ಬುಧವಾರ, ಮಾರ್ಚ್ 3, 2021
30 °C

ಐದನೇ ಬಾರಿಗೆ ವಿಶ್ವಾಸ ಮತದ ಅಗ್ನಿಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐದನೇ ಬಾರಿಗೆ ವಿಶ್ವಾಸ ಮತದ ಅಗ್ನಿಪರೀಕ್ಷೆ

ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಲೆಲ್ಲಾ ವಿಶ್ವಾಸಮತ ಎಂಬ ಅಗ್ನಿಪರೀಕ್ಷೆ ಎದುರಿಸುತ್ತಲೇ ಬಂದಿದ್ದಾರೆ. 11 ವರ್ಷಗಳ ಅವಧಿಯಲ್ಲಿ ಅವರು ಇದೀಗ ಐದನೇ ಬಾರಿಯ ಬಹುಮತದ ಪರೀಕ್ಷೆಗೆ ಕೊರಳೊಡ್ಡಲಿದ್ದಾರೆ!

ಶುಕ್ರವಾರ ಮಧ್ಯಾಹ್ನ ಸುಪ್ರೀಂ ಕೋರ್ಟ್‌, ‘ಶನಿವಾರ (ಮೇ 19) ಸಂಜೆ 4 ಗಂಟೆಗೆ ಯಡಿಯೂರಪ್ಪ ನೇತೃತ್ವದ ಸರ್ಕಾರ, ಸದನದಲ್ಲಿ ಬಹುಮತ ಸಾಬೀತುಪಡಿಸಬೇಕು’ ಎಂದು ಆದೇಶಿಸುತ್ತಿದ್ದಂತೆಯೇ ರಾಜ್ಯ ರಾಜಕೀಯ ಹೊಸ ಪರ್ವವೊಂದಕ್ಕೆ ಸಾಕ್ಷಿಯಾಗಲು ಕಾಯುತ್ತಿದೆ.

ಈ ಹಿಂದೆ ನವೆಂಬರ್ 2007ರಲ್ಲಿ ಯಡಿಯೂರಪ್ಪ ಸದನದಲ್ಲಿ ವಿಶ್ವಾಸ ಮತ ಯಾಚಿಸಿದ್ದರು. ಆಗ ಅವರ ನೇತೃತ್ವದ ಸರ್ಕಾರಕ್ಕೆ ಜೆಡಿಎಸ್ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿತ್ತು. ಕಾರಣ ಎಂಟು ದಿನಕ್ಕೇ ಸರ್ಕಾರ ಬಿದ್ದು ಹೋಗಿತ್ತು.

ಆರು ತಿಂಗಳ ನಂತರ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿತು. ಆಗ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆದರು. ಇದು ದಕ್ಷಿಣ ಭಾರತದಲ್ಲೇ ಮೊದಲ ಬಿಜೆಪಿ ನೇತೃತ್ವದ ಸರ್ಕಾರ ಎನಿಸಿಕೊಂಡಿತು.

ಅಧಿಕಾರದ ಗದ್ದುಗೆ ಏರುತ್ತಿದ್ದಂತೆಯೇ 2008ರ ಜೂನ್ ತಿಂಗಳಿನಲ್ಲಿ ಅಂದಿನ ರಾಜ್ಯಪಾಲ ರಾಮೇಶ್ವರ ಠಾಕೂರ್, ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತುಪಡಿಸಲು ಆದೇಶಿಸಿದ್ದರು. ಆಗ ಅವರ ಸರ್ಕಾರಕ್ಕೆ ಮೂವರು ಶಾಸಕರ ಕೊರತೆ ಇತ್ತು. ಆಗ ಹುಟ್ಟಿಕೊಂಡ ‘ಆಪರೇಷನ್ ಕಮಲ’ದ ಮೂಲಕ ಯಡಿಯೂರಪ್ಪ ಈ ಪರೀಕ್ಷೆ ಪಾಸಾಗುವಲ್ಲಿ ಯಶಸ್ವಿ ಆದರು.

ಪಕ್ಷದ ಆಂತರಿಕ ಕಲಹದಿಂದಾಗಿ 2010ರ ಅಕ್ಟೋಬರ್‌ 11ರಂದು ಮೂರನೇ ಬಾರಿಗೆ ಅವರು ಮತ್ತೊಮ್ಮೆ ವಿಶ್ವಾಸ ಮತ ಕೋರಬೇಕಾದ ಪ್ರಸಂಗ ಬಂದೊದಗಿತು. ಆಗ ರಾಜ್ಯಪಾಲರಾಗಿದ್ದವರು ಕಾಂಗ್ರೆಸ್‌ನ ಹಿರಿಯ ನಾಯಕ ಹಂಸರಾಜ ಭಾರದ್ವಾಜ.

ಸರ್ಕಾರಕ್ಕೆ 18 ಶಾಸಕರು ಬೆಂಬಲ ಹಿಂಪಡೆದಿದ್ದರು. ಅಂದಿನ ಬಹುಮತದ ಪರೀಕ್ಷೆಗೆ ಸ್ಪೀಕರ್‌ ಆಗಿದ್ದವರು ಕೆ.ಜಿ.ಬೋಪಯ್ಯ. ಆಗ ಅವರು 16 ಜನರನ್ನು ಅನರ್ಹಗೊಳಿಸಿದ್ದರು. ಇವರಲ್ಲಿ 11 ಜನ ಬಿಜೆಪಿಗೆ ಸೇರಿದ್ದರೆ, ಐವರು ಪಕ್ಷೇತರರಾಗಿದ್ದರು.

ಈ ಪರೀಕ್ಷೆಯಲ್ಲೂ ಯಡಿಯೂರಪ್ಪ ಧ್ವನಿಮತದ ಮೂಲಕ ಗೆದ್ದು ಬೀಗಿದರು. ಇದಕ್ಕೆ ಕಾರಣ ಸದನದ ಸಂಖ್ಯಾಬಲ 208ಕ್ಕೆ ಇಳಿದದ್ದು.

2011ರ ಅಕ್ಟೋಬರ್‌ ತಿಂಗಳಿನಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೂರನೇ ಬಾರಿಗೆ ವಿಶ್ವಾಸ ಮತ ಯಾಚಿಸಿ ಅಗ್ನಿಪರೀಕ್ಷೆ ಎದುರಿಸಿದ್ದರು ಮತ್ತು ಇದನ್ನೂ ಗೆದ್ದು ಬೀಗಿದ್ದರು. ಆದರೆ, ಈ ಗೆಲುವನ್ನು ಭಾರದ್ವಾಜ ತಿರಸ್ಕರಿಸಿದ್ದರು ಮತ್ತು ಇದನ್ನು ವಿರೋಧ ಪಕ್ಷಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು. 

ಆಗ ಬಾರಧ್ವಾಜ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದರು. ಈ ಸಮಯದಲ್ಲಿ ಅವರಿಗೆ ಬಹುಮತ ಸಾಬೀತುಪಡಿಸಲು ಮತ್ತೊಂದು ಅವಕಾಶ ನೀಡಲಾಯಿತು. 2010ರ ಅಕ್ಟೋಬರ್ 14ರಂದು ಮತ್ತೆ ಸದನದಲ್ಲಿ ಬಹುಮತದ ಪರೀಕ್ಷೆಗೆ ಈಡಾದರು. ಈ ವೇಳೆಗೆ ಸುಪ್ರೀಂ ಕೋರ್ಟ್ 16 ಸದಸ್ಯರ ಅನರ್ಹತೆಯನ್ನು ರದ್ದುಪಡಿಸಿತು.

ಭ್ರಷ್ಟಾಚಾರ ಆರೋಪದಲ್ಲಿ ಯಡಿಯೂರಪ್ಪ 2011ರ ಅಕ್ಟೋಬರ್‌ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾದರು. 20 ದಿನ ಜೈಲುವಾಸ ಅನುಭವಿಸಿದರು. ಅವರ ವಿರುದ್ಧದ ಪ್ರಕರಣವನ್ನು 2015ರಲ್ಲಿ ಹೈಕೋರ್ಟ್ ವಜಾಗೊಳಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.