ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಮೇಶ್ವರ ಗೆದ್ದಾಗಲೆಲ್ಲ ಅತಂತ್ರ ಸರ್ಕಾರ!

Last Updated 18 ಮೇ 2018, 19:30 IST
ಅಕ್ಷರ ಗಾತ್ರ

ಭದ್ರಾವತಿ: ಬಿ.ಕೆ. ಸಂಗಮೇಶ್ವರ ಅವರು ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಗೆಲುವು ಕಂಡ ಎಲ್ಲ ಅವಧಿಯಲ್ಲೂ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಬಹುಮತ ಸಾಬೀತುಪಡಿಸಲು ಬಿಜೆಪಿ ಅವರಿಗೆ ಗಾಳ ಹಾಕಿದೆ ಎಂಬ ವಿಷಯ ಹರಿದಾಡುತ್ತಿದೆ.

2004ರ ಚುನಾವಣೆಯಲ್ಲಿ ಸಂಗಮೇಶ್ವರ ಪಕ್ಷೇತರರಾಗಿ ಸ್ಪರ್ಧಿಸಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಎಂ.ಜೆ.ಅಪ್ಪಾಜಿ ಅವರನ್ನು ಮಣಿಸಿದ್ದರು. ಆಗ ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಂದಿರಲಿಲ್ಲ. ಕೊನೆಗೆ ಕಾಂಗ್ರೆಸ್– ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಧರ್ಮಸಿಂಗ್ ಮುಖ್ಯಮಂತ್ರಿಯಾದರು. ಆಗ ಸಂಗಮೇಶ್ವರ ಐವರು ಪಕ್ಷೇತರರ ಜತೆ ದೆಹಲಿಗೆ ತೆರಳಿ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರಿದ್ದರು.

ಎರಡನೇ ಬಾರಿ: 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಂಗಮೇಶ್ವರ ತಮ್ಮ ಸಾಂಪ್ರದಾಯಿಕ ಎದುರಾಳಿ ಜೆಡಿಎಸ್ ಅಭ್ಯರ್ಥಿ ಎಂ.ಜೆ.ಅಪ್ಪಾಜಿ ಅವರನ್ನು ಮಣಿಸಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಆಗಲೂ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿಲ್ಲ. ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು.

ನಂತರ ನಡೆದ ‘ಆಪರೇಷನ್ ಕಮಲ’ಕ್ಕೆ ಹಲವರು ಬಲಿಯಾದರೂ ಸಂಗಮೇಶ್ವರ ಅವರನ್ನು ಸೆಳೆಯುವ ಬಿಜೆಪಿ ಕಸರತ್ತು ವ್ಯರ್ಥವಾಗಿತ್ತು. ಕೊನೆಯ ತನಕ ಕಾಂಗ್ರೆಸ್ ಜತೆಗಿದ್ದ ಅವರು, ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು.

ಮೂರನೇ ಬಾರಿ: ಈ ಬಾರಿಯ ಚುನಾವಣಾ ಪ್ರಚಾರದ ವೇಳೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಮಗೆ ಸಚಿವ ಸ್ಥಾನ ಸಿಗಲಿದೆ ಎಂದು ಅವರು ಹೇಳಿಕೆ ನೀಡಿದ್ದರು. ಇದೀಗ, ಮತ ಎಣಿಕೆ ನಂತರ ಕೆ.ಎಸ್‌. ಈಶ್ವರಪ್ಪ ಹಾಗೂ ಸಂಗಮೇಶ್ವರ ಪರಸ್ಪರ ಹಸ್ತಲಾಘವ ಮಾಡಿ ತಬ್ಬಿಕೊಂಡಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ ಊಹಾಪೋಹಗಳಿಗೆ ಎಡೆ ಮಾಡಿದೆ.

‘ವದಂತಿ ಅಷ್ಟೆ’: ‘2008ರಲ್ಲಿ ಸಾಕಷ್ಟು ಒತ್ತಡ ಬಂದರೂ ಸಂಗಮೇಶ್ವರ ಪಕ್ಷ ನಿಷ್ಠೆ ಬದಲಿಸಲಿಲ್ಲ. 2013ರಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದರೂ ಪಕ್ಷ ಬಿಡಲಿಲ್ಲ. ಈಗ ಅಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರೆ ಯಾರೂ ನಂಬುವುದಿಲ್ಲ. ಇದು ವದಂತಿ ಅಷ್ಟೆ’ ಎಂದು ಸಂಗಮೇಶ್ವರ ಅವರ ಸಹೋದರ ಬಿ.ಕೆ. ಶಿವಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT