ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಹೂರ್ತೆ ಸಾವಧಾನ...!

Last Updated 18 ಮೇ 2018, 19:30 IST
ಅಕ್ಷರ ಗಾತ್ರ

ಬೆಳಗೆದ್ದು ಪೇಪರ್‌ ಕೈಯ್ಯಾಗ್‌ ಹಿಡಕೊಂಡು ಮುಖಪುಟದ ಮ್ಯಾಲೆ ಕಣ್ಣಾಡಿಸುತ್ತಿರುವಾಗಲೇ ಫೋನ್‌ ಬಡ್ಕೊಳಾಕತ್ತಿತ್ತು. ‘ಹಲೋ’ ಎನ್ನುತ್ತಿದ್ದಂತೆ, ‘ರೆಡಿ ಆಗಿ ಏನ್‌’ ಅಂದ ಪ್ರಭ್ಯಾ.

‘ಎದ್ಕ, ಪ್ರಮಾಣ ವಚನಕ್ಕs’ ಎಂದು ಕೇಳಿದೆ. ‘ಏಯ್‌,  ಆ ಮೂವರಿಗೂ ಅದೇ ಧ್ಯಾನ ಅನ್ನು ಹಂಗ್, ನೀನೂ ಅದೇ ಗುಂಗ್‌ನ್ಯಾಗ್ ಇದ್ಹಂಗ್ ಕಾಣತೈತಿ. ಇವತ್ತ ಚುನಾವಣಾ ಫಲಿತಾಂಶದ ದಿನಾ, ಗೊತ್ತದ ಇಲ್ಲ. ಟೀವಿ ಚಾಲು ಮಾಡ್‌. ನಮ್ಮ ಸಾಹೇಬ್ರು ತಮ್ಮ ಪ್ರಮಾಣ ವಚನಕ್ಕ ಮುಹೂರ್ತ ನಿಕ್ಕಿ ಮಾಡ್ದಂಗ್ಹ್ ನಮ್ದs ಸರ್ಕಾರ್‌ ಅಧಿಕಾರಕ್‌ ಬರಾಕತ್ತದ್‌ ನೋಡ್‌’ ಅಂದ.

‘ಅರೆ ಹೌದಲ್ಲ, ಮರ್ತೆಬಿಟ್ಟಿದ್ದೆನಲ್ಲ. ನಾನೆಂತಹ ಮೂರ್ಖ’ ಎಂದು ನನ್ನಷ್ಟಕ್ಕೆ ನಾನೇ ಬೈದುಕೊಳ್ಳುತ್ತ ಮೂರ್ಖರ ಪೆಟ್ಟಿಗೆ ಆನ್‌ ಮಾಡಿದೆ. ಬಿಜೆಪಿ ಮುನ್ನಡೆ, ಭರ್ಜರಿ ಗೆಲುವಿನತ್ತ, ಸರ್ಕಾರ ಬದಲಿಸುವತ್ತ ಬಿಜೆಪಿ... ಬ್ರೆಕಿಂಗ್‌ ನ್ಯೂಸ್‌ ನೋಡುತ್ತಿದ್ದಾಗಲೇ ಪ್ರಭ್ಯಾ ಗೂಳಿ ನುಗ್ಗಿದ್ಹಂಗ್‌ ಹುರುಪಿನಿಂದಲೇ ಮನಿ ಒಳಗ್‌ ನುಗ್ಗಿ ಬಂದ. ನನ್ನತ್ತ  ಒಂಥರಾ ನೋಡಿ ‘ಯಾಕೊ ಸಪ್ಪಗಿದ್ದಿಯಲ್ಲ. ಮದ್ವಿ ಮನ್ಯಾಗ ಮುಹೂರ್ತದ ಕಾಲ ಮೀರಿ ಹೋಗುಮುಂದ ಕನ್ಯಾಪಿತೃಗಳ ಮಾರಿಮ್ಯಾಲ್‌ ಗಾಬರಿ ಇದ್ಹಂಗ್‌ ಹಿಂಗ್ಯಾಕ್‌ ಗಾಬರಿ ಗೋಪಾಲಯ್ಯ ಥರಾ ಕುತ್ಕೊಂಡಿ. ಕಮಲ ಅರಳಾ ಕತ್ತಿದ್ದು ನೋಡಿ ಹೊಟ್ಯಾಗ್‌ ಖಾರಾ ಕಲ್ಸದಂಗ್‌ ಆಗಾಕತ್ತಾದ್‌ ಏನ್‌’ ಎಂದ.

ಮಕದ್‌ ಮ್ಯಾಲ್‌ ಬಾರದ ನಗೆ ಬರೆಸಿಕೊಂಡು, ‘ಹೆ ಹೆ ಹೆ ನಾನ್ಯಾಕ್‌ ಸಪ್ಪಗಾಗ್ಲಿ. ನಂದು ಮದ್ವಿ ಮುಹೂರ್ತದ ಚಿಂತಿ ಅಲ್ಲೋ ಮಾರಾಯಾ. ಮುಖ್ಯಮಂತ್ರಿ ಆಗಾಕ್‌ ಮೂರ್‌ ಮಂದಿ ಮುಹೂರ್ತ ಫಿಕ್ಸ್‌ ಮಾಡಿ ಹೊಸಾ ಅಂಗಿ, ಸೂಟ್‌ಬೂಟ್‌, ಪಂಚೆ, ಶಲ್ಯೆ ಖರೀದಿಸಿದ್ರಲ್ಲ. ಅದ್ರಾಗ್‌ ಒಬ್ಬರ ಮುಹೂರ್ತಾನೂ ಕೂಡಿ ಬರ್ತಾ ಇಲ್ವಲ್ಲ. ಹಳೆ ಗಂಡ ಹೆಂಡತಿ ಮತ್‌ ಒಂದ್‌ ಆಗು ಸಾಧ್ಯತೆನೂ ಕಾಣ್ತಾ ಇಲ್ಲ. ಬಹುಶಃ ಕೂಡಿಕಿನಾ ಗತಿ ಕಾಣಸ್ತದ ನೋಡ್‌’ ಅಂದೆ.

‘ನೀ ಏನ್‌ ಹೇಳ್‌, ಈ ಸಲ ಕೂಡ್ಕಿ ಗಿಡ್ಕಿ ಏನೂ ನಡೆದಿಲ್ಲ. ಯಡ್ಡಿ ಅವರ ಮುಹೂರ್ತ ಅಂದ್ರ ಮುಹೂರ್ತ. ಬೇಕಾದ್ರ ಗ್ವಾಡಿ ಮ್ಯಾಗ್‌ ಉಗುಳ್‌ ಹಚ್‌ತೀನಿ ನೋಡ್‌’ ಅಂದ.

‘ನಿಮ್ಮ ಕಮಲ ಗಿರಕಿ ಹೊಡ್ಯಾಕತ್ತೈತಿ. ಬೆಳಿಗ್ಗೆ ಅರಳಿದ್ದ ಕಮಲ, ಸ್ವಲ್ಪ ಹೊತ್ತಿನ್ಯಾಗ ಕಮರಾಕತ್ತೈತಿ ನೋಡ್. ಮುಹೂರ್ತ ಮೂರಾಬಟ್ಟಿ ಆಗು ‘ಹಂಗ್‌’ ಕಾಣ್ಸಾಕತ್ತದ್‌ ನೋಡ್’ ಅಂದೆ.

‘ಏಯ್‌ ಅಮಾಸಿ ಮಾರ‍್ಯಾವ್ನ, ಅಮಾಸಿ ದಿನ ಹಂಗೆಲ್ಲ ಅಡ್ಡಡ್ಡ ಮಾತಾಡಬ್ಯಾಡ್ ಹುಷಾರ್‌’ ಎಂದ ಬೆದರಿಕೆ ದನಿಯಲ್ಲಿ.

‘ಲೇ ಪ್ರಭ್ಯಾ ನಿಮ್ಮ ‍ಪಕ್ಷಕ್ಕ ಇನ್ನs ಬಹುಮತಾನ ಬಂದಿಲ್ಲ. ಈಗs  ಹೀಂಗ್ ಮಾತಾಡ್ತಿಯಲ್ಲ. ಸ್ವಲ್ಪ ಹೊತ್ತ ಬಾಯಿ ಮುಚ್ಕೊಂಡ್‌ ಕುತ್ಕೊ. ಕಾಂಗ್ರೆಸ್‌ನವ್ರಿಗೆ ಮೋದಿ ಬೆದರಿಕಿ ಹಾಕ್ದಂಗ್‌ ಮಾತಾಡ್‌ಬ್ಯಾಡ್‌. ಇಲ್ಲಂದ್ರ ರಾಷ್ಟ್ರಪತಿಗೇ ದೂರು ಕೊಡ್ಬೇಕಾಗ್ತೈತಿ ನೋಡ್‌’ ಎಂದೆ. ‘ರಾಜ್ಯಪಾಲರು, ರಾಷ್ಟ್ರಪತಿಯೂ ನಮ್ಮವ್ರಲೇ ನೆನಪಿರ್ಲಿ’ ಎಂದು ತಿರುಗೇಟ್‌ ಕೊಟ್ಟ.

‘ರಾಷ್ಟ್ರಪತಿ, ರಾಜ್ಯಪಾಲರು ನಿಮ್ಮವರs ಇರಬಹುದು. ಆದ್ರ ಎಲ್ಲಾ ಮತದಾರರೂ ನಿಮ್ಮವರು ಅಲ್ಲಲ್ಲ. ಅದ್ನ ನೆನಪ್ ಇಟ್ಕೊ’ ಎಂದು ಹೇಳಿ ಬಾಯಿ ಮುಚ್ಚಿಸಿದೆ.

‘ಹ್ಞೂ, ಆಯ್ತ್‌ ಬಿಡಪ. ಕುಮಾರಣ್ಣ ಅವರಪ್ಪನಾಣೆಗೂ ಮುಖ್ಯಮಂತ್ರಿ ಆಗಲ್ಲ ಅಂತ ಹೇಳ್ತಿದ್ದ, ಸಿದ್ರಾಮಣ್ಣನs ಈಗ ಅವರನ್ನ ‘ಮುಮ’ ಮಾಡಾಕ್ ಮುಹೂರ್ತ ನಿಕ್ಕಿ ಮಾಡುವ ಪೂಜಾರಿ ಆಗ್ಯಾನಲ್ಲೋ’ ಎಂದು ಚರ್ಚೆ ಬೇರೆಡೆ ತಿರುಗಿಸಿದ.

‘ಕಮಲಕ್ಕ ವೋಟ್‌ ಮಾಡ್ಲಾರದವ್ರಿಗೆ ಕೈಕಾಲ್‌ ಕಟ್ಟಿ ವೋಟ್‌ ಹಾಕಿಸಬೇಕು ಅಂತ ಹೇಳಿದ್ದ ಯಡ್ಡಿ, ಈಗ ಯಾರ‍್ಯಾರ್‌ ಕೈ ಕಾಲ್‌ ಹಿಡಿಬೇಕಾಗಿ ಬಂದದ್‌ ನೋಡ್’ ಎಂದೆ.

‘ಬಿಜೆಪಿ ಪಕ್ಕ ನಿಂತ್‌ ಕೆಮ್ಮಿದ್ರ ಕಾಂಗ್ರೆಸ್ ದೂಳಿಪಟ ಆಗ್‌ತೈತಿ’ ಅಂತ ಬಡ್ಕೊಂಡಿದ್ದ ಕುಮಾರಣ್ಣ, ಈಗ ಕಾಂಗ್ರೆಸ್‌ ಪಕ್ಷದ ಪಕ್ಕದಾಗ್‌s ನಿಂತ್ಕೊಂಡ್‌ ಕೆಮ್ಮಾಕತ್ತಾರಲ್ಲೋ’ ಎಂದು ಪ್ರಭ್ಯಾ ಕೆಣಕಿದ.

ಅಷ್ಟರಾಗs, ‘ಸ್ವಾಮಿಯೇ ಶರಣಂ ಅಯ್ಯಪ್ಪ, ಅಯ್ಯಪ್ಪಗೆ ಜಯವಾಗಲಿ, ಅಯ್ಯಯ‌ಪ್ಪೋ...’  ಎಂದು ಹೇಳ್ಕೋತ್ತಲೇ ಕೀಟಲೆ ಸ್ವಭಾವದ ವಕೀಲ್‌ ಬಸ್ಯಾ ಒಳಗ್‌  ಬಂದ. ಯಡ್ಡಿ, ಸಿದ್ದಣ್ಣ, ಕುಮಾರಣ್ಣ ಇವ್ರ ಮಧ್ಯೆ ‘ಅಯ್ಯಪ್ಪ’ ಯಾರಪ್ಪ ಎಂದು ಪ್ರಭ್ಯಾ ಗಾಬರಿಯಿಂದ ಪ್ರಶ್ನಿಸಿದ.

‘ಇಲ್ನೋಡ್ರೊ, ವಾಟ್ಸ್‌ಆ್ಯಪ್‌ನಾಗ್‌ ಭೂಪನೊಬ್ಬ ಹೆಂಗ್‌ ಬರ್ದಾನ ನೋಡಿಲ್ಲಿ’ ಅಂದ ವಕೀಲ. ಸಿದ್ದರಾಮ ‘ಅಯ್ಯ’, ಯಡಿಯೂರ‘ಪ್ಪ’ ಮತ್ತ ಕುಮಾರ ‘ಸ್ವಾಮಿ’–  ಹೀಂಗ್‌ ಒಂದ್‌ ಹೊಸಾ ನಮೂನಿ ‘ಅಯ್ಯಪ್ಪಸ್ವಾಮಿ’ ಸರ್ಕಾರ ಬಂದ್ರ ಛಲೋ ಇರ್ತದ. ಕುಮಾರಣ್ಣ, ಪರಮಣ್ಣನ ಸರ್ಕಾರಕ್ಕಿಂತ ಹೊಸ ‘ಅಯ್ಯಪ್ಪ’ ಸರ್ಕಾರ ಮಾಡಿ 20 ತಿಂಗಳಿಗೊಮ್ಮೆ ‘ಗಂಡ–ಹೆಂಡತಿ ಮತ್ತ ಅಕಿ...’ ಅಂತ ಅಧಿಕಾರ ಹಂಚಿಕೊಂಡ್ರ ಮೂವರ ಮುಹೂರ್ತದ ಮಾತಿಗೆ ಬೆಲೆ ಬರ್ತದ. ಅವರೆಲ್ಲ ಅವರವರ ಅಪ್ಪನಾಣೆಗೂ ಕೊಟ್ಟ ಮಾತಿನಂತೆ ನಡೆದರೆ ಸ್ಥಿರ ಸರ್ಕಾರ ಆಗ್ತದ. ಈ ಪ್ರಯೋಗ ಇಡೀ ದೇಶಕ್ಕ ಆದರ್ಶ ಆಗ್ತದ ನೋಡಪಾ’  ಎಂದ ಬಸ್ಯಾ.

‘ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಇದೇ ಮನವಿ ಪತ್ರ ಸಲ್ಲಿಸಿದ್ರ ಮುಮ ಪ್ರಮಾಣ ವಚನ ಸುಸೂತ್ರ ಆಗ್ತದ ಅಂತ ಯಡಿಯೂರಪ್ಪ ಅವರಿಗೆ ಹೇಳಿದ್ರಾತು’ ಅಂತ ಪ್ರಭ್ಯಾ ಹೇಳ್ಕಿ ಕೊಟ್ಟು ಹೊರಗ್‌ ಹೋಗಾಕ್‌ ಅವಸ್ರಾ ಮಾಡಿದ.

‘ಯಾಕಪ, ಕುಂದ್ರು. ಏನ್‌ ಅವಸರ ಐತಿ’ ಎಂದೆ. ‘ಶಬರಿಮಲೆಗೆ ಹೋಗಿ ಅಯ್ಯಪ್ಪಸ್ವಾಮಿ ದರ್ಶ್ನಾ ಮಾಡಿ ಪ್ರಸಾದ ತಗೊಂಡು ಬರುದೈತಿ’ ಅಂತ ಓಡು ನಡಿಗೆಯಲ್ಲಿ ಮನೆಯಿಂದ ಹೊರಬಿದ್ದ ಪ್ರಭ್ಯಾ.

ಎರ್ಡ್‌ ದಿನಗಳ ನಂತರ... ಐನ್‌ ಟೈಮ್‌ನ್ಯಾಗ್‌ ಮತ್ತ ಫೋನ್‌ ರಿಂಗ್‌ ಆಗ್‌ತ್ತಿದ್ದಂಗ್‌ ಎತ್ತಿಕೊಂಡ್ರೆ, ‘ಏನಾತಪಾ. ಬ್ರೆಕಿಂಗ್‌ ನ್ಯೂಸ್‌ ಏನ್‌ ಐತಿ. ಜಲ್ದಿ ಹೇಳ್‌’ ಅಂತ ಪ್ರಭ್ಯಾ ಅವಸರಿಸಿದ.

‘ಏಯ್‌ ಗೂಬೆ ನನ್ನ ಮಗನ, ಹೊತ್‌ಗಿತ್‌ ಅದ ಇಲ್ಲ ನಿನಗ. ಏನ್ ಅಡ್ನಾಡಿ ಅದಿಲೇ. ರಾತ್ರಿ ಎರಡ್‌ ಹೊಡ್ದ ಹೋಗೇದ್‌. ಈ ಹೊತ್ತಿನ್ಯಾಗ ಯಾಕ್‌ ಫೋನ್‌ ಮಾಡ್ದಿ. ಮೈಮ್ಯಾಲ್‌ ಎಚ್ರ ಅದನs ಇಲ್ಲ’ ಎಂದು ದಬಾಯಿಸಿದೆ.

‘ನೀ ಟೀವಿ ಮುಂದ್‌ ಕುಂತಿರಬೇಕ್‌ ಅಂತ ತಿಳ್ಕೊಂಡಿದ್ದೆ. ಅದ್ಕ ನೀ ಫೋನ್‌ ತಟಕ್ಕನೆ ಎತ್ತಿ ಮಾತಾಡಿದ್ದೇ ಸಾಕ್ಷಿ. ನಾಳಿನ ಮುಹೂರ್ತದ ಕಾರಣಕ್ಕ ನಿದ್ದಿನs ಬರಾಕತ್ತಿದ್ದಿಲ್ಲ ಅದ್ಕ ಫೋನ್‌ ಹಚ್ದೆ’ ಎಂದ.

‘ನಿನ್ನ ಒಬ್ಬಂದs ಅಲ್ಲಲೆ, ಎಲ್ಲಾರ್‌ ನಿದ್ದಿ ಹಾರಿ ಹೋಗೇದ್‌. ಕೆಲವರ ನೆಮ್ಮದಿನೂ ಹಾಳಾಗೈತಿ. ‘ಪ್ರಜಾಪ್ರಭುತ್ವದ ಕಗ್ಗೊಲೆ’ ನಡ್ದದಲ್ಲ. ಮಧ್ಯರಾತ್ರಿಯಲ್ಲಿ ನ್ಯಾಯದೇವತೆ ಯಾವ್‌ ಕಡೆ ಕಣ್‌ ಬಿಡ್ತಾಳಂತ ನಾನೂ ಟೀವಿ ನೋಡ್ಕೋತ್‌ ಕಣ್ಣಾಗ್‌ ಎಣ್ಣೆ ಹಾಕ್ಕೊಂಡ್‌ ಕುಂತೀನಿ. ನಿನ್ನ ‘ಬ್ರೆಕಿಂಗ್‌ ಸುದ್ದಿ’ ಸಾಹೇಬ್ರ ಮುಹೂರ್ತಕ್ಕ ಕೋರ್ಟ್‌ ಸೈ ಅಂದದ ಅಂತ ಬ್ರೆಕಿಂಗ್‌ ಸುದ್ದಿ ಬರಾಕತ್ತದ. ಪರಪ್ಪನ ಅಗ್ರಹಾರದವರೂ ತಮ್ಮ ಮಾಜಿ ದೋಸ್ತ್‌ ‘ಮುಮ’ ಆಗೋ ಖುಷಿಯೊಳ್ಗ ಸಿಹಿ ಹಂಚಾರಂತ. ಸುಮ್ನ ಬಾಯ್‌ ಮುಚ್ಕೊಂಡ್‌ ಮಕ್ಕೊ’ ಎಂದೆ. ‘ಹೌದಾ’ ಎಂದವನೆ ಪ್ರಭ್ಯಾ ಫೋನ್‌ ಕಟ್‌ ಮಾಡ್ದ.

ಬ್ರೆಕಿಂಗ್‌ ಸುದ್ದಿ ಬೆನ್‌ ಹಿಂದನs, ಪಕ್ಕದ ಶೋಬಕ್ಕನ ಮನೆಯಿಂದ ಎದ್ದೇಳು ಮಂಜುನಾಥ... ಸುಪ್ರಭಾತ ಕೇಳಿ ಬರಾಕತ್ತು. ನಿದ್ದೆ ಜೊಂಪಿನಲ್ಲಿದ್ದ ನನಗೆ ಅದು, ‘ಎದ್ದೇಳೂ ಯಡಿಯೂರಪ್ಪ. ಏಳು ಬೆಳಗಾಯಿತು. ಬಿಜೆಪಿ ಕಾರ್ಯಕರ್ತರೂ ನಿನ್ನ ಪ್ರಮಾಣ ವಚನಕ್ಕೆ ಕಾದಿಹರು...’ ಎಂದು ಕೇಳಿಸಿದಂತಾಯಿತು. ಯಡ್ಡಿ ಮುಹೂರ್ತ ಇನ್ನೂ ಏನೇನ್‌ ಯಡವಟ್ಟಿಗೆ ಕಾರಣ ಆಗ್ತದೋ ಅಂತ ಅನುಮಾನಿಸುತ್ತಲೇ ನಿದ್ದೆಗೆ ಜಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT