ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸಮತದ ಅಧಿವೇಶನಕ್ಕೆ ಧಾವಂತದ ಸಿದ್ಧತೆ!

Last Updated 18 ಮೇ 2018, 17:25 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಿ.ಎಸ್‌.ಯಡಿಯೂರಪ್ಪ ಅವರು ಶನಿವಾರವೇ ಅಧಿವೇಶನ ಕರೆದು ಬಹುಮತ ಸಾಬೀತು
ಪಡಿಸಲು ಸುಪ್ರೀಂ ಕೋರ್ಟ್‌ ಆದೇಶ ನೀಡಿರುವುದರಿಂದ, ವಿಧಾನಸಭಾ ಸಚಿವಾಲಯದ ಸಿಬ್ಬಂದಿ ಶುಕ್ರವಾರ ತರಾತುರಿಯಲ್ಲಿ ಸಿದ್ಧತೆ ನಡೆಸಿದರು.

ಒಟ್ಟು 221 ಶಾಸಕರಿಗೆ (ಎಚ್‌.ಡಿ.ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಒಂದು ಸ್ಥಾನವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ) ಪ್ರಮಾಣ ವಚನ ಬೋಧಿಸುವುದರ ಜೊತೆಗೆ, ಬಹುಮತ ಸಾಬೀತಿಗೆ ವಿಧಾನಸಭಾ ಸಚಿವಾಲಯ ಅಗತ್ಯ ವ್ಯವಸ್ಥೆ ಮಾಡಿಕೊಂಡಿದೆ.

ಹಂಗಾಮಿ ಸ್ಪೀಕರ್‌ ಆಗಿ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ರಾಜ್ಯಪಾಲರು ಶುಕ್ರವಾರವೇ ನೇಮಕ ಮಾಡಿದರು. ಶನಿವಾರ ಬೆಳಿಗ್ಗೆ ಸಂಪ್ರದಾಯದ ಪ್ರಕಾರವೇ ಅಧಿವೇಶನ ಆರಂಭಗೊಳ್ಳುತ್ತದೆ. ಮೊದಲಿಗೆ, ಶಾಸಕರಿಗೆ ಪ್ರಮಾಣ ವಚನ ಬೋಧಿಸುವ ಪ್ರಕ್ರಿಯೆ ನಡೆಯಲಿದೆ. ಚುನಾವಣಾ ಆಯೋಗ ಶಾಸಕರಾಗಿ ಗೆದ್ದವರಿಗೆ ನೀಡಿರುವ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು.

ಪ್ರಮಾಣವನ್ನು ಭಗವಂತನ ಹೆಸರಿನಲ್ಲಿ ಅಥವಾ ಸಂವಿಧಾನದ ಹೆಸರಿನಲ್ಲಿ ಪಡೆಯಬಹುದು. ಯಾವುದೇ ವ್ಯಕ್ತಿಯ ಹೆಸರಿನಲ್ಲಿ (ನರೇಂದ್ರ ಮೋದಿ, ದೇವೇಗೌಡ, ಕುಮಾರಸ್ವಾಮಿ, ಸೋನಿಯಾ ಗಾಂಧಿ ಇತ್ಯಾದಿ) ಪ್ರಮಾಣವನ್ನು ಸ್ವೀಕರಿಸುವಂತಿಲ್ಲ ಎಂದು ವಿಧಾನಸಭೆ ಸಚಿವಾಲಯ ಕಚೇರಿ ಮೂಲಗಳು ಹೇಳಿವೆ.

ಸಾಮಾನ್ಯವಾಗಿ ಒಬ್ಬರ ನಂತರ ಮತ್ತೊಬ್ಬರ ಹೆಸರು ಕರೆದು ಪ್ರಮಾಣ ವಚನ ಬೋಧಿಸಲಾಗುತ್ತದೆ. ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ನಾಳೆ ವಿಶೇಷ ಸಂದರ್ಭ ಆಗಿರುವುದರಿಂದ 10 ಜನರನ್ನು ಒಟ್ಟಿಗೇ ನಿಲ್ಲಿಸಿ ಪ್ರಮಾಣ ಸ್ವೀಕಾರ ಮಾಡಿಸಲೂ ಬಹುದು. ಆಯೋಗ ನೀಡಿದ ಪ್ರಮಾಣ ಪತ್ರದ ಆಧಾರ ಮೇಲೆ, ನೋಂದಣಿ ಪುಸ್ತಕದಲ್ಲಿ ಹಾಜರಿ ಪಡೆಯಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ವಿಧಾನಸಭೆಯ ನಿಯಮಾವಳಿಯಂತೆ ಹಂಗಾಮಿ ಸ್ಪೀಕರ್‌ ಶಾಸಕರಿಗೆ ಪ್ರಮಾಣ ಬೋಧಿಸಿದ ಬಳಿಕ ಹೊಸ ಸ್ಪೀಕರ್‌ ಆಯ್ಕೆ ಮಾಡಬೇಕು. ಮುಖ್ಯಮಂತ್ರಿಯಾದವರು ವಿಶ್ವಾಸ ಮತದ ಗೊತ್ತುವಳಿ ಮಂಡಿಸಬೇಕು. ಧ್ವನಿಮತದ ಮೂಲಕ ಅಥವಾ ಕೈ ಎತ್ತುವ ಮೂಲಕ ವಿಶ್ವಾಸಮತ ಕೇಳಲು ಸೂಚಿಸಬಹುದು. ಬಳಿಕವೇ ಬಹುಮತ ಸಾಬೀತುಪಡಿಸಬೇಕಾಗುತ್ತದೆ. ಆದರೆ, ಸುಪ್ರೀಂ ಕೋರ್ಟ್‌ ಸಂವಿಧಾನದ ಸೆಕ್ಷನ್‌ 95, 180(1)ರ ಅಡಿ ಹಂಗಾಮಿ ಸ್ಪೀಕರ್‌ ಅವರಿಂದಲೇ ಬಹುಮತ ಸಾಬೀತು ಮಾಡಲು ಸೂಚಿಸಿದೆ. ಇಂತಹದ್ದೊಂದು ಆದೇಶ ಇತಿಹಾಸದಲ್ಲೇ ಮೊದಲು ಎಂದು ಅವರು ತಿಳಿಸಿದರು.

‘ಆಯ್ಕೆ ಆಗಿರುವ ಶಾಸಕರಲ್ಲಿ 50ಕ್ಕೂ ಹೆಚ್ಚು ಮಂದಿ ಹೊಸಬರು. ಇವರ ಮೊಬೈಲ್‌ಗಳ ಸಂಖ್ಯೆ ನಮ್ಮ ಬಳಿ ಇಲ್ಲ. ಪ್ರತಿಯೊಬ್ಬ ಶಾಸಕರಿಗೂ ಕಲಾಪಕ್ಕೆ ಆಹ್ವಾನಿಸುವ ಸಂದೇಶ ಕಳಿಸಬೇಕು. ಇದು ಅತ್ಯಂತ ಕಷ್ಟದ ಕೆಲಸವಾಗಿದೆ’ ಎಂದೂ ಅವರು ಹೇಳಿದರು.

ಸ್ವಚ್ಛತೆಯಲ್ಲಿ ಮಗ್ನರಾದ ಸಿಬ್ಬಂದಿ: ಸುಪ್ರೀಂ ಕೋರ್ಟ್‌ ಆದೇಶ ಹೊರ ಬೀಳುತ್ತಿದ್ದಂತೆ ವಿಧಾನಸಭಾ ಸಚಿವಾಲಯದ ಸಿಬ್ಬಂದಿ ಕಲಾಪ ನಡೆಯುವ ಸಭಾಂಗಣದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಮಗ್ನರಾಗಿದ್ದರು. ವಿಧಾನಸಭೆ ಕಾರ್ಯದರ್ಶಿ ಎಸ್‌.ಮೂರ್ತಿ ಇದರ ಉಸ್ತುವಾರಿ ವಹಿಸಿದ್ದರು.

ಪೊಲೀಸ್ ಸರ್ಪಗಾವಲು

ವಿಶ್ವಾಸ ಮತ ಯಾಚನೆಯಲ್ಲಿ ಪಾಲ್ಗೊಳ್ಳುವ ಶಾಸಕರಿಗೆ ಸೂಕ್ತ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ವಿಧಾನಸೌಧ ಸುತ್ತಮುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಬಿ.ಕೆ.ಸಿಂಗ್ ಅವರ ನೇತೃತ್ವದಲ್ಲಿ ಐವರು ಡಿಸಿಪಿ, 20 ಎಸಿಪಿ, 40 ಇನ್‌ಸ್ಪೆಕ್ಟರ್‌ಗಳು ಸೇರಿ ಸುಮಾರು 2,000 ಪೊಲೀಸರ ಸರ್ಪಗಾವಲು ಇರಲಿದೆ.

ಶಾಸಕರಿಗೆ ಭದ್ರತೆ ಒದಗಿಸುವಂತೆ ಸುಪ್ರೀಂ ಕೋರ್ಟ್‌ ಆದೇಶ ಹೊರಬಿದ್ದ ಕೂಡಲೇ ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಡಿಜಿ–ಐಜಿಪಿ ನೀಲಮಣಿ ಎನ್.ರಾಜು, ಯಾವುದೇ ಭದ್ರತಾ ಲೋಪವಾಗದಂತೆ ಎಚ್ಚರ ವಹಿಸಲು ಸೂಚಿಸಿದರು.

ಆ ನಂತರ ನಗರಮಟ್ಟದ ಅಧಿಕಾರಿಗಳೊಂದಿಗೆ ಶುಕ್ರವಾರ ಸಂಜೆ ಮತ್ತೊಂದು ಸಭೆ ನಡೆಸಿದ ಕಮಿಷನರ್, ಬಿಜೆಪಿ ಶಾಸಕರು ಎಲ್ಲೆಲ್ಲಿ ತಂಗಿದ್ದಾರೆ ಹಾಗೂ ಹೊರರಾಜ್ಯಗಳಿಗೆ ತೆರಳಿರುವ ವಿರೋಧ ಪಕ್ಷಗಳ ಶಾಸಕರು ಯಾವಾಗ ಬರಲಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡರು.

100ಕ್ಕೂ ಹೆಚ್ಚು ಮಾರ್ಷಲ್‌: ಸದನದಲ್ಲಿ ವಿಶ್ವಾಸ ಮತ ಕೇಳುವ ಸಂದರ್ಭದಲ್ಲಿ ಸಂಭವಿಸಬಹುದಾದ ಅಹಿತಕರ ಘಟನೆಯನ್ನು ತಪ್ಪಿಸಲು ಭದ್ರತೆಗಾಗಿ 100ಕ್ಕೂ ಹೆಚ್ಚು ಮಾರ್ಷಲ್‌ಗಳನ್ನು ನಿಯೋಜಿಸಲು ಉದ್ದೇಶಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಆತಂಕ, ಉದ್ವಿಗ್ನದ ಛಾಯೆ...
ಒಂದು ಸರ್ಕಾರ ಹೋಗಿ ಮತ್ತೊಂದು ಸರ್ಕಾರ ಬರುವಾಗ ವಿಧಾನಸೌಧವನ್ನು ಭವ್ಯವಾಗಿ ಸಿಂಗರಿಸಲಾಗುತ್ತದೆ. ಹೊಸ ಕಳೆ ಇರುತ್ತದೆ. ಆದರೆ, ಶುಕ್ರವಾರ ಕಂಡು ಬಂದ ದೃಶ್ಯ ವ್ಯತಿರಿಕ್ತವಾಗಿತ್ತು. ಬಹುಮತ ಸಾಬೀತಿಗಾಗಿ ಶನಿವಾರ ಕರೆದಿರುವ ಅಧಿವೇಶನದಲ್ಲಿ ಸಂಭ್ರಮಕ್ಕಿಂತ, ಆತಂಕವೇ ಮನೆ ಮಾಡುವ ಸಾಧ್ಯತೆ ಇದೆ.

ಹಿಂದೆ ಹೊಸ ಶಾಸಕರು ಸದನದ ಕಲಾಪಕ್ಕೆ ಬರುವಾಗ ತಮ್ಮ ಮನೆ– ಮಂದಿಯನ್ನು ಕರೆದುಕೊಂಡು ಬರುತ್ತಿದ್ದರು. ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸುತ್ತಿದ್ದರು. ಶನಿವಾರ ಸದನದಲ್ಲಿ ಅಹಿತಕರ ಘಟನೆ ನಡೆಯಬಹುದು ಎಂಬ ಕಾರಣಕ್ಕೆ, ಪ್ರೇಕ್ಷಕರನ್ನು ಒಳಗೆ ಬಿಡುವ ಸಾಧ್ಯತೆ ಕಡಿಮೆ.

ಹೀಗಾಗಿ, ನಾಳೆ ಹೊಸ ಶಾಸಕರು ವಿಧಾನಸೌಧ ಪ್ರವೇಶಿಸುವಾಗಲೇ ಒಂದು ರೀತಿಯ ಆತಂಕ ಮತ್ತು ಉದ್ವಿಗ್ನದ ವಾತಾವರಣವೇ ನೆಲೆಸಿರುತ್ತದೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT