‘ಅತಂತ್ರ’ದ ನೆರಳು: ದೂರ ನಿಂತ ‘ಉಸ್ತುವಾರಿ’ಗಳು!

7

‘ಅತಂತ್ರ’ದ ನೆರಳು: ದೂರ ನಿಂತ ‘ಉಸ್ತುವಾರಿ’ಗಳು!

Published:
Updated:

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಆಸರೆಯಾಗಿ ನಿಂತು, ಎಲ್ಲ ‘ಉಸ್ತುವಾರಿ’ ಕಾರ್ಯಗಳನ್ನೂ ನಿಭಾಯಿಸಿದ್ದ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ‘ಅತಂತ್ರ’ದ ನೆರಳಿನಡಿಯಿಂದ ದೂರ ನಿಂತಿದ್ದಾರೆ!

ವಿಧಾನಸಭೆ ಚುನಾವಣೆಗೆ ‘ಕೈ’ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌. ದಿಗ್ವಿಜಯ ಸಿಂಗ್‌ ಅವರಲ್ಲಿದ್ದ ಜವಾಬ್ದಾರಿಯನ್ನು ಪಕ್ಷ ತಮ್ಮ ಹೆಗಲ ಮೇಲಿಟ್ಟ ತಕ್ಷಣ ಕಾರ್ಯಪ್ರವೃತ್ತರಾದ ಅವರು, ರಾಜ್ಯದೆಲ್ಲೆಡೆ ಓಡಾಡಿ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದ್ದರು.

ಅಷ್ಟೇ ಅಲ್ಲ, ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳಿಗೆ ತೇಪೆ ಹಚ್ಚಿ ಒಗ್ಗಟ್ಟಿನ ಮಂತ್ರ ಜಪಿಸಿದ್ದರು. 218 ಕ್ಷೇತ್ರಗಳಿಗೆ ಒಂದೇ ಬಾರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಿಸಿದ್ದರಲ್ಲೂ ವೇಣುಗೋಪಾಲ್‌ ನಿರ್ಣಾಯಕ ಪಾತ್ರ ವಹಿಸಿದ್ದರು. ಜನಾಶೀರ್ವಾದ ಯಾತ್ರೆಯಲ್ಲಿ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಜೊತೆ ಸುತ್ತಾಡಿದ ಅವರು, ಪಕ್ಷ ಪೂರ್ಣ ಬಹುಮತ ಪಡೆದು ಅಧಿಕಾರ ಹಿಡಿಯುವ ವಿಶ್ವಾಸ ಹೊಂದಿದ್ದರು. ಆದರೆ, ಪಕ್ಷದ ಗಳಿಕೆ ಎರಡಂಕೆಗೆ ಅದೂ 78ಕ್ಕೆ ಸೀಮಿತ

ಗೊಂಡ ಬಳಿಕ ಬಹಿರಂಗವಾಗಿ ಅವರು ಕಾಣಿಸಿಕೊಂಡಿರುವುದು ಕಡಿಮೆ.

ಚುನಾವಣೆ ಫಲಿತಾಂಶ ಪ್ರಕಟವಾಗುವ ಮುನ್ನಾ ದಿನ ಬೆಂಗಳೂರಿಗೆ ಬಂದಿರುವ ಕಾಂಗ್ರೆಸ್‌ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಮತ್ತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಪಕ್ಷ ತೆಗೆದುಕೊಂಡ ನಿರ್ಧಾರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಸರ್ಕಾರ ರಚಿಸಲು ಜೆಡಿಎಸ್‌ಗೆ ಬೆಂಬಲ ವ್ಯಕ್ತಪಡಿಸುವಲ್ಲಿಂದ ಆರಂಭಿಸಿ ಪಕ್ಷದ ಪ್ರತಿ ನಡೆಯಲ್ಲೂ ಈ ಇಬ್ಬರಿಗೆ ಪಾಲಿದೆ.

ಬಿಜೆಪಿ ಚುನಾವಣೆ ಸಿದ್ಧತೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಆ ಪಕ್ಷದ ‘ಉಸ್ತುವಾರಿ’ ಮುರಳೀಧರ ರಾವ್‌. 2014ರ ಲೋಕಸಭಾ ಚುನಾವಣೆ ವೇಳೆ ಧರ್ಮೇಂದ್ರ ಪ್ರಧಾನ್ ರಾಜ್ಯ ಉಸ್ತುವಾರಿಯಾಗಿದ್ದರು. ಅವರು ಕೇಂದ್ರ ಸಚಿವರಾದ ಬಳಿಕ ರಾವ್‌, ರಾಜ್ಯಕ್ಕೆ ಕಾಲಿಟ್ಟರು. ಭಿನ್ನಮತದ ಬೇಗುದಿಯಲ್ಲಿದ್ದ ಬಿಜೆಪಿಯಲ್ಲಿ ಸಹಮತ ತರಲು ಯತ್ನಿಸಿದರೂ ಅದರಲ್ಲಿ ಅವರು ಯಶಸ್ವಿಯಾಗಲೇ ಇಲ್ಲ. ಯಡಿಯೂರಪ್ಪ–ಕೆ.ಎಸ್. ಈಶ್ವರಪ್ಪ ಮಧ್ಯೆ ಇದ್ದ ಹಗೆತನದ ಮಾದರಿಯ ಸಿಟ್ಟು ಹೋಗಲಾಡಿಸಲು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಧ್ಯ ಪ್ರವೇಶಿಸಬೇಕಾಯಿತು.

ಉಸ್ತುವಾರಿಯಾದ ಬಳಿಕ ಪಕ್ಷದ ಸಂಘಟನೆಗೆ ಅನೇಕ ಕಾರ್ಯಕ್ರಮಗಳನ್ನು ರಾಷ್ಟ್ರೀಯ ನಾಯಕರ ಮಾರ್ಗದರ್ಶನದಲ್ಲಿ ಅವರು ರೂಪಿಸಿದರು. ಬೂತ್ ಸಮಿತಿ ರಚನೆ, ಒಂದು ಮತ ಕ್ಷೇತ್ರದ ಕಾರ್ಯಕರ್ತರು ಮತ್ತೊಂದು ಮತ ಕ್ಷೇತ್ರದಲ್ಲಿ ಉಳಿದು ಪಕ್ಷ ಸಂಘಟಿಸುವ ವಿಸ್ತಾರಕ್ ಕಾರ್ಯಕ್ರಮ, ಶಕ್ತಿ ಕೇಂದ್ರ ಸ್ಥಾಪನೆ, ಪ್ರತಿ ಬೂತ್‌ನಲ್ಲಿ ಪೇಜ್ ಪ್ರಮುಖರನ್ನು ನೇಮಕ ಮಾಡುವಲ್ಲಿ ಮುತುವರ್ಜಿ ವಹಿಸಿದರು. ಇದಲ್ಲದೇ ಪಕ್ಷ ಹಮ್ಮಿಕೊಂಡ ನವ ಕರ್ನಾಟಕ ಪರಿವರ್ತನಾ ಯಾತ್ರೆ, ಕರುನಾಡ ಜಾಗೃತಿ ಯಾತ್ರೆ, ಸಂಘ ಪರಿವಾರದ ಕಾರ್ಯ

ಕರ್ತರ ಕಗ್ಗೊಲೆ ನಡೆಯುತ್ತಿದೆ ಎಂದು ಆಪಾದಿಸಿ ಹಮ್ಮಿಕೊಂಡ ‘ಮಂಗಳೂರು ಚಲೋ’, ‘ಬೆಂಗಳೂರು ರಕ್ಷಿಸಿ’ ಪಾದಯಾತ್ರೆಗಳನ್ನು ಅವರು ಮುನ್ನಡೆಸಿದರು.

ಆದರೆ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್‌ ಅವರನ್ನು ನೇಮಿಸಿದ ಪಕ್ಷ, ಹೆಚ್ಚಿನ ಜವಾಬ್ದಾರಿಯನ್ನು ಅವರಿಗೆ ವಹಿಸಿತು. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಮೂಡಿಬಂದ ಬಳಿಕದ ಎಲ್ಲ ರಾಜಕೀಯ ನಿರ್ಧಾರಗಳಿಗೆ ಅವರು ಧ್ವನಿಯಾಗಿದ್ದಾರೆ. ಯಾವುದೇ ರಾಜ್ಯದಲ್ಲಿ ರಾಜಕೀಯವಾಗಿ ‘ಅತಂತ್ರ’ ಸ್ಥಿತಿ ನಿರ್ಮಾಣವಾದಾಗ, ಚಾಣಾಕ್ಷ ನಡೆಯ ಮೂಲಕ ಪಕ್ಷದ ನೆರವಿಗೆ ಬರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕೂಡ ರಾಜ್ಯಕ್ಕೆ ಬಂದಿಲ್ಲ. ಶಾ ಅನುಪಸ್ಥಿತಿಯಲ್ಲಿ ಜಾವಡೇಕರ್‌, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಧರ್ಮೇಂದ್ರ ಪ್ರಧಾನ್‌ ಪಕ್ಷದ ಪರ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ. ರಾವ್‌, ಸ್ವಲ್ಪಮಟ್ಟಿಗೆ ಹಿನ್ನಡೆ ಅನುಭವಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry