ರಾಜಭವನದ ಎದುರು ಖುಷಿಯ ಹೊನಲು

7
ಬಿಎಸ್‌ವೈ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ರಾಜಭವನದ ಎದುರು ಖುಷಿಯ ಹೊನಲು

Published:
Updated:
ರಾಜಭವನದ ಎದುರು ಖುಷಿಯ ಹೊನಲು

ಬೆಂಗಳೂರು: ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ರಾಜಭವನದ ಬಳಿ ಹಾಗೂ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಕಾರ್ಯಕರ್ತರು ಡೋಲು ತಮಟೆಗಳ ಸದ್ದಿಗೆ ಸಡಗರದಿಂದ ಹೆಜ್ಜೆ ಹಾಕಿದರು. ಕೆಲವು ವೃದ್ಧರು ವಯಸ್ಸಿನ ಹಂಗು ಮರೆತು ಕುಣಿದು ಕುಪ್ಪಳಿಸಿದರು. ವೀರಗಾಸೆ, ಡೊಳ್ಳುಕುಣಿತ ತಂಡಗಳು ಈ ಸಂಭ್ರಮವನ್ನು ಇಮ್ಮಡಿಗೊಳಿಸಿದವು.

ತಡವಾಗಿ ಬಂದ ಮುಖಂಡರು: ಸಮಾರಂಭ ಆರು ನಿಮಿಷಗಳಲ್ಲೇ ಸಂಪನ್ನಗೊಂಡಿತು. ಬಿಜೆಪಿಯ ಅನೇಕ ಮುಖಂಡರು ರಾಜಭವನವನ್ನು ತಲುಪುವಷ್ಟರಲ್ಲಿ ಕಾರ್ಯಕ್ರಮ ಮುಗಿದೇ ಹೋಯಿತು. ಸಂಸದ ಸುರೇಶ್‌ ಅಂಗಡಿ, ಶಾಸಕರಾದ ಉಮೇಶ್‌ ಕತ್ತಿ, ಎಸ್‌.ಆರ್‌. ವಿಶ್ವನಾಥ್‌, ಎಂ.ಕೃಷ್ಣಪ್ಪ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಮಾರಂಭ ಮುಗಿದ ಬಳಿಕ ಸ್ಥಳಕ್ಕೆ ತಲುಪಿದರು. ಚಿತ್ರದುರ್ಗದಲ್ಲಿ ಟಿಕೆಟ್‌ ಕೈ ತಪ್ಪಿದ ಕಾರಣಕ್ಕೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಚಿತ್ರ ನಟಿ ಭಾವನಾ ಅವರು ಕೂಡಾ ತಡವಾಗಿ ಸ್ಥಳಕ್ಕೆ ಬಂದರು.

ನೆಚ್ಚಿನ ನಾಯಕ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಯಡಿಯೂರಪ್ಪ ಅವರ ಅನೇಕ ಅಭಿಮಾನಿಗಳು ರಾಜ್ಯದ ಬೇರೆ ಬೇರೆ ಊರುಗಳಿಂದ ಬಂದಿದ್ದರು. ಹರಸಾಹಸ ಪಟ್ಟು ಸಮಾರಂಭಕ್ಕೆ ಪ್ರವೇಶಪತ್ರ ಗಿಟ್ಟಿಸಿಕೊಂಡಿದ್ದರು. ಆದರೆ, ಅವರು ಸ್ಥಳವನ್ನು ತಲುಪುವಾಗ ತಡವಾಗಿದ್ದರಿಂದ ಅವರ ಆಸೆ ಈಡೇರಲಿಲ್ಲ.

‘ನಾವು 50 ಮಂದಿ ಬೆಂಗಳೂರಿಗೆ ಬಂದಿದ್ದೇವೆ. ಇಲ್ಲಿಗೆ ಕಷ್ಟಪಟ್ಟು ತಲುಪಿದ್ದೆವು. ಪ್ರವೇಶಪತ್ರವೂ ಸಿಕ್ಕಿತ್ತು. ಆದರೂ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಆಗಲಿಲ್ಲ ಎಂದು ಬೇಸರವಾಯಿತು’ ಎಂದು ಸಖರಾಯಪಟ್ಟಣದ ನಟರಾಜ್‌ ತಿಳಿಸಿದರು.

ಕಾರ್ಯಕರ್ತರ ಸಂಭ್ರಮ: ‘ಯಡಿಯೂರಪ್ಪ ಮುಖ್ಯಮಂತ್ರಿಯಾದ ಖುಷಿ ಸುದ್ದಿಯೇ ಸಾಕು. ಅದರ ಮುಂದೆ, ಸಮಾರಂಭದಲ್ಲಿ ಭಾಗವಹಿಸಲು ಆಗಲಿಲ್ಲ ಎಂಬ ಬೇಸರ ಏನೂ ಅಲ್ಲ’ ಎಂದು ಬಿಜೆಪಿಯ ಚಿಕ್ಕೋಡಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಪ್ಪಸ್ವಾಮಿ ಸಿದ್ದಪ್ಪ ಬ್ಯಾಕೋಡ ಹೇಳಿದರು.

‘ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶಕ್ತಿಮೀರಿ ಪ್ರಯತ್ನಿಸಿದ್ದೇವೆ. ನಮ್ಮ ಕನಸು ಈಡೇರಿದೆ. ಸಮಾರಂಭದಲ್ಲಿ ಭಾಗವಹಿಸಲು ಅವಕಾಶ ಸಿಗುತ್ತಿದ್ದರೆ ತುಂಬಾ ಸಂತೋಷವಾಗುತ್ತಿತ್ತು’ ಎಂದು ಕೆಂಗೇರಿಯ ಬಿಜೆಪಿ ಕಾರ್ಯಕರ್ತೆಯರಾದ ನವೀನಾ ಹಾಗೂ ಅನು ತಿಳಿಸಿದರು. ‘ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕವೇ ಚಪ್ಪಲಿ ಹಾಕುವುದಾಗಿ ಹರಕೆ ಹೊತ್ತಿದ್ದೆ. ಮೂರು ತಿಂಗಳಿನಿಂದ ಕಾಲಿಗೆ ಚಪ್ಪಲಿಯನ್ನೇ ಧರಿಸಿಲ್ಲ’ ಎಂದು ಬರಿಗಾಲಿನಲ್ಲಿದ್ದ ಕಾರ್ಯಕರ್ತರೊಬ್ಬರು ತಿಳಿಸಿದರು.

ಸಮಾರಂಭದ ವೇಳೆ ರಾಜಭವನದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

*

ಚರಕವಿರುವ ಪೆಟ್ಟಿಗೆಯನ್ನು ಕೊರಳಿಗೆ ತೂಗುಹಾಕಿಕೊಂಡು ರಾಜಭವನದ ಬಳಿ ಅತ್ತಿತ್ತ ಓಡಾಡುತ್ತಿದ್ದ ಗಾಂಧಿ ವೇಷಧಾರಿ ಜನರ ಗಮನ ಸೆಳೆದರು. ಅಲ್ಲಿದ್ದವರಿಗೆಲ್ಲ ಅವರು, ‘ಕೆಟ್ಟದ್ದನ್ನು ಆಡಲಾರೆ, ಕೆಟ್ಟದ್ದನ್ನು ಕೇಳಲಾರೆ, ಕೆಟ್ಟದ್ದನ್ನು ನೋಡಲಾರೆ’ ಎಂಬ ಸಂದೇಶ ಸಾರುವ ಮಂಗಗಳ ಚಿತ್ರವನ್ನು ತೋರಿಸುತ್ತಿದ್ದರು. ಕೆಲವರು ಅವರ ಜೊತೆ ನಿಂತು ಸೆಲ್ಫಿ ತೆಗೆಸಿಕೊಂಡರು.

ಈ ವೇಷಧಾರಿಯ ಹೆಸರು ಶ್ರೀನಿವಾಸನ್‌ ಗೋಪಾಲ್‌ ಅಯ್ಯಂಗಾರ್‌. ರಾಜಾಜಿನಗರದ ನಿವಾಸಿಯಾಗಿರುವ ಅವರು ಅಮೆರಿಕದಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿದ್ದಾರೆ.‘15 ದಿನಗಳ ಹಿಂದೆ ಬೆಂಗಳೂರಿಗೆ ಮರಳಿದ್ದೆ. ರಾಜಕೀಯ ದುಃಸ್ಥಿತಿ ಕಂಡು, ಗಾಂಧೀಜಿಯ ಸಂದೇಶ ಸಾರಲು ಈ ರೀತಿ ವೇಷ ಧರಿಸಿದ್ದೇನೆ. ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡ ಮಂಗಗಳು ಪ್ರತಿಪಾದಿಸುವ ಮೂರು ತತ್ವಗಳನ್ನು ರಾಜಕಾರಣಿಗಳು ಪಾಲಿಸಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry