ಬುಧವಾರ, ಮಾರ್ಚ್ 3, 2021
19 °C

ವಿಶ್ವಾಸಮತ ಯಾಚನೆ ನಿಯಮಾನುಸಾರ ನಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಾಸಮತ ಯಾಚನೆ ನಿಯಮಾನುಸಾರ ನಡೆಯಲಿ

ರಾಜ್ಯದ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಸಂಜೆ 4 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಸ್ವಾಗತಾರ್ಹ. ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರು ವಿಶ್ವಾಸಮತ ಸಾಬೀತಿಗೆ 15 ದಿನ ಸಮಯ ನೀಡಿದ್ದು ಯಾವ ಕಾರಣಕ್ಕೂ ಒಪ್ಪುವ ವಿಚಾರವೇ ಆಗಿರಲಿಲ್ಲ. ಅಲ್ಲದೆ ಯಾವುದೇ ಸರ್ಕಾರಕ್ಕೆ ವಿಶ್ವಾಸಮತ ಯಾಚನೆಗೆ ಇಷ್ಟೊಂದು ದಿನಗಳ ಅವಕಾಶವನ್ನು ನೀಡಿದ ಉದಾಹರಣೆಯೂ ಇರಲಿಲ್ಲ.

ಕರ್ನಾಟಕದ ರಾಜ್ಯಪಾಲರು ಬಿಜೆಪಿ ಹಿನ್ನೆಲೆಯವರು. ಅವರು ಯಡಿಯೂರಪ್ಪ ಅವರಿಗೆ ದಯಪಾಲಿಸಿದ್ದ ಸಮಯಾವಕಾಶವನ್ನು ಸುಪ್ರೀಂ ಕೋರ್ಟ್ ಕಡಿತ ಮಾಡಿದೆ. ಇದರಿಂದ ರಾಜ್ಯಪಾಲರಿಗೂ ‘ಬುದ್ಧಿ’ ಹೇಳಿದಂತಾಗಿದೆ. ವಿಶ್ವಾಸಮತ ಯಾಚನೆಗೆ ಹೆಚ್ಚಿನ ಸಮಯ ನೀಡಿದರೆ ಶಾಸಕರ ಖರೀದಿಗೆ ಅನುಕೂಲವಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರು ಶನಿವಾರ ಪ್ರಮಾಣ ವಚನ ಸ್ವೀಕರಿಸಬೇಕು.

ಶಾಸಕರ ರಕ್ಷಣೆಗೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದೂ ಸುಪ್ರೀಂ ಕೋರ್ಟ್ ಸೂಚಿಸಿದೆ. ಅಲ್ಲದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಶ್ವಾಸಮತ ಗೆಲ್ಲುವವರೆಗೆ ಯಾವುದೇ ಆಡಳಿತಾತ್ಮಕ ತೀರ್ಮಾನ ಕೈಗೊಳ್ಳಬಾರದು ಎಂದು ಕೋರ್ಟ್ ಹೇಳಿರುವುದು ಸೂಕ್ತವಾಗಿಯೇ ಇದೆ. ವಿಶ್ವಾಸಮತ ಯಾಚನೆಯ ಪ್ರಕ್ರಿಯೆಯನ್ನು ಹಂಗಾಮಿ ವಿಧಾನಸಭಾಧ್ಯಕ್ಷರು ನಡೆಸಿಕೊಡಬೇಕು ಎಂದೂ ಸೂಚಿಸಿದೆ. ಇದರಿಂದ ವಿಧಾನಸಭಾಧ್ಯಕ್ಷರ ಮೇಲಿನ ಹೊಣೆಗಾರಿಕೆಹೆಚ್ಚಿನದ್ದಾಗಿದೆ.

ಕರ್ನಾಟಕದ ಶಾಸನಸಭೆ ಮತ್ತು ಆ ಮೂಲಕ ಇಡೀ ರಾಜ್ಯದ ಗೌರವ ಕಾಪಾಡುವ ಜವಾಬ್ದಾರಿ ಅವರ ಮೇಲಿದೆ. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಕಲಾಪ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಹೊಣೆ ಅವರ ಮೇಲಿದೆ. ಆದರೆ ಈಗ ವಿಧಾನಸಭೆ ಹಂಗಾಮಿ ಅಧ್ಯಕ್ಷರನ್ನಾಗಿ ಕೆ.ಜಿ.ಬೋಪಯ್ಯ ಅವರನ್ನು ನೇಮಕ ಮಾಡಿದ್ದೇ ವಿವಾದಕ್ಕೆ ಕಾರಣವಾಗಿದೆ.

ಬೋಪಯ್ಯ ಅವರು ಈ ಹಿಂದೆ ವಿಧಾನಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಕ್ಷಪಾತ ಮಾಡಿದ ಆರೋಪ ಹೊತ್ತಿದ್ದಾರೆ. ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದ ಸಂದರ್ಭದಲ್ಲಿ ವಿಧಾನಸಭೆ ಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಲು ಅವಕಾಶ ನೀಡಿದರು, ಗದ್ದಲದ ನಡುವೆಯೇ ಯಡಿಯೂರಪ್ಪ ವಿಶ್ವಾಸಮತ ಗಳಿಸಿದ್ದಾರೆಎಂದು ಘೋಷಿಸಿದರು ಎಂಬ ಆರೋಪ ಇದೆ.

ಅಲ್ಲದೆ ಆಗ ಅವರು ಬಿಜೆಪಿಯ 11 ಮತ್ತು ಐವರು ಪಕ್ಷೇತರ ಸದಸ್ಯರನ್ನು ಅನರ್ಹಗೊಳಿಸಿದ್ದರು. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿಯೂ ವಿಚಾರಣೆ ನಡೆದು ಕೋರ್ಟ್ ಛೀಮಾರಿ ಹಾಕಿತ್ತು. ಸಭಾಧ್ಯಕ್ಷರು ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಕೋರ್ಟ್ ಕಿಡಿಕಾರಿತ್ತು. ಇಂತಹ ಆಪಾದನೆಗೆ ಒಳಗಾಗಿರುವ ವ್ಯಕ್ತಿಯನ್ನೇ ಮತ್ತೆ ಹಂಗಾಮಿ ವಿಧಾನಸಭಾಧ್ಯಕ್ಷರನ್ನಾಗಿ ಮಾಡಿದ್ದು ಸರ್ವಥಾ ಸಲ್ಲ.

ಶನಿವಾರ ನಡೆಯುವ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿಯೂಇಂತಹದೇ ವಾತಾವರಣ ಸೃಷ್ಟಿಸಲು ಬಿಜೆಪಿ ಬಯಸಿದೆ ಎಂದು ಕಾಂಗ್ರೆಸ್ ಈಗಾಗಲೇ ಆರೋಪಿಸಿದೆ. ಇದರಲ್ಲಿ ಹುರುಳಿದೆ. ವಿಧಾನಸಭೆಗೆ ಆಯ್ಕೆಯಾದ ಅತ್ಯಂತ ಹಿರಿಯ ಸದಸ್ಯರನ್ನು ನಿಯಮದ ಪ್ರಕಾರ ಹಂಗಾಮಿ ಅಧ್ಯಕ್ಷರನ್ನಾಗಿ

ಆಯ್ಕೆ ಮಾಡಬೇಕು. ಬೋಪಯ್ಯ ಅವರಿಗಿಂತ ಹಿರಿಯರಾದವರು ಬಿಜೆಪಿಯಲ್ಲಿಯೂ ಸಾಕಷ್ಟು ಸದಸ್ಯರು ಇದ್ದರೂ ಬೋಪಯ್ಯ ಅವರನ್ನೇ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಅನುಮಾನಕ್ಕೆ ಕಾರಣವಾಗಿದೆ.

ಮುಂದಿನ ಐದುವರ್ಷ ರಾಜ್ಯದಲ್ಲಿ ಆಡಳಿತ ನಡೆಸುವ ಹೆಬ್ಬಯಕೆ ಹೊತ್ತಿರುವ ಬಿಜೆಪಿ, ಹಂಗಾಮಿ ಸ್ಪೀಕರ್‌ ಆಯ್ಕೆಯಲ್ಲಿ ಈ ರೀತಿ ಎಡವಬಾರದಿತ್ತು. ಇದು, ಜನಪ್ರತಿನಿಧಿಗಳನ್ನು ಮತ ಹಾಕಿ ಗೆಲ್ಲಿಸಿದ ಮತದಾರರಲ್ಲಿಯೂ ಅನುಮಾನವನ್ನು ಸೃಷ್ಟಿಸಿದೆ. ರಾಜಕೀಯ ಪಕ್ಷಗಳ ತಂತ್ರ, ಕುತಂತ್ರ, ರೆಸಾರ್ಟ್ ರಾಜಕಾರಣಗಳ ಕಸರತ್ತುಗಳು, ಅಧಿಕಾರ ಗದ್ದುಗೆಗೆ ಹೇಗಾದರಾಗಲಿ ಏರಲೇಬೇಕೆಂಬ ಹಪಾಹಪಿಯ ಪ್ರದರ್ಶನವಾಗಿದೆ. ‘ಆತ್ಮಸಾಕ್ಷಿಯ’ ಮತ ಹಾಕಬೇಕೆಂದು ಕೋರುತ್ತಲೇ ಶಾಸಕರಿಗೆ ಒಡ್ಡುತ್ತಿರುವ ಆಮಿಷಗಳ ಆರೋಪಗಳು, ಅನುಸರಿಸುತ್ತಿರುವ ಕ್ರಮಗಳು ಪ್ರಜಾಪ್ರಭುತ್ವದ ಆಶಯವನ್ನೇ ಮಣ್ಣುಗೂಡಿಸುವಂತಿವೆ.

ಸುಪ್ರೀಂ ಕೋರ್ಟ್ ಆದೇಶಿಸಿರುವಂತೆ ವಿಶ್ವಾಸಮತ ಯಾಚನೆ ನಿಯಮಾನುಸಾರವಾಗಿ ನಡೆಯಬೇಕು. ಮತದಾರರು ಮೆಚ್ಚುವಂತೆ ಇರಬೇಕು. ಕರ್ನಾಟಕದ ಮಾನವೂ ಉಳಿಯಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.