ಸೋಮವಾರ, ಮಾರ್ಚ್ 8, 2021
19 °C
ಕಾಂಗ್ರೆಸ್‌ ಒತ್ತಾಯ

ಚುನಾಯಿತ ಸಭಾಧ್ಯಕ್ಷರ ಎದುರೇ ವಿಶ್ವಾಸಮತ ನಿರ್ಣಯವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾಯಿತ ಸಭಾಧ್ಯಕ್ಷರ ಎದುರೇ ವಿಶ್ವಾಸಮತ ನಿರ್ಣಯವಾಗಲಿ

ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಪ್ರಕ್ರಿಯೆಯು ಚುನಾಯಿತ ಸಭಾಧ್ಯಕ್ಷರ ಸಮ್ಮುಖದಲ್ಲೇ ನಡೆಯಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್‌, ‘ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಬಿ.ಎಸ್‌. ಯಡಿಯೂರಪ್ಪ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಯಾವುದೇ ನಿರ್ಣಯ ತಳೆಯುವಂತಿಲ್ಲ. ಶಾಸಕರ ನಾಮನಿರ್ದೇಶನ ಮಾಡುವಂತಿಲ್ಲ. ಹಂಗಾಮಿ ಸಭಾಧ್ಯಕ್ಷರು ನೇಮಕವಾದ ಬಳಿಕ ಪ್ರಮಾಣ ವಚನ ಬೋಧಿಸುವ ಪ್ರಕ್ರಿಯೆ ನಡೆಸಬೇಕು. ಆ ಬಳಿಕ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆರಂಭಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದನ್ನು ಸ್ವಾಗತಿಸುತ್ತೇವೆ. ಪ್ರಜಾಪ್ರಭುತ್ವವನ್ನು ಹಾಗೂ ಸಂವಿಧಾನದ ಮೌಲ್ಯಗಳನ್ನು ರಕ್ಷಿಸಿದಕ್ಕಾಗಿ ಧನ್ಯವಾದ ಅರ್ಪಿಸುತ್ತೇವೆ’ ಎಂದರು.

‘ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯರನ್ನು ಹಂಗಾಮಿ ಸಭಾಧ್ಯಕ್ಷರನ್ನಾಗಿ ನೇಮಿಸಬೇಕು. ಶಾಸಕರ ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆ ಮುಗಿದ ಬಳಿಕ ಪೂರ್ಣ ಪ್ರಮಾಣದ ಸಭಾಧ್ಯಕ್ಷರ ಆಯ್ಕೆ ನಡೆಸಬೇಕು. ಬಳಿಕವೇ ವಿಶ್ವಾಸಮತ ಯಾಚನೆಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರದಿಂದ ನೇಮಕಗೊಂಡ ರಾಜ್ಯಪಾಲರು ಎರಡು ವರ್ಷಗಳಿಂದೀಚೆಗೆ, ಮುಖ್ಯಮಂತ್ರಿ ನೇಮಕದ ವಿಚಾರದಲ್ಲಿ ಕಾನೂನುಬದ್ಧವಾಗಿ ನಡೆದುಕೊಂಡಿಲ್ಲ. ಅರುಣಾಚಲ ಪ್ರದೇಶ, ಮಣಿಪುರ, ಗೋವಾ ಹಾಗೂ ಮೇಘಾಲಯಗಳ ರಾಜ್ಯಪಾಲರು ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದರು. ಕೇಂದ್ರ ಸರ್ಕಾರ ಹೇಳಿದಂತೆ ನಡೆದುಕೊಂಡಿದ್ದರು’ ಎಂದು ಆರೋಪಿಸಿದರು.

‘ರಾಜ್ಯಪಾಲರನ್ನು ಎರಡೆರಡು ಬಾರಿ ಭೇಟಿ ಮಾಡಿ ನಮಗೆ ಬಹುಮತ ಇದೆ ಎಂದು ಸ್ಪಷ್ಟಪಡಿಸಿದ್ದೇವೆ. 117 ಶಾಸಕರ ಹೆಸರುಗಳನ್ನೂ ನೀಡಿದ್ದೇವೆ. ಆದರೂ ಅವರು ಸರ್ಕಾರ ರಚಿಸಲು ಬಿಜೆಪಿಯವರನ್ನು ಆಹ್ವಾನಿಸಿದರು. ಬಹುಮತ ಸಾಬೀತುಪಡಿಸಲು, ಹೆಚ್ಚಿನ ಪ್ರಕರಣಗಳಲ್ಲಿ 2ರಿಂದ 3 ದಿನ ಕಾಲಾವಕಾಶ ನೀಡಲಾಗಿದೆ. ಹೆಚ್ಚೆಂದರೆ ಒಂದು ವಾರ ಸಮಯ ನೀಡಿದ ಉದಾಹರಣೆ ಇದೆ. ಯಾವುದೇ ರಾಜ್ಯಪಾಲರೂ ಇದುವರೆಗೆ 2 ವಾರ ಕಾಲಾವಕಾಶ ನೀಡಿರಲಿಲ್ಲ. ಆದರೆ, ವಜುಭಾಯಿ ವಾಲಾ ಅವರು ರಾಜಕೀಯ ಪಕ್ಷ ಒಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ಅವರಿಗೆ ಸಂವಿಧಾನದ ರಕ್ಷಣೆ ಮಾಡಬೇಕಾದ ಹೊಣೆ ಇದೆ. ಅವರೇ ನಿಯಮ ಉಲ್ಲಂಘಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

*

ಮಣಿಪುರ, ಗೋವಾ ಹಾಗೂ ಮೇಘಾಲಯಗಳಲ್ಲಿ ಮುಖ್ಯಮಂತ್ರಿ ಆಯ್ಕೆ ವೇಳೆ ಆಟದ ನಿಯಮವನ್ನೇ ಬದಲಿಸಲಾಗಿತ್ತು.  ಅದೇ ನಿಯಮ ಕರ್ನಾಟಕಕ್ಕೂ ಅನ್ವಯ ಆಗಲಿಲ್ಲ.

–ಗುಲಾಂ ನಬಿ ಆಜಾದ್‌, ಕಾಂಗ್ರೆಸ್‌ ಮುಖಂಡ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.