ಒಳ್ಳೆಯ ಉದ್ದೇಶದಿಂದ ಕ್ರಿಕೆಟ್‌ ಆಡಿ : ರಾಹುಲ್‌ ದ್ರಾವಿಡ್‌

7

ಒಳ್ಳೆಯ ಉದ್ದೇಶದಿಂದ ಕ್ರಿಕೆಟ್‌ ಆಡಿ : ರಾಹುಲ್‌ ದ್ರಾವಿಡ್‌

Published:
Updated:
ಒಳ್ಳೆಯ ಉದ್ದೇಶದಿಂದ ಕ್ರಿಕೆಟ್‌ ಆಡಿ : ರಾಹುಲ್‌ ದ್ರಾವಿಡ್‌

ಬೆಂಗಳೂರು: ವನ್ಯಜೀವಿ ಮತ್ತು ಕ್ರಿಕೆಟನ್ನು ಒಂದಾಗಿಸಿರುವುದು ಒಳ್ಳೆಯ ಆಲೋಚನೆ. ಯಾರೇ ಆಗಲಿ ಕ್ರಿಕೆಟನ್ನು ಒಳ್ಳೆಯ ಉದ್ದೇಶಕ್ಕಾಗಿ ಆಡಬೇಕು ಎಂದು ಹಿರಿಯ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಸಲಹೆ ನೀಡಿದರು.

ಕ್ರಿಕೆಟರ್ಸ್‌ ಫಾರ್‌ ಟೈಗರ್‌ ಕನ್ಸರ್ವೇಷನ್‌ ಆಯೋಜಿಸುವ ‘ಸೇವ್ ದಿ ಟೈಗರ್ ಕಪ್' ಕ್ರಿಕೆಟ್ ಪಂದ್ಯಾವಳಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘14 ವರ್ಷದೊಳಗಿನ ಮತ್ತು 16 ವರ್ಷದೊಳಗಿನ ವಿಭಾಗಗಳಲ್ಲಿ ಉತ್ತಮವಾಗಿ ಆಟವಾಡಿದ ಸಾಕಷ್ಟು ಮಕ್ಕಳು ಮುಂದಿನ ಹಂತಗಳ ಕ್ರಿಕೆಟ್‌ನಲ್ಲಿ ಕಾಣಿಸುವುದಿಲ್ಲ. ಚಿಕ್ಕವರಿದ್ದಾಗ ಕ್ರಿಕೆಟನ್ನು ಮಾತ್ರ ಅಭ್ಯಾಸ ಮಾಡುವುದರಿಂದ ಹೀಗಾಗುತ್ತದೆ’ ಎಂದು ಹೇಳಿದರು.

‘20 ವರ್ಷದೊಳಗಿನ ವಿಭಾಗದವರೆಗೂ ಆಟಗಾರರಾಗಿದ್ದರೆ ಸಾಕು. ನಂತರದ ಹಂತಗಳಲ್ಲಿ ಯೋಚಿಸುವ, ಸ್ವಂತ ನಿರ್ಧಾರಗಳನ್ನು ಕೈಗೊಳ್ಳುವ ಶಕ್ತಿಯನ್ನೂ  ಹೊಂದಿರಬೇಕಾಗುತ್ತದೆ. ಅದಕ್ಕಾಗಿ ಬಹು ಕ್ರೀಡೆಗಳಲ್ಲಿ ತೋಡಗಿಸಿಕೊಳ್ಳುವುದು ಅಗತ್ಯ. ವಿರಾಟ್‌ ಕೊಹ್ಲಿ, ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ... ಹೀಗೆ ಬಹುತೇಕರು ಇನ್ನೊಂದು ಕ್ರೀಡೆಯಲ್ಲೂ ಚಾಂಪಿಯನ್‌ ಆಗಿದ್ದವರು’ ಎಂದರು.

ಇದೇ ಸಂದರ್ಭದಲ್ಲಿ ಭದ್ರಾ ಹುಲಿ ಅಭಯಾರಣ್ಯದಲ್ಲಿ ಅರಣ್ಯ ರಕ್ಷಕರಾಗಿರುವ ಜೆ.ಯೋಗರಾಜ್‌ ಅವರಿಗೆ ‘ವನ್ಯಜೀವಿ ಸೇವಾ ಪ್ರಶಸ್ತಿ-2018' ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿಯು  ₹1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

‘ನನ್ನ ತಂದೆ 30 ವರ್ಷಗಳವರೆಗೆ ಅರಣ್ಯ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಹೀಗಾಗಿ ಹುಟ್ಟಿದಾಗಿನಿಂದಲೂ ಅರಣ್ಯದೊಂದಿಗಿನ ಒಡನಾಟ ಸಿಕ್ಕಿತು. ಈ ಇಲಾಖೆಯಲ್ಲಿಯೇ ಕೆಲಸ ದೊರೆತಿದ್ದು ನನ್ನ ಅದೃಷ್ಟ. 2012ರಲ್ಲಿ ಅರಣ್ಯ ವೀಕ್ಷಕನಾಗಿ ಕೆಲಸಕ್ಕೆ ಸೇರಿದೆ. ಬಡ್ತಿ ಹೊಂದಿ, ಈಗ ಅರಣ್ಯ ರಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ಯೋಗರಾಜ್‌ ಸೇವೆಯ ಹಾದಿಯನ್ನು ವಿವರಿಸಿದರು.

‘ಆಂಧ್ರಪ್ರದೇಶದಿಂದ ಚಿಪ್ಪುಹಂದಿ ಬೇಟೆಗಾಗಿ ಬಂದಿದ್ದ ಏಳು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ಘಟನೆ. ಅಲ್ಲದೆ, ಅವರಿಗೆ 3 ವರ್ಷ ಜೈಲು ಹಾಗೂ 50 ಸಾವಿರ ದಂಡ ವಿಧಿಸಲಾಯಿತು. ವನ್ಯಜೀವಿ ಕಾನೂನು ಈಗ ಬಲಗೊಂಡಿದ್ದು, ಸಾಕಷ್ಟು ಸುಧಾರಣೆ ಕಾಣುತ್ತಿದ್ದೇವೆ’ ಎಂದು ತಿಳಿಸಿದರು.

ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ, ‘ವನ್ಯಜೀವಿ ಸಂರಕ್ಷಣೆ ಹಾಗೂ ಕ್ರಿಕೆಟ್‌ಗೆ ಬಹಳ ಸಾಮ್ಯತೆಗಳಿವೆ. ಎರಡೂ ಕಡೆ ತಂಡವಾಗಿ ಕೆಲಸ ಮಾಡಬೇಕು. ಆಸಕ್ತಿ, ಪ್ರೀತಿ ಹೊಂದಿರುವುದು ಎರಡರಲ್ಲೂ ಮುಖ್ಯ. ಕ್ರಿಕೆಟ್‌ನಲ್ಲಿ 11 ಮಂದಿಯಷ್ಟೇ ಇರಬೇಕು. ಆದರೆ, ವನ್ಯಜೀವಿ ಸಂರಕ್ಷಣೆಯ ತಂಡದಲ್ಲಿ ಎಷ್ಟು ಜನವಾದರೂ ಇರಬಹುದು. ಹೆಚ್ಚು ಕೈ ಸೇರಿದಷ್ಟು ಒಳ್ಳೆಯದೇ’ ಎಂದರು.

‘ಸೇವ್ ದಿ ಟೈಗರ್ ಕಪ್‌' ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry