ಏಷ್ಯನ್ ಮಹಿಳೆಯರ ಚಾಂಪಿಯನ್ಸ್ ಟ್ರೋಫಿ ಹಾಕಿ : ಭಾರತಕ್ಕೆ ಕೊರಿಯಾ ಸವಾಲು

7

ಏಷ್ಯನ್ ಮಹಿಳೆಯರ ಚಾಂಪಿಯನ್ಸ್ ಟ್ರೋಫಿ ಹಾಕಿ : ಭಾರತಕ್ಕೆ ಕೊರಿಯಾ ಸವಾಲು

Published:
Updated:
ಏಷ್ಯನ್ ಮಹಿಳೆಯರ ಚಾಂಪಿಯನ್ಸ್ ಟ್ರೋಫಿ ಹಾಕಿ : ಭಾರತಕ್ಕೆ ಕೊರಿಯಾ ಸವಾಲು

ಡಾಂಗೆ, ಕೊರಿಯಾ : ಸತತ ಮೂರು ಜಯದೊಂದಿಗೆ ಫೈನಲ್‌ ತಲುಪಿ ನಿರಾಳವಾಗಿರುವ ಭಾರತ ತಂಡದವರು ಏಷ್ಯನ್ ಮಹಿಳೆಯರ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಶನಿವಾರ ಆತಿಥೇಯ ಕೊರಿಯಾವನ್ನು ಎದುರಿಸಲಿದೆ.

ಡಿಫೆಂಡರ್‌ ಸುನಿತಾ ಲಾಕ್ರಾ ನಾಯಕತ್ವದ ಭಾರತ ತಂಡ ರೌಂಡ್ ರಾಬಿನ್‌ ಹಂತದಲ್ಲಿ ಈ ವರೆಗೆ ಸೋತಿಲ್ಲ. ಮೊದಲ ಪಂದ್ಯದಲ್ಲಿ ಜಪಾನ್ ಎದುರು 4–1ರಿಂದ ಗೆದ್ದ ತಂಡ ನಂತರ ಚೀನಾವನ್ನು 3–1ರಿಂದ ಮಣಿಸಿತ್ತು. ಗುರುವಾರದ ಪಂದ್ಯದಲ್ಲಿ ಮಲೇಷ್ಯಾವನ್ನು 3–2ರಿಂದ ಸೋಲಿಸಿತ್ತು.

ಹೀಗಾಗಿ ಶನಿವಾರ ಆತಿಥೇಯರ ವಿರುದ್ಧವೂ ಮೇಲುಗೈ ಸಾಧಿಸುವ ಭರವಸೆ ಹೊಂದಿದೆ. ವಿಶ್ವ ಕ್ರಮಾಂಕದಲ್ಲಿ ಒಂಬತ್ತನೇ ಸ್ಥಾನ ಹೊಂದಿರುವ ಕೊರಿಯಾವನ್ನು ಮಣಿಸುವುದು ಸುಲಭವಲ್ಲ ಎಂಬ ವಾಸ್ತವದ ಅರಿವು ಭಾರತಕ್ಕೆ ಇದೆ.

ಹೀಗಾಗಿ ನಾಜೂಕಿನ ಹೆಜ್ಜೆ ಇರಿಸಲು ಲಾಕ್ರಾ ಬಳಗ ಗಮನ ನೀಡಲಿದೆ. ಇದೇ ತಂಡದ ಎದುರು ಭಾನುವಾರ ಫೈನಲ್‌ನಲ್ಲಿ ಸೆಣಸಲಿರುವುದರಿಂದ ಶನಿವಾರ ಗೆಲುವು ಗಳಿಸಿ ವಿಶ್ವಾಸ ಹೆಚ್ಚಿಸಿಕೊಳ್ಳುವ ಅಗತ್ಯವೂ ಭಾರತಕ್ಕೆ ಇದೆ.

ಪುರುಷರ ತಂಡದ ಕೋಚ್ ಆಗಿದ್ದ ಶೊರ್ಡ್ ಮ್ಯಾರಿಜ್ ಅವರನ್ನು ಇತ್ತೀಚೆಗೆ ವಜಾ ಮಾಡಿದ್ದ ಹಾಕಿ ಇಂಡಿಯಾವು ಅವರಿಗೆ ಮಹಿಳಾ ತಂಡದ ಜವಾಬ್ದಾರಿ ವಹಿಸಿತ್ತು. ಈ ಬೆಳವಣಿಗೆಯ ನಂತರ ನಡೆದ ಪ್ರಮುಖ ಟೂರ್ನಿ ಇದು. ಇಲ್ಲಿ ಅವರು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಹಾಲಿ ಚಾಂಪಿಯನ್ ಭಾರತ, ಪ್ರಶಸ್ತಿ ಉಳಿಸಿಕೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಅವರ ಮೇಲೆ ಇದೆ.

‘ಕೊರಿಯಾ ಅತ್ಯುತ್ತಮ ತಂಡ. ಆದರೆ ನಮ್ಮ ತಂಡದವರು ಟೂರ್ನಿಯಲ್ಲಿ ಭಾರಿ ಭರವಸೆಯಿಂದ ಆಡಿದ್ದು ಅದಕ್ಕೆ ತಕ್ಕ ಫಲ ಸಿಕ್ಕಿದೆ. ಆದ್ದರಿಂದ ಕೊರಿಯಾವನ್ನು ಅದರ ತವರಿನಲ್ಲೇ ಸೋಲಿಸುವುದು ಕಷ್ಟಕರವಲ್ಲ’ ಎಂದು ಮ್ಯಾರಿಜ್ ಹೇಳಿದರು.

ರೌಂಡ್ ರಾಬಿನ್‌ ಹಂತದಲ್ಲಿ ಕೊರಿಯಾ ಎರಡು ಜಯ ಮತ್ತು ಒಂದು ಡ್ರಾ ಸಾಧಿಸಿದೆ. ಮಲೇಷ್ಯಾ ಮತ್ತು  ಚೀನಾವನ್ನು ತಲಾ 3–1ರಿಂದ ಮಣಿಸಿದ್ದ ತಂಡ ಜಪಾನ್‌ ಎದುರು 1–1ರ ಡ್ರಾ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry