ಭಾನುವಾರ, ಮಾರ್ಚ್ 26, 2023
32 °C
ಹಸಿರಾಗುತ್ತಿರುವ ತಾಜ್‌ ಮಹಲ್‌: ಪರಿಹಾರಕ್ಕಾಗಿ ಪರದಾಟ

ಬಣ್ಣಗೆಟ್ಟ ಪ್ರೇಮಸ್ಮಾರಕ

ಹಮೀದ್ ಕೆ. Updated:

ಅಕ್ಷರ ಗಾತ್ರ : | |

ಬಣ್ಣಗೆಟ್ಟ ಪ್ರೇಮಸ್ಮಾರಕ

ಪ್ರೇಮ ಸ್ಮಾರಕ, ಅಚ್ಚ ಬಿಳಿಯ ಅಮೃತಶಿಲೆಯಲ್ಲಿ 17ನೇ ಶತಮಾನದಲ್ಲಿ ಮೊಘಲ್‌ ದೊರೆ ಷಹಜಹಾನ್‌ ನಿರ್ಮಿಸಿದ ತಾಜ್‌ಮಹಲ್‌ನ ಸೌಂದರ್ಯಕ್ಕೆ ಇಡೀ ಜಗತ್ತಿನ ಜನರು ಮರುಳಾಗಿದ್ದಾರೆ. ಆದರೆ, ಇಂದು ಈ ಸ್ಮಾರಕ ಅಂದಗೆಡುತ್ತಿದೆ,

ಬಣ್ಣಗೆಡುತ್ತಿದೆ. ವಿಶ್ವಪ್ರಸಿದ್ಧ ಸ್ಮಾರಕ ಶಿಥಿಲವಾಗುತ್ತಿದೆ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್‌ ಕೂಡ ಕಳವಳ ವ್ಯಕ್ತಪಡಿಸಿದೆ. ಬಣ್ಣಗೆಟ್ಟ ತಾಜ್‌ ಮಹಲ್‌ ಸುತ್ತ ಒಂದು ನೋಟ:

ತಾಜ್‌ ಮಹಲ್‌ನ ಈಗಿನ ಪರಿಸ್ಥಿತಿ ಏನು?

ತಾಜ್‌ ಮಹಲ್‌ ಹಳದಿ ಬಣ್ಣಕ್ಕೆ ತಿರುಗುತ್ತಿದೆ ಎಂಬುದು ಕೆಲವು ವರ್ಷಗಳ ಹಿಂದೆ ಆತಂಕ ಸೃಷ್ಟಿಸಿತ್ತು. 1990ರಲ್ಲಿ ಈ ಬಗ್ಗೆ ದೊಡ್ಡ ಚರ್ಚೆ ಆಗಿತ್ತು. ತಾಜ್‌ ಮಹಲ್‌ ಸುತ್ತಲೂ ಇರುವ ಹಲವು ಕಾರ್ಖಾನೆಗಳನ್ನು ಮುಚ್ಚುವಂತೆ ಅಥವಾ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್‌ ಆಗ ಸೂಚಿಸಿತ್ತು. ಮೊದಲು ಹಳದಿ ಬಣ್ಣಕ್ಕೆ ತಿರುಗಿದ್ದ ತಾಜ್‌ ಮಹಲ್‌ ಈಗ ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಅಷ್ಟೇ ಅಲ್ಲ, ಈ ಸ್ಮಾರಕದ ಮೇಲೆ ಪುಟ್ಟ ಪುಟ್ಟ ಕಂದು ಚುಕ್ಕೆಗಳೂ ಉಂಟಾಗಿವೆ. ನೆಲ ಸಂಪೂರ್ಣ ಕಪ್ಪಾಗಿದೆ. ಪ್ರವಾಸಿಗರು ಬರಿಗಾಲಿನಲ್ಲಿಯೇ ಓಡಾಡುತ್ತಿರುವುದು ಇದಕ್ಕೆ ಕಾರಣ.

ತಾಜ್‌ಮಹಲ್‌ನ ನಿರ್ವಹಣೆಯ ಹೊಣೆ ಇರುವ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಪ್ರವಾಸಿಗರಿಗೆ ಸ್ವಚ್ಛವಾದ ಕಾಲುಚೀಲ ನೀಡಬಹುದಲ್ಲವೇ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ಗಣ್ಯರಿಗೆ ಮಾತ್ರ ಕಾಲುಚೀಲ ನೀಡಲಾಗುತ್ತಿದೆ ಎಂದು ಎಎಸ್‌ಐ ಉತ್ತರಿಸಿದೆ.

ಬಣ್ಣಗೆಡಲು ಕಾರಣವೇನು?

ವಾಯು ಮತ್ತು ಜಲ ಮಾಲಿನ್ಯ ಈ ಸ್ಮಾರಕದ ಮೇಲೆ ಅತಿ ಹೆಚ್ಚಿನ ಪ್ರತಿಕೂಲ ಪರಿಣಾಮವನ್ನು ಬೀರಿವೆ. ಕೈಗಾರಿಕೆಗಳಿಂದಾಗಿ ಉಂಟಾಗುವ ಮಾಲಿನ್ಯದಿಂದ ಇಲ್ಲಿ ಆಗಾಗ ‘ಅನಿಲ ಮಳೆ’ ಸುರಿಯುತ್ತದೆ. ಇದು ತಾಜ್‌ ಮಹಲ್‌ ಅನ್ನು ದುರ್ಬಲಗೊಳಿಸಿದೆ. ಕೈಗಾರಿಕೆಗಳು ಮತ್ತು ವಾಹನಗಳ ಹೊಗೆ ಅಮೃತಶಿಲೆಯ ಬಿಳಿ ಬಣ್ಣವನ್ನು ಮಸುಕಾಗಿಸಿದೆ.

ಸಮೀಪದಲ್ಲಿ ಹರಿಯುವ ಯಮುನಾ ನದಿ ನಿಜವಾದ ಅರ್ಥದಲ್ಲಿ ನದಿಯಾಗಿ ಉಳಿದಿಲ್ಲ. ಮಾಲಿನ್ಯದಿಂದಾಗಿ ಆಗ್ರಾದಲ್ಲಿ ಯಮುನಾ ನದಿಗೆ ನದಿಯ ಸ್ವರೂಪವೇ ಇಲ್ಲ. ನದಿಯಲ್ಲಿ ಇರಬೇಕಾದ ಜಲಜೀವಿಗಳು ಅಲ್ಲಿ ಇಲ್ಲ. ನದಿಯಲ್ಲಿ ತುಂಬಿರುವ ಕೊಳಕಿನ ಪರಿಣಾಮವಾಗಿ ಇಲ್ಲಿ ಇರುವ ಕ್ರಿಮಿ ಕೀಟಗಳ ಪ್ರಮಾಣಕ್ಕೆ ಮಿತಿಯೇ ಇಲ್ಲ. ಸೊಳ್ಳೆ ಮತ್ತು ಸೊಳ್ಳೆಯಂತಹ ಇತರ ಕೀಟಗಳು ರಾತ್ರಿಯಿಡೀ ತಾಜ್‌ ಮಹಲನ್ನು ಮುತ್ತುತ್ತವೆ. ಇವುಗಳ ಹಿಕ್ಕೆಯೂ ಸ್ಮಾರಕದ ಬಣ್ಣ ಮಾಸಲು ಕಾರಣವಾಗುತ್ತಿದೆ. ಯಮುನಾ ನದಿಯಲ್ಲಿ ಈಗ ಮೀನುಗಳು ಇಲ್ಲ. ಮೀನುಗಳು ಇದ್ದಾಗ ಈ ಕೀಟಗಳನ್ನು ಅವು ತಿಂದು ಹಾಕುತ್ತಿದ್ದವು. ಯಮುನಾ ನದಿಯ ಪಾಚಿ ಒಣಗಿದಾಗ ಗಾಳಿಗೆ ಹಾರಿ ತಾಜ್‌ ಮಹಲ್‌ನ ಮೇಲೆ ಕೂರುವುದು ಇನ್ನೊಂದು ಸಮಸ್ಯೆಯಾಗಿದೆ.

ದಶಕಗಳ ಕಾನೂನು ಸಮರದ ಪರಿಣಾಮವೇನು?

ಖ್ಯಾತ ಪರಿಸರವಾದಿ ಎಂ.ಸಿ. ಮೆಹತಾ ಅವರು ತಾಜ್‌ ಮಹಲ್‌ ಅನ್ನು ರಕ್ಷಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ 1984ರಲ್ಲಿಯೇ ಅರ್ಜಿ ಸಲ್ಲಿಸಿದ್ದರು. ಆಗ ಪರಿಸ್ಥಿತಿ ಈಗಿನಷ್ಟು ಶೋಚನೀಯವಾಗಿ ಇರಲಿಲ್ಲ. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್‌, ಹಲವು ನಿರ್ದೇಶನಗಳನ್ನು ನೀಡಿತ್ತು. ತಾಜ್‌ ಮಹಲ್‌ ಮತ್ತು ಇತರ ಹಲವು ಪ್ರಮುಖ ಪುರಾತನ ಸ್ಮಾರಕಗಳಿರುವ ಆಗ್ರಾವನ್ನು ‘ಪಾರಂಪರಿಕ ನಗರ’ ಎಂದು ಘೋಷಿಸಲು ಸೂಚಿಸಿತ್ತು. ಆದರೆ ಆ ಕೆಲಸ ಆಗಲೇ ಇಲ್ಲ. ಬದಲಿಗೆ, ಪರಿಸರದ ಮೇಲೆ ದುಷ್ಪರಿಣಾಮ ಬೀರುವಂತಹ ಹಲವು ಯೋಜನೆಗಳಿಗೆ ವಿವಿಧ ಸರ್ಕಾರಗಳು ಅನುಮತಿ ನೀಡಿವೆ.

ಇದೇ 9ರಂದು ನಡೆದ ವಿಚಾರಣೆ ವೇಳೆ ತಾಜ್‌ ಮಹಲ್‌ನ ಸ್ಥಿತಿಯ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಈ ಸ್ಮಾರಕದ ರಕ್ಷಣೆಯ ವಿಚಾರದಲ್ಲಿ ತೋರಿರುವ ಅಸಡ್ಡೆಗೆ ಆಕ್ರೋಶವನ್ನೂ ತೋರಿದೆ. ತಾಜ್‌ ಮಹಲ್‌ ಸಂರಕ್ಷಣೆಯ ಹೊಣೆ ಹೊತ್ತಿರುವ ಎಎಸ್‌ಐಯನ್ನು ತರಾಟೆಗೆ ತೆಗೆದುಕೊಂಡಿದೆ. ಎಎಸ್‌ಐ ತನ್ನ ಕೆಲಸವನ್ನು ಸರಿಯಾಗಿ ಮಾಡಿದ್ದಿದ್ದರೆ ಇಂತಹ ಸ್ಥಿತಿ ಉಂಟಾಗುತ್ತಿರಲಿಲ್ಲ ಎಂದು ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕೂರ್‌ ಹಾಗೂ ದೀಪಕ್‌ ಗುಪ್ತಾ ಅವರಿದ್ದ ಪೀಠ ಹೇಳಿತು. ತಾಜ್‌ ಮಹಲ್‌ ರಕ್ಷಣೆಯ ಕೆಲಸದಿಂದ ಎಎಸ್‌ಐಯನ್ನು ಯಾಕೆ ಕಿತ್ತು ಹಾಕಬಾರದು ಎಂದೂ ಸರ್ಕಾರವನ್ನು ಪ್ರಶ್ನಿಸಿತು.

ಪರಿಹಾರದ ಕುರಿತು ಇರುವ ಚರ್ಚೆ ಏನು?

ತಾಜ್‌ ಸಂರಕ್ಷಣೆಗೆ ವಿದೇಶಿ ಸಂಸ್ಥೆಗಳು ಮತ್ತು ಪರಿಣತರ ನೆರವನ್ನು ಯಾಕೆ ಪಡೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿತ್ತು. ವಿಶ್ವ ಪರಂಪರೆ ತಾಣವಾಗಿರುವ ತಾಜ್‌ಮಹಲ್‌ ಅನ್ನು ಉಳಿಸಿಕೊಳ್ಳುವ ಬಗ್ಗೆ ಅಂತರರಾಷ್ಟ್ರೀಯ ಪರಿಣತರ ನೆರವು ಪಡೆಯುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ಅಭಿಪ್ರಾಯ ಇದೆ. ತಾಜ್‌ ಮಹಲ್‌ ಸುತ್ತಲೂ ಇರುವ ಮಾಲಿನ್ಯಕಾರಕ ಕಾರ್ಖಾನೆಗಳು ಮತ್ತು ವಾಹನಗಳು ಉಗುಳುವ ಹೊಗೆಯನ್ನು ನಿಯಂತ್ರಿಸುವ ಅಧಿಕಾರ ಎಎಸ್‌ಐಗೆ ಇಲ್ಲ. ಹಾಗಾಗಿ ಎಎಸ್‌ಐ ತಲೆ ಮೇಲೆ ಮಾತ್ರ ಎಲ್ಲ ದೋಷ ಹೊರಿಸುವುದು ಸರಿಯಲ್ಲ.

ಜಪಾನ್‌ ಅನುದಾನದ ಯಮುನಾ ಕ್ರಿಯಾ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈ ಯೋಜನೆಯ ಜತೆಗೆ, ಕೇಂದ್ರ ಪರಿಸರ ಸಚಿವಾಲಯ, ಜಲಸಂಪನ್ಮೂಲ ಸಚಿವಾಲಯ, ಉತ್ತರ ಪ್ರದೇಶದ ಕೈಗಾರಿಕಾ ಇಲಾಖೆಗಳು ತಾಜ್‌ ಮಹಲನ್ನು ಗಮನದಲ್ಲಿ ಇರಿಸಿಕೊಂಡು ಯೋಜನೆಗಳನ್ನು ರೂಪಿಸಬೇಕು.

ಉತ್ತರ ದೆಹಲಿಯಲ್ಲಿ ಯಮುನಾ ಬಯೊಡೈವರ್ಸಿಟಿ ಪಾರ್ಕ್‌ ಇದೆ. ಈ ಪ್ರದೇಶದಲ್ಲಿ ಯಮುನಾ ಸ್ವಚ್ಛವಾಗಿ ಹರಿಯುತ್ತಿದೆ. ಜತೆಗೆ ಈ ಪ್ರದೇಶದಲ್ಲಿ ನದಿಯಲ್ಲಿ ಮೀನುಗಳೂ ಇವೆ. ವಲಸೆ ಹಕ್ಕಿಗಳನ್ನೂ ಅಲ್ಲಿ ಕಾಣಬಹುದು. ಇದೇ ಮಾದರಿಯನ್ನು ಆಗ್ರಾದಲ್ಲಿಯೂ ಅಳವಡಿಸಿಕೊಳ್ಳಲು ಯತ್ನಿಸಬಹುದು.

ಪರಿಸ್ಥಿತಿ ಎಷ್ಟು ಭೀಕರ?

ಜಗತ್ತಿನ ಎಂಟನೆಯ ಅತಿ ಹೆಚ್ಚು ಮಲಿನ ನಗರ ಆಗ್ರಾ ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ತಿಂಗಳು ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ. ಸಂಸತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸ್ಥಾಯಿ ಸಮಿತಿಯು 2015ರಲ್ಲಿ ಮಂಡಿಸಿದ ವರದಿಯಲ್ಲಿ ತಾಜ್‌ ಮಹಲ್‌ ಸುತ್ತಲಿನ ಮಾಲಿನ್ಯದ ಬಗ್ಗೆ ವಿವರಿಸಲಾಗಿದೆ. ಸ್ಮಾರಕಕ್ಕೆ ಅಪಾಯ ಒಡ್ಡುವಷ್ಟು ಈ ಸಮಸ್ಯೆ ಗಂಭೀರವಾಗಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಆಗ್ರಾದಲ್ಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಚಟುವಟಿಕೆ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.