ಸೋಮವಾರ, ಮಾರ್ಚ್ 8, 2021
31 °C

‘ಇಂಡಿಗೊ’ ವಿಮಾನ ವಿಳಂಬ ಪ್ರಯಾಣಿಕರಿಗೆ ಸಂಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಇಂಡಿಗೊ’ ವಿಮಾನ ವಿಳಂಬ ಪ್ರಯಾಣಿಕರಿಗೆ ಸಂಕಟ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಇಂಡಿಗೊ ವಿಮಾನಯಾನ ಸಂಸ್ಥೆಯ ಸೇವೆಯ ಬಗ್ಗೆ ಪ್ರಯಾಣಿಕರಿಂದ ಬಹಳಷ್ಟು ದೂರುಗಳು ಕೇಳಿಬರುತ್ತಿವೆ. ಆದರೆ, ಸಂಸ್ಥೆ ಮಾತ್ರ ಇದಕ್ಕೆ ಸೊಪ್ಪು ಹಾಕದೆ ಪ್ರಯಾಣಿಕರನ್ನು ನಿರ್ಲಕ್ಷಿಸುವ ತನ್ನ ಚಾಳಿ ಮುಂದುವರಿಸಿದೆ.

ಗುರುವಾರ ರಾತ್ರಿ ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕರನ್ನು ಸಂಸ್ಥೆಯು 4:30 ಗಂಟೆ ಕಾಲ ಕಾಯಿಸಿ ತೊಂದರೆ ನೀಡಿದ ಘಟನೆ ನಡೆದಿದೆ.

ರಾತ್ರಿ 9.30ಕ್ಕೆ ಮುಂಬೈನಿಂದ ಬೆಂಗಳೂರಿಗೆ ಹೊರಡಬೇಕಿದ್ದ ‘ಇಂಡಿಗೊ 6ಇ 825’ ವಿಮಾನ ಮಧ್ಯರಾತ್ರಿ 1:43ಕ್ಕೆ ಪ್ರಯಾಣ ಬೆಳೆಸಿದೆ. ವಿಮಾನದ ವಿಳಂಬಕ್ಕೆ ಸಂಸ್ಥೆಯ ಸಿಬ್ಬಂದಿ ಪ್ರತಿ ಅರ್ಧ ಗಂಟೆಗೊಮ್ಮೆ ಬೇರೆ, ಬೇರೆ ಸಬೂಬು ಹೇಳುತ್ತ ಪ್ರಯಾಣಿಕರ ಸಹನೆ ಪರೀಕ್ಷಿಸಿದ್ದಾರೆ.

ವಿಳಂಬದಿಂದ ರೋಸಿ ಹೋದ ಕೆಲ ಪ್ರಯಾಣಿಕರು ಸಿಬ್ಬಂದಿ ಜತೆ ವಾಗ್ವಾದಕ್ಕೆ ಇಳಿದಿದ್ದರು. ಎರಡು ಗಂಟೆ ಕಳೆದರೂ ಸಮರ್ಪಕ ಮಾಹಿತಿ ಸಿಗದೇ ಹೋದಾಗ ಸಂಯಮ ಕಳೆದುಕೊಂಡ ಪ್ರಯಾಣಿಕರು ವಿಚಾರಿಸಲು ಹೋದಾಗ  ಸಿಬ್ಬಂದಿಯೇ ಕಾಣೆಯಾಗಿದ್ದರು. ಆ ಹೊತ್ತಿಗೆ ಬೆಂಗಳೂರಿಗೆ ಹೊರಟಿದ್ದ ಸಂಸ್ಥೆಯ ಇನ್ನೊಂದು ವಿಮಾನ ಪ್ರಯಾಣ ಬೆಳೆಸಿತು.  ಇದು ಅದಕ್ಕೂ ಮೊದಲಿನ ವಿಮಾನದ ಪ್ರಯಾಣಿಕರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿತ್ತು. ಕೊನೆಗೂ 12:30ರ ಹೊತ್ತಿಗೆ ಬೋರ್ಡಿಂಗ್ ಶುರುವಾಯಿತು. ವಿಮಾನದೊಳಗೆ ಪ್ರಯಾಣಿಕರು ಕುಳಿತರೂ ವಿಮಾನ ಬೆಂಗಳೂರಿನತ್ತ ಹೊರಟಾಗ ಸಮಯ 1:43 ಮೀರಿತ್ತು.

ತಪ್ಪು ಮಾಹಿತಿ: ವಿಮಾನ 4 ತಾಸು ವಿಳಂಬವಾಗಿದೆ ಎನ್ನುವುದನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ನಮೂದಿಸಿಲ್ಲ. 9:30ಕ್ಕೆ ಹೊರಡಬೇಕಿದ್ದ ವಿಮಾನ 10ಕ್ಕೆ ಹೊರಟಿದ್ದು, 11:45ಕ್ಕೆ ಬೆಂಗಳೂರು ತಲುಪಿದೆ ಎಂದು ತಪ್ಪು ಮಾಹಿತಿ ನೀಡಿ ಪ್ರಯಾಣಿಕರನ್ನು ದಾರಿ ತಪ್ಪಿಸಲಾಗಿದೆ.

ಹೆಚ್ಚಿದ ಅವ್ಯವಸ್ಥೆ: ‘ಇಂಡಿಗೊ ಅಧ್ಯಕ್ಷ ಆದಿತ್ಯ ಘೋಷ್ ಅವರು ಇರುವವರೆಗೂ ಸರಿಯಾಗಿತ್ತು. ಅವರು ರಾಜೀನಾಮೆ ನೀಡಿದ ಬಳಿಕ ಸಂಸ್ಥೆ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದೆ. ಅವ್ಯವಸ್ಥೆ ಹೆಚ್ಚಿದೆ. ಇದು ಒಂದು ದಿನದ ಕತೆ ಅಲ್ಲ. ದಿನವೂ ಹೀಗೆ ಹೊಸದೇನಾದರೂ ಹೇಳುತ್ತಲೇ ಇರುತ್ತಾರೆ’ ಎಂದು ಪ್ರಯಾಣಿಕರೊಬ್ಬರು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.