ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುರಣಿಸಲಿದೆ ತಬಲಾ ವಾದನ

Last Updated 18 ಮೇ 2018, 19:30 IST
ಅಕ್ಷರ ಗಾತ್ರ

ನಗರದ ಸಂಗೀತಪ್ರಿಯರಿಗೆ ಕೇಳುವ ಕಿವಿ, ಮನಸಿದ್ದರೆ ಹಾಡುವ ದನಿಗಳಿಗೆ, ಆಯೋಜಿಸುವ ಆಸಕ್ತರಿಗೇನೂ ಕೊರತೆಯಿಲ್ಲ. ನಿತ್ಯವೂ ಒಂದಿಲ್ಲೊಂದು ಸಂಗೀತ  ರಸಸಂಜೆಗಳು ನಡೆಯುತ್ತಲೇ ಇರುತ್ತವೆ. ಆದರೆ ತಬಲಾವೇ ಪ್ರಧಾನವಾದ, ತಬಲಾ ವಾದಕರನ್ನೇ ಅಭಿನಂದಿಸುವ ಕಾರ್ಯಕ್ರಮಗಳು ಅಪರೂಪ.

‘ಕಲ್ಲೂರು ಮಹಾಲಕ್ಷ್ಮಿ ತಬಲಾ ವಿದ್ಯಾಲಯ’ ಶನಿವಾರ (ಮೇ 19) ಜಯನಗರದ ಜೆಎಸ್‌ಎಸ್‌ ಸಭಾಂಗಣದಲ್ಲಿ ಸಂಜೆ 4.30ಕ್ಕೆ ‘ತಬಲಾ ಉತ್ಸವ‍’ವನ್ನು ಆಯೋಜಿಸಿದೆ. ಹಿರಿಯ ತಬಲಾ ವಾದಕರನ್ನು ಗೌರವಿಸುವ, ತಬಲಾ ವಾದನದ ಅರಳು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವ ಅಪರೂಪದ ಕಾರ್ಯಕ್ರಮವಿದು.

ಕಾರ್ಯಕ್ರಮದಲ್ಲಿ ತಬಲಾ ವಾದನದ ಸುಧೆ ಹರಿಯಲಿದೆ. ಆರಂಭಿಕವಾಗಿ ವಿದ್ಯಾಲಯದ ವಿದ್ಯಾರ್ಥಿಗಳ 8 ಜನರ ಸಮೂಹ ತಬಲಾ ವಾದನ ಇರಲಿದೆ. ಕಾರ್ಯಕ್ರಮದಲ್ಲಿ ಮತ್ತೊಂದು ವಿಶೇಷ ಹಿಂದೂಸ್ತಾನಿ ಜುಗಲ್‌ಬಂದಿ. ಇದರಲ್ಲಿ ಸಿದ್ಧಾರ್ಥ ಬೆಳ್ಮಣ್ಣು ಅವರ ಗಾಯನಕ್ಕೆ ಷಡ್ಜ ಗೋಡ್ಕಿಂಡಿ ಅವರ ಕೊಳಲು ವಾದನ ಹಾಗೂ ರೂಪಕ್‌ ಕಲ್ಲೂರ್‌ಕರ್‌ ಅವರ ತಬಲಾ ವಾದನ ಜೊತೆಯಾಗಲಿದೆ. ಹಿರಿಯ ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.

1985ರಲ್ಲಿ ರಾಜಗೋಪಾಲ್‌ ಕಲ್ಲೂರ್‌ಕರ್‌ ಅವರು ಧಾರವಾಡದಲ್ಲಿ ಸ್ಥಾಪಿಸಿದ ಕಲ್ಲೂರ್‌ ಮಹಾಲಕ್ಷ್ಮಿ ತಬಲಾ ವಿದ್ಯಾಲಯಕ್ಕೆ ಈಗ 33ರ ಹರೆಯ. 1997ರಲ್ಲಿ ಕತ್ರಿಗುಪ್ಪೆಯಲ್ಲೂ ಆರಂಭವಾದ ವಿದ್ಯಾಲಯ, ಪ್ರತಿವರ್ಷ ತಬಲಾ ಉತ್ಸವವನ್ನು ಆಯೋಜಿಸುತ್ತದೆ. ಇದೇ ಸಂದರ್ಭದಲ್ಲಿ ಹಿರಿಯ ತಬಲಾ ವಾದಕರನ್ನು ಗುರುತಿಸಿ ‘ಲಯಶ್ರೀ ಕಮಲ’ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಇದುವರೆಗೆ ನಯನ್‌ ಘೋಷ್‌, ಶುಭಂಕರ್‌ ಬ್ಯಾನರ್ಜಿ, ಫಜಲ್‌ ಖುರೇಷಿ ಮೊದಲಾದವರು ವಿದ್ಯಾಲಯದ ಪ್ರಶಸ್ತಿ ಪುರಸ್ಕರಿಸಿ ತಬಲಾ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ.

ಈ ತಬಲಾ ವಿದ್ಯಾಲಯದಲ್ಲಿ ಸದ್ಯ ರಾಜ್ಯದ 150 ಜನ ವಿದ್ಯಾರ್ಥಿಗಳು ತಬಲಾ ವಾದನ ಕಲಿಯುತ್ತಿದ್ದಾರೆ. ರಾಜಗೋಪಾಲ್‌ ಕಲ್ಲೂರ್‌ಕರ್‌ ಅವರು ಆನ್‌ಲೈನ್‌ನಲ್ಲಿ ಸ್ಕೈಪ್‌ ಮೂಲಕ ಆಸಕ್ತ ವಿದೇಶಿ ವಿದ್ಯಾರ್ಥಿಗಳಿಗೂ ತಬಲಾ ವಾದನ ಕಲಿಸುತ್ತಿದ್ದಾರೆ. ಪ್ರತಿದಿನ 5 ಗಂಟೆಯಿಂದ ತರಗತಿಗಳು ಆರಂಭವಾಗುತ್ತವೆ. 5 ಬ್ಯಾಚ್‌ಗಳಲ್ಲಿ  ವಿದ್ಯಾರ್ಥಿಗಳು ಕಲಿಯುತ್ತಾರೆ. ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಾರೆ. ಶನಿವಾರ ಮತ್ತು ಭಾನುವಾರ ಬೆಳಿಗ್ಗೆ ವಿಶೇಷವಾಗಿ ಉದ್ಯೋಗಿಗಳಿಗಾಗಿ ತರಬೇತಿ ನೀಡುತ್ತಾರೆ. ರೂಪಕ್‌ ಕಲ್ಲೂರ್‌ಕರ್‌, ಕಿಶೋರ್ ಕುಲಕರ್ಣಿ, ಸುದರ್ಶನ ಮೂರ್ತಿ, ಕಾರ್ತಿಕ್‌ ಮೊದಲಾದವರು ಈ ವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದವರು.

ಈ ಬಾರಿ ಖ್ಯಾತ ತಬಲಾ ವಾದಕ ಪಂಡಿತ್‌ ರವೀಂದ್ರ ಯಾವಗಲ್‌ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು ₹ 50 ಸಾವಿರ ನಗದು, ಪ್ರಶಸ್ತಿಪತ್ರ, ಫಲಕಗಳನ್ನು ಒಳಗೊಂಡಿದೆ. ರವೀಂದ್ರ ಅವರು ಶೇಷಗಿರಿ ಹಾನಗಲ್‌ ಅವರ ಶಿಷ್ಯರಾಗಿದ್ದು, ಬೆಂಗಳೂರು ಆಕಾಶವಾಣಿಯ ನಿಲಯ ಕಲಾವಿದರೂ ಹೌದು. ಪ್ರಶಸ್ತಿ ಪುರಸ್ಕೃತರಿಂದ ತಬಲಾ ವಾದನವಿದ್ದು, ಅವರಿಗೆ ರಂಜನ್‌ಕುಮಾರ್ ಅವರ ಪಿಟೀಲು ಜೊತೆಯಾಗಲಿದೆ.

**

ತಬಲ ಉತ್ಸವ: ಅತಿಥಿ–ಡಾ.ಎಚ್.ಎಸ್.ವೆಂಕಟೇಶಮೂರ್ತಿ. ಆಯೋಜನೆ–ಕಲ್ಲೂರು ಮಹಾಲಕ್ಷ್ಮಿ ತಬಲ ವಿದ್ಯಾಲಯ. ‌

ಸ್ಥಳ–ಜೆಎಸ್‌ಎಸ್‌ ಸಭಾಂಗಣ, 8ನೇ ಬ್ಲಾಕ್‌, ಜಯನಗರ. ಶನಿವಾರ ಸಂಜೆ 4.30 ಪ್ರವೇಶ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT