ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯು ಮಾಲಿನ್ಯಕ್ಕೆ ಹಳ್ಳಿಗಳಲ್ಲೇ ಹೆಚ್ಚು ಬಲಿ

Last Updated 18 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಕಡಿಮೆ ಎನ್ನುವುದು ನಿಜವಲ್ಲ. ವಾಯು ಮಾಲಿನ್ಯದ ಕಾರಣಕ್ಕೆ ಭಾರತದ ನಗರಗಳಲ್ಲಿ ಮೃತಪಟ್ಟವರಿಗಿಂತ ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಮಂದಿ ಬಲಿಯಾಗಿದ್ದಾರೆ’ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ, ವಿಸ್ಕಾನ್ಸಿನ್–ಮ್ಯಾಡಿಸನ್ ವಿಶ್ವವಿದ್ಯಾಲಯ ಮತ್ತು ಬೋಸ್ಟನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಅಧ್ಯಯನದ ವರದಿಯಲ್ಲಿ ಈ ಮಾಹಿತಿ ಇದೆ.

‘ವಾಯು ಮಾಲಿನ್ಯದ ಕಾರಣಕ್ಕೆ ಭಾರತದ ನಗರ ಪ್ರದೇಶಗಳಲ್ಲಿ ಪ್ರತಿ ವರ್ಷ 1.17 ಲಕ್ಷ ಮಂದಿ ಸಾಯುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ 3.83 ಲಕ್ಷ ಮಂದಿ ಬಲಿಯಾಗುತ್ತಿದ್ದಾರೆ. ಆದರೆ ಜನಸಂಖ್ಯೆಯ ಹೋಲಿಕೆಯಲ್ಲಿ ಎರಡೂ ರೀತಿಯ ಪ್ರದೇಶಗಳಲ್ಲಿ ವಾಯು ಮಾಲಿನ್ಯಕ್ಕೆ ಬಲಿಯಾಗುವವರ ಪ್ರಮಾಣ ಸರಿಸುಮಾರು ಒಂದೇ ಆಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚು ಇರುವ ಕಾರಣ ಅಲ್ಲಿ ಸಾವಿನ ಸಂಖ್ಯೆಯೂ ಹೆಚ್ಚು’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಸಾವುಗಳ ಬಗ್ಗೆ ನಿಖರ ದತ್ತಾಂಶ ಒದಗಿಸುವಲ್ಲಿ ಈವರೆಗಿನ ಎಲ್ಲಾ ಅಧ್ಯಯನಗಳು ವಿಫಲವಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವನ್ನು ನಮ್ಮ ಅಧ್ಯಯನ ಬಹಿರಂಗಪಡಿಸಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಅತಿ ಹೆಚ್ಚು ವಾಯು ಮಾಲಿನ್ಯ ಪೀಡಿತವಾಗಿರುವ ಜಗತ್ತಿನ ಮೊದಲ 14 ನಗರಗಳು ಉತ್ತರ ಭಾರತದಲ್ಲೇ ಇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ಹೇಳಿತ್ತು. ಈ ಕಾರಣಕ್ಕೆ ಅಧ್ಯಯನದಲ್ಲಿ ಉತ್ತರ ಭಾರತಕ್ಕೆ ವಿಶೇಷ ಗಮನ ನೀಡಲಾಗಿತ್ತು. ಆ ವ್ಯಾಪ್ತಿಯಲ್ಲಿ ಬರುವ ಗಂಗಾ ನದಿ ಬಯಲು ಪ್ರದೇಶದ ಎಲ್ಲಾ ನಗರ, ಪಟ್ಟಣ ಮತ್ತು ಹಳ್ಳಿಗಳಲ್ಲಿ ವಾಯು ಮಾಲಿನ್ಯದ ಮಟ್ಟ ಒಂದೇ ರೀತಿಯಲ್ಲಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.
***
ಹೆಚ್ಚು ವಾಯು ಮಾಲಿನ್ಯ ಪೀಡಿತ ನಗರಗಳ ಪಟ್ಟಿಯಲ್ಲಿ ಕಾನ್ಪುರ ಮೊದಲನೆಯದು. ಅದರ ಹೊರವಲಯದ ಗೋಂದಿನ ಕಾರ್ಖಾನೆಗಳೇ ಇದಕ್ಕೆ ಕಾರಣ ಎನ್ನಲಾಗಿದೆ.‌
* ಭಾರತದಲ್ಲಿ ವಾಯುಮಾಲಿನ್ಯಕ್ಕೆ ಪ್ರತಿ ವರ್ಷ 5.8–10 ಲಕ್ಷ ಮಂದಿ ಬಲಿಯಾಗುತ್ತಾರೆ ಎಂಬುದು ಈ ಹಿಂದಿನ  ಅಂದಾಜುಗಳು.
* ಭಾರತದಲ್ಲಿ ಕಲುಷಿತ ಗಾಳಿ ಉಸಿರಾಡಿ ಮೃತಪಡುವವರಲ್ಲಿ ಬಹುತೇಕ ಮಂದಿ ತುತ್ತಾಗುವುದು ಹೃದಯ ಸಂಬಂಧಿ ಕಾಯಿಲೆಗಳಿಗೆ. ಪ್ರತಿ ವರ್ಷ ಇಂತಹ ಕಾಯಿಲೆಗಳಿಗೆ 1.16 ಲಕ್ಷ ಮಂದಿ ಬಲಿಯಾ ಗುತ್ತಿದ್ದಾರೆ ಎಂದು ಅಧ್ಯಯನ ವರದಿ ಹೇಳಿದೆ.
* ತೀವ್ರ ಉಸಿರಾಟದ ಸಮಸ್ಯೆ ಮತ್ತು ಶ್ವಾಸಕೋಶದ ಕ್ಯಾನ್ಸರ್‌ಗೆ ವಾಯು ಮಾಲಿನ್ಯ ಕಾರಣವಾಗುತ್ತಿದ್ದು, ಇವುಗಳಿಗೆ ಪ್ರತಿ ವರ್ಷ ಒಂದು ಲಕ್ಷ ಮಂದಿ ಬಲಿಯಾಗುತ್ತಿದ್ದಾರೆ. ಇದರಿಂದ ದೇಶಕ್ಕೆ ಭಾರಿ ಪ್ರಮಾಣದಲ್ಲಿ ಮಾನವ ಸಂಪನ್ಮೂಲ ನಷ್ಟವಾಗುತ್ತಿದೆ ಎಂದು ವರದಿ ಹೇಳಿದೆ.
* ಈ ಕಾಯಿಲೆಗಳಿಗೆ ಪ್ರತಿ ವರ್ಷ ಹಲವು ಮಂದಿ ತುತ್ತಾಗುತ್ತಿದ್ದು, ಹೀಗೆ ತುತ್ತಾದವರಿಗೆ ಅಗತ್ಯ ಚಿಕಿತ್ಸೆ ನೀಡುವ ಅವಶ್ಯಕತೆ ತೀವ್ರವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಂತೂ ವೈದ್ಯಕೀಯ ಸೇವೆಯನ್ನು ಬಲಪಡಿಸಬೇಕಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.
***
3.83 ಲಕ್ಷ
ಗ್ರಾಮೀಣ ಪ್ರದೇಶಗಳಲ್ಲಿ ವಾಯು ಮಾಲಿನ್ಯಕ್ಕೆ ಪ್ರತಿ ವರ್ಷ ಬಲಿಯಾಗುತ್ತಿರುವವರು

1.17 ಲಕ್ಷ
ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯಕ್ಕೆ ಪ್ರತಿ ವರ್ಷ ಬಲಿಯಾಗುತ್ತಿರುವವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT