟಿದ್ದಾರೆ. ‘ಮಾರ್ಚ್ 22ರಂದು ಫೇಸ್‌ಬುಕ್‌ನಲ್ಲಿ ಕವಿತಾ ಮೋಹನ್ ಎಂಬ ಹೆಸರಿನಿಂದ ಫ್ರೆಂಡ್ ರಿಕ್ವೆಸ್ಟ್ ಬಂತು. ಅದನ್ನು ನಾನು ಒಪ್ಪಿಕೊಂಡೆ. ಆ ನಂತರ ಅವರು ಸಂದೇಶ ಕಳುಹಿಸಲು ಪ್ರಾರಂಭಿಸಿದರು. ಕೆಲ ದಿನಗಳ ಮಾತುಕತೆ ಬಳಿಕ, ಇಬ್ಬರೂ ಮೊಬೈಲ್ ಸಂಖ್ಯೆಗಳನ್ನು ಹಂಚಿಕೊಂಡಿದ್ದೆವು’ ಎಂದು ದೂರಿದ್ದಾರೆ.

‘ಏಪ್ರಿಲ್ ಮೊದಲ ವಾರದಲ್ಲಿ ಕರೆ ಮಾಡಿದ್ದ ಅವರು, ‘ನಾನೂ ಭಾರತದವಳು. ಸದ್ಯ ಅಮೆರಿಕಾದ ಬಯೋಫಾರ್ಮ್‌ ಸೊಲ್ಯುಷನ್ ಎಂಬ ಔಷಧದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಔಷಧ ತಯಾರಿಕೆಗೆ ಬಳಸುವ ಬೀಜಗಳು ನನ್ನ ಬಳಿ ಇವೆ. ಅವುಗಳಿಗೆ ಭಾರತದಲ್ಲಿ ಬೇಡಿಕೆ ಇದೆ. ನೀವು ಈ ಬೀಜಗಳನ್ನು ಖರೀದಿಸಿ ಅಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ’ ಎಂದಿದ್ದರು. ಅಲ್ಲದೆ, ತಮ್ಮ ಕಂಪನಿಯು ಅಮೆರಿಕ ಸರ್ಕಾರದಿಂದ ಮಾನ್ಯತೆ ಪಡೆದಿರುವುದಾಗಿ ಕೆಲ ದಾಖಲೆಗಳನ್ನೂ ಇ–ಮೇಲ್‌ ಮಾಡಿದ್ದರು.’ ‘ಆ ಮಾತನ್ನು ನಂಬಿದ ನಾನು, ಹಂತ ಹಂತವಾಗಿ ₹ 39 ಲಕ್ಷವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದೆ. ಮೇ 13ರಿಂದ ಅವರ ಫೇಸ್‌ಬುಕ್‌ ಖಾತೆ ಬ್ಲಾಕ್ ಆಗಿದೆ. ಮೊಬೈಲ್ ಸಹ ಸ್ವಿಚ್ಡ್‌ಆಫ್ ಆಗಿದೆ. ಅವರನ್ನು ‍ಪತ್ತೆ ಮಾಡಿ, ನನ್ನ ಹಣ ಕೊಡಿಸಿ’ ಎಂದು ಶಿವರಾಂ ಅವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ತನಿಖೆ: ಮೊಬೈಲ್ ಕರೆ, ಬ್ಯಾಂಕ್ ಖಾತೆ ಹಾಗೂ ಐಪಿ ವಿಳಾಸ ಆಧರಿಸಿ ತನಿಖೆ ನಡೆಸುತ್ತಿದ್ದೇವೆ’ ಎಂದು ಸೈಬರ್ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry