ಸೋಮವಾರ, ಮಾರ್ಚ್ 1, 2021
20 °C

ಬಹುಮತ ಸಾಬೀತುಪಡಿಸುತ್ತೇವೆ –ಬಿಜೆಪಿ; ಸಿಎಂ ಬಿಎಸ್‌ವೈಗೆ ಒಂದು ದಿನ ಬಾಕಿಯಿದೆ –ಕಾಂಗ್ರೆಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹುಮತ ಸಾಬೀತುಪಡಿಸುತ್ತೇವೆ –ಬಿಜೆಪಿ; ಸಿಎಂ ಬಿಎಸ್‌ವೈಗೆ ಒಂದು ದಿನ ಬಾಕಿಯಿದೆ –ಕಾಂಗ್ರೆಸ್‌

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸಲು ಶನಿವಾರ ಸಂಜೆ 4 ಗಂಟೆಗೆ ಸಮಯ ನಿಗದಿಯಾದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ’ಬಹುಮತ’ದ ಚರ್ಚೆಗಳು ಬಿರುಸು ಪಡೆದಿವೆ.

ಪ್ರಮಾಣ ವಚನಕ್ಕೆ ತಡೆ ಕೋರಿ ಕಾಂಗ್ರೆಸ್–ಜೆಡಿಎಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ, ನಾಳೆ(ಶನಿವಾರ) ಸಂಜೆ 4ಕ್ಕೆ ವಿಶ್ವಾಸಮತ ಸಾಬೀತುಪಡಿಸುವಂತೆ ಆದೇಶಿಸಿದೆ.

ಬಹುಮತ ಸಾಬೀತುಪಡಿಸಲು ಹಾಗೂ ಉಳಿಸಿಕೊಳ್ಳಲು ಕಸರತ್ತು ಮುಂದುವರಿಸಿರುವ ಮೂರೂ ಪಕ್ಷಗಳು ಮೇಲ್ನೋಟಕ್ಕೆ ಕೋರ್ಟ್‌ ಆದೇಶವನ್ನು ಸ್ವಾಗತಿಸಿವೆ. ಜೊತೆಗೆ ಟ್ವಿಟರ್‌ನಲ್ಲಿ ಪರಸ್ಪರ ಟೀಕೆಗಳನ್ನು ಮುಂದುವರಿಸಿವೆ.

ಸುಪ್ರೀಂಕೋರ್ಟ್‌ ಆದೇಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮುಖಂಡ ರಣ್‌ದೀಪ್‌ ಸಿಂಗ್‌ ಸುರ್ಜೇವಾಲಾ, ‘ಸಂವಿಧಾನ ಗೆದ್ದಿದೆ. ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಿದೆ. ಮುಖ್ಯಮಂತ್ರಿ ಯಡಿಯುರಪ್ಪನವರಿಗೆ ಒಂದು ದಿನ ಉಳಿದಿದೆ. ರಾಜ್ಯಪಾಲರ ಅಸಂವಿಧಾನಿಕ ನಿರ್ಧಾರ ಹಾಗೂ ನ್ಯಾಯಸಮ್ಮತವಲ್ಲದ ಮುಖ್ಯಮಂತ್ರಿಯನ್ನು ಸಂವಿಧಾನ ತಿರಸ್ಕರಿಸುತ್ತದೆ.' ಎಂದಿದ್ದಾರೆ

ರಾಹುಲ್‌ ಗಾಂಧಿ, ‘ರಾಜ್ಯಪಾಲರ ಅಸಂವಿಧಾನಿಕ ನಿರ್ಧಾರದ ವಿರುದ್ಧದ ನಮ್ಮ ನಿಲುವನ್ನು ಸುಪ್ರೀಂಕೋರ್ಟ್‌ ಆದೇಶ ಸಮರ್ಥಿಸುತ್ತದೆ. ಬಹುಮತ ಸಾಬೀತುಪಡಿಸಲು ಕಾನೂನು ಮಾರ್ಗವನ್ನು ಕೈಬಿಟ್ಟರುವ ಬಿಜೆಪಿ ಹಣ ಹಾಗೂ ತೋಳ್ಬಲವನ್ನು ಬಳಸಲು ಮುಂದಾಗಿದೆ’ ಎಂದು ದೂರಿದ್ದಾರೆ.

’ಸಂವಿಧಾನ ಹಾಗೂ ನ್ಯಾಯವನ್ನು ಎತ್ತಿಹಿಡಿದಿರುವ ಸುಪ್ರೀಂಕೊರ್ಟ್‌ ಆದೇಶವನ್ನು ನಾವು ಸ್ವಾಗತಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಟ್ವೀಟಿಸಿದ್ದಾರೆ.

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರೂ ಆದೇಶವನ್ನು ಸ್ವಾಗತಿಸಿದ್ದು, ‘ಈ ಆದೇಶವು ಅಕ್ರಮವಾಗಿ, ಅನೈತಿಕವಾಗಿ ಹಾಗೂ ತತ್ವರಹಿತವಾಗಿ ಅಧಿಕಾರಕ್ಕೇರುವ ಬಿಜೆಪಿ ಪ್ರಯತ್ನಕ್ಕೆ ಅವಕಾಶ ನಿರಾಕರಿಸಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಸುಪ್ರೀಂಕೊರ್ಟ್‌ ತೀರ್ಪು ಐತಿಹಾಸಿಕ. ಸಂವಿಧಾನದಲ್ಲಿ ರಾಜ್ಯಪಾಲರ ಪಾತ್ರ ಬಹಳ ಮುಖ್ಯವಾದದ್ದು ಮತ್ತು ಅವರು ಪಕ್ಷಪಾತ ರಹಿತವಾಗಿ ಕಾರ್ಯನಿರ್ವಹಿಸಬೇಕು. ಆದರೆ ಕರ್ನಾಟಕದಲ್ಲಿ ರಾಜ್ಯಪಾಲರು ಬಿಜೆಪಿ ಪರವಾಗಿ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಆರೋಪಿಸಿರುವ ಸಿದ್ದರಾಯಮ್ಯ ಹೇಳಿಕೆಯನ್ನು ಕರ್ನಾಟಕ ಕಾಂಗ್ರೆಸ್‌ ಟ್ವಿಟರ್‌ ಪುಟದಲ್ಲಿ ಪ್ರಕಟಿಸಲಾಗಿದೆ.

’ಕಾನೂನನ್ನು ಎತ್ತಿಹಿಡಿದಿರುವ ಆದೇಶ ನೀಡಿರುವುದಕ್ಕೆ ಸುಪ್ರೀಂಕೊರ್ಟ್‌ಗೆ ಧನ್ಯವಾದಗಳು. ಬಿಜೆಪಿಯಿಂದ ಕೆಲವು ರಾಜ್ಯಪಾಲರನ್ನು ನೇಮಕಮಾಡಲಾಗಿದೆ. ಅವರು ಸಂವಿಧಾನಕ್ಕೆ ಅನುಗುಣವಾಗಿ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ’ ಎಂದು ಪಕ್ಷದ ನಾಯಕ ಗುಲಾಂ ನಬೀ ಅಜಾದ್‌ ದೂರಿದ್ದಾರೆ. ಜೊತೆಗೆ, ‘ನಾವು ಕಾಂಗ್ರೆಸ್‌, ಜೆಡಿ(ಎಸ್‌) ಹಾಗೂ ಪಕ್ಷೇತರ ಶಾಸಕರ ಪಟ್ಟಿಯೊಂದಿಗೆ ರಾಜ್ಯಪಾಲರಲ್ಲಿ ಮನವಿ ಸಲ್ಲಿಸಿದ್ದೆವು. ಆದರೆ, ದುರದೃಷ್ಟವಶಾತ್‌ ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿದರು.

ಸ್ವತಂತ್ರ ಭಾರತದ ಇತಿಹಾದಲ್ಲಿ ಯಾವೊಬ್ಬ ರಾಜ್ಯಪಾಲರೂ ಬಹುಮತ ಸಾಬೀತಿಗೆ 15 ದಿನಗಳ ಅವಕಾಶ ನೀಡಿರಲಿಲ್ಲ’ ಎಂದು ಆಪಾದಿಸಿದ್ದಾರೆ.

ಸಂವಿಧಾನದಲ್ಲಿನ ನಮ್ಮ ನಂಬಿಕೆಯನ್ನು ಸುಪ್ರೀಂಕೊರ್ಟ್‌ ಮರುಸ್ಥಾಪಿಸಿದೆ. ನಾವು ಬಹುಮತ ಸಾಬೀತುಪಡಿಸುವ ವಿಶ್ವಾಸದಲ್ಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ಪಾಳಯದಲ್ಲಿನ ಮಾತು

ರಾಜ್ಯಪಾಲರ ನಿರ್ಧಾರಕ್ಕೆ ತಡೆಕೋರಿ ಸುಪ್ರೀಂಕೋರ್ಟ್‌ಗೆ ಕಾಂಗ್ರೆಸ್‌ ‘ಪ್ರಾರ್ಥನೆ’ ಸಲ್ಲಿಸಿತ್ತು. ಕಾಂಗ್ರೆಸ್‌–ಜೆಡಿಎಸ್‌ ಸಲ್ಲಿಸಿದ್ದ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರೂ ನಾವು ಗೆದ್ದಿರುವುದಾಗಿ ಹೇಳಿಕೊಳ್ಳುತ್ತಿವೆ. ಇದು ಗುಜರಾತ್‌ ಚುನಾವಣೆ ಸೋಲಿನ ಬಳಿಕ ನೈತಿಕವಾಗಿ ಗೆದ್ದಿದ್ದೇವೆ ಎಂದು ಹೇಳಿದ್ದ ರಾಹುಲ್‌ ಗಾಂಧಿ ಹೇಳಿಕೆಯಂತಿದೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌–ಜೆಡಿಎಸ್‌ ಪಕ್ಷದವರು ಎಲ್ಲರೂ ನೋಡುವಂತೆ ನಾಟಕ ಮಾಡುತ್ತಿದ್ದಾರೆ. ತಮ್ಮದೇ ಶಾಸಕರು ಅತೃಪ್ತಿ ಹೊಂದಿರುವುದು ಅವರಿಗೂ ಚೆನ್ನಾಗಿ ಗೊತ್ತಿದೆ. ಅದು ನಾಳೆ ಜಗತ್ತಿಗೆ ಗೊತ್ತಾಗಲಿದೆ. ನಾಳೆ ನಾವು ವಿಜಯಶಾಲಿಗಳಾಗಲಿದ್ದೇವೆ’ ಎಂದು ಬಿಜೆಪಿ ಕರ್ನಾಟಕ ಟ್ವೀಟ್‌ ಮಾಡಿದೆ.

ಜೊತೆಗೆ, ಸುಪ್ರೀಂಕೋರ್ಟ್‌ ಆದೇಶದಂತೆ ನಾಳೆ 4 ಗಂಟೆಗೆ ನಾವು ವಿಶ್ವಾತಮತ ಸಾಬೀತು ಮಾಡಲಿದ್ದೇವೆ. ನಮ್ಮ ಮೇಲೆ ರಾಜ್ಯದ 6 ಕೋಟಿ ಕನ್ನಡಿಗರ ಆಶೀರ್ವಾದವಿದೆ ಎಂದೂ ಟ್ವೀಟ್‌ ಮಾಡಿದೆ.

‘ನಿನ್ನೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸುಪ್ರೀಂಕೋರ್ಟ್‌ ಅನ್ನು ಪಾಕಿಸ್ತಾನದೊಂದಿಗೆ ಹೋಲಿಸಿದ್ದರು. ಆದಾಗ್ಯೂ ಕೋರ್ಟ್‌ ತನ್ನ ಆದೇಶದ ಮೂಲಕ ಕಾಂಗ್ರೆಸ್‌ಗೆ ಅವಕಾಶ ನೀಡಿದೆ. ಕೋರ್ಟ್‌ ಒಂದೇ ಬಗೆಯಲ್ಲಿದೆ. ಆದರೆ ಕಾಂಗ್ರೆಸ್‌ ಬಣ್ಣ ಬದಲಿಸಿದೆ. ರಾಹುಲ್‌ ಅವರು ಕೋರ್ಟ್‌ ಕ್ಷಮೆ ಯಾಚಿಸುವಂತೆ ಒತ್ತಾಯಿಸುತ್ತೇವೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಬರೆದುಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.