ಪ್ರಕರಣಗಳ ವಾಪಸ್‌ಗೆ ಯಡಿಯೂರಪ್ಪ ಸಿದ್ಧತೆ?

7
ಶಿವರಾಮ ಕಾರಂತ ಬಡಾವಣೆ ಡಿನೋಟಿಫೈ ಹಗರಣ

ಪ್ರಕರಣಗಳ ವಾಪಸ್‌ಗೆ ಯಡಿಯೂರಪ್ಪ ಸಿದ್ಧತೆ?

Published:
Updated:
ಪ್ರಕರಣಗಳ ವಾಪಸ್‌ಗೆ ಯಡಿಯೂರಪ್ಪ ಸಿದ್ಧತೆ?

ಬೆಂಗಳೂರು: ಶಿವರಾಮಕಾರಂತ ಬಡಾವಣೆಯ ಡಿನೋಟಿಫಿಕೇಶನ್‌ ಪ್ರಕರಣದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ವಾಪಸ್‌ ಪಡೆಯಲು ನೂತನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಗತ್ಯ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ಅಧಿಕಾರ ಸ್ವೀಕರಿಸಿದ ತಕ್ಷಣವೇ ತಮಗೆ ನಿಷ್ಠರಾಗಿರುವ ಅಧಿಕಾರಿಗಳನ್ನು ಆಯಕಟ್ಟಿನ ಜಾಗಗಳಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಆರಂಭಿಸಿರುವ ಮುಖ್ಯಮಂತ್ರಿ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಎಸಿಬಿಗೆ ಬಂದಿದ್ದ ಅಧಿಕಾರಿಗಳ ಎತ್ತಂಗಡಿಗೆ ಮುಂದಾಗಿದ್ದಾರೆ. ಎಸಿಬಿಯ ಎಸ್ಪಿ ಗಿರೀಶ್‌ ಅವರನ್ನು ಈಗಾಗಲೇ ವರ್ಗ ಮಾಡಲಾಗಿದೆ.

ಶಿವರಾಮಕಾರಂತ ಬಡಾವಣೆಯಲ್ಲಿ ಜಮೀನೇ ಇಲ್ಲದ ಕೆಲವು ಮಧ್ಯವರ್ತಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಆಧರಿಸಿ ಡಿ– ನೋಟಿಫೈ ಮಾಡಿದ ಆರೋಪ ಯಡಿಯೂರ‍‍ಪ್ಪ ಅವರ ಮೇಲಿದೆ.

ಈ ಸಂಬಂಧ 2017ರ ಆಗಸ್ಟ್‌ 10ರಂದು ಎಸಿಬಿ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು. ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ತನಿಖೆಗೆ ತಡೆಯಾಜ್ಞೆ ನೀಡಿದೆ.

ಉದ್ದೇಶಿತ ಶಿವರಾಮಕಾರಂತ ಬಡಾವಣೆಗಾಗಿ ಯಶವಂತಪುರ ಹಾಗೂ ಯಲಹಂಕ ಹೋಬಳಿ ವ್ಯಾಪ್ತಿಯಲ್ಲಿ ಬರುವ 17 ಗ್ರಾಮಗಳಲ್ಲಿ 3,546 ಎಕರೆ ಜಮೀನು ಸ್ವಾಧೀನಕ್ಕೆ 2008ರ ಡಿಸೆಂಬರ್‌ 30ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಇದರಲ್ಲಿ 257 ಎಕರೆಯನ್ನು ಸುಮಾರು 20 ಪ್ರಕರಣಗಳಲ್ಲಿ ಅಧಿಸೂಚನೆಯಿಂದ ಕೈಬಿಡಲಾಗಿತ್ತು. ಡಿನೋಟಿಫೈ ಮಾಡದಂತೆ ಬಿಡಿಎ ಹೇಳಿದ್ದರೂ ಅದನ್ನು ಲೆಕ್ಕಿಸದೆ ಆದೇಶ ಹೊರಡಿಸಲಾಗಿದೆ ಎಂದು ಹೇಳಲಾಗಿತ್ತು.

ತಮ್ಮ ವಿರುದ್ಧದ ಪ್ರಕರಣಗಳನ್ನು ವಾಪಸ್‌ ಪಡೆಯುವ ಕುರಿತು ಮುಖ್ಯಮಂತ್ರಿ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನೂ ಕೆಲವು ಡಿನೋಟಿಫಿಕೇಶನ್‌ ಪ್ರಕರಣಗಳನ್ನು ಎಸಿಬಿಗೆ ವಹಿಸಲು ಹಿಂದಿನ ಸರ್ಕಾರ ಕೊನೆ ಹಂತದಲ್ಲಿ ತೀರ್ಮಾನ ಕೈಗೊಂಡಿದೆ. ಆದರೆ, ಇವು ಇನ್ನೂ ಎಸಿಬಿಗೆ ಹಸ್ತಾಂತರಗೊಂಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry