ಇಂದೇ ವಿಶ್ವಾಸಮತ: ‘ಸುಪ್ರೀಂ’ ಆದೇಶ

7
ಮುಖ್ಯಮಂತ್ರಿ ಯಡಿಯೂರಪ್ಪಗೆ ಸತ್ವಪರೀಕ್ಷೆ: ಸಂಪೂರ್ಣ ಗೋಪ್ಯತೆಗೆ ಒತ್ತು ನೀಡಲು ಸೂಚನೆ

ಇಂದೇ ವಿಶ್ವಾಸಮತ: ‘ಸುಪ್ರೀಂ’ ಆದೇಶ

Published:
Updated:
ಇಂದೇ ವಿಶ್ವಾಸಮತ: ‘ಸುಪ್ರೀಂ’ ಆದೇಶ

ನವದೆಹಲಿ: ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್‌. ಯಡಿಯೂರಪ್ಪ ಅವರು ಶನಿವಾರ ಸಂಜೆ 4ಕ್ಕೆ ವಿಶ್ವಾಸ

ಮತ ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಸರ್ಕಾರ ರಚಿಸುವಂತೆ ಬಿಜೆಪಿಗೆ ಆಹ್ವಾನ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರ ನಿರ್ಧಾರ ಪ್ರಶ್ನಿಸಿ ಬುಧವಾರ ರಾತ್ರಿ ಕಾಂಗ್ರೆಸ್– ಜೆಡಿಎಸ್‌ ಸಲ್ಲಿಸಿದ್ದ ಅರ್ಜಿಯ ಮುಂದುವರಿದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠ, ‘ವಿಶ್ವಾಸಮತ ಸಾಬೀತುಪಡಿಸುವ ತನಕ ಯಡಿಯೂರಪ್ಪ ಅವರು ಯಾವುದೇ ಆಡಳಿತಾತ್ಮಕ ತೀರ್ಮಾನ ತೆಗೆದು ಕೊಳ್ಳುವಂತಿಲ್ಲ’ ಎಂದು ತಿಳಿಸಿತು.

ರಾಜ್ಯಪಾಲರ ಕ್ರಮದ ಪರಾಮರ್ಶೆ ಹಾಗೂ ಅವರ ಆದೇಶದ ಸಿಂಧುತ್ವ ಕುರಿತ ವಿಚಾರಣೆಯನ್ನು ನಂತರ ಪರಿಶೀಲಿಸಲು ನಿರ್ಧರಿ

ಸಿದ ನ್ಯಾಯಮೂರ್ತಿಗಳಾದ ಎಸ್‌.ಎ. ಬೋಬ್ಡೆ ಹಾಗೂ ಅಶೋಕ್‌ ಭೂಷಣ್‌ ಅವರನ್ನೂ ಒಳಗೊಂಡಿರುವ ಪೀಠ, ಹಂಗಾಮಿ ಸ್ಪೀಕರ್ ಶನಿವಾರವೇ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸಲಿ; ಎಲ್ಲ ಶಾಸಕರ ಭದ್ರತೆ ಹೊಣೆಯನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ವಹಿಸಿಕೊಳ್ಳಲಿ ಎಂದು ಸೂಚಿಸಿತು.

‘ವಿಧಾನಸಭೆಗೆ ಆಂಗ್ಲೊ–ಇಂಡಿಯನ್ ಸದಸ್ಯೆ ನೇಮಕ ಸದ್ಯಕ್ಕೆ ಬೇಡ’ ಎಂದೂ ತಿಳಿಸಿದ ಪೀಠ, ವಿಶ್ವಾಸ ಮತ ಯಾಚನೆ ವೇಳೆ ಗೋಪ್ಯ ಮತದಾನಕ್ಕೆ ಅವಕಾಶ ನೀಡಬೇಕು ಎಂಬ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರ ಕೋರಿಕೆಯನ್ನೂ ತಿರಸ್ಕರಿಸಿತು.

ವಿಶ್ವಾಸ ಮತ ಯಾಚನೆ ಕ್ಷಣಗಳ ವಿಡಿಯೊ ಚಿತ್ರೀಕರಣವೂ ಬೇಡ ಎಂದು ತಿಳಿಸುವ ಮೂಲಕ, ಸಂಪೂರ್ಣ ಪ್ರಕ್ರಿಯೆಯ ಗೋಪ್ಯತೆಗೆ ಒತ್ತು ನೀಡುವಂತೆ ನ್ಯಾಯಮೂರ್ತಿ ಸಿಕ್ರಿ ಸ್ಪಷ್ಟಪಡಿಸಿದರು.

ವಿಚಾರಣೆ ಆರಂಭವಾಗುತ್ತಿದ್ದಂತೆಯೇ, ‘ಯಡಿಯೂರಪ್ಪ ಅವರು ಸರ್ಕಾರ ರಚನೆಯ ಪ್ರಸ್ತಾವದೊಂದಿಗೆ ರಾಜ್ಯಪಾಲರಿಗೆ ಬರೆದಿರುವ ಪತ್ರದ ಪ್ರತಿಯನ್ನು ತಂದಿದ್ದೀರಾ’ ಎಂದು ಅವರು ಯಡಿಯೂರಪ್ಪ ಪರ ವಕೀಲ ಮುಕುಲ್‌ ರೋಹಟಗಿ ಅವರನ್ನು ಪ್ರಶ್ನಿಸಿದರು.

‘ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ಒಟ್ಟು ಎರಡು ಪತ್ರಗಳನ್ನು ಬರೆದಿದ್ದಾರೆ. ಅದರಲ್ಲಿ ಮೊದಲ ಪತ್ರವನ್ನು ಮೇ 15ರ ಸಂಜೆ ಬರೆಯಲಾಗಿದೆ. ಯಾವುದೇ ಪಕ್ಷಗಳ ನಡುವೆ ಚುನಾವಣಾಪೂರ್ವ ಮೈತ್ರಿ ಇಲ್ಲದ್ದರಿಂದ ನಮಗೇ ಸರ್ಕಾರ ರಚನೆಗೆ ಅವಕಾಶ ನೀಡಿ ಎಂದು ಅವರು ಈ ಪತ್ರದಲ್ಲಿ ಕೋರಿದ್ದರು’ ಎಂದು ರೋಹಟಗಿ ತಿಳಿಸಿದರು.

‘ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯದ ಜನ ಬದಲಾವಣೆಯನ್ನು ಬಯಸಿ, ಕಾಂಗ್ರೆಸ್ ವಿರುದ್ಧ ಮತ ಹಾಕಿದ್ದು, ಬಿಜೆಪಿಗೆ ಅಗತ್ಯ ಬೆಂಬಲ ಇದೆ’ ಎಂದು ತಿಳಿಸಿ ಮೇ 16ರಂದು 2ನೇ ಪತ್ರ ಬರೆಯಲಾಗಿದೆ ಎಂದು ತಿಳಿಸಿದ ಅವರು, ಎರಡೂ ಪತ್ರಗಳನ್ನು ನ್ಯಾಯಪೀಠಕ್ಕೆ ಹಾಜರುಪಡಿಸಿದರು.

ರಾಜ್ಯದಲ್ಲಿ ಸದ್ಯ ಗೊಂದಲಮಯ ಸ್ಥಿತಿ ಇರುವುದರಿಂದ ಉದ್ದೇಶಪೂರ್ವಕವಾಗಿಯೇ ಪತ್ರಗಳಲ್ಲಿ ಬೆಂಬಲಿತ ಶಾಸಕರ ಹೆಸರು ಬರೆದಿಲ್ಲ. ಯಾವುದೇ ಪಕ್ಷದ ಪರ ಸ್ಪರ್ಧಿಸಿ ಜಯಿಸಿದ್ದರೂ, ನೂತನ ಶಾಸಕರು ತಮ್ಮ ಮನಸ್ಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುವ ಹಕ್ಕು ಇದೆ ಎಂದು ವಿವರಿಸಿದರು.

ಚುನಾವಣೆಗೆ ಮೊದಲೇ ಮೈತ್ರಿ ಮಾಡಿಕೊಂಡ ಪಕ್ಷಗಳಿಗೆ ಮೊದಲ ಆದ್ಯತೆ ನೀಡಬೇಕು ಅಥವಾ ಬಹುಮತ ಸಾಬೀತು ಪಡಿಸುವಷ್ಟು ಬೆಂಬಲ ಹೊಂದಿರುವ ಪಕ್ಷಕ್ಕೆ ನಂತರದ ಆದ್ಯತೆ ನೀಡಬೇಕು. ಅತಂತ್ರ ಸ್ಥಿತಿ ಎದುರಾದ ಸಂದರ್ಭದಲ್ಲಿ, ಚುನಾವಣೋತ್ತರ ಮೈತ್ರಿ ಮಾಡಿಕೊಂಡ ಪಕ್ಷಗಳಿಗೆ ಮೂರನೇ ಆದ್ಯತೆಯೊಂದಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಬೇಕು ಎಂದು ಸರ್ಕಾರಿಯಾ ಆಯೋಗ ಶಿಫಾರಸು ಮಾಡಿದೆ ಎಂದು ಅವರು ಹೇಳಿದರು.

ಅಲ್ಲದೆ, ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ 7 ಸದಸ್ಯರ ವಿಭಾಗೀಯ ಪೀಠವು ರಾಜ್ಯಪಾಲರ ವಿವೇಚನಾ ಅಧಿಕಾರ ಕುರಿತು ಸ್ಪಷ್ಟಪಡಿಸಿದ್ದನ್ನೂ ಗಮನಿಸಬೇಕು ಎಂದೂ ಅವರು ವಾದಿಸಿದರು.

‘ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯೂ ಪತ್ರ ಬರೆದಿದೆ. ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೂ ಸರ್ಕಾರ ರಚನೆಗೆ ಅಗತ್ಯವಿರುವ ಶಾಸಕರ ಸಂಖ್ಯೆ ಇದೆ ಎಂದು ಪತ್ರ ಬರೆದಿವೆ. ಆದರೂ ರಾಜ್ಯಪಾಲರು ಬಿಜೆಪಿಯನ್ನೇ ಆಹ್ವಾನಿಸಿದ್ದು ಏಕೆ’ ಎಂದು ನ್ಯಾಯಮೂರ್ತಿ ಸಿಕ್ರಿ ಪ್ರಶ್ನಿಸಿದರು.

ಕ್ಲಿಷ್ಟಕರ ಸ್ಥಿತಿಯಲ್ಲಿ ರಾಜ್ಯಪಾಲರ ವಿವೇಚನಾ ಅಧಿಕಾರ ಬಳಕೆಯಾಗಬೇಕು. ಆದರೆ, ಇದು ಸರಳ ಪ್ರಕರಣ ಆಗಿದ್ದರಿಂದ ವಿವೇಚನಾ ಅಧಿಕಾರ ಬಳಸಿದ್ದು ತಪ್ಪು ಎಂದೂ ಅವರು ಅಭಿಪ್ರಾಯಪಟ್ಟರು.

ಸ್ಪಷ್ಟವಾಗಿ ಇದು ಸಂಖ್ಯೆಯ ಆಟ (ನಂಬರ್ ಗೇಮ್‌). ಯಾವ ಪಕ್ಷಕ್ಕೆ ಬಹುಮತ ದೊರೆಯಲಿದೆ ಎಂಬುದನ್ನು ರಾಜ್ಯಪಾಲರೇ ನಿರ್ಧರಿಸಬೇಕಿತ್ತು ಎಂದು ತಿಳಿಸಿದ ನ್ಯಾಯಮೂರ್ತಿ, ಯಾರನ್ನು ಆಹ್ವಾನಿಸಬೇಕಿತ್ತು ಎಂಬ ಚರ್ಚೆ ಅನಗತ್ಯ, ಯಡಿಯೂರಪ್ಪ ಅವರು ಶನಿವಾರವೇ ವಿಶ್ವಾಸ ಮತ ಯಾಚಿಸಲಿ ಎಂದು ಆದೇಶ ನೀಡಿದರು.

ರಾಜ್ಯಪಾಲರು ಕೈಗೊಂಡ ನಿರ್ಧಾರ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಹಿರಿಯ ವಕೀಲ ರಾಮ್‌ ಜೇಠ್ಮಲಾನಿ ಅವರೂ ವಾದ ಮಂಡಿಸಿದರಲ್ಲದೆ, ‘ನಾನು ಯಾವುದೇ ಪಕ್ಷದ ಪರವಾಗಿ ಇಲ್ಲ. ಬದಲಿಗೆ, ಕರ್ನಾಟಕದ ಜನರ ಪರ ಈ ಮೇಲ್ಮನವಿ ಸಲ್ಲಿಸಿದ್ದೇನೆ’ ಎಂದರು.

ನಗೆ ಉಕ್ಕಿಸಿದ ನ್ಯಾಯಮೂರ್ತಿ, ವಕೀಲರ ಹೇಳಿಕೆ

ನವದೆಹಲಿ: ದೇಶದ ಗಮನ ಸೆಳೆದಿರುವ ಕರ್ನಾಟಕದ ರಾಜಕೀಯ ಸ್ಥಿತಿಗತಿಯು, ಸುಪ್ರೀಂ ಕೋರ್ಟ್‌ನಲ್ಲಿ ಹಾಸ್ಯ ಪ್ರಸಂಗಕ್ಕೆ ಕಾರಣವಾಯಿತು.

ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ವೈರಲ್‌ ಆಗಿರುವ ವಾಟ್ಸ್‌ ಆ್ಯಪ್‌ ಸಂದೇಶ ಕುರಿತು ನ್ಯಾಯಮೂರ್ತಿಗಳೇ ಪ್ರಸ್ತಾಪಿಸಿ, ನ್ಯಾಯಾಲಯದ ಸಭಾಂಗಣದಲ್ಲಿ ಹಾಜರಿದ್ದ ವಕೀಲರು ಮತ್ತು ಪತ್ರಕರ್ತರಲ್ಲಿ ನಗೆ ಉಕ್ಕಿಸಿದರು.

ಬಹುಮತಕ್ಕೆ ಅಗತ್ಯವಿರುವ ಶೇ 95ರಷ್ಟು ಶಾಸಕರನ್ನು ಬಿಜೆಪಿ ಹೊಂದಿದ್ದು, ಜನ ಬದಲಾವಣೆ ಬಯಸಿರುವುದರಿಂದ ಸಹಜವಾಗಿಯೇ ಅವಕಾಶ ದೊರೆತಿದೆ ಎಂದು ವಾದಿಸಿದ ಯಡಿಯೂರಪ್ಪ ಪರ ವಕೀಲ ರೋಹಟಗಿ, ‘ಇಬ್ಬರು ಪಕ್ಷೇತರರೂ ತಮ್ಮೊಂದಿಗೆ ಇರುವುದಾಗಿ ಕಾಂಗ್ರೆಸ್‌ ತಿಳಿಸಿದೆ. ಅಲ್ಲದೆ, ಕಾಂಗ್ರೆಸ್‌ನ ಇಬ್ಬರು ಶಾಸಕರು ಸಹಿ ಮಾಡಿರುವ ಬಗ್ಗೆ ಶಂಕೆ ಇದೆ’ ಎಂದು ಹೇಳುತ್ತಿದ್ದಂತೆಯೇ ನ್ಯಾಯಾಲಯದಲ್ಲಿದ್ದ ಬಹುತೇಕರು ನಕ್ಕರು.

‘ಮೇ 16ರಂದು ಚುನಾವಣಾ ಆಯೋಗ ನೂತನ ಶಾಸಕರ ಆಯ್ಕೆ ಕುರಿತ ಅಧಿಸೂಚನೆ ಹೊರಡಿಸಿದೆ. ಆದರೆ ಯಡಿಯೂರಪ್ಪ ಮೇ 15ರಂದೇ ಪತ್ರ ಬರೆದಿದ್ದಾರೆ. 117 ಜನರ ಸಹಿ ಇರುವ ಪತ್ರವನ್ನು ಕಾಂಗ್ರೆಸ್‌–ಜೆಡಿಎಸ್‌ ನೀಡಿವೆ. ಕಾಂಗ್ರೆಸ್ ಪಕ್ಷವು ಜೆಡಿಎಸ್ ಅನ್ನು ಬೆಂಬಲಿಸಿ ಅಧಿಕೃತ ಪತ್ರ ಬರೆದಿದೆ. ಬೆಂಬಲ ಒಪ್ಪಿಕೊಂಡಿದ್ದಾಗಿ ತಿಳಿಸಿರುವ ಜೆಡಿಎಸ್ ಸಹ ಸರ್ಕಾರ ರಚನೆಗೆ ಆಹ್ವಾನ ನೀಡಲು ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ಆದರೂ, ಬಹುಮತ ಇರುವವರನ್ನು ಬಿಟ್ಟು ಬಿಜೆಪಿಯನ್ನು ಆಹ್ವಾನಿಸಿದ್ದು ಏಕೆ, ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿರುವುದರ ಹಿಂದಿನ ಉದ್ದೇಶ ಏನು. ಹೆಸರುಗಳೇ ಇಲ್ಲದ ಪತ್ರವನ್ನು ಬರೆದಿದ್ದು ಏಕೆ’ ಎಂದು ಕಾಂಗ್ರೆಸ್‌ ಪರ ವಕೀಲ ಸಿಂಘ್ವಿ ಪ್ರಶ್ನಿಸಿದರು.

‘ಗೊಂದಲದ ಸ್ಥಿತಿ ಇರುವುದರಿಂದ ಹೆಸರನ್ನು ಬರೆದಿಲ್ಲ’ ಎಂದು ರೋಹಟಗಿ ಮರು ಉತ್ತರ ನೀಡಿದಾಗ, ‘ಥ್ಯಾಂಕ್ ಗಾಡ್, ನೀವು ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಹೆಸರನ್ನಾದರೂ ಹೇಳಿದ್ದೀರಲ್ಲ!’ ಎಂದು ಸಿಂಘ್ವಿ ಅಚ್ಚರಿ ವ್ಯಕ್ತಪಡಿಸಿದರು. ಆಗ ಮತ್ತೆ ನಗೆ ಹೊರಹೊಮ್ಮಿತು.

‘ಹೆಸರುಗಳನ್ನೇ ಉಲ್ಲೇಖಿಸದೆ ಪತ್ರ ನೀಡಿದ್ದರೂ ಸರ್ಕಾರ ರಚನೆಗೆ ಆಹ್ವಾನ ನೀಡಿರುವುದು ತಪ್ಪು ಸಂದೇಶ ನೀಡಿದೆ ಎಂದ ನ್ಯಾಯಮೂರ್ತಿ ಸಿಕ್ರಿ, ಈ ರೀತಿ ಎರಡೂ ಗುಂಪುಗಳು ಪತ್ರ ಬರೆದಾಗ ಆಯ್ಕೆ ಸುಲಭವಲ್ಲ. ಆಳವಾದ ಸಾಗರ ಮತ್ತು ಭೂತಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು (ಚಾಯ್ಸ್‌ ಈಸ್‌ ಬಿಟ್ವೀನ್‌ ಡೀಪ್‌ ಸೀ ಅಂಡ್‌ ಡೆವಿಲ್‌) ಎಂದಾದಾಗ ಇಂಥ ಆಯ್ಕೆ ಸಹಜ’ ಎಂದು ಪ್ರತಿಕ್ರಿಯಿಸುತ್ತಿದ್ದಂತೆಯೇ ನೆರೆದವರಿಗೆ ನಗೆ ತಡೆಯಲಾಗಲಿಲ್ಲ.

‘ವಿಶ್ವಾಸಮತ ಸಾಬೀತಿಗೆ 30 ದಿನಗಳವರೆಗೂ ಅವಕಾಶ ನೀಡಬಹುದು ಎಂದು ಸರ್ಕಾರಿಯಾ ಆಯೋಗ ಹೇಳಿದೆ. ಈಗ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಕಾಂಗ್ರೆಸ್‌– ಜೆಡಿಎಸ್‌ ಸದಸ್ಯರು ಹೈದರಾಬಾದ್‌ ಮತ್ತು ಕೊಚ್ಚಿಯಲ್ಲಿ ಇರುವುದರಿಂದ ಅವರು ಬರಲು ತಡವಾಗಬಹುದು. ಹಾಗಾಗಿ ಸೋಮವಾರ ಅಥವಾ ಮಂಗಳವಾರ ವಿಶ್ವಾಸಮತ ಸಾಬೀತಿಗೆ ಹೇಳಿ’ ಎಂದು ರೋಹಟಗಿ ಅವರು ಕೋರಿದಾಗ ಮತ್ತೆ ನಗೆ ಮೂಡಿತು.

‘ಶಾಸಕರು ತಂಗಿರುವ ರೆಸಾರ್ಟ್‌ಗಳ ಮಾಲೀಕನೂ, ನನ್ನ ಬಳಿ ಬಹುಮತ ಸಾಬೀತುಪಡಿಸುವಷ್ಟು ಶಾಸಕರಿದ್ದಾರೆ ಎಂದು ರಾಜ್ಯಪಾಲರಿಗೆ ಪತ್ರ ಬರೆಯುವ ಸಾಧ್ಯತೆ ಇದೆ ಎಂಬ ಸಂದೇಶಗಳು ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿವೆ’ ಎಂದು ನ್ಯಾಯಮೂರ್ತಿ ಸಿಕ್ರಿ ಪ್ರಸ್ತಾಪಿಸಿದಾಗ ವಕೀಲರು, ಪತ್ರಕರ್ತರ ಮುಖದಲ್ಲಿ ಮತ್ತೆ ನಗು ಕಂಡುಬಂತು.

ವಕೀಲರು, ಪತ್ರಕರ್ತರು ಬೆಳಿಗ್ಗೆ 10ಕ್ಕೇ ಕೋರ್ಟ್‌ ಸಂಖ್ಯೆ 6ರ ಎದುರು ಜಮಾಯಿಸಿದ್ದರಿಂದ, ಸಭಾಂಗಣದಲ್ಲಿ ನೂಕು ನುಗ್ಗಲಿನ ಸ್ಥಿತಿ ಇತ್ತು. ವಿಚಾರಣೆ ಆರಂಭವಾದ ನಂತರ ಬಂದ ಹಿರಿಯ ವಕೀಲರಾದ ಜೇಠ್ಮಲಾನಿ, ಪಿ.ಚಿದಂಬರಂ ಅವರಂತೂ ಒಳಹೋಗಲು ತೀವ್ರ ಪ್ರಯಾಸವನ್ನೇ ಪಡಬೇಕಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry